P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
68ನೇ ಅಧ್ಯಾಯ
1 : ಎಚ್ಚರಗೊಳ್ಳಲಿ, ದೇವನೆಚ್ಚರಗೊಳ್ಳಲಿ I ಆತನ ಶತ್ರುಗಳೆಲ್ಲರು ಚದರಿಹೋಗಲಿ I ಆತನ ವಿರೋಧಿಗಳು ಪಲಾಯನ ಗೈಯಲಿ II
2 : ಅವರನು ಊದಿಬಿಡು ದೇವಾ, ತೇಲಿಹೋಗಲಿ ಹೊಗೆಯಂತೆ I ಕರಗಿಹೋಗಲಿ ನಿನ್ನೆದುರಿಗೆ ಅಗ್ನಿಮುಟ್ಟಿದ ಮೇಣದಂತೆ II
3 : ಸಜ್ಜನರಾದರೊ ಸಂತೋಷಿಸಲಿ I ದೇವರ ಮುಂದೆ ಆನಂದಿಸಲಿ I ಅತುಳ ಹರ್ಷಾನಂದಗೊಳ್ಳಲಿ II
4 : ಗಾಯನ ಮಾಡಿರಿ ದೇವನಿಗೆ, ಕೊಂಡಾಡಿರಿ ಆತನ ನಾಮವನು I ಮೇಘಾರೂಢನಾಗಿ ಬರುವವಗೆ ಸಿದ್ಧಮಾಡಿರಿ ರಾಜಮಾರ್ಗವನು I “ಪ್ರಭು” ಆತನ ನಾಮಧೇಯ, ಹರ್ಷದಿ ಸೇರಿರಿ ಆತನ ಸನ್ನಿಧಿಯನು II
5 : ದಿವ್ಯಧಾಮದಲ್ಲಿಹ ಆ ದೇವ I ತಬ್ಬಲಿಗೆ ತಂದೆ, ವಿಧವೆಗಾಶ್ರಯ II
6 : ನೀಡುವನು ಮಡದಿ ಮಕ್ಕಳನು ಒಂಟಿಗನಿಗೆ I ಬಿಡುಗಡೆಯ ಭಾಗ್ಯವನು ನೊಂದ ಬಂಧಿಗಳಿಗೆ I ದ್ರೋಹಿಗಳಿಗಾದರೋ ಮರಳುಗಾಡೇ ಮಾಳಿಗೆ II
7 : ದೇವಾ, ಪ್ರಜೆಗೆ ಮುಂದಾಳಾಗಿ ನೀ ಹೊರಟಾಗ I ಅರಣ್ಯ ಮಾರ್ಗವಾಗಿ ನೀ ಪ್ರಯಾಣಮಾಡಿದಾಗ II
8 : ನಡುಗಿತು ಪೊಡವಿ, ಕಂಪಿಸಿತು ಸೀನಾಯಿ, ದೇವ ಪ್ರತ್ಯಕ್ಷನಾದನೆಂದು I ಮಳೆಗರೆಯಿತು ಮೋಡಗಿರಿ, ಇಸ್ರಯೇಲ್ ದೇವ ಪ್ರತ್ಯಕ್ಷನಾದನೆಂದು II
9 : ದೇವಾ, ಹೇರಳವಾಗಿ ನೀ ಸುರಿಮಳೆಗರೆದೆ I ಬತ್ತಿದ ನಿನ್ನ ಸೊತ್ತನ್ನು ಸಮೃದ್ಧಿಗೊಳಿಸಿದೆ II
10 : ವಸತಿಯಾಯಿತದು ನಿನ್ನ ಜನಮಂದೆಗೆ I ಆಸ್ಥೆಯಿಂದೊದಗಿಸಿದೆ ದೀನ ದಲಿತರಿಗೆ II
11 : ಹೊರಡಿಸಿದನು ಪ್ರಭು ಶುಭವಾರ್ತೆಯೊಂದನು I ಹರಡಿತು ಜನಸ್ತೋಮ ಆ ಸಂದೇಶವನು II
12 : ಓಡಿದರು, ದಂಡೊಡನೆ ಓಡಿದರು ದೊರೆಗಳು I ದೋಚಿಕೊಂಡರು ಕೊಳ್ಳೆಯನು ಗೃಹಿಣಿಯರು II
13 : ಪಾರಿವಾಳ ರೆಕ್ಕೆಗಳಂಥ ಕನಕದಾಕೃತಿಗಳಿದೋ I ಗರಿಗಳಂತೆ ಥಳಥಳಿಸುವ ಬಂಗಾರ ರೇಖೆಗಳಿದೋ I ನೀವಾದರೋ ಕುರಿದೊಡ್ಡಿಗಳಲ್ಲಿ ಬೆಚ್ಚನಿದ್ದಿರೋ? II
14 : ಸರ್ವಶಕ್ತನು ಅರಸರನತ್ತ ಸದೆಬಡಿದಂತೆ I ಇತ್ತ ಬೀಳುತ್ತಿತ್ತು ಸಾಲ್ಮೋನ್ ಗಿರಿಮೇಲೆ ಹಿಮಗಡ್ಡೆ II
15 : ಬಾಷಾನಿನ ಪರ್ವತವೇ, ನೀ ಮಹೋನ್ನತ I ಹಲವು ಶಿಖರಗಳಿಗಿಂತ ನೀ ಅಲಂಕೃತ II
16 : ಆದರೂ ದೇವನಾರಿಸಿದ ಗಿರಿಯನು I ಆತ ಬಯಸಿದ ಆ ಚಿರ ನಿವಾಸವನು I ನೀ ಓರೆಗಣ್ಣಿಂದ ಕಾಣುವೆಯೇನು? I ಎಲೈ ಶಿಖರೋನ್ನತ ಪರ್ವತವೇ, ಪೇಳು II
17 : ತನ್ನ ಸಹಸ್ರಾರು, ಲಕ್ಷಾಂತರ ರಥಗಳ ಸಮೇತ I ಸೀನಾಯಿಂದ ದೇಗುಲಕೆ ಪ್ರಭುವಿನ ಸಮಾಗಮನ II
18 : ಹೇ ದೇವಾ, ಹೇ ಪ್ರಭು, ನೀನೇರಿದೆ ಉನ್ನತ ಶಿಖರಕೆ I ಕರೆದೊಯ್ದೆ ಖೈದಿಗಳನೇಕರನು ನಿನ್ನ ನಿವಾಸಕೆ I ಸರಳರಿಂದಲೂ ದುರುಳರಿಂದಲೂ ಪಡೆದೆ ಕಪ್ಪಕಾಣಿಕೆ I ದೇವರಾದ ಪ್ರಭುವೇ, ಅಲ್ಲೇ ನೀ ವಾಸಿಸುವೆ II
19 : ಸ್ತುತಿಯಾಗಲಿ ನಮ್ಮನುದ್ಧರಿಸುವಾ ದೇವನಿಗೆ I ನಮ್ಮನನುದಿನ ಬಿಡದೆ ಸಹಿಸಿಕೊಳ್ಳುವಾ ಪ್ರಭುವಿಗೆ II
20 : ನಮ್ಮ ದೇವರು ಜೀವೋದ್ಧಾರಕ ದೇವರು ಹೌದು I ಸಾವಿಂದ ತಪ್ಪಿಸುವ ಶಕ್ತಿ, ಸ್ವಾಮಿ ದೇವರದು II
21 : ಸಂಹರಿಸುವನಾತನು ಶತ್ರುಗಳಾ ಶಿರಸ್ಸನು I ನಸುಕುವನು ದುರ್ಮಾರ್ಗಿಗಳ ಕೇಶ ಕಿರೀಟವನು II
22 : ಪ್ರಭುವಿನ ನುಡಿ : “ನಿನ್ನ ಶತ್ರುಗಳ ನೆತ್ತರಲಿ ನೀ ಕಾಲ್ತೊಳೆವಂತೆ I ನಿನ್ನ ನಾಯಿಗಳಿಗದನೆಕ್ಕಲು ಸಾಕಷ್ಟು ಸಿಗುವಂತೆ I ಬಾಷಾನಿನಿಂದವರನು ನಾ ಮರಳಿ ಬರಮಾಡುವೆ I ಸಮುದ್ರ ತಳದಿಂದವರನು ನಾ ಮತ್ತೆ ಮೇಲೆತ್ತುವೆ” II
23 : ಪ್ರಭುವಿನ ನುಡಿ : “ನಿನ್ನ ಶತ್ರುಗಳ ನೆತ್ತರಲಿ ನೀ ಕಾಲ್ತೊಳೆವಂತೆ I ನಿನ್ನ ನಾಯಿಗಳಿಗದನೆಕ್ಕಲು ಸಾಕಷ್ಟು ಸಿಗುವಂತೆ I ಬಾಷಾನಿನಿಂದವರನು ನಾ ಮರಳಿ ಬರಮಾಡುವೆ I ಸಮುದ್ರ ತಳದಿಂದವರನು ನಾ ಮತ್ತೆ ಮೇಲೆತ್ತುವೆ” II
24 : ಕಂಗೊಳಿಸುತಿದೆ ದೇವ, ನಿನ್ನ ಭವ್ಯ ಮೆರವಣಿಗೆ I ನನ್ನರಸ ದೇವನು ನಡೆವ ತನ್ನಾ ಗರ್ಭಗುಡಿಗೆ II
25 : ಮುಂಗಡೆಯಲಿದೋ ಹಾಡುಗಾರರು I ಹಿಂಗಡೆಯಲಿದೋ ವಾದ್ಯಗಾರರು I ನಡುವೆ ದಮ್ಮಡಿ ಬಡಿವ ಮಹಿಳೆಯರು II
26 : “ಇಸ್ರಯೇಲಿನ ವಂಶಜರೇ, ಸ್ತುತಿಸಿರಿ ಪ್ರಭುವನು” ಎನ್ನುತಿಹರು I “ಸಭೆ ಸಮ್ಮುಖದಲಿ ಕೊಂಡಾಡಿರಿ ದೇವರನು” ಎಂದು ಹಾಡುತಿಹರು I
27 : ಮುನ್ನಡೆಯುತ್ತಿಹರಿದೋ ಕಿರಿಯ ಕುಲದ ಬೆನ್ಯಮೀನರು I ಗುಂಪಾಗಿ ಬರುತಿಹರು ಯೆಹೂದ್ಯ ಕುಲದ ಗುರುಹಿರಿಯರು I ಹಿಂಬಾಲಿಸುತಿಹರು ಜೆಬುಲೋನ್, ನಫ್ತಾಲಿ ಗೋತ್ರದವರು II
28 : ನಿನ್ನ ಶಕ್ತಿಸಾಮರ್ಥ್ಯವನು ಹೇ ದೇವಾ, ಪ್ರದರ್ಶಿಸು I ನಮ್ಮ ಪರ ಪ್ರಯೋಗಿಸಿದ ಬಲವನು ಮರಳಿ ತೋರ್ಪಡಿಸು II
29 : ಜೆರುಸಲೇಮಿನ ನಿನ್ನ ಮಹಾದೇವಾಲಯದ ಪ್ರಯುಕ್ತ I ಅರಸರು ನಿನಗೆ ಕಾಣಿಕೆಯನು ತಂದೊಪ್ಪಿಸುವುದು ಅತಿಸೂಕ್ತ II
30 : ದಂಡಿಸು ಜಂಡು ಕಾಡುಮೃಗದಂಥಾ ನಾಡನು I ಗದರಿಸು ಹೋರಿ ದನಕುರಿಗಳಂಥಾ ನಾಡುಗಳನು II ಚದರಿಸು ಕಲಹಕಾಳಗ ಪ್ರಿಯ ಜನಾಂಗಗಳನು I ಅಡ್ಡಬೀಳಿಸು ನಿನಗೆ ಬೆಳ್ಳಿಗಟ್ಟಿ ತಂದವರನು II
31 : ರಾಯಭಾರಿಗಳಾಗಿ ಬರುವರು ಈಜಿಪ್ಟಿನ ಜನರು I ದೇವರಿಗೆ ಕೈ ಮುಗಿವರು ಇಥಿಯೋಪಿಯದವರು II
32 : ಭೂರಾಜ್ಯಗಳೇ, ಸ್ತುತಿಸಿರಿ ದೇವರನು I ಸಂಕೀರ್ತಿಸಿರಿ ನೀವೆಲ್ಲರು ಪ್ರಭುವನು II
33 : ಆದಿಮೊದಲು ಮೇಘಾರೂಢನಾಗಿರುವನು I ಕೊಂಡಾಡಿರಿ, ಗುಡುಗಿನಂತೆ ಗರ್ಜಿಸುವಾತನನು II
34 : ಸಾರಿರಿ ದೇವರಾ ಶಕ್ತಿಸಾಮರ್ಥ್ಯವನು I ಇಸ್ರಯೇಲಿಗೆ ತೋರಿದಾ ಪ್ರಭಾವವನು I ಗಗನವನು ಆವರಿಸಿರುವಾ ಪ್ರತಿಭೆಯನು II
35 : ಪರಮ ಪವಿತ್ರಾಲಯದಲ್ಲಿಹ ದೇವಭಯಭಕುತಿಗೆ ಪಾತ್ರ I ಪ್ರಜೆಗೆ ಪರಾಕ್ರಮವೀವ ಇಸ್ರಯೇಲ ದೇವನಿಗೆ ಸ್ತೋತ್ರ II