ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
37ನೇ ಅಧ್ಯಾಯ
1 : ಕೇಡು ಮಾಡುವವರ ನೋಡಿ ಸಿಡಿಮಿಡಿಯಾಗಬೇಡ I ದುರಾಚಾರಿಗಳ ಕಂಡು ಮಚ್ಚರಗೊಳ್ಳಬೇಡ II
2 : ಅವರು ಒಣಗಿಹೋಗುವರು ಕಾಡುಗರಿಕೆಯಂತೆ I ಬೇಗ ಬಾಡಿಹೋಗುವರು ಕಾಯಿಪಲ್ಯದಂತೆ II
3 : ಒಳಿತನು ಮಾಡು ಪ್ರಭುವಿನಲಿ ಭರವಸೆ ಇಟ್ಟು I ಸುರಕ್ಷಿತನಾಗಿ ಬಾಳು ಸಿರಿನಾಡಿನಲ್ಲಿದ್ದು II
4 : ಪ್ರಭುವಿನಿಂದಲೆ ಬಯಸು ನಿನ್ನಾನಂದವನು I ನೆರವೇರಿಸುವನಾತ ನಿನ್ನ ಮನದಾಸೆಯನು II
5 : ಪ್ರಭುವಿಗೆ ಬಿಡು ಜೀವನಯಾತ್ರಾ ಚಿಂತೆಯನು I ಭರವಸೆಯಿಂದಿರು, ಆತನದನು ಸಾಗಿಸುವನು II
6 : ಬೆಳಗಿಸುವನು ನಿನ್ನ ಸತ್ಯಸಂಧತೆಯನು ಸೂರ್ಯೋದಯದಂತೆ I ಪ್ರಕಟಿಸುವನು ನಿನ್ನಾ ನ್ಯಾಯನಿಷ್ಠೆಯನು ನಡುಹಗಲಿನಂತೆ II
7 : ಪ್ರಭುವಿನ ಮುಂದೆ ಪ್ರಶಾಂತನಾಗಿರು, ಆತನಿಗೋಸ್ಕರ ಕಾದಿರು I ಸ್ವಾರ್ಥಿಗಳ, ಕುತಂತ್ರಿಗಳ ಏಳಿಗೆಯ ಕಂಡು ಉರಿಗೊಳ್ಳದಿರು II
8 : ಅಡಗಿಸು ಕೋಪವನು; ವರ್ಜಿಸು ಕ್ರೋಧವನು I ಕಿಡಿಕಿಡಿಯಾಗಬೇಡ, ತರುವುದದು ಕೇಡನು II
9 : ವಧಿತರಾಗಿ ನಾಶವಾಗುವರು, ಕೇಡು ಮಾಡುವವರು I ಪ್ರಭುವಿಗಾಗಿ ಕಾಯುವವರು ನಾಡಿಗೊಡೆಯರಾಗುವರು II
10 : ದುರುಳನು ಕಾಣದೆ ಹೋಗುವನು ಕೊಂಚಕಾಲದೊಳು I ಹುಡುಕಿದರು ಕಾಣಸಿಗನಾಗ ಊರು ಕೇರಿಗಳೊಳು II
11 : ದೀನದಲಿತರು ಬಾಧ್ಯಸ್ಥರಾಗುವರು ನಾಡಿಗೆ I ಆನಂದಿಸುವರು ಅಲ್ಲಿ ದೊರಕುವ ಸುಖಶಾಂತಿಗೆ II
12 : ದುರ್ಜನನು ಹೂಡಿಹನು ಒಳಸಂಚು ಸಜ್ಜನನ ವಿರುದ್ಧ I ಕಟಕಟನೆ ಹಲ್ಲು ಕಡಿಯುತಿಹನಿದೋ ಆತನ ವಿರೋಧ II
13 : ಅಂಥವನ ಕಂಡು ಪ್ರಭು ನಸುನಗುತಿಹನು I ಅವನಿಗೊದಗಲಿಹ ಗತಿಯನು ಕಾಣುತಿಹನು II
14 : ಹಿಡಿದಿಹರು ದುರುಳರು ಕತ್ತಿಯನು, ಎತ್ತಿಹರು ಬಿಲ್ಲನು I ಕೆಡಹಲು ದೀನದಲಿತರನು, ಕೊಲ್ಲಲು ಸಜ್ಜನರನು II
15 : ಹಿಡಿದ ಕತ್ತಿ ಹಿಡಿದವರೆದೆಯನೆ ಇರಿವುದು I ಎತ್ತಿದ ಬಿಲ್ಲುಬಾಣ ಸಿಡಿದು ಮುರಿವುದು II
16 : ದುರುಳರ ವಿಪುಲ ಆಸ್ತಿಪಾಸ್ತಿಗಿಂತಲು I ಸತ್ಯವಂತರ ಬಡತನವೆನಿತೊ ಮಿಗಿಲು II
17 : ಬತ್ತಿಹೋಗುವುದು ದುರ್ಜನರ ಭುಜಬಲ I ಸತ್ಯವಂತರಿಗೆ ಪ್ರಭುವೇ ಉನ್ನತಬಲ II
18 : ಸಜ್ಜನರಿಗೆ ಸಿಗುವ ಸೊತ್ತು ಶಾಶ್ವತ I ಪ್ರಭುವಿಗೆ ಗೊತ್ತು ಅವರ ಬಾಳಿನಂತ್ಯ II
19 : ಮಾನನಷ್ಟವಿರದು ಕಷ್ಟಕಾಲದಲಿ I ಕುಂದುಕೊರತೆಯಿರದು ಬರಗಾಲದಲಿ II
20 : ದುರುಳರ ಬೆಡಗೋ ಬಾಡಿಹೋಗುವುದು ಹುಲ್ಲಿನಂತೆ I ಪ್ರಭುವಿನ ಶತ್ರುಗಳು ತೇಲಿಹೋಗುವರು ಹೊಗೆಯಂತೆ II
21 : ಕೊಂಡ ಸಾಲವನು ತೀರಿಸಲಾರನಾ ದುರ್ಜನನು I ಉದಾರವಾಗಿ ದಾನ ಧರ್ಮಮಾಳ್ಪನಾ ಸಜ್ಜನನು II
22 : ಪ್ರಭುವಿನಿಂದ ಆಶೀರ್ವದಿತರು ನಾಡಿಗೆ ಬಾಧ್ಯಸ್ಥರು I ಆತನಿಂದ ಶಾಪಗ್ರಸ್ಥರು ಬಹಿಷ್ಕೃತರು II
23 : ಪ್ರಭುವಿಗೆ ಪ್ರಿಯವು ಮಾನವನ ಪ್ರವರ್ತನ I ಅವನ ನಡತೆಗೆ ಆತನೆ ಮಾರ್ಗದರ್ಶನ II
24 : ಬಿದ್ದರೂ ಅವನೆದ್ದೇ ತೀರುವನು I ಪ್ರಭು ಅವನಿಗೆ ಊರುಗೋಲಾಗಿಹನು II
25 : ಸಜ್ಜನ ದಿಕ್ಕಿಲ್ಲದಿರುವುದನು, ಅವನ ಸಂತತಿ ಭಿಕ್ಷೆ ಬೇಡುವುದನು I ನಾ ಕಾಣೆನು, ವೃದ್ಧ ನಾನೆಂದೂ ಕಾಣೆನು, ಬಾಲ್ಯದಿಂದ ಕಾಣೆನು II
26 : ದಾನ ನೀಡುವನು, ಸಾಲ ನಿರಾಕರಿಸನು ಸಜ್ಜನನು I ಆತನ ಸಂತಾನ ಹೊಂದುವುದು ಆಶೀರ್ವಾದವನು II
27 : ಕೆಟ್ಟದನು ಬಿಡು, ಒಳ್ಳೆಯದನು ಮಾಡು I ಸಿರಿನಾಡಿನಲಿ ಚಿರಕಾಲ ಬಾಳು II
28 : ಪ್ರಭುವು ನ್ಯಾಯಪ್ರಿಯನು, ಭಕ್ತಜನರ ಪರಿಪಾಲಕನು I ಚಿರವುಳಿಸುವನು ಇವರನು, ಅಳಿಸುವನು ದುರುಳರ ಪೀಳಿಗೆಯನು II
29 : ಸಜ್ಜನರು ಸಿರಿನಾಡಿಗೆ ಬಾಧ್ಯಸ್ಥರು I ಅಲ್ಲವರು ಶಾಶ್ವತವಾಗಿ ಬಾಳುವರು II
30 : ಸಜ್ಜನರ ಬಾಯಿ ಆಡುವುದು ಸುಜ್ಞಾನವನು I ಅವನ ನಾಲಿಗೆ ನುಡಿಯುವುದು ನ್ಯಾಯನೀತಿಯನು II
31 : ಅವನ ಎದೆಯಲ್ಲಿದೆ ದೇವರ ನಿಯಮ I ನೆಲೆತಪ್ಪದು ಅವನ ನಡತೆಯ ಕ್ರಮ II
32 : ದುಷ್ಟನಿಟ್ಟಿರುವನು ಕಣ್ಣನು ಸಜ್ಜನರ ಮೇಲೆ I ಹೊಂಚುಹಾಕಿ ನೋಡುತಿಹನು ಮಾಡಲವರ ಕೊಲೆ II
33 : ಪ್ರಭು ಬಿಡನವನನು ದುಷ್ಟ ಶಕ್ತಿಯ ವಶಕ್ಕೆ I ಗುರಿಪಡಿಸನು ನ್ಯಾಯಸ್ಥಾನದ ಶಿಕ್ಷೆಗೆ II
34 : ಪ್ರಭುವನು ನಂಬಿ ನಡೆ ಆತನ ಪಥದಲೇ I ಉದ್ಧಾರವಾಗುವೆ, ನಾಡಿಗೊಡೆಯನಾಗುವೆ I ದುಷ್ಟರ ವಿನಾಶವನು ಕಣ್ಣಾರೆ ಕಾಣುವೆ II
35 : ದುರುಳನೋರ್ವ ಮಹಾಗರ್ವದಿಂದ ಬಾಳುತ್ತಿದ್ದ I ಹುಲುಸಾಗಿ ಬೆಳೆದ ದೇವದಾರು ಮರದಂತಿದ್ದ II
36 : ಕ್ರಮೇಣ ನಾನು ಆ ಮಾರ್ಗವಾಗಿ ನಡೆಯಲು I ಕಾಣಲಿಲ್ಲ, ಗುರುತೂ ಇರಲಿಲ್ಲ ಹುಡುಕಲು II
37 : ನಿರಪರಾಧಿಯನ್ನು ಲಕ್ಷಿಸು, ಸತ್ಪುರುಷನನು ವೀಕ್ಷಿಸು I ಶಾಂತಿಪ್ರಿಯನಿಗಿದೆ ಸಂತಾನವೃದ್ಧಿ, ಇದ ಗಮನಿಸು II
38 : ನಾಶವಾಗುವುದು ನಿಜ, ದೋಷಿಗಳ ಮನೆತನ I ನಿರ್ಮೂಲವಾಗುವುದು ದುರುಳರ ಸಂತಾನ II
39 : ಸಜ್ಜನರ ಜೀವೋದ್ಧಾರ ಪ್ರಭುವಿನಿಂದ I ಆಪತ್ಕಾಲದಲಿ ಆಶ್ರಯ ಆತನಿಂದ II
40 : ತನ್ನಾಶ್ರಿತರನು ಪ್ರಭು ಕೈ ನೀಡಿ ಕಾಪಾಡುವನು I ದುಷ್ಟರ ವಶದಿಂದವರನು ತಪ್ಪಿಸಿ ಉದ್ಧರಿಸುವನು II