P. O. C ബൈബിള്
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
28ನೇ ಅಧ್ಯಾಯ
- Verse 1: ಹಿಂದಟ್ಟದಿದ್ದರೂ ದುಷ್ಟನು ಹೆದರಿ ಓಡುವನು; ಸತ್ಯಸಂಧನು ಸಿಂಹದಂತೆ ಧೈರ್ಯದಿಂದಿರುವನು.
- Verse 2: ಅರಾಜಕತೆಯಿಂದ ನಾಡಿನಲ್ಲಿ ನಾಯಕರನೇಕರು ತಲೆಯೆತ್ತುವರು; ಜ್ಞಾನ ಹಾಗೂ ವಿವೇಕದಿಂದ ನಾಡು ಸುಸ್ಥಿರವಾಗುವುದು.
- Verse 3: ದಲಿತರನ್ನೇ ಹಿಂಸಿಸುವ ಬಡವ, ಕಾಳೂ ಉಳಿಯದಂತೆ ಜಡಿಯುವ ಮಳೆಗೆ ಸಮಾನ.
- Verse 4: ಧರ್ಮಶಾಸ್ತ್ರವನ್ನು ಕೈಗೊಳ್ಳದವರು ದುಷ್ಟರನ್ನು ಹೊಗಳುವರು; ಕೈಗೊಳ್ಳುವವರು ಅವರ ವಿರುದ್ಧ ಹೋರಾಡುವರು.
- Verse 5: ಕೆಟ್ಟವರು ನ್ಯಾಯ ನೀತಿಯನ್ನು ಗ್ರಹಿಸರು; ಸರ್ವೇಶ್ವರನ ಭಕ್ತರು ಅದನ್ನು ಪೂರ್ತಿಯಾಗಿ ಗ್ರಹಿಸುವರು.
- Verse 6: ದುರ್ಮಾರ್ಗಿಯಾದ ಧನವಂತನಿಗಿಂತ ನಿರ್ದೋಷಿಯಾಗಿ ನಡೆವ ದರಿದ್ರನೇ ಲೇಸು.
- Verse 7: ಜ್ಞಾನಿಯಾದ ಮಗ ಧರ್ಮಶಾಸ್ತ್ರವನ್ನು ಕೈಗೊಳ್ಳುವನು; ಹೊಟ್ಟೆಬಾಕರ ಗೆಳೆಯ ತಂದೆಗೆ ಅಪಕೀರ್ತಿ ತರುವನು.
- Verse 8: ಬಡ್ಡಿಬಾಕಿಗಳಿಂದ ಬೆಳೆದ ಆಸ್ತಿ, ಬಡವರಲ್ಲಿ ಕನಿಕರವುಳ್ಳವನಿಗೆ ನಿಧಿ.
- Verse 9: ಧರ್ಮಶಾಸ್ತ್ರಕ್ಕೆ ಕಿವಿಮುಚ್ಚಿಕೊಳ್ಳುವವನ ಪ್ರಾರ್ಥನೆ, ದೇವರಿಂದ ತಿರಸ್ಕೃತವಾದ ಪ್ರಾರ್ಥನೆ.
- Verse 10: ನೆಟ್ಟಗೆ ನಡೆವವರನ್ನು ಕೆಟ್ಟದಾರಿಗೆ ಎಳೆಯುವವನು ತಾನು ತೋಡಿದ ಗುಂಡಿಯಲ್ಲಿ ತಾನೇ ಬೀಳುವನು; ನಿರ್ದೋಷಿಗಳು ಸುಖಸಂತೋಷಕ್ಕೆ ಬಾಧ್ಯಸ್ಥರು.
- Verse 11: ಹಣವಂತ ತಾನೇ ಜ್ಞಾನಿಯೆಂದು ಎಣಿಸಿಕೊಳ್ಳುವನು; ವಿವೇಕಿಯಾದ ಬಡವ ಅವನೆಂಥವನೆಂದು ಅರ್ಥಮಾಡಿಕೊಳ್ಳುವನು.
- Verse 12: ಸತ್ಯಸಂಧರಿಗೆ ಜಯವಾದರೆ ಸಂಭ್ರಮ ಸಡಗರ; ದುಷ್ಟರನ್ನು ಉನ್ನತಿಗೇರಿಸಿದರೆ ಬೇರೆಯವರು ಮರೆಯಾಗುವರು.
- Verse 13: ಪಾಪಗಳನ್ನು ಮುಚ್ಚಿಟ್ಟುಕೊಳ್ಳುವವನಿಗೆ ಮುಕ್ತಿ ದೊರಕದು; ಅವುಗಳನ್ನು ಒಪ್ಪಿಕೊಂಡು ಬಿಟ್ಟರೆ ಕರುಣೆ ದೊರಕುವುದು.
- Verse 14: ಭಯದಿಂದ ನಡೆದುಕೊಳ್ಳುವವನು ಭಾಗ್ಯವಂತನು; ಕಠಿಣ ಹೃದಯನು ಕೇಡಿಗೆ ತುತ್ತಾಗುವನು.
- Verse 15: ದಲಿತರನ್ನಾಳುವ ದುರುಳರಾಜ ಗರ್ಜಿಸುವ ಸಿಂಹ, ಹುಡುಕಾಡುವ ಕರಡಿ.
- Verse 16: ವಿವೇಕಶೂನ್ಯನಾದ ಒಡೆಯ ಮಹಾಹಿಂಸಕ; ದುರ್ಲಾಭವನ್ನು ವಿರೋಧಿಸುವವನಿಗೆ ದೀರ್ಘಾಯುಷ್ಯ.
- Verse 17: ನರಹತ್ಯಮಾಡಿದ ಪಾಪಾತ್ಮನು ಪಾತಾಳದತ್ತ ಓಡೋಡುತ್ತಿರುವನು; ಅವನನ್ನು ಯಾರೂ ತಡೆಯಬಾರದು.
- Verse 18: ಸನ್ಮಾರ್ಗಿಗಳಿಗೆ ಸಂರಕ್ಷಣೆ, ದುರ್ಮಾರ್ಗಿಗಳಿಗೆ ಪತನ ತಟ್ಟನೆ.
- Verse 19: ದುಡಿದು ಹೊಲ ಗೇಯುವವನಿಗೆ ಹೊಟ್ಟೆ ತುಂಬ ಅನ್ನ; ವ್ಯರ್ಥಕಾರ್ಯಗಳಲ್ಲಿ ಆಸಕ್ತನಾದವನಿಗೆ ಬೇಕಾದಷ್ಟು ಬಡತನ.
- Verse 20: ಪ್ರಾಮಾಣಿಕನಿಗೆ ಪೂರ್ಣಾಶೀರ್ವಾದ; ಹಣವಂತನಾಗಲು ಹಾತೊರೆಯುವವನು ಶಿಕ್ಷಾರ್ಹ.
- Verse 21: ಪಕ್ಷಪಾತ ತಕ್ಕುದಲ್ಲ; ತುತ್ತನ್ನಕ್ಕಾಗಿ ತಪ್ಪುಮಾಡುವವರುಂಟು.
- Verse 22: ಆಸ್ತಿ ಗಳಿಸಲು ಲೋಭಿಗೆ ಆತುರ; ತನಗೆ ಕೊರತೆ ಕಾದಿದೆಯೆಂದು ಆತ ಅರಿಯ.
- Verse 23: ಮುಖಸ್ತುತಿ ಮಾಡುವವನಿಗಿಂತ ಗದರಿಸುವವನೇ ಕೊನೆಗೆ ಹೆಚ್ಚು ದಯಾವಂತ.
- Verse 24: “ಅದು ತಪ್ಪಲ್ಲ” ಎಂದು ಹೆತ್ತವರ ಆಸ್ತಿಯನ್ನು ಕದಿಯುವವನು ಕೊಳ್ಳೆ ಹೊಡೆಯುವವರ ಸಂಗಡಿಗನು.
- Verse 25: ಅತ್ಯಾಸೆಪಡುವವನು ಜಗಳವೆಬ್ಬಿಸುವನು; ಸರ್ವೇಶ್ವರನಲ್ಲಿ ಭರವಸೆಯಿಟ್ಟವನು ಬಲಿಷ್ಠನು.
- Verse 26: ತನ್ನ ಶಕ್ತಿಯಲ್ಲೆ ಭರವಸೆ ಇಡುವವನು ಮೂಢನು; ಜ್ಞಾನಿಗಳ ಮಾರ್ಗದಲ್ಲಿ ನಡೆವವನು ವಿಮುಕ್ತನಾಗುವನು.
- Verse 27: ಬಡವರಿಗೆ ಕೊಡುವವನು ಕೊರತೆಪಡನು; ಅವರನ್ನು ಕಂಡೂ ಕಾಣದಂತೆ ಇರುವವನು ಬಹುಶಾಪಗ್ರಸ್ಥನು.
- Verse 28: ದುಷ್ಟರು ಪ್ರಬಲವಾದರೆ ಜನರು ತಲೆಮರೆಸಿಕೊಳ್ಳುವರು; ದುಷ್ಟರು ನಾಶವಾದರೆ ಶಿಷ್ಟರು ವೃದ್ಧಿಯಾಗುವರು.