வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
89ನೇ ಅಧ್ಯಾಯ
1 : ಪ್ರಭು, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು I ಸಾರುವೆನು ತಲತಲಾಂತರಕು ನಿನ್ನ ಸತ್ಯತೆಯನು II
2 : ನಿನ್ನಚಲ ಪ್ರೀತಿ ಪ್ರಭು, ನನಗೆ ಶಾಶ್ವತ ಸಿದ್ಧ I ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ II
3 : ನೀನೆಂದೆ, “ನಾನಾರಿಸಿದವನೊಡನೆ ಮಾಡಿರುವೆ ಒಪ್ಪಂದ I ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರವಾದ ಶಪಥ : II
4 : “ಸ್ಥಾಪಿಸುವೆ ಶಾಶ್ವತವಾಗಿ ನಿನ್ನ ಸಂತತಿಯನು I ಸ್ಥಿರಪಡಿಸುವೆ ಯುಗಯುಗಕು ನಿನ್ನ ಸಿಂಹಾಸನವನು” II
5 : ಪ್ರಸಿದ್ಧಪಡಿಸುವುದು ಪ್ರಭು, ಗಗನವು ನಿನ್ನ ಮಹತ್ತನು I ಸಂಕೀರ್ತಿಸುವುದು ಸ್ವರ್ಗೀಯ ಸಭೆ, ನಿನ್ನ ಸತ್ಯತೆಯನು II
6 : ಮೇಘಮಂಡಲದಲಿ ಸಮಾನನಾರು ಪ್ರಭುವಿಗೆ I ದೇವದೂತರೊಳು ಹೋಲಿಕೆ ಯಾವುದು ಆತನಿಗೆ II
7 : ಸ್ವರ್ಗೀಯ ಸಭೆಯಲಿ ಪ್ರತಿಭಾವಂತನು ದೇವನು II ಸುತ್ತಣದೆಲ್ಲ ಪರಿವಾರಕ್ಕಿಂತ ಬಹು ಭೀಕರನು II
8 : ಪ್ರಭೂ, ಶಕ್ತಿಸ್ವರೂಪ, ನಿನ್ನ ಸುತ್ತುವರೆದಿದೆ ಸತ್ಯತೆ I ಸ್ವಾಮಿದೇವಾ, ಸರ್ವೇಶ್ವರಾ, ನಿನಗೆಲ್ಲಿಯದು ಸಮಾನತೆ? II
9 : ಕಡಲ ಕಲ್ಲೋಲಗಳನ್ನೆಲ್ಲ ಅಂಕೆಯಲಿ ಇಡುವವನು ನೀನು I ತರಂಗವೇಳುವಾಗಲು ಕೂಡ ತಡೆಹಿಡಿವವನು ನೀನು II
10 : ಚದರಿಸಿದೆ ನಿನ್ನ ಭುಜಬಲದಿಂದ ಶತ್ರುಗಳನು I ಛೇದಿಸಿ ಕೊಂದುಹಾಕಿದೆ ಆ ರಾಕ್ಷಸ ರಹಬನನು II
11 : ಆಕಾಶವು ನಿನ್ನದು ಪ್ರಭು, ಭೂಮಿಯೂ ನಿನ್ನದೇ I ಜಗವು, ಅದರಲ್ಲಿರುವುದೆಲ್ಲವು, ನಿನ್ನಿಂದಾದುದೇ II
12 : ಉತ್ತರ ದಕ್ಷಿಣಗಳನುಂಟು ಮಾಡಿದವನು ನೀನು I ಸ್ತುತಿಸುತ್ತವೆ ತಾಬೋರ್ ಹೆರ್ಮೊನ್ ನಿನ್ನ ನಾಮವನು II
13 : ನಿನ್ನ ಹಸ್ತ ಶಕ್ತಿಯುತ, ಬಲಗೈ ಮಹೋನ್ನತ I ನಿನ್ನ ಭುಜಬಲವಾದರೊ ಪರಾಕ್ರಮರೂಪಿತ II
14 : ನೀತಿನ್ಯಾಯ ನಿನ್ನ ಸಿಂಹಾಸನದಸ್ತಿವಾರ I ಪ್ರೀತಿಸತ್ಯತೆ ನಿನ್ನ ಸಾನ್ನಿಧ್ಯ ಪರಿವಾರ II
15 : ಧನ್ಯರು ಪ್ರಭು, ನಿನಗೆ ಜಯಕಾರ ಹಾಡುವವರು I ನಿನ್ನ ಮುಖದ ಪ್ರಕಾಶದೊಳವರು ನಡೆಯುವರು II
16 : ಆನಂದಿಸುವರವರು ಸದಾ ನಿನ್ನ ನಾಮದಲಿ I ಪ್ರವರ್ಧಿಸುವರವರು ನಿನ್ನ ನ್ಯಾಯನೀತಿಯಲಿ II
17 : ಅವರ ಶಕ್ತಿಸಾಮರ್ಥ್ಯದ ಪ್ರತಿಭೆ ನಿನ್ನದೆ I ನಿನ್ನ ದಯೆಯಿಂದ ನಮಗೆ ಕೋಡುಮೂಡಿದೆ II
18 : ಗುರಾಣಿಯಂತಿಹ ನಮ್ಮ ರಾಜನು ಪ್ರಭುವಿನವನೇ I ಇಸ್ರಯೇಲಿನ ಪರಮಪಾವನ ಸ್ವಾಮಿಗೆ ಸೇರಿದವನೇ II
19 : ಹಿಂದೊಮ್ಮೆ ನೀ ದರ್ಶನವಿತ್ತು ಇಂತೆಂದೆ ನಿನ್ನ ಭಕ್ತರಿಗೆ: I “ರಕ್ಷಾಬಲವನು ಅನುಗ್ರಹಿಸಿರುವೆ ಶೂರವೀರನೋರ್ವನಿಗೆ I ಪ್ರಜೆಗಳಲೊರ್ವ ಯುವಕನನು ಏರಿಸಿರುವೆ ಉನ್ನತಸ್ಥಾನಕೆ II
20 : “ನನ್ನ ದಾಸ ದಾವೀದನನು ಗುರುತಿಸಿರುವೆ I ಪವಿತ್ರ ತೈಲದಿಂದವನನು ಅಭಿಷೇಕಿಸಿರುವೆ II
21 : ನನ್ನ ಕೈಯ ಆಸರೆ ಅವನಿಗಿದೆ ಸತತ I ನನ್ನ ಭುಜಬಲವು ಅವನಿಗೆ ಶಕ್ತಿಯುತ II
22 : ಸಿಗನು ಶತ್ರುವಿನ ಕುತಂತ್ರಕೆ I ಕುಗ್ಗನು ಕೆಡುಕರಾ ದರ್ಪಕೆ II
23 : ಅವನ ಶತ್ರುಗಳನು ಸದೆಬಡಿವೆನು ಅವನ ಮುಂದೆಯೆ I ಅವನ ವಿರೋಧಿಗಳನು ಹತಮಾಡುವೆನು ಅಲ್ಲಿಯೇ II
24 : ನಿನ್ನ ಪ್ರೀತಿಸತ್ಯತೆಗಳು ಇರುವುವು ಅವನೊಂದಿಗೆ I ನನ್ನ ನಾಮ ಪ್ರಯುಕ್ತ ಕೋಡು ಮೂಡುವುದವನಿಗೆ II
25 : ತೊರೆನದಿಗಳಿಂದ ಸಾಗರದವರೆಗೆ I ಅಧಿಕಾರ ನೀಡುವೆ ಅವನ ಕೈಗೆ II
26 : ‘ನನಗೆ ಪಿತ, ದೈವ, ದುರ್ಗ, ಉದ್ಧಾರಕ, ನೀನು’ I ಇಂತೆಂದೇ ನನ್ನನು ಸಂಬೋಧಿಸುವನವನು II
27 : ಮಾಡುವೆನವನನು ಜೇಷ್ಠಪುತ್ರನನ್ನಾಗಿ I ಭೂರಾಜರುಗಳೊಳು ಅತ್ಯುನ್ನತನನ್ನಾಗಿ I
28 : ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ I ಅವನೊಡನೆ ನಾ ಮಾಡಿದೊಪ್ಪಂದ ಸ್ಥಿರಸ್ಥಾಯಿಯಾಗಿ II
29 : ಉಳಿಸುವೆನು ಅವನ ಸಂತಾನವನು ನಿರಂತರವಾಗಿ I ಅವನ ಸಿಂಹಾಸನವಿರುವುದು ಗಗನದಂತೆ ಸ್ಥಿರವಾಗಿ II
30 : ಅವನ ಕುವರರು ತೊರೆದರಾದರೆ ನನ್ನ ಧರ್ಮಶಾಸ್ತ್ರವನು I ಉಲ್ಲಂಘಿಸಿ ನಡೆದರಾದರೆ ನನ್ನ ಆಜ್ಞಾವಿಧಿಗಳನು II
31 : ಮೀರಿ ನಡೆದರಾದರೆ ನನ್ನ ಶಾಸನಗಳನು I ಪರಿಪಾಲಿಸದೆ ಹೋದರೆ ಎನ್ನ ನಿಯಮಗಳನು II
32 : ದಂಡಿಸುವೆನವರ ದ್ರೋಹವನು ದಂಡದಿಂದ I ಶಿಕ್ಷಿಸುವೆನವರ ಅಪರಾಧವನು ಚಾಟಿಯಿಂದ II
33 : ಆದರೆ ನನ್ನೊಲವು ಅವನನ್ನು ಕೈಬಿಡದು I ನನ್ನ ಪ್ರಾಮಾಣಿಕತೆಗದು ಚ್ಯುತಿಯಾಗದು II
34 : ಭಂಗಪಡಿಸೆನು ಎನ್ನ ಒಡಂಬಡಿಕೆಯನು I ಮೀರೆನು ನಾನವನಿಗೆ ಕೊಟ್ಟ ಮಾತನು II
35 : ಮಾಡಿರುವೆ ಪ್ರಮಾಣ ನನ್ನ ಪವಿತ್ರತೆಯ ಮೇಲೆ I ಸುಳ್ಳಾಡಲಾರೆ ದಾವೀದನಿಗೀ ವಿಷಯದ ಮೇಲೆ II
36 : ರವಿಯಂತಿರುವುದು ಎನ್ನ ಮುಂದೆ ಅವನ ಗಾದಿ I ಚಿರ ಶಾಶ್ವತವಾಗಿರುವುದು ಅವನ ಸಂತತಿ II
37 : ಅಮರವಾಗಿರುವುದು ಚಂದ್ರನಂತೆ I ಆಗಸದಾ ಪ್ರಮಾಣ ಸಾಕ್ಷಿಯಂತೆ” II
38 : ಇಂತೆಂದ ನೀನೆ ತ್ಯಜಿಸಿರುವೆ ನಿನ್ನಾಭಿಷಿಕ್ತನನು I ತಳ್ಳಿಬಿಟ್ಟಿರುವೆ ಕೋಪಾವೇಶದಿಂದ ಅವನನು II
39 : ಭಂಗಪಡಿಸಿರುವೆ ದಾಸನೊಡನೆ ಮಾಡಿದ ಒಡಂಬಡಿಕೆಯನು I ಮಣ್ಣುಪಾಲಾಗಿಸಿರುವೆ ಅವನ ಪಟ್ಟದ ಆ ಕಿರೀಟವನು II
40 : ಸೀಳಿಬಿಟ್ಟಿರುವೆ ಅವನಾ ಪೌಳಿಗೋಡೆಗಳನು I ಹಾಳುಮಾಡಿಬಿಟ್ಟಿರುವೆ ಕೋಟೆಕೊತ್ತಲಗಳನು II
41 : ಸುಲಿಗೆ ಮಾಡುತಿಹರವನನು ದಾರಿಗರೆಲ್ಲರು I ಪರಿಹಾಸ್ಯಕ್ಕೆ ಈಡುಮಾಡುತಿಹರು ನೆರೆಯವರು II
42 : ಮೇಲಾಗಿಸಿರುವೆ ಅವನ ವಿರೋಧಿಗಳ ಕೈಯನು I ಉಲ್ಲಾಸಗೊಳಿಸಿರುವೆ ಅವನೆಲ್ಲಾ ವೈರಿಗಳನು II
43 : ಮೊಂಡಾಗಿಸಿರುವೆ ಅವನ ಕತ್ತಿಯ ಮೊನೆಯನು I ಕಾಳಗಕೆ ನಿಲ್ಲದಂತಾಗಿಸಿರುವೆ ಅವನನು II
44 : ಕಿತ್ತುಹಾಕಿರುವೆ ಅವನ ರಾಜದಂಡವನು I ನೆಲಕ್ಕೆ ಉರುಳಿಸಿರುವೆ ಅವನ ಸಿಂಹಾಸನವನು II
45 : ಮುಪ್ಪಾಗಿಸಿರುವೆ ಅವನನು ಕಾಲಕ್ಕೆ ಮುಂಚೆ I ನಿನ್ನ ನಿಮಿತ್ತ ಅವನನು ಆವರಿಸಿದೆ ಲಜ್ಜೆ II
46 : ಒಡೆಯಾ, ಚಿರಮರೆಯಾಗಿರುವೆ? ಇನ್ನೆಷ್ಟರವರೆಗೆ? I ನಿನ್ನ ಕೋಪಾಗ್ನಿ ಎಡೆಬಿಡದೆ ಉರಿಯುತ್ತಿರಬೇಕೆ? II
47 : ಎಷ್ಟು ಅಲ್ಪವಾದುದೆನ್ನ ಜೀವಮಾನಕಾಲ I ಎಷ್ಟು ನಶ್ವರ ನೀ ನಿರ್ಮಿಸಿದ ಮಾನವ ಕುಲ! II
48 : ಸಾಯದೆಯೇ ಜೀವಿಸಬಲ್ಲ ನರನಾರು? I ಆ ತಳದಿಂದ ತಪ್ಪಿಸಿಕೊಳ್ಳುವವನಾರು? II
49 : ದಾವೀದನಿಗೆ ಪ್ರಭು, ನೀನಿತ್ತ ವಾಗ್ದಾನವೆಲ್ಲಿ? I ಗತಕಾಲದಲಿ ನೀ ತೋರಿದಚಲ ಪ್ರೀತಿಯೆಲ್ಲಿ? II
50 : ನೆನೆಸಿಕೊ ಪ್ರಭು, ನಿನ್ನ ಅಪಮಾನಿತ ಸೇವಕನನು I ಸ್ಮರಿಸಿಕೊ ಆತ ಹೊತ್ತಿರುವ ಪರರ ನಿಂದೆಯನು II
51 : ನಿಂದಿಸುತಿಹರು ಪ್ರಭು, ವೈರಿಗಳು ನಿನ್ನಭಿಷಿಕ್ತನನು I ಹೆಜ್ಜೆಹೆಜ್ಜೆಗು ಅವಮಾನಿಸುತಿಹರು ಶತ್ರುಗಳವನನು I ಆಮೆನ್, ಆಮೆನ್, ಪ್ರಭುವಿಗೆ ಸರ್ವದಾ ಧನ್ಯವಾದವು II
52 : ನಿಂದಿಸುತಿಹರು ಪ್ರಭು, ವೈರಿಗಳು ನಿನ್ನಭಿಷಿಕ್ತನನು I ಹೆಜ್ಜೆಹೆಜ್ಜೆಗು ಅವಮಾನಿಸುತಿಹರು ಶತ್ರುಗಳವನನು I ಆಮೆನ್, ಆಮೆನ್, ಪ್ರಭುವಿಗೆ ಸರ್ವದಾ ಧನ್ಯವಾದವು II