வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
92ನೇ ಅಧ್ಯಾಯ
1 : ಹೇ ಪ್ರಭೂ, ನಿನ್ನ ಗುಣಗಾನ ಮಂಗಳಕರ I ಪರಾತ್ಪರನೆ, ನಿನ್ನ ನಾಮಭಜನೆ ಹಿತಕರ II
2 : ಪ್ರಾತಃಕಾಲದಲೆ ನಿನ್ನ ಪ್ರೀತಿಯನು I ರಾತ್ರಿಕಾಲದಲೆ ನಿನ್ನ ಸತ್ಯತೆಯನು II
3 : ವರ್ಣಿಸುವುದುಚಿತ ವೀಣಾ ಸ್ವರಮಂಡಲದಿಂದ I ಕೊಳಲ ದನಿಯಿಂದ, ಕಿನ್ನರಿಯ ನಾದಸ್ವರದಿಂದ II
4 : ನಿನ್ನ ಕಾರ್ಯಗಳಿಂದ ಪ್ರಭು, ನನ್ನನ್ನು ಆನಂದಗೊಳಿಸಿರುವೆ I ನಿನ್ನಾ ಕಾರ್ಯಗಳ ನೋಡಿ, ನಾನು ಉಲ್ಲಾಸದಿಂದ ಹಾಡುವೆ II
5 : ಪ್ರಭು, ನಿನ್ನ ಕೃತ್ಯಗಳೆನಿತೋ ಅಮೂಲ್ಯ I ನಿನ್ನಾಲೋಚನೆಗಳು ಎನಿತೋ ಅಶೋಧ್ಯ II
6 : ಇದನರಿಯನು ಪಶುಪ್ರಾಯನು I ಇದ ತಿಳಿಯನು ಬುದ್ಧಿಹೀನನು II
7 : ದುರುಳರು ಚಿಗುರಬಹುದು ಹುಲ್ಲಿನಂತೆ I ಕೆಡುಕರು ಅರಳಬಹುದು ಹೂವಿನಂತೆ I ಅವರ ಅಳಿವಂತೂ ಕಟ್ಟಿಟ್ಟ ಬುತ್ತಿಯಂತೆ II
8 : ನೀನಾದರೊ ಪ್ರಭು, ಸರ್ವದಾ ಇರುವೆ I ಮಹೋನ್ನತದೊಳು ವಿರಾಜಿಸುತ್ತಿರುವೆ II
9 : ಕಾಡುಕೋಣದ ಕೊಂಬಿನ ಬಲವನು ನನಗಿತ್ತಿರುವೆ I ಚೈತನ್ಯದ ತೈಲದಿಂದ ನನ್ನನು ಅಭ್ಯಂಜಿಸಿರುವೆ II
10 : ನಿನ್ನ ಶತ್ರುಗಳ ವಿನಾಶ ನಿಶ್ಚಿತ I ಕೆಡುಕರೆಲ್ಲ ಚದರಿ ಪೋಪುದು ಖಚಿತ II
11 : ನಾ ಕಣ್ಣಾರೆ ಕಂಡಿರುವೆ ಶತ್ರುಗಳಿಗಾದ ದುರ್ಗತಿಯನು I ಕಿವಿಯಾರೆ ಕೇಳಿರುವೆ ನನ್ನ ವಿರೋಧಿಗಳಿಗಾದ ವಿಪತ್ತನು II
12 : ಬೆಳೆಯುವರು ಸಜ್ಜನರು ಖರ್ಜೂರದ ವೃಕ್ಷದಂತೆ I ವೃದ್ಧಿಯಾಗುವರು ಲೆಬನೋನಿನ ದೇವದಾರಿನಂತೆ II
13 : ಅವರಿರುವರು ಪ್ರಭುವಿನಾಲಯದಲೆ ನೆಟ್ಟ ಸಸಿಗಳಂತೆ I ನಮ್ಮ ದೇವಾಂಗಳದಿ ಹುಲುಸಾಗಿ ಬೆಳೆವ ಮರಗಳಂತೆ I ಫಲಿಸುವರು ಮುಪ್ಪಿನಲೂ, ಶೋಭಿಸುವರು ಪಚ್ಚೆಪಸಿರಂತೆ II
14 : ಅವರಿರುವರು ಪ್ರಭುವಿನಾಲಯದಲೆ ನೆಟ್ಟ ಸಸಿಗಳಂತೆ I ನಮ್ಮ ದೇವಾಂಗಳದಿ ಹುಲುಸಾಗಿ ಬೆಳೆವ ಮರಗಳಂತೆ I ಫಲಿಸುವರು ಮುಪ್ಪಿನಲೂ, ಶೋಭಿಸುವರು ಪಚ್ಚೆಪಸಿರಂತೆ II
15 : ಈ ಪರಿ ಪಡೆವುದು ಸಾಕ್ಷ್ಯ ಪ್ರಭುವಿನಾ ಸತ್ಯಸಂಧತೆ I ಆತನೇ ನನಗೆ ಪೊರೆಬಂಡೆ, ಆತನಲ್ಲಿಲ್ಲ ವಕ್ರತೆ II