पवित्र बाइबिल
ಹೊಸ ಒಡಂಬಡಿಕೆ
ಹಿಬ್ರಿಯರಿಗೆ
3ನೇ ಅಧ್ಯಾಯ
- Verse 1: ಹೀಗಿರುವಲ್ಲಿ ದೇವಜನರಾದ ಸಹೋದರರೇ, ಸ್ವರ್ಗಸೌಭಾಗ್ಯದಲ್ಲಿ ಸಹಭಾಗಿಗಳಾಗಲು ಕರೆ ಹೊಂದಿದವರೇ, ದೇವರು ಕಳುಹಿಸಿದಂಥವರು ಹಾಗೂ ನಾವು ವಿಶ್ವಾಸಿಸುವ ಧರ್ಮದ ಪ್ರಧಾನಯಾಜಕರು ಆದ ಯೇಸುವನ್ನು ಭಕ್ತಿಯಿಂದ ಧ್ಯಾನಿಸಿರಿ.
- Verse 2: ದೇವಮಂದಿರ ಸೇವೆಯಲ್ಲಿ ಮೋಶೆ ಪ್ರಾಮಾಣಿಕನಾಗಿದ್ದಂತೆಯೇ ಯೇಸುಸ್ವಾಮಿ ತಮ್ಮನ್ನು ನೇಮಿಸಿದವರಿಗೆ ಪ್ರಾಮಾಣಿಕರಾಗಿದ್ದರು.
- Verse 3: ಆದರೆ, ಮನೆಕಟ್ಟುವವನು ಮನೆಗಿಂತ ಹೆಚ್ಚಿನ ಮಾನ್ಯತೆ ಉಳ್ಳವನಾಗಿರುವಂತೆ ಯೇಸು, ಮೋಶೆಗಿಂತಲೂ ಹೆಚ್ಚಿನ ಗೌರವಕ್ಕೆ ಪಾತ್ರರು.
- Verse 4: ಪ್ರತಿಯೊಂದು ಮನೆಗೂ ಕಟ್ಟಿದವನೊಬ್ಬನು ಇರುತ್ತಾನೆ; ಸಮಸ್ತವನ್ನು ಕಟ್ಟಿದವರಾದರೋ ದೇವರೇ.
- Verse 5: ಮೋಶೆ ದೇವರ ಮನೆಗೆಲ್ಲಾ ಪ್ರಾಮಾಣಿಕ ದಾಸನಾಗಿದ್ದನು; ಮುಂದೆ ಪ್ರಕಟವಾಗಬೇಕಿದ್ದ ಸಂಗತಿಗಳಿಗೆ ಸಾಕ್ಷಿಯಾಗಿದ್ದನು.
- Verse 6: ಕ್ರಿಸ್ತಯೇಸುವಾದರೋ, ದೇವರ ಮನೆಯಲ್ಲಿ ಅಧಿಕಾರ ಹೊಂದಿದ ಪ್ರಾಮಾಣಿಕ ಪುತ್ರನಾಗಿದ್ದಾರೆ. ನಾವು ನಿರೀಕ್ಷಿಸುತ್ತಿರುವ ಭಾಗ್ಯದ ಬಗ್ಗೆ ನಮಗಿರುವ ಶ್ರದ್ಧೆಯನ್ನೂ ಶೌರ್ಯವನ್ನೂ ಕಳೆದುಕೊಳ್ಳದೆ ದೃಢವಾಗಿದ್ದರೆ, ನಾವೇ ಅವರ ಮನೆಯಾಗಿರುತ್ತೇವೆ.
- Verse 7: ಆದಕಾರಣ ಪವಿತ್ರಾತ್ಮ ಹೇಳುವ ಪ್ರಕಾರ: “ದೇವರ ದನಿಯನು ಕೇಳುವಿರಾದರೆ ನೀವಿಂದು ನಿಮ್ಮ ಪೂರ್ವಜರಂತೆ ಕಲ್ಲಾಗಿಸದಿರಿ ಹೃದಯವನು.
- Verse 8: ಮರುಭೂಮಿಯಲ್ಲವರು ದೇವರನು ಪರೀಕ್ಷಿಸಿದರು ಆತನ ವಿರುದ್ಧ ಅಲ್ಲೇ ದಂಗೆ ಎದ್ದರು.
- Verse 9: ಎಂದೇ ದೇವರಿಂತೆಂದರು: ಮರುಭೂಮಿಯಲಿ ಅವರೆನ್ನನು ಕೆಣಕಿದರು; ನಲವತ್ತು ವರುಷ ನಾನೆಸಗಿದ ಮಹತ್ಕಾರ್ಯಗಳನು ಕಂಡರಾದರೂ ಎನ್ನ ಕೆಣಕಿ ಪರೀಕ್ಷಿಸಿದರು.
- Verse 10: ಎಂತಲೇ ಆ ಜನರ ವಿರುದ್ಧ ಕೆರಳಿ ಇಂತೆಂದನು: ಹಾದಿ ತಪ್ಪಿದ ಹೃದಯಿಗಳು ಇವರೆಂದಿಗೂ, ಗ್ರಹಿಸಿಕೊಳ್ಳರಿವರು ಎನ್ನ ಮಾರ್ಗವನು
- Verse 11: ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ ಎಂದು ಸಿಟ್ಟುಗೊಂಡು ಶಪಥ ಮಾಡಿದೆನು.”
- Verse 12: ಸಹೋದರರೇ, ಜೀವಸ್ವರೂಪರಾದ ದೇವರನ್ನು ಬಿಟ್ಟಗಲುವ ಕೆಟ್ಟಬುದ್ಧಿಯೂ ಅವಿಶ್ವಾಸವೂ ನಿಮ್ಮಲ್ಲಿ ಯಾರಿಗೂ ಇರದಂತೆ ಎಚ್ಚರಿಕೆಯಾಗಿರಿ.
- Verse 13: ನಿಮ್ಮಲ್ಲಿ ಯಾರೂ ಪಾಪದಿಂದ ಮೋಸಹೋಗಿ ಕಠಿಣರಾಗದಂತೆ “ಇಂದು” ಎನ್ನುವ ಕಾಲವು ಇರುವ ತನಕ ಪ್ರತಿನಿತ್ಯವು ಒಬ್ಬರನ್ನೊಬ್ಬರು ಎಚ್ಚರಿಸಿರಿ.
- Verse 14: ನಾವೆಲ್ಲರೂ ಕ್ರಿಸ್ತಯೇಸುವಿನೊಡನೆ ಸಹಬಾಧ್ಯರು; ಆದರೆ, ಪ್ರಾರಂಭದಲ್ಲಿ ನಮಗಿದ್ದ ನಂಬಿಕೆ-ನಿರೀಕ್ಷೆಯನ್ನು ಕೊನೆಯವರೆಗೂ ಸ್ಥಿರವಾಗಿ ಇರಿಸಿಕೊಳ್ಳಬೇಕು.
- Verse 15: “ದೇವರ ದನಿಯನು ಕೇಳುವಿರಾದರೆ ನೀವಿಂದು ನಿಮ್ಮ ಪೂರ್ವಜರಂತೆ ಕಲ್ಲಾಗಿಸದಿರಿ ಹೃದಯವನು ಮರುಭೂಮಿಯಲಿ ದೇವರ ವಿರುದ್ಧ ದಂಗೆಯೆದ್ದವರವರು.”
- Verse 16: ಇಲ್ಲಿ, ದೇವರ ದನಿಯನು ಕೇಳಿಯೂ ದಂಗೆ ಎದ್ದವರು ಯಾರು? ಮೋಶೆಯ ಮುಂದಾಳತ್ವದಲ್ಲಿ ಈಜಿಪ್ಟ್ ದೇಶವನ್ನು ಬಿಟ್ಟುಬಂದ ಎಲ್ಲರೂ ಅಲ್ಲವೇ?
- Verse 17: ನಲವತ್ತು ವರ್ಷಗಳು ದೇವರು ಸಿಟ್ಟುಗೊಂಡದ್ದು ಯಾರ ಮೇಲೆ? ಪಾಪಮಾಡಿದವರ ಮೇಲಲ್ಲವೇ? ಅವರ ಶವಗಳು ಬಿದ್ದುದು ಮರುಭೂಮಿಯಲ್ಲಲ್ಲವೇ?
- Verse 18: “ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ” ಎಂದು ಯಾರನ್ನು ಕುರಿತು ಶಪಥ ಮಾಡಿದರು? ತಮಗೆ ಅವಿಧೇಯರಾದ ಜನರನ್ನು ಕುರಿತಲ್ಲವೇ?
- Verse 19: ಆ ವಿಶ್ರಾಂತಿಯ ನೆಲೆಯನ್ನು ಅವರು ಸೇರದೆಹೋದದ್ದು ತಮ್ಮ ಅವಿಶ್ವಾಸದಿಂದಲೇ ಎಂಬುದು ನಮಗೆ ಸ್ಪಷ್ಟವಾಗುತ್ತದೆ.