ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
2 ಅರಸುಗಳು
16ನೇ ಅಧ್ಯಾಯ
1 : ರೆಮಲ್ಯನ ಮಗ ಪೆಕಹನ ಆಳ್ವಿಕೆಯ ಹದಿನೇಳನೆಯ ವರ್ಷದಲ್ಲಿ ಜುದೇಯದ ರಾಜನಾದ ಯೋತಾಮನ ಮಗ ಆಹಾಜನು ಆಳತೊಡಗಿದನು.
2 : ಪಟ್ಟಕ್ಕೆ ಬಂದಾಗ ಇವನಿಗೆ ಇಪ್ಪತ್ತು ವರ್ಷ ವಯಸ್ಸು. ಜೆರುಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಇವನು ತನ್ನ ದೇವರಾದ ಸರ್ವೇಶ್ವರಸ್ವಾಮಿಯ ದೃಷ್ಟಿಯಲ್ಲಿ ಒಳ್ಳೆಯವನಾಗಿರಲಿಲ್ಲ. ತನ್ನ ಪೂರ್ವಜ ದಾವೀದನ ಮಾರ್ಗವನ್ನು ಬಿಟ್ಟು
3 : ಇಸ್ರಯೇಲ್ ರಾಜರ ಮಾರ್ಗದಲ್ಲೇ ನಡೆದನು; ಇದಲ್ಲದೆ ಇಸ್ರಯೇಲರ ನಾಡಿನಿಂದ ಸರ್ವೇಶ್ವರ ಓಡಿಸಿಬಿಟ್ಟ ಜನಾಂಗಗಳ ಅಸಹ್ಯ ಆಚಾರಗಳನ್ನು ಅನುಸರಿಸಿ ತನ್ನ ಮಗನನ್ನೆ ಬಲಿಯಗ್ನಿಪರೀಕ್ಷೆಗೆ ಗುರಿಮಾಡಿದನು.
4 : ಪೂಜಾಸ್ಥಳಗಳಲ್ಲೂ ದಿಣ್ಣೆಗಳ ಮೇಲೂ ಎಲ್ಲಾ ಹಸಿರು ಮರಗಳ ಕೆಳಗೂ ಯಜ್ಞಧೂಪಗಳನ್ನು ಸಮರ್ಪಿಸಿದನು.
5 : ಇವನ ಕಾಲದಲ್ಲಿ ಸಿರಿಯಾದವರ ಅರಸನಾದ ರೆಚೀನ್ ಮತ್ತು ಇಸ್ರಯೇಲರ ಅರಸನೂ ರೆಮಲ್ಯನ ಮಗನೂ ಆದ ಪೆಕಹ ಎಂಬವರು ಕೂಡಿಕೊಂಡು ಜೆರುಸಲೇಮಿಗೆ ವಿರುದ್ಧ ದಾಳಿಮಾಡಿ ಆಹಾಜನನ್ನು ಸುತ್ತಿಕೊಂಡರು. ಆದರೆ ಅವನನ್ನು ಜಯಿಸಲು ಅವರಿಂದ ಆಗಲಿಲ್ಲ.
6 : ಇದೇ ಕಾಲದಲ್ಲಿ ಸಿರಿಯಾದವರ ಅರಸನಾದ ರೆಚೀನನು ಏಲತ್ ಪಟ್ಟಣವನ್ನು ಸಿರಿಯಾ ರಾಜ್ಯಕ್ಕೆ ಸೇರಿಸಿಕೊಂಡು ಅದರಲ್ಲಿದ್ದ ಯೆಹೂದ್ಯರನ್ನೆಲ್ಲಾ ಓಡಿಸಿದನು. ಎದೋಮ್ಯರು ಬಂದು ಅಲ್ಲಿ ವಾಸಿಸಿದರು. ಇಂದಿನವರೆಗೂ ಅದರಲ್ಲಿ ಅವರೇ ವಾಸವಾಗಿದ್ದಾರೆ.
7 : ಆಹಾಜನು ಅಸ್ಸೀರಿಯಾ ದೇಶದ ಅರಸನಾದ ತಿಗ್ಲತ್ಪೆಲೆಸರನ ಬಳಿಗೆ ದೂತರನ್ನು ಕಳುಹಿಸಿ, “ನಾನು ನಿಮ್ಮ ಸೇವಕ ಹಾಗು ಕುವರ; ನೀವು ಬಂದು ನನ್ನನ್ನು, ನನಗೆ ವಿರುದ್ಧ ದಂಡೆತ್ತಿ ಬಂದಿರುವ ಸಿರಿಯಾದವರ ಮತ್ತು ಇಸ್ರಯೇಲರ ಅರಸುಗಳ ಕೈಗೆ ಸಿಕ್ಕದಂತೆ, ಕಾಪಾಡಿ,” ಎಂದು ಹೇಳಿಸಿದನು.
8 : ಇದಲ್ಲದೆ ಆಹಾಜನು ಸರ್ವೇಶ್ವರನ ಆಲಯದಲ್ಲೂ ಅರಮನೆಯ ಭಂಡಾರದಲ್ಲೂ ಇದ್ದ ಬೆಳ್ಳಿ ಬಂಗಾರವನ್ನು ತೆಗೆದುಕೊಂಡು ಅಸ್ಸೀರಿಯಾದ ಅರಸನಿಗೆ ಕಪ್ಪವಾಗಿ ಕಳುಹಿಸಿದನು.
9 : ಅವನು ಇವನ ಮಾತಿಗೆ ಒಪ್ಪಿ, ದಮಸ್ಕ ಪಟ್ಟಣಕ್ಕೆ ಮುತ್ತಿಗೆ ಹಾಕಿ, ರೆಚೀನನನ್ನು ಕೊಂದು, ನಿವಾಸಿಗಳನ್ನು ಸೆರೆಹಿಡಿದು ಕೀರ್ ಪ್ರಾಂತ್ಯಕ್ಕೆ ಒಯ್ದನು.
10 : ಅರಸ ಆಹಾಜನು ಅಸ್ಸೀರಿಯದ ಅರಸ ತಿಗ್ಲತ್ಪಿಲೆಸರನ ದರ್ಶನಕ್ಕಾಗಿ ದಮಸ್ಕಕ್ಕೆ ಹೋದನು; ಅಲ್ಲಿದ್ದ ಬಲಿಪೀಠವನ್ನು ಕಂಡು ಅದರ ಒಂದು ಚಿತ್ರವನ್ನೂ ಅದರ ಎಲ್ಲಾ ಅಲಂಕಾರದ ನಕ್ಷೆಯನ್ನೂ ಬರೆಯಿಸಿ ಯಾಜಕ ಊರೀಯನಿಗೆ ಕಳುಹಿಸಿದನು.
11 : ಅರಸ ಆಹಾಜನು ದಮಸ್ಕದಿಂದ ಬರುವಷ್ಟರಲ್ಲಿ ಊರೀಯನು ಅರಸನಿಂದ ತನಗೆ ಬಂದ ಮಾದರಿಯ ಪ್ರಕಾರ ಒಂದು ಪೂಜಾಪೀಠವನ್ನು ಮಾಡಿಸಿಬಿಟ್ಟಿದ್ದನು.
12 : ಅರಸನು ಹಿಂದಿರುಗಿ ಬಂದ ಮೇಲೆ ಆ ಬಲಿಪೀಠವನ್ನು ಕಂಡು ಅದರ ಸಮೀಪಕ್ಕೆ ಹೋಗಿ
13 : ತಾನು ತಂದ ದಹನಬಲಿ ದ್ರವ್ಯ, ಧಾನ್ಯನೈವೇದ್ಯ, ಪಾನದ್ರವ್ಯ ಇವುಗಳನ್ನು ಸಮರ್ಪಿಸಿ ಶಾಂತಿಸಮಾಧಾನ ಬಲಿಗಾಗಿ ವಧಿಸಿದ ಪಶುಗಳ ರಕ್ತವನ್ನು ಅದರ ಮೇಲೆ ಚಿಮುಕಿಸಿದನು.
14 : ಇದಲ್ಲದೆ, ಸರ್ವೇಶ್ವರನ ಆಲಯಕ್ಕೂ ತನ್ನ ಪೂಜಾಪೀಠಕ್ಕೂ ಮಧ್ಯೆ, ಆವರೆಗೂ ಸರ್ವೇಶ್ವರನ ಸೇವೆಗೆ ಉಪಯೋಗಿಸಲಾಗುತ್ತಿದ್ದ ತಾಮ್ರಪೀಠವನ್ನು ಆಲಯದ ಎದುರಿನಿಂದ ತೆಗೆಯಿಸಿ, ತನ್ನ ಪೂಜಾಪೀಠದ ಉತ್ತರ ದಿಕ್ಕಿನಲ್ಲಿ ಇಡಿಸಿದನು.
15 : ಯಾಜಕ ಊರೀಯನಿಗೆ, “ಪ್ರಾತಃಕಾಲದ ದಹನಬಲಿಯನ್ನು, ಸಾಯಂಕಾಲದ ನೈವೇದ್ಯವನ್ನು ಅರಸನು ತರುವ ದಹನಬಲಿ ದ್ರವ್ಯ, ಧಾನ್ಯನೈವೇದ್ಯ, ಇವುಗಳನ್ನು ಮತ್ತು ಜನರು ತರುವ ದಹನಬಲಿ ದ್ರವ್ಯ, ಧಾನ್ಯನೈವೇದ್ಯ, ಪಾನದ್ರವ್ಯ ಇವುಗಳನ್ನು ಈ ಮಹಾ ಪೂಜಾಪೀಠದ ಮೇಲೆ ಸಮರ್ಪಿಸಬೇಕು; ಮತ್ತು ದಹನಬಲಿ ಯಜ್ಞಗಳಿಗಾಗಿ ವಧಿಸುವ ಪಶುಗಳ ರಕ್ತವನ್ನು ಇದರ ಮೇಲೆಯೇ ಚಿಮುಕಿಸಬೇಕು. ದೈವೋತ್ತರಗಳನ್ನು ತಿಳಿದುಕೊಳ್ಳುವುದಕ್ಕಾಗಿ ತಾಮ್ರಪೀಠವನ್ನು ಉಪಯೋಗಿಸುವೆನು,” ಎಂದು ಹೇಳಿದನು.
16 : ಯಾಜಕ ಊರೀಯನು ಅರಸನು ಹೇಳಿದಂತೆಯೇ ಮಾಡಿದನು.
17 : ಅರಸನಾದ ಆಹಾಜನು ಅಸ್ಸೀರಿಯದ ಅರಸನ ನಿಮಿತ್ತ ಪೀಠಗಳ ಪಟ್ಟಿಗಳನ್ನು ಕತ್ತರಿಸಿದನು; ಅವುಗಳ ಮೇಲಿದ್ದ ನೀರಿನ ತೊಟ್ಟಿಗಳನ್ನು ತೆಗೆದಿಟ್ಟನು; ಕಂಚಿನ ಕಡಲೆಂಬ ದೊಡ್ಡ ಪಾತ್ರೆಯನ್ನು ತಾಮ್ರದ ಹೋರಿಗಳ ಮೇಲಿನಿಂದ ಇಳಿಸಿ ಕಲ್ಲುಕಟ್ಟೆಗಳ ಮೇಲೆ ಇಡಿಸಿದನು.
18 : ಸರ್ವೇಶ್ವರನ ಆಲಯದ ಪ್ರಾಕಾರದೊಳಗೆ ಸಬ್ಬತ್ ದಿನದ ಆರಾಧನೆಗಾಗಿ ರಾಜರಿಗಾಗಿ ಕಟ್ಟಲಾಗಿದ್ದ ಮಂಟಪವನ್ನು ಹಾಗು ಅರಮನೆಯಿಂದ ದೇವಸ್ಥಾನಕ್ಕೆ ಹೋಗುವ ಹೊರಗಿನ ಬಾಗಿಲನ್ನೂ ಬದಲಾಯಿಸಿದವನು ಈ ಆಹಾಜನೇ.
19 : ಆಹಾಜನ ಉಳಿದ ಚರಿತ್ರೆ ಹಾಗು ಕೃತ್ಯಗಳು ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿವೆ.
20 : ಅವನು ಸತ್ತು ಪಿತೃಗಳ ಬಳಿ ಸೇರಿದನು. ಅವನ ಶವವನ್ನು ದಾವೀದನಗರದೊಳಗೆ ಅವನ ಕುಟುಂಬ ಸ್ಮಶಾನದಲ್ಲಿ ಸಮಾಧಿ ಮಾಡಿದರು. ಅವನ ಸ್ಥಾನದಲ್ಲಿ ಅವನ ಮಗ ಹಿಜ್ಕೀಯನು ಅರಸನಾದನು.