ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
27ನೇ ಅಧ್ಯಾಯ
- Verse 1: ನಾಳೆ ಕುರಿತು ಕೊಚ್ಚಿಕೊಳ್ಳಬೇಡ; ಇಂದು ಒದಗಲಿರುವುದೇ ನಿನಗೆ ತಿಳಿದಿಲ್ಲ.
- Verse 2: ನಿನ್ನ ಬಾಯಿ ಅಲ್ಲ, ಬೇರೆಯವರು ಹೊಗಳಲಿ ನಿನ್ನ; ಆತ್ಮಸ್ತುತಿ ಸಲ್ಲ, ಅನ್ಯರು ಸ್ತುತಿಸಲಿ ನಿನ್ನ.
- Verse 3: ಕಲ್ಲು ಭಾರ, ಮರಳು ಭಾರ, ಮೂಢನ ರೇಗಾಟ ಇವೆರಡಕ್ಕೂ ಬಲುಭಾರ.
- Verse 4: ಕೋಪವು ಕ್ರೂರ, ಕ್ರೋಧವು ಪ್ರವಾಹ, ಮತ್ಸರದ ಮುಂದೆ ನಿಲ್ಲಬಲ್ಲವರಾರು?
- Verse 5: ಮರೆಯಾದ ಪ್ರೀತಿಗಿಂತ ಬಹಿರಂಗವಾದ ಗದರಿಕೆ ಲೇಸು.
- Verse 6: ಮಿತ್ರನು ಕೊಡುವ ಗುದ್ದು ಹಿತಕರ; ಶತ್ರುವು ಕೊಡುವ ಮುದ್ದು ಮೋಸಕರ.
- Verse 7: ಹೊಟ್ಟೆ ತುಂಬಿದವನಿಗೆ ಜೇನುಕೊಟ್ಟರೂ ಕಹಿ; ಹೊಟ್ಟೆ ಹಸಿದವನಿಗೆ ಏನು ಕೊಟ್ಟರು ಸಿಹಿ.
- Verse 8: ಮನೆಬಿಟ್ಟು ಅಲೆಯುವ ವ್ಯಕ್ತಿ, ಗೂಡುಬಿಟ್ಟು ಅಲೆಯುವ ಹಕ್ಕಿ.
- Verse 9: ತೈಲ, ಸುಗಂಧ ದ್ರವ್ಯಗಳು ಮನೋಹರ, ಮಿತ್ರನ ಆದರಣೆ, ಸಲಹೆ ಅತಿ ಮಧುರ.
- Verse 10: ನಿನಗೂ ನಿನ್ನ ಹೆತ್ತವನಿಗೂ ಮಿತ್ರನಾದವನನ್ನು ಬಿಡಬೇಡ; ಇಕ್ಕಟ್ಟಿನ ದಿನದಲ್ಲಿ ಒಡಹುಟ್ಟಿದವರನ್ನು ಆಶ್ರಯಿಸಬೇಡ; ದೂರವಿರುವ ಅಣ್ಣನಿಗಿಂತ ಹತ್ತಿರವಿರುವ ನೆರೆಯವನೆ ಲೇಸು.
- Verse 11: ಮಗನೇ, ಜ್ಞಾನಗಳಿಸಿ ನನ್ನ ಮನಸ್ಸನ್ನು ಸಂತೋಷಪಡಿಸು; ಆಗ ನನ್ನ ನಿಂದಕರಿಗೆ ಸರಿಯಾದ ಉತ್ತರ ಸಿಕ್ಕುವುದು.
- Verse 12: ಜಾಣ ಕೇಡನ್ನು ಕಂಡು ಅಡಗಿಕೊಳ್ಳುತ್ತಾನೆ; ಕೋಣ ಮುನ್ನುಗ್ಗಿ ಹಾನಿಗೆ ಈಡಾಗುತ್ತಾನೆ.
- Verse 13: ಅಪರಿಚಿತನಿಗೆ ಹೊಣೆಯಾದವನ ಬಟ್ಟೆ ಕಿತ್ತುಕೊ; ಅಪರಿಚಿತಳಿಗೆ ಹೊಣೆ ನಿಲ್ಲುವವನನ್ನೆ ಒತ್ತೆ ಇಟ್ಟುಕೊ.
- Verse 14: ಮುಂಜಾನೆಯೆ ಅಬ್ಬರದಿಂದ ನೆರೆಯವನನ್ನು ಎಬ್ಬಿಸಿ ಮಾಡುವ ಆಶೀರ್ವಾದ, ಶಾಪವೆಂದೇ ಪರಿಗಣಿಸಲ್ಪಡುವುದು.
- Verse 15: ತಂಟೆ ಮಾಡುವ ಹೆಂಡತಿ ತಟತಟನೆ ತೊಟ್ಟಿಕ್ಕುವ ಹನಿ.
- Verse 16: ಅಂಥವಳನ್ನು ಅಡಗಿಸಬಲ್ಲವನು ಗಾಳಿಯನ್ನು ಅಡಗಿಸಬಲ್ಲ, ಕೈ ಎಣ್ಣೆಜಿಡ್ಡನ್ನೂ ಬಿಗಿಹಿಡಿಯಬಲ್ಲ.
- Verse 17: ಕಬ್ಬಿಣ ಕಬ್ಬಿಣವನ್ನು ಹರಿತ ಮಾಡುವಂತೆ ಮಿತ್ರನು ಮಿತ್ರನ ಬುದ್ಧಿಯನ್ನು ಹರಿತಮಾಡಬಲ್ಲ.
- Verse 18: ಅಂಜೂರವನ್ನು ಕಾಯುವವನು ಅದರ ಹಣ್ಣನ್ನು ತಿನ್ನುವನು; ಯಜಮಾನನನ್ನು ಕಾಯುವವನು ಸನ್ಮಾನವನ್ನು ಸವಿಯುವನು.
- Verse 19: ನೀರು ಮುಖಕ್ಕೆ ಮುಖವನ್ನು ಪ್ರತಿಬಿಂಬಿಸುತ್ತದೆ; ಹೃದಯ ಮನುಷ್ಯನಿಗೆ ಮನುಷ್ಯನನ್ನು ತೋರ್ಪಡಿಸುತ್ತದೆ.
- Verse 20: ನರಕ ಪಾತಾಳಗಳಿಗೆ ತೃಪ್ತಿಯೇ ಇಲ್ಲ; ಮನುಷ್ಯನ ಕಣ್ಣುಗಳಿಗೂ ತೃಪ್ತಿಯಿಲ್ಲ.
- Verse 21: ಬೆಳ್ಳಿಬಂಗಾರಗಳಿಗೆ ಪುಟಕುಲುಮೆಗಳಿಂದ ಶೋಧನೆ; ಮನುಷ್ಯನಿಗೆ ತನ್ನ ಸ್ತುತಿಕೀರ್ತಿಯಿಂದ ಪರಿಶೋಧನೆ.
- Verse 22: ಮೂರ್ಖನನ್ನು ಕಾಳಿನ ಸಂಗಡ ಒರಳಿಗೆ ಹಾಕಿ ಒನಕೆಯಿಂದ ಕುಟ್ಟಿದರೂ ಮೂರ್ಖತನ ತೊಲಗದು.
- Verse 23: ನಿನ್ನ ಹಿಂಡುಗಳ ಪರಿಸ್ಥಿತಿಯನ್ನು ತಿಳಿದುಕೊ; ನಿನ್ನ ಮಂದೆಗಳನ್ನು ಚೆನ್ನಾಗಿ ನೋಡಿಕೊ.
- Verse 24: ಸಿರಿಸಂಪತ್ತು ಶಾಶ್ವತವಲ್ಲ; ಕಿರೀಟ ತಲತಲಾಂತರಕ್ಕೂ ಇರುವುದಿಲ್ಲ.
- Verse 25: ಹುಲ್ಲು ಕೊಯ್ದು ತಂದಮೇಲೆ, ಗುಡ್ಡದ ಸೊಪ್ಪು ಕೂಡಿಸಿಟ್ಟ ಮೇಲೆ, ಹಸಿ ಹುಲ್ಲು ಚಿಗುರುತ್ತದೆ.
- Verse 26: ಕುರಿಗಳಿಂದ ನಿನ್ನ ಬಟ್ಟೆಬರೆ; ಆಡುಗಳಿಂದ ನಿನ್ನ ಹೊಲಗದ್ದೆ.
- Verse 27: ನಿನ್ನ, ನಿನ್ನ ಮನೆಯವರ ಊಟ ತಿಂಡಿಗೆ, ನಿನ್ನ ದಾಸಿಯರ ಜೀವನಕ್ಕೆ ಮೇಕೆಗಳ ಹಾಲೇ ಸಾಕು.