పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
118ನೇ ಅಧ್ಯಾಯ
1 : ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ I ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ II
2 : ಸಾರಲಿ ಇಸ್ರಯೇಲಿನ ಜನತೆ I ‘ಆತನ ಪ್ರೀತಿ ಶಾಶ್ವತ’ ಎಂದೆ II
3 : ಸಾರಲಿ ಆರೋನನ ವಂಶಲತೆ: I ‘ಆತನ ಪ್ರೀತಿ ಶಾಶ್ವತ’ ಎಂದೆ II
4 : ಸಾರಲಿ ಆತನ ಭಕ್ತರ ಪಂಥ I ಆತನ ಪ್ರೀತಿ ಶಾಶ್ವತ ಅಂಥ II
5 : ಇಕ್ಕಟ್ಟಿನಲ್ಲಿ ಮೊರೆಯಿಟ್ಟೆನು ಪ್ರಭುವಿಗೆ I ಕಿವಿಗೊಟ್ಟು ಬಿಡುಗಡೆಯಿತ್ತನು ಆತನೆನಗೆ II
6 : ಪ್ರಭು ನನ್ನ ಕಡೆ ಇರಲು ಭಯಪಡೆನು I ನನಗೇನು ಮಾಡಿಯಾನು ಮನುಜನು? II
7 : ನೆರವು ನೀಡಲು ಪ್ರಭು ಎನ್ನಕಡೆ ಇಹನು I ಶತ್ರುಗಳತ್ತ ಜೇತಾರನಾಗಿ ನೋಡುವೆನು II
8 : ಮನುಜರಲಿ ಭರವಸೆಯಿಡುವುದಕ್ಕಿಂತ I ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ II
9 : ರಾಜರಲಿ ಭರವಸೆಯಿಡುವುದಕ್ಕಿಂತ I ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ II
10 : ಶತ್ರುರಾಷ್ಟ್ರಗಳೆಲ್ಲಾ ಸುತ್ತುವರಿದಿದ್ದವು ಎನ್ನನು I ಪ್ರಭುವಿನ ನಾಮಬಲದಲಿ ಧ್ವಂಸಮಾಡಿದೆನವುಗಳನು II
11 : ಸುತ್ತಮುತ್ತಲು ಮುತ್ತಿಕೊಂಡಿದ್ದರು ಎನ್ನನು I ಪ್ರಭುವಿನ ನಾಮಬಲದಲಿ ಸಂಹರಿಸಿದೆನವರನು II
12 : ಕವಿದಿದ್ದರು ಎನ್ನನು ಜೇನುನೊಣಗಳಂತೆ I ಪ್ರಭುವಿನ ನಾಮಬಲದಲಿ ಅವರನು ಸಂಹರಿಸಿದೆ I ಮುಳ್ಳುಗಿಡವನು ಬೆಂಕಿ ಸುಟ್ಟುಹಾಕುವಂತೆ II
13 : ನನ್ನನು ತಳ್ಳಿ ಬೀಳಿಸ ನೋಡಿದರು ನೆಲಕೆ I ಆದರೆ ಪ್ರಭು ನೆರವು ನೀಡಿದನು ಎನಗೆ II
14 : ಪ್ರಭುವೇ ನನಗೆ ಬಲವು, ಧೈರ್ಯವು I ಆತನಿಂದಲೇ ನನಗೆ ಉದ್ಧಾರವು II
15 : ಜಯಘೋಷ, ಹರ್ಷಸುನಾದ ಸಜ್ಜನರ ಬಿಡಾರದಿಂದ I “ಪರಾಕ್ರಮ, ಪ್ರದರ್ಶನ ಪ್ರಭುವಿನ ಬಲಗೈಯಿಂದ II
16 : ವಿಜಯಸಾಧನ ಪ್ರಭುವಿನಾ ಬಲಗೈಯಿಂದ I ಪರಾಕ್ರಮ, ಪ್ರದರ್ಶನವೂ ಅದರಿಂದ” II
17 : ಸಾಯೆನು, ಜೀವದಿಂದಿರುವೆನು ನಾನು I ಪ್ರಭುವಿನ ಕಾರ್ಯಗಳನು ಸಾರುವೆನು II
18 : ಗುರಿಪಡಿಸಿಹನು ಎನ್ನನು ಪ್ರಭು ಕಠಿಣ ಶಿಕ್ಷೆಗೆ I ಆದರೂ ಗುರಿಮಾಡಲಿಲ್ಲ ಎನ್ನನು ಮರಣಕೆ II
19 : ತೆರೆಯಿರಿ ಎನಗೆ ನೀತಿದ್ವಾರಗಳನು I ಒಳನುಗ್ಗಿ ಹೊಗಳುವೆನು ಪ್ರಭುವನು II
20 : ಇದುವೇ ದ್ವಾರ ಪ್ರಭುವಿನ ಮಂದಿರಕೆ I ಇದುವೇ ಪ್ರವೇಶಮಾರ್ಗ ಸಜ್ಜನರಿಗೆ II
21 : ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ I ಉದ್ಧಾರ ಮಾಡಿದೆ, ನಿನಗೆ ಕೃತಜ್ಞತಾವಂದನೆ II
22 : ಮನೆಕಟ್ಟುವವರು ಮೂಲೆಗೆಸೆದ ಕಲ್ಲು I ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು II
23 : ಪ್ರಭುವಿನಿಂದಲೆ ಆದ ಈ ಕಾರ್ಯ I ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ! II
24 : ಪ್ರಭುವೇ ನಿಯೋಜಿಸಿದ ದಿನವಿದು I ಹರ್ಷಿಸಿ ಆನಂದಿಸೋಣ ಇಂದು II
25 : ರಕ್ಷಿಸು ಪ್ರಭೂ, ರಕ್ಷಿಸು ದಯವಿಟ್ಟು I ಸುಕ್ಷೇಮ ನೀಡು ಪ್ರಭು ಕರುಣೆಯಿಟ್ಟು II
26 : ಪ್ರಭುವಿನ ನಾಮದಲಿ ಬರುವವನಿಗೆ ಜಯಮಂಗಳ I ಪ್ರಭುವಿನ ಮಂದಿರದಲ್ಲಿಹ ನಮ್ಮಿಂದ ಶುಭಮಂಗಳ II
27 : ಪ್ರಭುವೆ ದೇವನು, ನಮ್ಮ ಮೇಲೆ ಜ್ಯೋತಿಯನು ಬೆಳಗಿದವನು I ಪ್ರದಕ್ಷಿಣೆ ಮಾಡಿರಿ, ಬಲಿಪೀಠದ ಸುತ್ತ, ಹಿಡಿದು ರೆಂಬೆಗಳನು II
28 : ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ I ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ II