ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಹಗ್ಗಾಯ
2ನೇ ಅಧ್ಯಾಯ
- Verse 1: ಅದೇ ವರ್ಷದ ಏಳನೇ ತಿಂಗಳಿನ ಇಪ್ಪತ್ತೊಂದನೆಯ ದಿನದಲ್ಲಿ ಪ್ರವಾದಿ ಹಗ್ಗಾಯನ ಮೂಲಕ ಸರ್ವೇಶ್ವರ ಈ ಸಂದೇಶವನ್ನು ದಯಪಾಲಿಸಿದರು:
- Verse 2: ಶೆಯಲ್ತೀಯೇಲನ ಮಗನೂ ಜುದೇಯ ನಾಡಿನ ಅಧಿಪತಿಯೂ ಆದ ಜೆರುಬ್ಬಾಬೆಲನಿಗೆ ಮತ್ತು ಮಹಾಯಾಜಕ ಯೆಹೋಶುವನಿಗೆ ಮತ್ತು ಅಳಿದುಳಿದ ಜನರೆಲ್ಲರಿಗೆ ಹೀಗೆ ತಿಳಿಸು -
- Verse 3: “ಈ ದೇವಾಲಯದ ಪೂರ್ವ ವೈಭವವನ್ನು ನೋಡಿದವರು ನಿಮ್ಮಲ್ಲಿ ಎಷ್ಟುಮಂದಿ ಉಳಿದಿದ್ದೀರಿ? ಇದರ ಈಗಿನ ಸ್ಥಿತಿ ನಿಮಗೆ ಹೇಗೆ ತೋರುತ್ತದೆ? ನಿಮ್ಮ ದೃಷ್ಟಿಗೆ ಏನೂ ಇಲ್ಲದಂತೆ ಕಾಣಿಸುತ್ತದಲ್ಲವೇ? ಸರ್ವೇಶ್ವರ ಆದ ನಾನು ಹೇಳುವುದನ್ನು ಕೇಳಿ:
- Verse 4: ಜೆರುಬ್ಬಾಬೆಲನೇ, ಈಗ ಧೈರ್ಯದಿಂದಿರು. ಯೆಹೋಚಾದಾಕನ ಮಗನೂ ಮಹಾಯಾಜಕನೂ ಆದ ಯೆಹೋಶುವನೇ, ಎದೆಗುಂದಬೇಡ. ನಾಡಿನ ಜನರೇ, ನೀವೆಲ್ಲರು ಧೈರ್ಯದಿಂದ ಕೆಲಸಮಾಡಿ. ಇದು ಸೇನಾಧೀಶ್ವರ ಸರ್ವೇಶ್ವರ ಆದ ನನ್ನ ನುಡಿ. ನಾನು ನಿಮ್ಮೊಡನೆ ಇದ್ದೇನೆ.
- Verse 5: ನೀವು ಈಜಿಪ್ಟ್ ದೇಶದಿಂದ ಹೊರಟುಬಂದಾಗ ನಾನು ನಿಮಗೆ ಪ್ರಮಾಣವಾಗಿ ಕೊಟ್ಟ ಮಾತನ್ನು ನೆರವೇರಿಸುವೆನು. ನನ್ನ ಆತ್ಮವು ನಿಮ್ಮಲ್ಲಿ ನೆಲೆಗೊಂಡಿದೆ; ಭಯಪಡದಿರಿ.
- Verse 6: “ಸ್ವಲ್ಪಕಾಲದಲ್ಲೇ ಮತ್ತೊಮ್ಮೆ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಮರುಭೂಮಿಯನ್ನೂ ಅದರಿಸುವೆನು.
- Verse 7: ಸಕಲ ಜನಾಂಗಗಳನ್ನು ನಡುಗಿಸುವೆನು. ಆಗ ಎಲ್ಲ ರಾಷ್ಟ್ರಗಳ ಸಿರಿಸಂಪತ್ತು ಇಲ್ಲಿಗೆ ಬರುವುದು. ಈ ಆಲಯವನ್ನು ವೈಭವದಿಂದ ತುಂಬಿಸುವೆನು. ಇದು ಸರ್ವಶಕ್ತ ಸರ್ವೇಶ್ವರನ ನುಡಿ.
- Verse 8: ಬೆಳ್ಳಿ ನನ್ನದು, ಬಂಗಾರವೆಲ್ಲ ನನ್ನದು.
- Verse 9: ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ಶ್ರೇಷ್ಠವಾಗಿರುವುದು. ಈ ಸ್ಥಳದಲ್ಲಿ ಶಾಂತಿ ಸಮೃದ್ಧಿಯನ್ನು ಅನುಗ್ರಹಿಸುವೆನು.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.
- Verse 10: ಡೇರಿಯಸ್ ಚಕ್ರವರ್ತಿಯ ಆಳ್ವಿಕೆಯ ಎರಡನೇ ವರ್ಷದ ಒಂಬತ್ತನೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಪ್ರವಾದಿ ಹಗ್ಗಾಯನ ಮೂಲಕ ಈ ಸಂದೇಶವನ್ನು ಸರ್ವೇಶ್ವರ ದಯಪಾಲಿಸಿದರು.
- Verse 11: ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ - “ನೀನು ಯಾಜಕರ ಬಳಿಗೆ ಹೋಗು.
- Verse 12: ಒಬ್ಬನು ತನ್ನ ಬಟ್ಟೆಯ ಸೆರಗಿನಲ್ಲಿ ಪ್ರತಿಷ್ಠಿತ ಮಾಂಸವನ್ನು ಕಟ್ಟಿಕೊಂಡು ಬರುತ್ತಿರುವಾಗ ಆ ಸೆರಗು ರೊಟ್ಟಿಯನ್ನಾಗಲಿ, ಅನ್ನವನ್ನಾಗಲಿ, ದ್ರಾಕ್ಷಾರಸವನ್ನಾಗಲೀ, ಎಣ್ಣೆಯನ್ನಾಗಲೀ ಅಥವಾ ಯಾವ ಆಹಾರ ಪದಾರ್ಥವನ್ನೇ ಆಗಲಿ ಸೋಕಿದರೆ ಅದು ಪವಿತ್ರವಾಗುತ್ತದೋ? ಎಂದು ಧರ್ಮವಿಧಿಯನ್ನು ವಿಚಾರಿಸು.” ಪ್ರವಾದಿ ಹಾಗೆ ವಿಚಾರಿಸಲು ಯಾಜಕರು ‘ಇಲ್ಲ’ ಎಂದು ಉತ್ತರಕೊಟ್ಟರು.
- Verse 13: ಆಗ ಹಗ್ಗಾಯನು, “ಹೆಣವನ್ನು ಮುಟ್ಟಿ ಅಶುದ್ಧನಾದವನು ಇವುಗಳಲ್ಲಿ ಯಾವುದನ್ನಾದರೂ ಸೋಕಿದರೆ ಅದು ಅಶುದ್ಧವಾಗುತ್ತದೋ” ಎಂದು ಕೇಳಿದನು. ಅದಕ್ಕೆ ಯಾಜಕರು: “ಖಂಡಿತವಾಗಿ ಅಶುದ್ಧವಾಗುತ್ತದೆ” ಎಂದು ಉತ್ತರಕೊಟ್ಟರು.
- Verse 14: ಆಗ ಹಗ್ಗಾಯನು ಮುಂದುವರಿಸುತ್ತಾ, “ಸರ್ವೇಶ್ವರ ಇಂತೆನ್ನುತ್ತಾರೆ: ಇದರಂತೆಯೇ ಈ ಪ್ರಜೆ, ಈ ಜನಾಂಗ ಕೈಹಾಕುವ ಪ್ರತಿಯೊಂದು ಕೆಲಸ, ಇಲ್ಲಿಗೆ ತರುವ ಕಾಣಿಕೆ, ನೈವೇದ್ಯ, ಎಲ್ಲವೂ ನನಗೆ ಹೊಲೆಯಾಗಿಯೇ ಇದೆ,” ಎಂದನು.
- Verse 15: ಸರ್ವೇಶ್ವರ ಇಂತೆನ್ನುತ್ತಾರೆ: “ಸರ್ವೇಶ್ವರನ ಆಲಯ ನಿವೇಶನದಲ್ಲಿ ಕಲ್ಲಿನ ಮೇಲೆ ಕಲ್ಲಿಡುವ ಈ ಮೊದಲ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿ;
- Verse 16: ಆ ಕಾಲದಲ್ಲಿ ಒಬ್ಬನು ಇಪ್ಪತ್ತು ಸೇರಿನ ಮೆದೆಗೆ ಬಂದಾಗ ಹತ್ತು ಸೇರು ಧಾನ್ಯ ಮಾತ್ರ ಸಿಕ್ಕುತ್ತಿತ್ತಲ್ಲವೆ? ಐವತ್ತು ಸೇರು ದ್ರಾಕ್ಷಾರಸವನ್ನು ಮೊಗೆಯಬೇಕೆಂದು ತೊಟ್ಟಿಗೆ ಬಂದಾಗ ಇಪ್ಪತ್ತು ಸೇರು ಮಾತ್ರ ದೊರೆಯುತ್ತಿತ್ತಷ್ಟೆ.
- Verse 17: ನಾನು ನಿಮ್ಮ ದುಡಿಮೆಯ ಫಲವನ್ನು ಆನೆಕಲ್ಲು, ಬೂಷ್ಟು, ಬಿಸಿಗಾಳಿ - ಇವುಗಳಿಂದ ಹಾಳುಮಾಡಿ ನಿಮ್ಮನ್ನು ಬಾಧಿಸಿದೆನು. ಆದರೂ ನೀವು ನನ್ನ ಕಡೆಗೆ ತಿರುಗಿಕೊಳ್ಳಲಿಲ್ಲ, ಇದನ್ನು ನೆನಪಿನಲ್ಲಿಡಿ. ಇದು ಸರ್ವೇಶ್ವರನ ನುಡಿ.
- Verse 18: ಮಹಾದೇವಾಲಯಕ್ಕೆ ಅಸ್ತಿಭಾರಹಾಕಿದ ಅಂದರೆ, ಒಂಬತ್ತನೇ ತಿಂಗಳಿನ ಇಪ್ಪತ್ತನಾಲ್ಕನೇ ಈ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿ.
- Verse 19: ಇನ್ನು ಮುಂದಕ್ಕೂ ಕಣಜದಲ್ಲಿ ಕಾಳಿಲ್ಲದೆ ಇರುವುದೋ? ದ್ರಾಕ್ಷೆ, ಅಂಜೂರ, ದಾಳಿಂಬೆ, ಓಲಿವ್ ಗಿಡಗಳು ಫಲಿಸದೆಹೋಗುವವೋ? ಇಲ್ಲ. ಈ ದಿನ ಮೊದಲ್ಗೊಂಡು ನಾನು ನಿಮ್ಮನ್ನು ಆಶೀರ್ವದಿಸುವೆನು.”
- Verse 20: ಅದೇ ಒಂಬತ್ತನೆಯ ತಿಂಗಲಿನ ಇಪ್ಪತ್ತನಾಲ್ಕನೇ ದಿನದಲ್ಲಿ ಸರ್ವೆಶ್ವರ ಹಗ್ಗಾಯನಿಗೆ ಈ ಎರಡನೆಯ ಸಂದೇಶವನ್ನು ದಯಪಾಲಿಸಿದರು:
- Verse 21: “ಜುದೇಯ ನಾಡಿನ ಅಧಿಪತಿಯಾದ ಜೆರುಬ್ಬಾಬೆಲನಿಗೆ ಹೀಗೆಂದು ನುಡಿ: ನಾನು ಭೂಮ್ಯಾಕಾಶಗಳನ್ನು ಅದರಿಸುವೆನು.
- Verse 22: ರಾಜ್ಯಗಳ ಸಿಂಹಾಸನವನ್ನು ಕೆಡವಿಬಿಡುವೆನು. ರಾಷ್ಟ್ರಗಳ ಸಂಸ್ಥಾನಬಲವನ್ನು ಧ್ವಂಸಮಾಡುವೆನು. ರಥಗಳನ್ನೂ ರಥಾರೂಢರನ್ನೂ ದಬ್ಬಿಬಿಡುವೆನು. ಕುದುರೆಗಳೂ ರಾಹುತರೂ ಬಿದ್ದುಹೋಗುವರು; ಒಬ್ಬನು ಮತ್ತೊಬ್ಬನ ಕತ್ತಿಗೆ ತುತ್ತಾಗುವನು.”
- Verse 23: ಸೇನಾಧಿಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ಶೆಯಲ್ತೀಯೇಲನ ಮಗನೂ ನನ್ನ ದಾಸನೂ ಆದ ಜೆರುಬ್ಬಾಬೆಲನೇ, ಆ ದಿನಗಳಲ್ಲಿ ನಾನು ನಿನ್ನನ್ನು ಆರಿಸಿ ತೆಗೆದುಕೊಳ್ಳುವೆನು. ನನ್ನ ಮುದ್ರೆ ಉಂಗುರವನ್ನು ತೊಟ್ಟ ರಾಜನನ್ನಾಗಿ ನಿನ್ನನ್ನು ನೇಮಿಸುವೆನು,” ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿಯಿದು.