ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಯೊವಾನ್ನ
1ನೇ ಅಧ್ಯಾಯ
1 : ಜಗತ್ತು ಉಂಟಾಗುವ ಮೊದಲೇ ‘ದಿವ್ಯವಾಣಿ’ ಎಂಬವರಿದ್ದರು. ಆ ದಿವ್ಯವಾಣಿ ದೇವರಾಗಿದ್ದರು. ಆ ದಿವ್ಯವಾಣಿ ದೇವರೊಂದಿಗೆ ಇದ್ದರು;
2 : ಅನಾದಿಯಿಂದಲೇ ಅವರು ದೇವರೊಂದಿಗೆ ಇದ್ದರು.
3 : ದಿವ್ಯವಾಣಿಯ ಮುಖಾಂತರವೇ ಸಮಸ್ತವೂ ಉಂಟಾಯಿತು. ಉಂಟಾದವುಗಳಲ್ಲಿ ಯಾವುದೂ ಆ ದಿವ್ಯವಾಣಿಯಿಂದಲ್ಲದೆ ಆದುದಿಲ್ಲ.
4 : ಆ ದಿವ್ಯವಾಣಿಯಲ್ಲಿ ಸಜ್ಜೀವವಿತ್ತು. ಆ ಜೀವವೇ ಮಾನವಜನಾಂಗದ ಜ್ಯೋತಿಯಾಗಿತ್ತು.
5 : ಆ ಜ್ಯೋತಿ ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲಿಗಾದರೋ ಅದನ್ನು ನಿಗ್ರಹಿಸಲಾಗಲಿಲ್ಲ.
6 : ದೇವರು ಒಬ್ಬ ವ್ಯಕ್ತಿಯನ್ನು ಕಳುಹಿಸಿದರು. ಆತನ ಹೆಸರು ಯೊವಾನ್ನ.
7 : ಈತನು ಸಾಕ್ಷಿಕೊಡಲು ಬಂದನು. ತನ್ನ ಮುಖಾಂತರ ಸರ್ವರೂ ವಿಶ್ವಾಸಿಸುವಂತೆ ಆ ಜ್ಯೋತಿಯನ್ನು ಕುರಿತು ಸಾಕ್ಷಿನೀಡಿದನು.
8 : ಈತನೇ ಜ್ಯೋತಿಯಾಗಿರಲಿಲ್ಲ; ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಲೆಂದೇ ಬಂದವನು.
9 : ನಿಜವಾದ ಜ್ಯೋತಿ ಆ ದಿವ್ಯವಾಣಿಯೇ. ಮಾನವರೆಲ್ಲರನ್ನು ಬೆಳಗಿಸಲು ಲೋಕಕ್ಕೆ ಆಗಮಿಸಲಿದ್ದ ಜಗಜ್ಜ್ಯೋತಿ ಅವರೇ.
10 : ದಿವ್ಯವಾಣಿ ಲೋಕದಲ್ಲಿ ಇದ್ದರು. ಅವರ ಮುಖಾಂತರವೇ ಲೋಕವು ಉಂಟಾಯಿತು. ಲೋಕವಾದರೋ ಅವರನ್ನು ಅರಿತುಕೊಳ್ಳದೆಹೋಯಿತು.
11 : ಅವರು ತಮ್ಮ ಸ್ವದೇಶಕ್ಕೆ ಬಂದರು; ಸ್ವಜನರೇ ಅವರನ್ನು ಬರಮಾಡಿಕೊಳ್ಳದೆಹೋದರು.
12 : ಕೆಲವರಾದರೋ ಅವರನ್ನು ಬರಮಾಡಿಕೊಂಡರು. ಅಂಥವರಿಗೆ, ಅಂದರೆ ಅವರಲ್ಲಿ ವಿಶ್ವಾಸ ಇಟ್ಟವರಿಗೆ, ದೇವರ ಮಕ್ಕಳಾಗುವ ಹಕ್ಕನ್ನು ಅವರು ಕೊಟ್ಟರು.
13 : ಅಂಥವರ ಜನನವು ರಕ್ತಸಂಬಂಧದಿಂದ ಅಲ್ಲ, ಶಾರೀರಕ ಇಚ್ಛೆಯಿಂದ ಅಲ್ಲ. ಮಾನವ ಸಹಜ ಬಯಕೆಯಿಂದಲೂ ಅಲ್ಲ, ದೇವರಿಂದಲೇ ಆದುದು.
14 : ಆ ದಿವ್ಯವಾಣಿ ಮನುಷ್ಯ ಆದರು. ಮನುಷ್ಯನಾಗಿ ನಮ್ಮೊಡನೆ ವಾಸಮಾಡಿದರು. ಅವರ ಮಹಿಮೆಯನ್ನು ನಾವು ನೋಡಿದೆವು, ಪಿತನಿಂದ ಪಡೆದ ಆ ಮಹಿಮೆ ಏಕೈಕ ಪುತ್ರನಿಗೆ ಮೀಸಲಾದ ಮಹಿಮೆಯೇ. ಎಂದೇ ಅವರು ವರಪ್ರಸಾದದಿಂದಲೂ ಸತ್ಯದಿಂದಲೂ ಪರಿಪೂರ್ಣರಾಗಿದ್ದರು.
15 : ಯೊವಾನ್ನನು ಅವರನ್ನು ಕುರಿತು ಸಾಕ್ಷಿ ನುಡಿಯುತ್ತಾ, “ ‘ಅವರು ನನ್ನ ಬಳಿಗೆ ಬಂದವರಾದರೂ ನನಗಿಂತ ಮೊದಲೇ ಇದ್ದವರು; ಆದುದರಿಂದ ಅವರು ನನಗಿಂತಲೂ ಶ್ರೇಷ್ಠರು’ ಎಂದು ನಾನು ಹೇಳಿದ್ದು ಅವರನ್ನು ಕುರಿತೇ,” ಎಂದು ಘೋಷಿಸಿದನು.
16 : ಅವರ ಪರಿಪೂರ್ಣತೆಯಿಂದ ನಾವೆಲ್ಲರು ವರಪ್ರಸಾದದ ಮೇಲೆ ವರಪ್ರಸಾದವನ್ನು ಪಡೆದಿದ್ದೇವೆ.
17 : ಧರ್ಮಶಾಸ್ತ್ರವನ್ನು ಮೋಶೆಯ ಮುಖಾಂತರ ಕೊಡಲಾಯಿತು. ವರಪ್ರಸಾದ ಹಾಗೂ ಸತ್ಯವಾದರೋ ಯೇಸು ಕ್ರಿಸ್ತರ ಮುಖಾಂತರ ಬಂದವು.
18 : ಯಾರೂ ಎಂದೂ ದೇವರನ್ನು ಕಂಡಿಲ್ಲ; ಪಿತನ ವಕ್ಷಸ್ಥಲದಲ್ಲಿರುವ, ಸ್ವತಃ ದೇವರಾಗಿರುವ ಏಕೈಕ ಪುತ್ರನೇ ಅವರನ್ನು ತಿಳಿಯಪಡಿಸಿದ್ದಾರೆ.
19 : ಜೆರುಸಲೇಮಿನ ಯೆಹೂದ್ಯ ಅಧಿಕಾರಿಗಳು, ಯಾಜಕರನ್ನೂ ಲೇವಿಯರನ್ನೂ ಯೊವಾನ್ನನ ಬಳಿಗೆ ಕಳಿಸಿದರು. ಇವರು, “ನೀನು ಯಾರು?” ಎಂದು ಪ್ರಶ್ನಿಸಿದರು.
20 : ಯೊವಾನ್ನನು ಅದಕ್ಕೆ ಉತ್ತರವಾಗಿ, “ಅಭಿಷಿಕ್ತನಾದ ಲೋಕೋದ್ಧಾರಕ ನಾನಲ್ಲ,” ಎಂದು ಸ್ಪಷ್ಟವಾಗಿ ಹೇಳಿದನು. ಏನನ್ನೂ ಮರೆಮಾಚಲಿಲ್ಲ.
21 : ಹಾಗಾದರೆ, “ನೀನು ಎಲೀಯನೋ?’ ಎಂದು ಕೇಳಲು ‘ಅಲ್ಲ’ ಎಂದನು. “ನೀನು ಬರಬೇಕಾಗಿದ್ದ ಪ್ರವಾದಿಯಿರಬಹುದೇ?’ ಎಂದು ಅವರು ಮತ್ತೆ ಕೇಳಲು, “ಅದೂ ಅಲ್ಲ” ಎಂದು ಮರುನುಡಿದನು.
22 : “ಹಾಗಾದರೆ ನೀನು ಯಾರೆಂದು ನಮಗೆ ತಿಳಿಸು. ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರಕೊಡಬೇಕಾಗಿದೆ. ನಿನ್ನನ್ನು ಕುರಿತು ನೀನು ಏನು ಹೇಳುತ್ತೀ?’ ಎಂದು ಅವರು ಮತ್ತೊಮ್ಮೆ ಕೇಳಿದರು.
23 : ಅದಕ್ಕೆ ಯೊವಾನ್ನನು, “ಪ್ರಭುವಿನ ಮಾರ್ಗವನ್ನು ನೇರಗೊಳಿಸಿರೆಂದು ಬೆಂಗಾಡಿನಲ್ಲಿ ಕೂಗುವವನ ಸ್ವರವೇ ನಾನು,” ಎಂದು ಯೆಶಾಯ ಪ್ರವಾದಿಯ ಮಾತುಗಳಲ್ಲೇ ಉತ್ತರಕೊಟ್ಟನು.
24 : ಆಗ ಫರಿಸಾಯರ ಕಡೆಯಿಂದ ಬಂದಿದ್ದ ಕೆಲವರು, “ನೀನು ಲೋಕೋದ್ಧಾರಕನಾಗಲಿ, ಎಲೀಯನಾಗಲಿ, ಬರಬೇಕಾಗಿದ್ದ ಪ್ರವಾದಿಯೇ ಆಗಲಿ ಅಲ್ಲವೆಂದ ಮೇಲೆ ಸ್ನಾನದೀಕ್ಷೆ ಕೊಡುವುದೇಕೆ?” ಎಂದು ಪ್ರಶ್ನಿಸಿದರು.
25 : ಆಗ ಫರಿಸಾಯರ ಕಡೆಯಿಂದ ಬಂದಿದ್ದ ಕೆಲವರು, “ನೀನು ಲೋಕೋದ್ಧಾರಕನಾಗಲಿ, ಎಲೀಯನಾಗಲಿ, ಬರಬೇಕಾಗಿದ್ದ ಪ್ರವಾದಿಯೇ ಆಗಲಿ ಅಲ್ಲವೆಂದ ಮೇಲೆ ಸ್ನಾನದೀಕ್ಷೆ ಕೊಡುವುದೇಕೆ?” ಎಂದು ಪ್ರಶ್ನಿಸಿದರು.
26 : ಪ್ರತ್ಯುತ್ತರವಾಗಿ ಯೊವಾನ್ನನು, “ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ನಿಮಗೆ ತಿಳಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ.
27 : ನನ್ನ ಬಳಿಕ ಬರಬೇಕಾಗಿದ್ದವರು ಅವರೇ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,” ಎಂದನು.
28 : ಯೋವಾನ್ನನು ಸ್ನಾನದೀಕ್ಷೆ ಕೊಡುತ್ತಿದ್ದ ಜೋರ್ಡನ್ ನದಿಯ ಆಚೆದಡದಲ್ಲಿದ್ದ ಬೆಥಾನಿಯ ಎಂಬಲ್ಲಿ ಇದೆಲ್ಲವೂ ನಡೆಯಿತು.
29 : ಮರುದಿನ ಯೊವಾನ್ನನು, ತಾನಿದ್ದಲ್ಲಿಗೇ ಯೇಸು ಬರುತ್ತಿರುವುದನ್ನು ಕಂಡು, “ಇಗೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ; ಲೋಕದ ಪಾಪಗಳನ್ನು ಪರಿಹರಿಸುವವರು ಇವರೇ.
30 : ಇವರು ‘ನನ್ನ ಬಳಿಕ ಬಂದವರಾದರೂ ನನಗಿಂತಲೂ ಮೊದಲೇ ಇದ್ದವರು; ಆದುದರಿಂದ ಇವರು ನನಗಿಂತಲೂ ಶ್ರೇಷ್ಠರು,’ ಎಂದು ನಾನು ಹೇಳಿದುದು ಇವರನ್ನು ಕುರಿತೇ.
31 : ಇಸ್ರಯೇಲರಿಗೆ ಇವರನ್ನು ತೋರ್ಪಡಿಸಬೇಕೆಂದೇ ನಾನು ನೀರಿನಿಂದ ಸ್ನಾನದೀಕ್ಷೆಕೊಡುತ್ತಾ ಬಂದೆನು; ಬರಬೇಕಾಗಿದ್ದವರು ಇವರೇ ಎಂದು ನನಗೂ ತಿಳಿದಿರಲಿಲ್ಲ,” ಎಂದು ನುಡಿದನು.
32 : ಯೊವಾನ್ನನು ತನ್ನ ಸಾಕ್ಷ್ಯವನ್ನು ಮುಂದುವರಿಸುತ್ತಾ, “ಪಾರಿವಾಳದ ರೂಪದಲ್ಲಿ ಪವಿತ್ರಾತ್ಮ ಸ್ವರ್ಗದಿಂದ ಇಳಿದುಬಂದು ಅವರ ಮೇಲೆ ನೆಲಸುವುದನ್ನು ನಾನು ನೋಡಿದೆನು.
33 : ಬರಬೇಕಾಗಿದ್ದವರು ಇವರೇ ಎಂದು ನನಗೂ ತಿಳಿದಿರಲಿಲ್ಲ. ಆದರೆ ನೀರಿನಿಂದ ಸ್ನಾನದೀಕ್ಷೆಕೊಡುವಂತೆ ನನ್ನನ್ನು ಕಳುಹಿಸಿದ ದೇವರು, ‘ಪವಿತ್ರಾತ್ಮ ಇಳಿದುಬಂದು ಯಾವ ವ್ಯಕ್ತಿಯ ಮೇಲೆ ನೆಲಸುವುದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವಾತ,’ ಎಂದಿದ್ದರು.
34 : ಅದನ್ನು ನಾನು ಕಣ್ಣಾರೆ ನೋಡಿದ್ದೇನೆ. ಆದುದರಿಂದ ಅವರೇ ದೇವರ ಪುತ್ರನೆಂದು ಸಾಕ್ಷಿ ನೀಡುತ್ತಿದ್ದೇನೆ,” ಎಂದು ಹೇಳಿದನು.
35 : ಮಾರನೆಯ ದಿನ ಯೊವಾನ್ನನು ತನ್ನಿಬ್ಬರು ಶಿಷ್ಯರ ಸಂಗಡ ನಿಂತುಕೊಂಡಿರುವಾಗ, ಯೇಸು ಸ್ವಾಮಿ ಆ ಮಾರ್ಗವಾಗಿ ಹೋಗುತ್ತಿದ್ದರು.
36 : ಅವರನ್ನು ನೋಡುತ್ತಲೇ ಯೊವಾನ್ನನು ತನ್ನ ಆ ಶಿಷ್ಯರಿಗೆ, “ಇಗೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ,” ಎಂದು ಹೇಳಿದನು.
37 : ಇದನ್ನು ಕೇಳಿದ ಆ ಶಿಷ್ಯರು ಯೇಸುವನ್ನು ಹಿಂಬಾಲಿಸಿದರು.
38 : ಯೇಸು ಸ್ವಾಮಿ, ತಮ್ಮನ್ನು ಹಿಂಬಾಲಿಸಿ ಬರುತ್ತಿರುವುದನ್ನು ನೋಡಿ, “ನಿಮಗೆ ಏನು ಬೇಕು?” ಎಂದು ಕೇಳಿದರು. ಅವರು, “ರಬ್ಬೀ, ತಾವು ವಾಸಮಾಡುವುದೆಲ್ಲಿ?” ಎಂದು ವಿಚಾರಿಸಿದರು. (’ರಬ್ಬಿ’ ಎಂದರೆ ಗುರುದೇವ ಎಂದು ಅರ್ಥ.)
39 : ಯೇಸು ಉತ್ತರವಾಗಿ, “ಬಂದು ನೋಡಿ” ಎನ್ನಲು ಅವರು ಹೋಗಿ ಯೇಸು ಸ್ವಾಮಿ ಇದ್ದ ಸ್ಥಳವನ್ನು ಕಂಡು ಆ ದಿನವನ್ನು ಅವರೊಡನೆ ಕಳೆದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು.
40 : ಯೊವಾನ್ನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ್ದ ಇಬ್ಬರು ಶಿಷ್ಯರಲ್ಲಿ ಸಿಮೋನ ಪೇತ್ರನ ಸಹೋದರನಾದ ಅಂದ್ರೆಯನು ಒಬ್ಬನು.
41 : ಇವನು ಮೊದಲು ತನ್ನ ಸಹೋದರ ಸಿಮೋನನನ್ನು ಕಂಡು, “ನಮಗೆ ‘ಮೆಸ್ಸೀಯ’ ಸಿಕ್ಕಿದ್ದಾರೆ,” ಎಂದು ತಿಳಿಸಿ
42 : ಅವನನ್ನು ಯೇಸುವಿನ ಬಳಿಗೆ ಕರತಂದನು. (’ಮೆಸ್ಸೀಯ’ ಎಂದರೆ ಅಭಿಷಿಕ್ತನಾದ ಲೋಕೋದ್ಧಾರಕ ಎಂದು ಅರ್ಥ). ಯೇಸು ಸಿಮೋನನನ್ನು ನೋಡಿ, “ಯೊವಾನ್ನನ ಮಗನಾದ ಸಿಮೋನನೇ, ಇನ್ನು ಮುಂದೆ ನಿನ್ನನ್ನು ಕೇಫನೆಂದು ಕರೆಯುವರು,” ಎಂದು ನುಡಿದರು. (’ಕೇಫ’ ಎಂದರೆ ‘ಪೇತ್ರ’ ಇಲ್ಲವೇ ‘ಬಂಡೆ’ ಎಂದರ್ಥ).
43 : ಮರುದಿನ ಯೇಸು ಸ್ವಾಮಿ ಗಲಿಲಾಯ ನಾಡಿಗೆ ಹೋಗಲು ನಿರ್ಧರಿಸಿದರು. ಅವರು ಫಿಲಿಪ್ಪನನ್ನು ಕಂಡು, “ನನ್ನೊಡನೆ ಬಾ,” ಎಂದು ಕರೆದರು.
44 : ಅಂದ್ರೆಯ ಮತ್ತು ಪೇತ್ರನಂತೆ ಫಿಲಿಪ್ಪನು ಕೂಡ ಬೆತ್ಸಾಯಿದ ಎಂಬ ಊರಿನವನು.
45 : ಫಿಲಿಪ್ಪನು ನತಾನಿಯೇಲನನ್ನು ಕಂಡು, “ಧರ್ಮಶಾಸ್ತ್ರದಲ್ಲಿ ಮೋಶೆ ಉಲ್ಲೇಖಿಸಿದ ಮತ್ತು ಪ್ರವಾದಿಗಳು ಪ್ರವಚನ ಮಾಡಿದ ವ್ಯಕ್ತಿಯು ನಮಗೆ ಸಿಕ್ಕಿದ್ದಾರೆ. ಇವರೇ ಜೋಸೆಫನ ಮಗನಾದ ನಜರೇತ್ ಊರಿನ ಯೇಸು,” ಎಂದು ಹೇಳಿದನು.
46 : ಅದಕ್ಕೆ ನತಾನಿಯೇಲನು, “ಏನು? ನಜರೇತಿನಿಂದ ಒಳ್ಳೆಯದೇನಾದರೂ ಬರುವುದು ಉಂಟೆ?” ಎಂದು ಕೇಳಲು, “ಬಂದು ನೀನೇ ನೋಡು,” ಎಂದು ಫಿಲಿಪ್ಪನು ಉತ್ತರಕೊಟ್ಟನು.
47 : ತಮ್ಮ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡ ಯೇಸು, “ಇಗೋ ನೋಡಿ, ನಿಜವಾದ ಇಸ್ರಯೇಲನು, ಈತನಲ್ಲಿ ಕಪಟವಿಲ್ಲ,” ಎಂದು ನುಡಿದರು.
48 : ನತಾನಿಯೇಲನು, “ನನ್ನ ಪರಿಚಯ ನಿಮಗೆ ಹೇಗಾಯಿತು?” ಎಂದು ಕೇಳಲು ಯೇಸು, “ಫಿಲಿಪ್ಪನು ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ,” ಎಂದು ಉತ್ತರಕೊಟ್ಟರು.
49 : ಅದಕ್ಕೆ ನತಾನಿಯೇಲನು, “ಗುರುದೇವಾ’ ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ,” ಎಂದನು.
50 : ಆಗ ಯೇಸು, “ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆ ಎಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೆ? ಇದಕ್ಕೂ ಮಿಗಿಲಾದವುಗಳನ್ನು ನೀನು ಕಾಣುವೆ,” ಎಂದು ನುಡಿದರು.
51 : ತಮ್ಮ ಮಾತನ್ನು ಮುಂದುವರೆಸುತ್ತಾ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಸ್ವರ್ಗವು ತೆರೆದಿರುವುದನ್ನೂ ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ,” ಎಂದು ಹೇಳಿದರು.