పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
39ನೇ ಅಧ್ಯಾಯ
1 : ನಾ ಇಂತೆಂದುಕೊಂಡೆ : “ಜಾಗರೂಕನಾಗಿರುವೆ ಜಿಹ್ವೆ ಪಾಪಕ್ಕೆಳೆಯದಂತೆ I ಬಾಯಿಗೆ ಕುಕ್ಕೆ ಹಾಕಿಕೊಂಡಿರುವೆ ದುರ್ಜನರ ಮುಂದೆ” II
2 : ಮೌನವಿದ್ದೆ, ಸನ್ನುಡಿಯದೆಯೂ ಸುಮ್ಮನಿದ್ದೆ I ಉಲ್ಬಣಿಸುತ್ತಿತ್ತು ವೇದನೆಯು ಎಡೆಬಿಡದೆ II
3 : ಎದೆಯ ತಾಪ ಹೆಚ್ಚಿತು, ಚಿಂತೆ ಕಾವೇರಿತು I ಆಗತಾನೆ ಬಾಯ್ತೆರೆದೆ ನಾನಿಂತೆಂದು: II
4 : “ನನ್ನ ಜೀವಾಯುಸ್ಸು ಎನಿತು? ನನ್ನ ಬಾಳಿನ ಮುಗಿವೆಂದು? I ತಿಳಿಯಪಡಿಸು ನನಗೆ ಪ್ರಭು, ನಾನು ಬಲು ಅಸ್ಥಿರನೆಂದು” II
5 : ನನ್ನಾಯುಸ್ಸು ಗೇಣುದ್ದ, ನಿನ್ನೆಣಿಕೆಗದು ಶೂನ್ಯ I ಮಾನವ ಜೀವನ ಕೇವಲ ಉಸಿರಿಗೆ ಸರಿಸಮಾನ! II
6 : ನರಮಾನವನು ಮೆರೆದಾಡುವನು ಮಾಯೆಯಂತೆ I ಅವನ ಸಡಗರವೆಲ್ಲವೂ ನಿರರ್ಥಕದಂತೆ I ಕೂಡಿಪನಾತ ಸಿರಿ ಅದು ಯಾರದಾಗುವುದೆಂದು ಅರಿಯದೆ II
7 : ಇಂತಿರಲು ಪ್ರಭು, ನಾನೇತಕೆ ಕಾದಿರಬೇಕು? I ನೀನೆ ಅಲ್ಲವೆ ನನಗೆ ನಂಬಿಕೆ, ಇದು ಸಾಕು II
8 : ಮುಕ್ತಗೊಳಿಸೆನ್ನ ಪ್ರಭು, ಎಲ್ಲಪರಾಧಗಳಿಂದ I ಕಾದಿರಿಸೆನ್ನನು ಮೂರ್ಖರ ತಿರಸ್ಕಾರದಿಂದ II
9 : ಮೌನದಿಂದಿರುವೆ, ಬಾಯ್ದೆರೆಯದಿರುವೆ I ನನಗೊದಗಿರುವುದು ನಿನ್ನಿಂದಲ್ಲವೆ? II
10 : ಸಾಕು ಮಾಡು ನಿನ್ನ ಕೈ ಹೊಡೆತವನು I ಅದರಿಂದ ನಾ ಸಾಯುತ್ತಿರುವೆನು II
11 : ಪಾಪದ ಪ್ರಯುಕ್ತ ಮಾನವನು ಶಿಕ್ಷಿಸುವಾಗ I ನುಸಿಹತ್ತಿದಂತೆ ನಾಶಪಡಿಸುವೆ ಅವನಾಸ್ಥೆಯನಾಗ I ಮಾನವ ಜೀವನ ಕೇವಲ ಉಸಿರಿಗೆ ಸರಿಸಮಾನ II
12 : ನನ್ನ ಮೊರೆಯ ಕೇಳು, ಪ್ರಾರ್ಥನೆಯನಾಲಿಸು I ಸುಮ್ಮನಿರದೆ ನನ್ನ ಕಂಬನಿಯನೀಕ್ಷಿಸು II ಹೇ ಪ್ರಭು, ನಾನಿನ್ನ ಆಗಂತುಕನಯ್ಯಾ I ಪೂರ್ವಜರಂತೆ ನಾ ಪರದೇಶಿಯಯ್ಯಾ II
13 : ನಾ ಕಾಲವಾಗಿ ಕಣ್ಮರೆಯಾಗುವೆ ಇಲ್ಲಿಂದ I ಆ ಮುನ್ನ ಹೊರಳಿಸು ಕೋಪದೃಷ್ಟಿಯನು ನನ್ನಿಂದ I ನಾ ಬಾಳುವಂತೆ ಮಾಡು ಪ್ರಭು, ಸಂತಸದಿಂದ II