ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
1 ಕೊರಿಂಥಿಯರಿಗೆ
16ನೇ ಅಧ್ಯಾಯ
- Verse 1: ದೇವಜನರಿಗೋಸ್ಕರ ಹಣ ಸಂಗ್ರಹಿಸುವುದರ ವಿಷಯವಾಗಿ ಹೇಳುವುದಾದರೆ: ಗಲಾತ್ಯದ ಸಭೆಗಳಿಗೆ ನಾನು ಕೊಟ್ಟ ನಿಯಮವನ್ನೇ ನೀವೂ ಅನುಸರಿಸಿರಿ. ನಾನು ಬಂದಾಗ ಹಣ ಸಂಗ್ರಹಿಸುವ ಅವಶ್ಯಕತೆ ಇರಬಾರದು.
- Verse 2: ಈ ಕಾರಣ, ನಿಮ್ಮಲ್ಲಿ ಪ್ರತಿ ಒಬ್ಬನೂ ತನ್ನ ಸಂಪಾದನೆಗೆ ತಕ್ಕಂತೆ ಸ್ವಲ್ಪ ಹಣವನ್ನು ಪ್ರತಿ ವಾರದ ಮೊದಲನೆಯ ದಿನವೇ ಪ್ರತ್ಯೇಕಿಸಿ ಇಡಲಿ.
- Verse 3: ನಾನು ಬಂದ ನಂತರ ನಿಮ್ಮ ಕೊಡುಗೆಯನ್ನು ಪರಿಚಯ ಪತ್ರದ ಸಮೇತ ನೀವು ಆರಿಸಿದವರ ಕೈಯಲ್ಲಿ ಜೆರುಸಲೇಮಿಗೆ ಕಳುಹಿಸುತ್ತೇನೆ.
- Verse 4: ನಾನೇ ಹೋಗುವುದು ಉಚಿತವೆನಿಸಿದರೆ, ಅವರೂ ನನ್ನ ಜೊತೆಗೆ ಬರಲಿ.
- Verse 5: ನಾನು ಮೊದಲು ಮಕೆದೋನಿಯದ ಪ್ರವಾಸವನ್ನು ಮುಗಿಸಿಕೊಂಡು ಅನಂತರ ನಿಮ್ಮ ಬಳಿಗೆ ಬರುತ್ತೇನೆ.
- Verse 6: ಬಹುಶಃ ನಾನು ನಿಮ್ಮೊಡನೆ ತಂಗಬಹುದು. ಚಳಿಗಾಲವನ್ನು ಪೂರ್ತಿಯಾಗಿ ನಿಮ್ಮಲ್ಲಿ ಕಳೆಯಬೇಕಾಗಬಹುದು. ಆಮೇಲೆ ನಾನು ಹೋಗಬೇಕಾದ ಸ್ಥಳಕ್ಕೆ ನೀವು ನನ್ನನ್ನು ಕಳುಹಿಸಿಕೊಡಬೇಕು.
- Verse 7: ಪ್ರಯಾಣದ ನಡುವೆ ನಿಮ್ಮನ್ನು ನೋಡಿ ಹೋಗಲು ನನಗೆ ಇಷ್ಟವಿಲ್ಲ. ಪ್ರಭುವಿನ ಚಿತ್ತವಾದರೆ, ಕೊಂಚಕಾಲವಾದರೂ ನಿಮ್ಮೊಡನೆ ಕಾಲಕಳೆಯಬೇಕೆಂದಿದ್ದೇನೆ.
- Verse 8: ಪಂಚಾಶತ್ತಮ ಹಬ್ಬದ ತನಕ ನಾನು ಎಫೆಸದಲ್ಲಿಯೇ ಇರುತ್ತೇನೆ.
- Verse 9: ಇಲ್ಲಿ ಅನೇಕ ವಿರೋಧಿಗಳಿದ್ದರೂ ಶುಭಸಂದೇಶದ ಕಾರ್ಯವನ್ನು ಕೈಗೊಳ್ಳಲು ಮಹಾದ್ವಾರಗಳು ನನಗೆ ತೆರೆದಿವೆ.
- Verse 10: ತಿಮೊಥೇಯನು ಬಂದರೆ ಆತನಿಗೆ ಯಾವ ಚಿಂತೆಯೂ ಇರದಂತೆ ನೋಡಿಕೊಳ್ಳಿ. ಆತನು ನನ್ನ ಹಾಗೆ ಪ್ರಭುವಿನ ಸೇವೆಯಲ್ಲಿಯೇ ನಿರತನಾಗಿರುತ್ತಾನೆ.
- Verse 11: ಯಾರೂ ಆತನನ್ನು ತಾತ್ಸಾರ ಮಾಡದಿರಲಿ. ಸಮಾಧಾನದಿಂದ ಆತನು ನನ್ನ ಬಳಿಗೆ ಬರುವಂತೆ ಕಳುಹಿಸಿಕೊಡಿ. ಆತನ ಆಗಮನವನ್ನು ನಾನು ಇತರ ಸಹೋದರರೊಡನೆ ಎದುರುನೋಡುತ್ತಿದ್ದೇನೆ.
- Verse 12: ಸಹೋದರರೇ, ಅಪೊಲೋಸನ ವಿಷಯವಾಗಿ ಹೇಳುವುದಾದರೆ, ಆತನು ಇತರ ಸಹೋದರರೊಡನೆ ನಿಮ್ಮ ಬಳಿಗೆ ಬರಬೇಕೆಂದು ನಾನು ಬಹಳವಾಗಿ ಪ್ರೋತ್ಸಾಹಿಸಿದ್ದೇನೆ. ತಕ್ಷಣವೇ ಬರಲು ಆತನಿಗೆ ಮನಸ್ಸಿಲ್ಲ; ಸದವಕಾಶ ದೊರಕಿದಾಗ ಬರುತ್ತಾನೆ.
- Verse 13: ಜಾಗರೂಕರಾಗಿರಿ, ವಿಶ್ವಾಸದಲ್ಲಿ ದೃಢರಾಗಿರಿ, ಧೈರ್ಯಶಾಲಿಗಳಾಗಿರಿ, ಸ್ಥೈರ್ಯದಿಂದ ಬಾಳಿರಿ.
- Verse 14: ನೀವು ಮಾಡುವುದನ್ನೆಲ್ಲಾ ಪ್ರೀತಿಯಿಂದ ಮಾಡಿರಿ.
- Verse 15: ಸ್ತೇಫನನನ್ನು ಮತ್ತು ಆತನ ಕುಟುಂಬದವರನ್ನು ನೀವು ಬಲ್ಲಿರಿ. ಅವರು ಅಖಾಯದ ಪ್ರಥಮ ಕ್ರೈಸ್ತವಿಶ್ವಾಸಿಗಳು. ದೇವಜನರ ಸೇವೆಗೆ ತಮ್ಮನ್ನೇ ಸಮರ್ಪಿಸಿಕೊಂಡವರು. ನಾನು ನಿಮ್ಮಲ್ಲಿ ವಿನಂತಿಸುವುದೇನೆಂದರೆ:
- Verse 16: ಇಂಥವರನ್ನು ಮತ್ತು ಅವರೊಡನೆ ದುಡಿದು ಸೇವೆಮಾಡುವವರನ್ನು ಮುಂದಾಳುಗಳೆಂದು ಸನ್ಮಾನಿಸಿರಿ.
- Verse 17: ಸ್ತೇಫನನು, ಪೋರ್ತುನಾತನು ಮತ್ತು ಅಖಾಯಿಕನು ಬಂದುದರಿಂದ ನನಗೆ ಸಂತೋಷವುಂಟಾಯಿತು. ನೀವು ಇಲ್ಲದ್ದರಿಂದ ನನಗುಂಟಾದ ಕೊರತೆಯನ್ನು ಅವರು ನೀಗಿಸಿದ್ದಾರೆ.
- Verse 18: ಅವರು ನಿಮ್ಮನ್ನು ಸಂತೈಸಿದಂತೆ ನನ್ನನ್ನೂ ಸಂತೈಸಿದ್ದಾರೆ, ಇಂಥವರನ್ನು ಗೌರವಿಸಬೇಕು.
- Verse 19: ಏಷ್ಯ ಸೀಮೆಯಲ್ಲಿರುವ ಧರ್ಮಸಭೆಗಳ ಸಹೋದರರು ನಿಮಗೆ ವಂದನೆಗಳನ್ನು ತಿಳಿಸಿರುತ್ತಾರೆ. ಅಕ್ವಿಲನು ಮತ್ತು ಪ್ರಿಸಿಲ್ಲಳು ಹಾಗೂ ಅವರ ಮನೆಯಲ್ಲಿ ಸಭೆ ಸೇರುವ ಎಲ್ಲರೂ ಪ್ರಭುವಿನ ಹೆಸರಿನಲ್ಲಿ ನಿಮಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.
- Verse 20: ಇಲ್ಲಿಯ ಸಹೋದರರೆಲ್ಲರೂ ನಿಮಗೆ ನಮಸ್ಕಾರ ಹೇಳಿದ್ದಾರೆ. ನೀವು ಸಹ ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.
- Verse 21: ಪೌಲನಾದ ನಾನು ನನ್ನ ಸ್ವಂತ ಕೈಬರಹದಿಂದ ನಿಮಗೆ ವಂದನೆಯನ್ನು ಬರೆಯುತ್ತಿದ್ದೇನೆ.
- Verse 22: ಯಾರಾದರೂ ಪ್ರಭುವನ್ನು ಪ್ರೀತಿಸದೆಹೋದರೆ ಅವರಿಗೆ ಧಿಕ್ಕಾರ! “ಮಾರನಥ" - ಪ್ರಭುವೇ ಬನ್ನಿ.
- Verse 23: ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹವು ನಿಮ್ಮೆಲ್ಲರಲ್ಲಿರಲಿ.
- Verse 24: ಕ್ರಿಸ್ತಯೇಸುವಿನಲ್ಲಿ ನಿಮ್ಮೆಲ್ಲರಿಗೂ ನನ್ನ ಪ್ರೀತಿವಾತ್ಸಲ್ಯಗಳು!