ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
146ನೇ ಅಧ್ಯಾಯ
- Verse 1: ಪ್ರಭುವಿಗೆ ಸ್ತುತಿಸ್ತೋತ್ರ ಅಲ್ಲೆಲೂಯ I ಮನವೇ, ವಂದಿಸು ಆತನನು ಅಲ್ಲೆಲೂಯ II
- Verse 2: ಪ್ರಾಣವಿರುವವರೆಗೆ ಸ್ತುತಿಸುವೆನು ಪ್ರಭುವನು I ಬಾಳೆಲ್ಲ ಹಾಡಿ ಭಜಿಪೆನು ನನ್ನ ದೇವರನು II
- Verse 3: ನಂಬಬೇಡ ಅಧಿಕಾರಿಯನು I ನೆಚ್ಚಬೇಡ ನರಮಾನವನನು I ಉದ್ಧರಿಸಲು ಅಸಮರ್ಥನವನು II
- Verse 4: ಉಸಿರುಹೋದುದೇ ಮರಳುತ್ತಾನವನು ಮಣ್ಣಿಗೆ I ಅಂದೇ ಅಳಿಯುತ್ತದೆ ಅವನೆಲ್ಲಾ ಯೋಜನೆ II
- Verse 5: ಇಸ್ರಯೇಲ ಕುಲದೇವರು ಯಾರಿಗೆ ಉದ್ಧಾರಕನೋ, ಅವನೇ ಧನ್ಯನು I ಪ್ರಭುವನು ತನ್ನ ದೇವರೆಂದು ಯಾರು ನಂಬಿಹನೋ, ಅವನೇ ಧನ್ಯನು II
- Verse 6: ಭೂಮ್ಯಾಕಾಶ, ಸಾಗರ, ಚರಾಚರಗಳನು ನಿರ್ಮಿಸಿದವ ಆತನೆ I ಕೊಟ್ಟ ವಾಗ್ದಾನಗಳನು ತಪ್ಪದೆ ನೆರವೇರಿಸುವವ ಆತನೆ II
- Verse 7: ದೊರಕಿಸುವನು ನ್ಯಾಯ ದಲಿತರಿಗೆ I ಒದಗಿಸುವನು ಆಹಾರ ಹಸಿದವರಿಗೆ I ನೀಡುವನು ಬಿಡುಗಡೆ ಬಂಧಿತರಿಗೆ II
- Verse 8: ಕಣ್ಣನ್ನೀಯುವನು ಪ್ರಭು ಕುರುಡರಿಗೆ I ಉದ್ಧಾರಕನಾ ಪ್ರಭು ಕುಗ್ಗಿದವರಿಗೆ I ಆತನ ಒಲವಿರುವುದು ಸಾಧು ಸಜ್ಜನರಿಗೆ II
- Verse 9: ರಕ್ಷಿಸುವನು ಪ್ರಭು ಪರದೇಶಿಗಳನು I ಆದರಿಸುವನು ಅನಾಥರನು, ವಿಧವೆಯರನು I ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು II
- Verse 10: ಪ್ರಭುವೇ ಅರಸನು ಸದಾಕಾಲಕು I ಸಿಯೋನ್, ನಿನ್ನ ದೇವನಾಳ್ವನು ತಲತಲಾಂತರಕು I ಅಲ್ಲೆಲೂಯ! II