पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
59ನೇ ಅಧ್ಯಾಯ
1 : ಶತ್ರುಗಳಿಂದ ದೇವಾ, ತಪ್ಪಿಸು I ಎದುರಾಳಿಗಳಿಂದೆನ್ನ ರಕ್ಷಿಸು II
2 : ಕೇಡಿಗರಿಂದೆನ್ನ ಬಿಡಿಸು I ಕೊಲೆಪಾತಕರಿಂದ ಉಳಿಸು II
3 : ಇಗೋ ನನ್ನ ಪ್ರಾಣಕ್ಕವರು ಹೂಡಿರುವ ಹೊಂಚು I ನನ್ನ ಮೇಲೆರಗಲು ಹೂಡಿರುವ ಕ್ರೂರಿಗಳ ಸಂಚು II
4 : ನಿರಪರಾಧಿ, ನಿರ್ದೋಷಿ ನಾನಾದರು I ಮೇಲೆ ಬೀಳಲಿದೋ ಸಜ್ಜುಗೊಂಡಿಹರು I ಎಚ್ಚೆತ್ತು ಪ್ರಭು, ನನಗೆ ನೆರವಾಗಿರು II
5 : ಇಸ್ರಯೇಲರ ದೇವ, ಸೇನಾಧೀಶ್ವರ ಪ್ರಭು, ನೀನು I ದಂಡಿಸು ನೀನೆಚ್ಚರಗೊಂಡು ಅನ್ಯಜನರೆಲ್ಲರನು I ತೋರಬೇಡ ದುರುಳ ದ್ರೋಹಿಗಳಾರಿಗೂ ದಯೆಯನು II
6 : ಸಂಜೆಯಾದುದೆ ಓಡಿ ಬರುವರು ನಾಯಿಗಳಂತೆI ಗುರುಗುಟ್ಟುತ ಊರ ಸುತ್ತುವರು ಕುನ್ನಿಗಳಂತೆ II
7 : ಅವರ ಬಾಯಿ ಬೊಗಳುವ ಮಾತುಗಳನು ಕೇಳು I ಅವರ ತುಟಿಗಳು ಹರಿತ ಕತ್ತಿಕಠಾರಿಗಳು I ನಮಗಾರು ಕಿವಿಗೊಡರೆಂಬುದೆ ಅವರ ಗೋಳು II
8 : ನೀನಾದರೋ ಪ್ರಭು, ಅವರನು ನೋಡಿ ನಗುವೆ I ಅನ್ಯಜನರನು ಅಪಹಾಸ್ಯಕ್ಕೀಡು ಮಾಡುವೆ II
9 : ನನ್ನ ಶಕ್ತಿಯೇ, ನಿನಗಾಗಿ ನಾ ಕಾದಿರುವೆ I ನನ್ನಾಶ್ರಯ ದುರ್ಗ, ದೇವಾ, ನೀನೇ ಅಲ್ಲವೆ II
10 : ಪ್ರೀತಿಯಿಂದ ನೆರವಾಗುವನು ದೇವನೆನಗೆ I ಶತ್ರುಗಳಿಗಾದ ಸೋಲನು ತೋರಿಸುವನೆನಗೆ II
11 : ಕೊಲಬೇಡಾ ದ್ರೋಹಿಗಳನು ಫಕ್ಕನೆ I ಮರೆತಾರೆನ್ನ ಜನತೆ ಪಾಠ ಕಲಿಯದೆ II ಚದರಿಸು ಶಕ್ತಿಯಿಂದ, ಅಲೆಯಲಿ ದಿಕ್ಕುತೋಚದೆ I ಆ ಪರಿ ತಗ್ಗಿಸು ಅವರನು; ಪ್ರಭು, ನೀಡೆನಗೆ ರಕ್ಷೆ II
12 : ಪಾಪವಿದೆ ಬಾಯಲಿ, ದೋಷವಿದೆ ತುಟಿಯಲಿ I ಸುಳ್ಳಿದೆ ಮಾತಲಿ, ಶಾಪವಿದೆ ನುಡಿಯಲಿ I ಅವರ ಸೊಕ್ಕಿನಲಿ ಅವರೇ ಸಿಕ್ಕಬೀಳಲಿ II
13 : ಸುಟ್ಟು ನೀ ಭಸ್ಮಮಾಡು ಕೋಪಾಗ್ನಿಯಿಂದ I ಸ್ಪಷ್ಟವಾಗಲಿ ಇಡೀ ಲೋಕಕ್ಕಿದರಿಂದ I ದೇವನಾಳುತಿಹನೆಂದು ಇಸ್ರಯೇಲಿನಿಂದ II
14 : ಸಂಜೆಯಾದುದೆ ಓಡಿಬರುವರು ನಾಯಿಗಳಂತೆ I ಗುರುಗುಟ್ಟುತ ಊರ ಸುತ್ತುವರು ಕುನ್ನಿಗಳಂತೆ II
15 : ಅನ್ನಕ್ಕಾಗಿ ಅಲೆದಾಡುವರು ಅತ್ತಿತ್ತಾ I ಹೊಟ್ಟೆತುಂಬದಿರೆ ಅಡ್ಡಾಡುವರು ಬೊಗಳುತ್ತಾ II
16 : ನಾನಾದರೊ ಹೊಗಳಿ ಹಾಡುವೆ ದೇವಾ, ನಿನ್ನ ಸಾಮರ್ಥ್ಯವನು I ಉದಯಕಾಲದಲೆ ನಾ ಸಂಕೀರ್ತಿಸುವೆ ನಿನ್ನ ಪ್ರೀತಿ ಪ್ರೇಮವನು I ಸಂಕಟದಲ್ಲೆನಗಾದ ಆಶ್ರಯಗಿರಿ, ದುರ್ಗ, ನೀನಲ್ಲವೇನು? II
17 : ನೀನೆನ್ನ ಶಕ್ತಿದೇವಾ, ನಿನಗೆನ್ನ ಸ್ತುತಿ I ನೀನೆನ್ನ ದುರ್ಗ, ತೋರಿಸು ಎನಗೆ ಪ್ರೀತಿ II