पवित्र बाइबिल
ಹೊಸ ಒಡಂಬಡಿಕೆ
ಗಲಾತ್ಯರಿಗೆ
2ನೇ ಅಧ್ಯಾಯ
1 : ಹದಿನಾಲ್ಕು ವರ್ಷಗಳು ಕಳೆದ ಮೇಲೆ ತೀತನನ್ನು ಕರೆದುಕೊಂಡು ಬಾರ್ನಬನ ಜೊತೆಯಲ್ಲಿ ಪುನಃ ಜೆರುಸಲೇಮಿಗೆ ಹೋದೆ.
2 : ದೇವಪ್ರೇರಣೆಗೆ ಅನುಸಾರವಾಗಿಯೇ ಅಲ್ಲಿಗೆ ಹೋದೆ. ಅನ್ಯಧರ್ಮೀಯರಿಗೆ ನಾನು ಸಾರುತ್ತಿದ್ದ ಸಂದೇಶ ಏನೆಂಬುದನ್ನು ಅಲ್ಲಿದ್ದ ಕೆಲವು ಗಣ್ಯವ್ಯಕ್ತಿಗಳಿಗೆ ಪ್ರತ್ಯೇಕವಾಗಿ ತಿಳಿಸಿದೆ. ಅದುವರೆಗೆ ನಾನು ಪಟ್ಟ ಶ್ರಮವಾಗಲಿ ಈಗ ಪಡುತ್ತಿರುವ ಶ್ರಮವಾಗಲಿ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಹೀಗೆ ಮಾಡಿದೆ.
3 : ಆಗ ನನ್ನ ಸಂಗಡವಿದ್ದ ತೀತನು ಗ್ರೀಕನಾಗಿದ್ದರೂ ಅವನಿಗೆ ಸುನ್ನತಿ ಆಗಬೇಕೆಂದು ಯಾರೂ ಒತ್ತಾಯಪಡಿಸಲಿಲ್ಲ.
4 : ಗೂಢಾಚಾರರಾಗಿ ಬಂದಿದ್ದ ಕೆಲವು ಸಹೋದರರು ಅಲ್ಲಿದ್ದುದರಿಂದ ಒತ್ತಾಯ ನಡೆದೀತೆಂಬ ಶಂಕೆ ಇತ್ತು. ಇವರು ಕ್ರಿಸ್ತಯೇಸುವಿನಲ್ಲಿ ನಮಗಿರುವ ಮುಕ್ತ ಸ್ವಾತಂತ್ರ್ಯದ ಬಗ್ಗೆ ಗುಟ್ಟಾಗಿ ವಿಚಾರಿಸಲು ಬಂದಿದ್ದರು. ನಮ್ಮನ್ನು ಪುನಃ ದಾಸತ್ವದಲ್ಲಿ ಸಿಕ್ಕಿಸಬೇಕೆಂಬುದೇ ಅವರ ಉದ್ದೇಶವಾಗಿತ್ತು.
5 : ಆದರೆ ನಾವು ಅವರಿಗೆ ಕ್ಷಣಮಾತ್ರವೂ ಬಿಟ್ಟುಕೊಡಲಿಲ್ಲ. ಹೀಗೆ ನಿಮಗೋಸ್ಕರ ಶುಭಸಂದೇಶದ ಸತ್ಯಾರ್ಥವನ್ನು ಸುಭದ್ರವಾಗಿ ಇರಿಸಿದೆವು.
6 : ಅಲ್ಲಿದ್ದ ಗಣ್ಯವ್ಯಕ್ತಿಗಳು ಕೂಡ (ಅವರು ಹಿಂದೆ ಎಂಥವರಾಗಿದ್ದರು ಎಂಬುದು ನನಗೆ ಮುಖ್ಯವಲ್ಲ; ದೇವರು ಮುಖನೋಡಿ ಮಣೆ ಹಾಕುವವರಲ್ಲ) ನನಗೆ ಯಾವ ಹೊಸ ಸಲಹೆ ನೀಡಲಿಲ್ಲ.
7 : ಬದಲಾಗಿ, ಯೆಹೂದ್ಯರಿಗೆ ಶುಭಸಂದೇಶವನ್ನು ಸಾರುವ ಸೇವೆಯನ್ನು ಪೇತ್ರನಿಗೆ ವಹಿಸಿಕೊಟ್ಟಂತೆಯೇ ಯೆಹೂದ್ಯರಲ್ಲದವರಿಗೆ ಶುಭಸಂದೇಶವನ್ನು ಸಾರುವ ಸೇವಾಕಾರ್ಯವನ್ನು ದೇವರು ನನಗೆ ವಹಿಸಿಕೊಟ್ಟಿದ್ದಾರೆ ಎಂಬುದನ್ನು ಆ ಗಣ್ಯವ್ಯಕ್ತಿಗಳು ಒಪ್ಪಿಕೊಂಡರು.
8 : ಹೌದು, ಯೆಹೂದ್ಯರಿಗೆ ಪ್ರೇಷಿತನಾಗುವಂತೆ ಪೇತ್ರನನ್ನು ಪ್ರೇರೇಪಿಸಿದ ದೇವರು, ಯೆಹೂದ್ಯರಲ್ಲದವರಿಗೆ ಪ್ರೇಷಿತನಾಗಲು ನನ್ನನ್ನು ಪ್ರೇರೇಪಿಸಿದ್ದಾರೆ.
9 : ನನಗೆ ಕೊಡಲಾಗಿದ್ದ ಈ ವಿಶೇಷ ವರವನ್ನು ಮನಗಂಡು ಸಭಾಸ್ತಂಭಗಳೆಂದು ಪರಿಗಣಿತರಾದ ಯಕೋಬ, ಕೇಫ ಮತ್ತು ಯೊವಾನ್ನರು ನನಗೂ ಬಾರ್ನಬನಿಗೂ ಕೈಯಲ್ಲಿ ಕೈಯನ್ನಿಟ್ಟು ಅನ್ಯೋನ್ಯತೆಯನ್ನು ಸೂಚಿಸಿದರು. ಅಲ್ಲದೆ, “ನೀವು ಯೆಹೂದ್ಯರಲ್ಲದವರ ಬಳಿಗೆ ಹೋಗಿರಿ, ನಾವು ಯೆಹೂದ್ಯರ ಬಳಿಗೆ ಹೋಗುತ್ತೇವೆ,” ಎಂದೂ ಹೇಳಿದರು.
10 : ಅವರಲ್ಲಿದ್ದ ಬಡಬಗ್ಗರಿಗೆ ಮರೆಯದೆ ನೆರವಾಗಬೇಕೆಂಬ ಒಂದು ವಿಷಯವನ್ನು ಮಾತ್ರ ಕೇಳಿಕೊಂಡರು. ನಾನು ಮಾಡಬೇಕೆಂದು ಎಣಿಸಿದುದು ಅದೇ ಆಗಿತ್ತು.
11 : ಆದರೆ ಕೇಫನು ಅಂತಿಯೋಕ್ಯಕ್ಕೆ ಬಂದಾಗ ಆತನು ತಪ್ಪಿತಸ್ಥನೆಂಬುದು ಸಿದ್ಧವಾಗಿದ್ದುದರಿಂದ ನಾನು ಆತನನ್ನು ಮುಖಾಮುಖಿಯಾಗಿ ಖಂಡಿಸಿದೆ.
12 : ಯಕೋಬನ ಕಡೆಯಿಂದ ಕೆಲವು ಸಹೋದರರು ಬರುವುದಕ್ಕೆ ಮುಂಚೆ ಆತನು ಅನ್ಯಧರ್ಮೀಯರೊಡನೆ ಊಟಮಾಡುತ್ತಿದ್ದನು. ಆದರೆ ಅವರು ಬಂದ ಮೇಲೆ ಸುನ್ನತಿ ಪರವಾದಿಗಳಿಗೆ ಅಂಜಿ ಅನ್ಯಧರ್ಮೀಯರಿಂದ ದೂರವಾದನು.
13 : ಅಂತೆಯೇ, ಕೇಫನ ಸಂಗಡ ಇದ್ದ ಮಿಕ್ಕ ಯೆಹೂದ್ಯರು ಕಪಟತನದಿಂದ ವರ್ತಿಸಿದರು. ಇವರ ವರ್ತನೆಗೆ ಬಾರ್ನಬನೂ ಸಹ ಮಾರುಹೋದನು.
14 : ಅವರ ಈ ನಡತೆ, ಶುಭಸಂದೇಶದ ಸತ್ಯಕ್ಕೆ ಅನುಗುಣವಾದುದಲ್ಲ ಎಂದು ನನಗೆ ಮನದಟ್ಟಾಯಿತು. ಆಗ ನಾನು ಅವರೆಲ್ಲರ ಸಮ್ಮುಖದಲ್ಲೇ ಕೇಫನಿಗೆ: “ನೀನು ಯೆಹೂದ್ಯನಾಗಿದ್ದೂ ಯೆಹೂದ್ಯರಂತೆ ನಡೆಯದೆ ಅನ್ಯಧರ್ಮೀಯರಂತೆ ನಡೆದುಕೊಳ್ಳುತ್ತ ಇದ್ದಿಯಲ್ಲವೇ? ಹೀಗಿರುವಲ್ಲಿ ಅನ್ಯಧರ್ಮೀಯರು ಯೆಹೂದ್ಯರಂತೆ ನಡೆದುಕೊಳ್ಳಬೇಕೆಂದು ನೀನು ಒತ್ತಾಯಪಡಿಸುವುದಾದರೂ ಹೇಗೆ?” ಎಂದು ಕೇಳಿದೆ.
15 : ನಾವಂತೂ ಹುಟ್ಟು ಯೆಹೂದ್ಯರು. ಪಾಪಿಗಳೆಂದು ಕರೆಯಲಾಗುವ ಅನ್ಯಧರ್ಮೀಯರಲ್ಲ.
16 : ಆದರೂ ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸುವುದರಿಂದಲ್ಲ, ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಡುವುದರಿಂದ ಮಾತ್ರ ಮಾನವನು ದೇವರೊಡನೆ ಸತ್ಸಂಬಂಧವನ್ನು ಪಡೆಯುತ್ತಾನೆಂದು ಬಲ್ಲೆವು. ದೇವರೊಡನೆ ಸತ್ಸಂಬಂಧವನ್ನು ಪಡೆಯುವ ಸಲುವಾಗಿ ನಾವೂ ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಬಿಟ್ಟು, ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟಿದ್ದೇವೆ. ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸುವುದರಿಂದಲೆ ಯಾರೂ ದೇವರೊಡನೆ ಸತ್ಸಂಬಂಧಿಕರಾಗಿ ಕಂಡುಬರುವುದಿಲ್ಲ.
17 : ಕ್ರಿಸ್ತಯೇಸುವಿನ ಮುಖಾಂತರ ದೇವರೊಡನೆ ಸತ್ಸಂಬಂಧವನ್ನು ಪಡೆಯಲು ಯತ್ನಿಸುತ್ತಿರುವ ನಾವು ಅನ್ಯಧರ್ಮೀಯರಂತೆ ಕಂಡುಬರುವುದಾದರೆ, ಕ್ರಿಸ್ತಯೇಸುವೇ ಪಾಪಕ್ಕೆ ಕಾರಣರೆಂದು ಹೇಳಿದಂತಾಗುತ್ತದೆ. ಆದರೆ ಅದೆಂದಿಗೂ ಆಗದು.
18 : ನಾನು ಕೆಡವಿದ್ದನ್ನೇ ಪುನಃ ಕಟ್ಟಿದರೆ ನನ್ನನ್ನು ನಾನೇ ಅಪರಾಧಿ ಎಂದು ರುಜುವಾತು ಪಡಿಸಿದಂತಾಗುವುದಿಲ್ಲವೇ?
19 : ನಾನಾದರೋ ದೇವರಿಗಾಗಿ ಜೀವಿಸುವುದಕ್ಕೋಸ್ಕರ, ಧರ್ಮಶಾಸ್ತ್ರದ ಮೂಲಕ, ಧರ್ಮಶಾಸ್ತ್ರದ ಪಾಲಿಗೆ ಸತ್ತವನಾಗಿದ್ದೇನೆ.
20 : ಕ್ರಿಸ್ತಯೇಸುವಿನೊಂದಿಗೆ ನಾನೂ ಶಿಲುಬೆಗೇರಿಸಲಾದವನು. ಈಗ ಜೀವಿಸುವವನು ನಾನಲ್ಲ. ಕ್ರಿಸ್ತಯೇಸು ನನ್ನಲ್ಲಿ ಜೀವಿಸುತ್ತಾರೆ, ನನ್ನನ್ನು ಪ್ರೀತಿಸಿ ನನಗಾಗಿ ಪ್ರಾಣಾರ್ಪಣೆ ಮಾಡಿದ ದೇವರ ಪುತ್ರನಲ್ಲಿ ನಾನು ಇರಿಸಿರುವ ವಿಶ್ವಾಸದಿಂದಲೇ ನಾನೀಗ ಈ ದೇಹದಲ್ಲಿ ಜೀವಿಸುತ್ತಿದ್ದೇನೆ.
21 : ದೇವರ ಅನುಗ್ರಹವನ್ನು ನಿರಾಕರಿಸುವಂಥವನು ನಾನಲ್ಲ. ಧರ್ಮಶಾಸ್ತ್ರದ ಮೂಲಕ ದೇವರೊಡನೆ ಸತ್ಸಂಬಂಧವು ದೊರಕುವುದಾದರೆ ಕ್ರಿಸ್ತಯೇಸು ಮರಣಕ್ಕೀಡಾದುದು ನಿರರ್ಥಕವೇ ಸರಿ.