P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
60ನೇ ಅಧ್ಯಾಯ
1 : ಕೈಬಿಟ್ಟೆ ದೇವಾ, ನಮ್ಮನು ಕೈಬಿಟ್ಟೆ I ಕೋಪದಿಂದೆಮ್ಮನು ತಳ್ಳಿ ಕೆಡವಿಬಿಟ್ಟೆ I ಉದ್ಧಾರವಾಗ್ವೆವು ನೀ ಮರಳಿ ಬೆಂಗೊಡೆ II
2 : ನಾಡನು ನಡುಗಿಸಿ ಬಿಡಿಬಿಡಿಯಾಗಿಸಿದೆ I ಅದರೊಡಕನು ಸರಿಮಾಡು ತಡವರಿಸದೆ II
3 : ನಿನ್ನ ಜನರನು ಗುರಿಪಡಿಸಿದೆ ಸಂಕಟಕೆ I ಭ್ರಮಣಗೊಳಿಪ ಮದ್ಯವ ಕುಡಿಸಿದೆ ನಮಗೆ II
4 : ಪರಾಜಯ ಪತಾಕೆಯ ಹರಿಸಿದೆ ನಿನಗಂಜಿ ನಡೆದವರಿಗೆ I ಅವರು ಹೆದರಿ ಓಡುವಂತೆ ಮಾಡಿದೆ ಬಿಲ್ಲು ಬಾಣಗಳಿಗೆ II
5 : ನಿನಗೆ ಪ್ರಿಯರಾದ ನಮ್ಮ ಮೊರೆಯನಾಲಿಸು I ನಿನ್ನ ಭುಜಬಲದಿಂದ ನಮ್ಮನು ಜಯಗೊಳಿಸು II
6 : ಗರ್ಭಗುಡಿಯಿಂದಲೇ ದೇವನಿಂತೆಂದನು; “ಜಯಶೀಲ ನಾನು, ಹಂಚುವೆನು ಶೆಖೆಮನು I ಅಳೆದು ಕೊಡುವೆನು ಸುಖೋತೆಂಬ ಬಯಲನು II
7 : ಗಿಲ್ಯಾದ ಸೀಮೆ, ಮನಸ್ಸೆ ನಾಡು ನನ್ನವೆ I ಎಫ್ರಯಿಮ್ ಗೋತ್ರವು ಶಿರಸ್ತ್ರಾಣವು ನನಗೆ I ಜೂದ ಕುಲವು ರಾಜದಂಡವು ನನ್ನ ಕೈಗೆ II
8 : ಮೋವಾಬ್ ಪ್ರಾಂತ್ಯವು ನನ್ನ ಸ್ನಾನ ಪಾತ್ರೆಯು I ಎದೋಮ್ ಪ್ರಾಂತ್ಯವು ನನ್ನ ಕೆರಗಳಿಗೆ ಎಡೆಯು I ನನ್ನ ಗೆಲ್ವೆನೆಂದಿತೆ ಫಿಲಿಷ್ಟಿಯ ಪ್ರಾಂತ್ಯವು!” II
9 : ಕೋಟೆಯ ನಗರಕೆ ನನ್ನನು ಕರೆದೊಯ್ಯುವರಾರು? I ಎದೋಮ್ ಪ್ರಾಂತ್ಯಕೆ ನನ್ನ ಕೊಂಡೊಯ್ಯುವವರಾರು? II
10 : ದೇವಾ ನೀ, ನಮ್ಮನು ಕೈ ಬಿಟ್ಟಿರುವುದು ಸರಿಯೋ? I ನಮ್ಮ ಸೈನ್ಯ ಸಮೇತ ನೀ ಬರದೆಹೋದೆಯೋ? II
11 : ಶತ್ರು ವಿರುದ್ಧ ಸಹಾಯಮಾಡಯ್ಯಾ I ಮಾನವ ನೆರವು ನಮಗೆ ವ್ಯರ್ಥವಯ್ಯಾ II
12 : ನಮ್ಮ ಪರ ದೇವನಿರಲು ಹೆಣಗುವೆವು ಶೂರರಾಗಿ I ವೈರಿಗಳನು ತುಳಿದುಬಿಡುವನಾತ ಖರೆಯಾಗಿ II