पवित्र बाइबिल
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
13ನೇ ಅಧ್ಯಾಯ
- Verse 1: ಬುದ್ಧಿವಂತ ಮಗ ತಂದೆಯ ಶಿಕ್ಷಣವನ್ನು ಕೇಳುವನು; ಕಿತ್ತಾಡುವ ಮಗ ಗದರಿಕೆಯನ್ನೂ ಕೇಳಲೊಲ್ಲನು.
- Verse 2: ಸಜ್ಜನರ ಊಟ ಫಲಹಾರ; ವಂಚಕರ ಆಹಾರ ಹಿಂಸಾಚಾರ.
- Verse 3: ಬಾಯಿಯನ್ನು ಕಾಯುವವನು ಜೀವವನ್ನು ಕಾಯುವನು; ತುಟಿಗಳನ್ನು ಹತೋಟಿಯಲ್ಲಿಡದವನು ನಾಶವಾಗುವನು.
- Verse 4: ಸೋಮಾರಿಗೆ ಹಸಿದಿದ್ದರೂ ಊಟವಿಲ್ಲ; ಶ್ರಮಜೀವಿಗಳಿಗಾದರೋ ಬಲಿಷ್ಠರನ್ನಾಗಿಸುವ ಮೃಷ್ಟಾನ್ನ.
- Verse 5: ಸಜ್ಜನನಿಗೆ ಮೋಸಮಾತು ಅಸಹ್ಯ; ದುರ್ಜನನ ನಡತೆ ನಿಂದಾಸ್ಪದ.
- Verse 6: ನೀತಿ ಕಾಪಾಡುವುದು ನಿರ್ದೋಷಿಯನ್ನು; ಅನೀತಿ ಕೆಡವಿಬಿಡುವುದು ಪಾಪಿಯನ್ನು.
- Verse 7: ಒಬ್ಬ ಹಣಕೂಡಿಸಿದ್ದರೂ ಘನದರಿದ್ರನಿರಬಹುದು; ಮತ್ತೊಬ್ಬ ಹಣವೆಚ್ಚಮಾಡಿ ಕಡುಬಡವನಾಗಿದ್ದರೂ ಐಶ್ವರ್ಯವಂತನಾಗಿರಬಹುದು.
- Verse 8: ಹಣವಂತನ ಪ್ರಾಣರಕ್ಷಣೆಗೆ ಅವನ ಹಣವೇ ಈಡು; ಬಡವನಿಗೆ ಈಡಿನ ಬೆದರಿಕೆಯೂ ಇರದು.
- Verse 9: ಸಜ್ಜನರ ಬೆಳಕು ಪ್ರಜ್ವಲಿಸುವುದು; ದುರ್ಜನರ ದೀಪವು ಆರಿಹೋಗುವುದು.
- Verse 10: ಗರ್ವದಿಂದ ಹುಟ್ಟುವುದು ಕಲಹಕದನ; ಆಲೋಚನೆಯನ್ನು ಕೇಳುವುದು ಸುಜ್ಞಾನ.
- Verse 11: ಬಿಟ್ಟಿಯಾಗಿ ಸಿಕ್ಕಿದ ಸಂಪತ್ತು ಬೇಗನೆ ಕರಗುವುದು; ದುಡಿದು ಕೂಡಿಸಿದ ಹಣ ಅಭಿವೃದ್ಧಿಯಾಗುವುದು.
- Verse 12: ಕೋರಿದ್ದು ತಡವಾದರೆ ಮನಸ್ಸಿಗೆ ತುಡಿತ; ಕೈಗೂಡಿದ ಇಷ್ಟಾರ್ಥ ಜೀವವೃಕ್ಷ.
- Verse 13: ದೇವವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು; ಆಜ್ಞೆಯನ್ನು ನಿಷ್ಠೆಯಿಂದ ಪಾಲಿಸುವವನು ಫಲಪಡೆಯುವನು.
- Verse 14: ಜ್ಞಾನಿಯ ಬೋಧೆ ಜೀವದ ಬುಗ್ಗೆ; ಮಾಡುವುದದು ಮರಣದಿಂದ ಬಿಡುಗಡೆ.
- Verse 15: ಸುಬುದ್ಧಿ ದಯಾಸ್ಪದ; ದುರಾಚಾರ ವಿನಾಶಕರ.
- Verse 16: ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ; ಮೂಢನು ಮೂರ್ಖತನವನ್ನು ತೋರ್ಪಡಿಸುತ್ತಾನೆ.
- Verse 17: ಕೆಟ್ಟದೂತನು ಕೇಡಿಗೆ ಸಿಕ್ಕಿಸುವನು; ನಂಬಿಕಸ್ಥ ದೂತನು ಸುಕ್ಷೇಮಕಾರನು.
- Verse 18: ಶಿಕ್ಷೆಯನ್ನು ಉಪೇಕ್ಷಿಸುವವನಿಗೆ ಕಾದಿದೆ ಬಡತನ ಹಾಗು ಅವಮಾನ; ಗದರಿಕೆಯನ್ನು ಗಮನಿಸುವವ ಹೊಂದುವನು ಸನ್ಮಾನ.
- Verse 19: ಇಷ್ಟಸಿದ್ಧಿ ಮನಸ್ಸಿಗೆ ಸಿಹಿ; ಕೆಟ್ಟದ್ದನ್ನು ಬಿಡುವುದು ಮೂಢರಿಗೆ ಕಹಿ.
- Verse 20: ಸುಜ್ಞಾನಿಗಳ ಸಹವಾಸದಿಂದ ಜನರು ಸುಜ್ಞಾನಿಗಳಾಗುವರು; ಅಜ್ಞಾನಿಗಳ ಒಡನಾಟದಿಂದ ಸಂಕಟಪಡುವರು.
- Verse 21: ಅಮಂಗಳವು ಪಾಪಿಗಳನ್ನು ಹಿಂಬಾಲಿಸುವುದು; ಮಂಗಳವು ಸತ್ಪುರುಷರಿಗೆ ಸಿಗುವ ಪ್ರತಿಫಲವು.
- Verse 22: ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯದ ಸೊತ್ತು; ಪಾಪಿಯ ಸೊತ್ತು ಸತ್ಪುರುಷರಿಗೆ ಸೇರುವ ಸಂಪತ್ತು.
- Verse 23: ಬಡವರಿಗೆ ಬಂಜರುಭೂಮಿಯೂ ಬೆಳೆಯನ್ನೀಯುವುದುಂಟು; ಭಂಡತನ ಇರುವಲ್ಲಿ ಅದು ಕೂಡ ಹಾಳಾಗುವುದುಂಟು.
- Verse 24: ಬೆತ್ತಹಿಡಿಯದ ತಂದೆ ಮಗನಿಗೆ ಶತ್ರು; ಎಚ್ಚರಿಕೆಯಿಂದ ಶಿಕ್ಷಿಸುವ ತಂದೆ ಮಗನಿಗೆ ಮಿತ್ರನು.
- Verse 25: ನೀತಿವಂತನು ಹೊಟ್ಟೆತುಂಬ ಉಣ್ಣುವನು; ದುಷ್ಟನ ಹೊಟ್ಟೆ ಹಸಿವಿನಿಂದ ಬಳಲುವುದು.