P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
19ನೇ ಅಧ್ಯಾಯ
1 : ಆಕಾಶಮಂಡಲ ಸಾರುತಿದೆ ದೇವರ ಮಹಿಮೆಯನು I ತಾರಾಮಂಡಲ ತೋರುತಿದೆ ದೇವರ ಕೈಕೃತಿಗಳನು II
2 : ದಿನವು ಮರುದಿನಕೆ ಮಾಡುತಿದೆ ಈ ಪ್ರಕಟಣೆಯನು I ರಾತ್ರಿ ಮರುರಾತ್ರಿಗೆ ನೀಡುತಿದೆ ಈ ಪ್ರಚಾರವನು II
3 : ಅವುಗಳಿಗೆ ಮಾತಿಲ್ಲ; ಅವುಗಳಿಗೆ ಶಬ್ದವಿಲ್ಲ I ಅವುಗಳ ಸ್ವರವಂತೂ ಕೇಳಿಬರುವುದಿಲ್ಲ II
4 : ಆದರೂ ಅವುಗಳ ಧ್ವನಿರೇಖೆ ಹರಡಿದೆ ಬುವಿಯಾದ್ಯಂತ I ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ II
5 : ನಿರ್ಮಿಸಿಹನಲ್ಲಿ ದೇವನು ಗುಡಾರವೊಂದನು ಸೂರ್ಯನಿಗೆ I ಬರುತಿಹನಾ ರವಿ ವರನಂತೆ ಧಾರಾಗೃಹದಿಂದ ಹೊರಗೆ I ಶೂರನಂತೆ, ಓಟದ ಪಥದಲ್ಲೋಡಲು ಹರುಷದೊಂದಿಗೆ II
6 : ಏರುತಿಹನು ದಿಗಂತದೊಂದು ಕೊನೆಯಿಂದ ಮತ್ತೊಂದು ಕೊನೆಗೆ I ಮುಚ್ಚುಮರೆಯಾದುದೊಂದೂ ಇರದು, ಆತನಾ ಉರಿಗಣ್ಣಿಗೆ II
7 : ಪ್ರಭುವಿನ ಆಜ್ಞೆ ಪರಿಪೂರ್ಣ; ಜೀವನಕದು ನವಚೇತನ I ನಂಬಲರ್ಹ; ಪ್ರಭುವಿನ ಶಾಸನ ಮುಗ್ದರಿಗದು ಸುಜ್ಞಾನ II
8 : ಪ್ರಭುವಿನ ನಿಯಮ ನೀತಿಬದ್ಧ; ಮನಸ್ಸಿಗದು ಒಸಗೆ I ಪ್ರಭುವಿನ ಕಟ್ಟಳೆ ಪರಿಶುದ್ಧ; ಕಣ್ಣಿಗದು ದೀವಿಗೆ II
9 : ಪ್ರಭುವಿನ ಭೀತಿ ಪವಿತ್ರ; ಅದೆಂದಿಗೂ ಶಾಶ್ವತ I ಪ್ರಭುವಿನ ತೀರ್ಪು ಯಥಾರ್ಥ; ಪರಿಪೂರ್ಣ ನ್ಯಾಯಯುತ II
10 : ಅಪೇಕ್ಷಣೀಯವಾದುವವು ಚಿನ್ನ ಅಪರಂಜಿಗಿಂತ I ಅತಿಮಧುರವಾದುವು ಅಪ್ಪಟ ಜೇನುತುಪ್ಪಕ್ಕಿಂತ II
11 : ಜಾಗೃತಗೊಳ್ಳುವನು ನಿನ್ನ ದಾಸನು ಅವುಗಳಿಂದ I ಸಂಭಾವಿತನಾಗುವನು ಅವುಗಳ ಪಾಲನೆಯಿಂದ II
12 : ತನ್ನ ತಪ್ಪನು ತಾನರಿತುಕೊಳ್ಳುವವನಾರಯ್ಯಾ I ಗುಪ್ತವಾದ ಪಾಪಗಳಿಂದೆನ್ನ ಮುಕ್ತಗೊಳಿಸಯ್ಯಾ II
13 : ಕಾಪಾಡೆನ್ನನು, ಬೇಕು ಬೇಕೆಂದು ಪಾಪಮಾಡದಂತೆ I ಕಾದಿಡು, ಅಂಥ ಪಾಪಕೆ ನಾ ದಾಸನಾಗದಂತೆ I ನಿರ್ದೋಷಿಯಾಗುವೆನು, ಆ ದ್ರೋಹಕ್ಕೊಳಗಾಗದಂತೆ II
14 : ನಿನಗೊಪ್ಪಿಗೆಯಾಗಲಿ ನನ್ನ ಬಾಯಮಾತು, ಹೃದಯಧ್ಯಾನ I ನೀನೆನ್ನ ಪ್ರಭು, ನನಗೆ ಉದ್ಧಾರಕ, ನನಗಾಶ್ರಯಧಾಮ II