P. O. C ബൈബിള്
ಹಳೆಯ ಒಡಂಬಡಿಕೆ
ವಿಮೋಚನಕಾಂಡ
13ನೇ ಅಧ್ಯಾಯ
2 : “ಚೊಚ್ಚಲಾಗಿ ಹುಟ್ಟಿದ್ದೆಲ್ಲವನ್ನು ನನಗೆ ಮೀಸಲಾಗಿಡು; ಇಸ್ರಯೇಲರಲ್ಲಿ ಮನುಷ್ಯರಿಗಾಗಲಿ ಪಶುಪ್ರಾಣಿಗಳಿಗಾಗಲಿ ಹುಟ್ಟಿದ ಪ್ರಥಮ ಗರ್ಭಫಲ ನನ್ನದೇ,” ಎಂದು ಹೇಳಿದರು.
3 : ಮೋಶೆ ಇಸ್ರಯೇಲರಿಗೆ, “ಗುಲಾಮತನದಲ್ಲಿದ್ದು ಈಜಿಪ್ಟ್ ದೇಶದಿಂದ ಬಿಡುಗಡೆಯಾದ ಈ ದಿನವನ್ನು ನೀವು ಸ್ಮರಿಸಬೇಕು. ಈ ದಿನದಲ್ಲೇ ಸರ್ವೇಶ್ವರ ಸ್ವಾಮಿ ತಮ್ಮ ಭುಜಬಲ ಪ್ರಯೋಗಿಸಿ ನಿಮ್ಮನ್ನು ಅಲ್ಲಿಂದ ವಿಮೋಚಿಸಿದರು. ಈ ದಿನದಂದು ನೀವು ಹುಳಿಬೆರತದ್ದನ್ನು ತಿನ್ನಕೂಡದು.
4 : ಚೈತ್ರಮಾಸದ ಈ ದಿನದಂದು ನೀವು ಹೊರಟವರು.
5 : ಸರ್ವೇಶ್ವರ ನಿಮ್ಮ ಪೂರ್ವಜರಿಗೆ ಪ್ರಮಾಣವಾಗಿ ಹೇಳಿದಂತೆ ನಿಮ್ಮನ್ನು ಹಾಲೂ ಜೇನೂ ಹರಿಯುವ ನಾಡಿಗೆ, ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಹಿವ್ವಿಯರು ಹಾಗು ಯೆಬೂಸಿಯರು ವಾಸವಾಗಿರುವ ನಾಡಿಗೆ ಕರೆದು ತಂದು ಅದನ್ನು ನಿಮಗೆ ಕೊಟ್ಟಾಗ, ನೀವು ಈ ಆಚರಣೆಯನ್ನು ಈ ತಿಂಗಳಿನಲ್ಲೇ ನಡೆಸಬೇಕು.
6 : ಏಳು ದಿವಸ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಳನೆಯ ದಿನದಲ್ಲಿ ಸರ್ವೇಶ್ವರನ ಗೌರವಾರ್ಥ ಹಬ್ಬ ಮಾಡಬೇಕು.
7 : ಆ ಏಳು ದಿವಸವು ಹಿಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು. ಮಾತ್ರವಲ್ಲ ನಿಮ್ಮ ಬಳಿಯಲ್ಲಿ ಅಥವಾ ನಿಮ್ಮ ನಾಡಿನಲ್ಲಿ ಹುಳಿಯಾಗಲಿ ಹುಳಿ ಹಿಟ್ಟಾಗಲಿ ಇರಕೂಡದು.
8 : ಆ ದಿನ ನೀವು ನಿಮ್ಮ ಮಕ್ಕಳಿಗೆ, “ನಮ್ಮ ಜನರು ಈಜಿಪ್ಟಿನಿಂದ ಹೊರಟು ಬಂದಾಗ ಸರ್ವೇಶ್ವರ ನಮಗೋಸ್ಕರ ಮಾಡಿದ ಉಪಕಾರವನ್ನು ಸ್ಮರಿಸುವುದಕ್ಕಾಗಿ ಈ ಆಚರಣೆಯನ್ನು ನಡೆಸುತ್ತಿದ್ದೇವೆ” ಎಂದು ತಿಳಿಸಬೇಕು. ಸರ್ವೇಶ್ವರ ತಮ್ಮ ಭುಜಬಲವನ್ನು ಪ್ರದರ್ಶಿಸಿ ನಮ್ಮನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದ್ದರಿಂದ ಅವರ ನಿಯಮ ನಮ್ಮ ಬಾಯಿಗೆ ಬರುತ್ತಿರಬೇಕು.
9 : ಇದಕ್ಕೆ ಈ ಆಚರಣೆಯು ನಮ್ಮ ಕೈಗೆ ಕಟ್ಟಿದ ಕಂಕಣದಂತೆ, ಹಣೆಗೆ ಕಟ್ಟಿದ ಜ್ಞಾಪಕ ಪಟ್ಟಿಯಂತೆ ಇರುತ್ತದೆ.
10 : ವರ್ಷವರ್ಷವೂ ನಿಯಮಿತ ಕಾಲದಲ್ಲಿ ಈ ಆಚರಣೆಯನ್ನು ನಡೆಸಬೇಕು.
11 : “ಸರ್ವೇಶ್ವರ ಸ್ವಾಮಿ ನಿಮಗೂ ನಿಮ್ಮ ಪೂರ್ವಜರಿಗೂ ಕೊಟ್ಟ ವಾಗ್ದಾನದ ಮೇರೆಗೆ ನಿಮ್ಮನ್ನು ಕಾನಾನ್ಯರ ನಾಡಿಗೆ ಬರಮಾಡಿ ಆ ನಾಡನ್ನು ನಿಮಗೆ ಕೊಟ್ಟನಂತರ
12 : ನಿಮಗೂ ನಿಮ್ಮ ಪಶುಪ್ರಾಣಿಗಳಿಗೂ ಹುಟ್ಟುವ ಚೊಚ್ಚಲು ಫಲವನ್ನೆಲ್ಲ, ಅವು ಗಂಡಾದ ಪಕ್ಷಕ್ಕೆ, ಸರ್ವೇಶ್ವರನ ಪಾಲೆಂದು ತಿಳಿದು ಅವರಿಗೆ ಸಮರ್ಪಿಸಬೇಕು.
13 : ಆದರೆ ಕತ್ತೆಯ ಚೊಚ್ಚಲು ಮರಿಗೆ ಬದಲಾಗಿ ಕುರಿಮರಿಯನ್ನು ಕೊಟ್ಟು ಆ ಕತ್ತೇಮರಿಯನ್ನು ಬಿಡಿಸಿಕೊಳ್ಳಬಹುದು; ಹಾಗೆ ಬಿಡಿಸಲಾಗದೆ ಹೋದರೆ ಅದರ ಕುತ್ತಿಗೆ ಮುರಿದು ಕೊಲ್ಲಬೇಕು. ಮನುಷ್ಯರ ಚೊಚ್ಚಲ ಗಂಡನ್ನಾದರೋ ಬದಲುಕೊಟ್ಟು ಬಿಡಿಸಿಕೊಳ್ಳಲೇಬೇಕು.
14 : ಇನ್ನು ಮುಂದೆ ನಿಮ್ಮ ಮಕ್ಕಳು, ಇದರ ಅರ್ಥವೇನೆಂದು ವಿಚಾರಿಸುವಾಗ ನೀವು ಅವರಿಗೆ, ‘ನಾವು ಗುಲಾಮತನದಲ್ಲಿದ್ದಾಗ ಸರ್ವೇಶ್ವರ ತಮ್ಮ ಭುಜಬಲವನ್ನು ಪ್ರದರ್ಶಿಸಿ ಈಜಿಪ್ಟಿನಿಂದ ನಮ್ಮನ್ನು ಬಿಡುಗಡೆ ಮಾಡಿದರು.
15 : ಫರೋಹನು ಹಟಹಿಡಿದು ನಮ್ಮನ್ನು ಹೋಗಗೊಡಿಸದೆ ಇದ್ದಾಗ ಸರ್ವೇಶ್ವರ ಈಜಿಪ್ಟಿನಲ್ಲಿದ್ದ ಚೊಚ್ಚಲು ಮಕ್ಕಳನ್ನು ಹಾಗು ಪಶುಪ್ರಾಣಿಗಳ ಚೊಚ್ಚಲು ಮರಿಗಳನ್ನೂ ಅಂತೂ ಈ ದೇಶದಲ್ಲಿ ಚೊಚ್ಚಲಾಗಿದ್ದುದೆಲ್ಲವನ್ನು ಸಂಹಾರ ಮಾಡಿದರು. ಆದಕಾರಣ ಗಂಡಾದ ಪ್ರಥಮ ಗರ್ಭಫಲವನ್ನೆಲ್ಲಾ ನಾವು ಸರ್ವೇಶ್ವರನಿಗೆ ಸಮರ್ಪಿಸುತ್ತೇವೆ. ಮನುಷ್ಯರಿಗೆ ಹುಟ್ಟಿದ ಪ್ರಥಮ ಗರ್ಭಫಲವನ್ನಾದರೋ ಬದಲು ಕೊಟ್ಟು ಬಿಡಿಸಿಕೊಳ್ಳುತ್ತೇವೆ,” ಎಂದು ಹೇಳಬೇಕು.
16 : ಸರ್ವೇಶ್ವರ ತಮ್ಮ ಭುಜಬಲವನ್ನು ಪ್ರದರ್ಶಿಸಿ ನಮ್ಮನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದರು. ಈ ಸಂದೇಶವನ್ನು ನೀವು ನೆನಪಿನಲ್ಲಿಡಬೇಕು. ಇದಕ್ಕೆ ಈ ಪದ್ಧತಿಯು ನಿಮ್ಮ ಕೈಗೆ ಕಟ್ಟಿದ ಕಂಕಣದಂತಿರುತ್ತದೆ, ಹಣೆಗೆ ಕಟ್ಟಿದ ಜ್ಞಾಪಕಪಟ್ಟಿಯಂತಿರುತ್ತದೆ.
17 : ಫರೋಹನು ಇಸ್ರಯೇಲರಿಗೆ ಹೋಗಲು ಅಪ್ಪಣೆಕೊಟ್ಟಾಗ ದೇವರು ಅವರನ್ನು ಹತ್ತಿರವಾಗಿದ್ದ ಫಿಲಿಷ್ಟಿಯರ ಪ್ರಾಂತ್ಯದ ಮಾರ್ಗವಾಗಿ ಕರೆದುತರಲಿಲ್ಲ. ಬದಲಿಗೆ ಕೆಂಪು ಸಮುದ್ರದ ಬಳಿಯಿರುವ ಮರುಳುಗಾಡಿನ ಬಳಸು ದಾರಿಯಲ್ಲೇ ನಡೆಸಿಕೊಂಡು ಬಂದರು. ಏಕೆಂದರೆ, “ಯುದ್ಧ ತೊಡಗಿದರೆ ಇವರು ಎದೆಗೆಟ್ಟು ಈಜಿಪ್ಟಿಗೆ ಹಿಂದಿರುಗಿಯಾರು” ಎಂದುಕೊಂಡರು ದೇವರು.
18 : ಇಸ್ರಯೇಲರು ಯುದ್ಧಸನ್ನದ್ಧ ಆಗಿಯೇ ಈಜಿಪ್ಟಿನಿಂದ ಹೊರಟರು.
19 : ಇದಲ್ಲದೆ ಜೋಸೆಫನು ಇಸ್ರಯೇಲರಿಗೆ, “ಖಂಡಿತವಾಗಿ ದೇವರು ನಿಮ್ಮ ನೆರವಿಗೆ ಬರುವರು; ತಮ್ಮ ವಾಗ್ದಾನವನ್ನು ಈಡೇರಿಸುವರು. ನೀವು ಹೋಗುವಾಗ ನನ್ನ ಶವವನ್ನು ನಿಮ್ಮ ಸಂಗಡ ತೆಗೆದುಕೊಂಡು ಹೋಗಬೇಕು” ಎಂದು ಹೇಳಿ ಅವರಿಂದ ದೃಢಪ್ರಮಾಣ ಮಾಡಿಸಿದ್ದನು. ಆದುದರಿಂದಲೆ ಮೋಶೆ ಅವನ ಶವವನ್ನು ತನ್ನ ಸಂಗಡ ತೆಗೆದುಕೊಂಡು ಹೋದನು.
20 : ಇಸ್ರಯೇಲರು ಸುಕ್ಕೋತಿನಿಂದ ಪ್ರಯಾಣಮಾಡಿ ಮರುಳುಗಾಡಿನ ಅಂಚಿನಲ್ಲಿರುವ ಏತಾಮಿನಲ್ಲಿ ಇಳಿದುಕೊಂಡರು.
21 : ಸರ್ವೇಶ್ವರ ಸ್ವಾಮಿ ಅವರಿಗೆ ಹಗಲು ಹೊತ್ತಿನಲ್ಲಿ ದಾರಿತೋರಿಸಲು ಮೇಘಸ್ತಂಭ ರೂಪದಲ್ಲೂ ರಾತ್ರಿವೇಳೆಯಲ್ಲಿ ಬೆಳಕನ್ನೀಯಲು ಅಗ್ನಿಸ್ತಂಭ ರೂಪದಲ್ಲೂ ಅವರ ಮುಂದೆ ಸಾಗಿದರು. ಹೀಗೆ ಅವರು ಹಗಲಿರುಳು ಪ್ರಯಾಣ ಮಾಡಿದರು.
22 : ಹಗಲಿನಲ್ಲಿ ಮೇಘಸ್ತಂಭ, ರಾತ್ರಿಯಲ್ಲಿ ಅಗ್ನಿಸ್ತಂಭ ತಪ್ಪದೆ ಕಾಣಿಸುತ್ತಿದ್ದವು.