P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
66ನೇ ಅಧ್ಯಾಯ
1 : ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ I
2 : ಹಾಡಲಿ ಆತನ ಶ್ರೀನಾಮ ಮಹಿಮೆಗೆ II
3 : “ನಿನ್ನ ಕಾರ್ಯಗಳೆನಿತೋ ಚೇತೋಹಾರಿ I ನಿನ್ನ ಪರಾಕ್ರಮಕೆ ಶತ್ರುಗಳು ಪರಾರಿ II
4 : ಜಗವೆಲ್ಲ ಪೂಜಿಪುದು ನಿನ್ನನು I ಪೊಗಳಿ ಮಾಳ್ಪುದು ಗುಣಗಾನವನು I ಕೀರ್ತಿಸುವುದು ನಿನ್ನ ನಾಮವನು” II
5 : ಬನ್ನಿ, ದೇವನತಿಶಯ ಕಾರ್ಯಗಳ ನೋಡಬನ್ನಿ I ಜನತೆಗಾತ ಮಾಡಿದುದು ಅತ್ಯಾಶ್ಚರ್ಯವೆನ್ನಿ II
6 : ಒಣನೆಲವಾಗಿ ಮಾರ್ಪಡಿಸಿದ ಕಡಲನು I ಕಾಲು ನಡೆಯಲೇ ದಾಟಿಸಿದ ನದಿಯನು I ಇದ ನಿಮಿತ್ತ ಪಡೆಯೋಣ ಆನಂದವನು II
7 : ಆತನಾಳ್ವಿಕೆ ಶಕ್ತಿಯುತ, ನಿರಂತರ I ರಾಷ್ಟ್ರಗಳ ಮೇಲೆ ಅವನ ನೇತ್ರ ಕನಿಕರ I ಜಂಬ ಕೊಚ್ಚದಿರಲಿ ದಂಗೆಕೋರ II
8 : ಜನಾಂಗಗಳೇ, ನಮಿಸಿರಿ ನಮ್ಮ ದೇವನನು I ಗಟ್ಟಿಯಾಗಿ ಮಾಡಿರಿ ಅವನ ಗುಣಗಾನವನು II
9 : ನಮ್ಮ ಪ್ರಾಣವನ್ನಾತ ಉಳಿಸಿದನಯ್ಯಾ I ಕಾಲೆಡವದಂತೆ ಕಾಪಾಡಿದನಯ್ಯಾ II
10 : ಹೇ ದೇವಾ, ನೀ ನಮ್ಮನ್ನು ಪರಿಶೋಧಿಸಿದೆ I ಪುಟಕ್ಕಿಟ್ಟ ಚಿನ್ನದಂತೆ ಶುದ್ಧೀಕರಿಸಿದೆ II
11 : ಉರುಲು ಬಲೆಗೆ ನಮ್ಮನು ಸಿಕ್ಕಿಸಿದೆ I ಭಾರಿ ಹೊರೆಯನು ಬೆನ್ನಿಗೆ ಹೊರಿಸಿದೆ II
12 : ಶತ್ರುಗಳೆಮ್ಮ ತಲೆಮೇಲೆ ರಥವನೋಡಗೊಳಿಸಿದೆ I ಅಗ್ನಿಯನೂ ಜಲವನೂ ದಾಟುವಂತೆ ಮಾಡಿದೆ I ಕೊನೆಗೆ ಸಮೃದ್ಧ ನಾಡಿಗೆಮ್ಮನು ಸೇರಿಸಿದೆ II
13 : ದಹನ ಬಲಿಯನರ್ಪಿಸೆ ದೇಗುಲಕೆ ಧಾವಿಸುವೆ I ನಿನಗೆ ನಾ ಹೊತ್ತ ಹರಕೆಗಳನ್ನು ತೀರಿಸುವೆ II
14 : ಪೂರೈಸುವೆನು ಬಾಯಾರೆ ಮಾಡಿದ ಹರಕೆಯನು I ಸಂಕಟಕಾಲದಲಿ ನಾ ಮಾಡಿದ ವ್ರತವನು II
15 : ಕೊಬ್ಬಿದ ಪ್ರಾಣಿಗಳನರ್ಪಿಸುವೆನು ಯಜ್ಞವಾಗಿ I ಹೋತಹೋರಿಗಳ ಕೊಡುವೆನು ನಿನಗೆ ಕಾಣಿಕೆಯಾಗಿ I ಟಗರುಗಳ ಬಲಿಧೂಪವೆತ್ತುವೆನು ಆರತಿಯಾಗಿ II
16 : ಬಂದು ಕೇಳಿರಿ ದೇವನಲಿ ಭಯಭಕ್ತಿಯುಳ್ಳವರೆ I ದೇವನೆನಗೆ ಮಾಡಿದ ಕಾರ್ಯಗಳ ತಿಳಿಸುವೆ ನಿಮಗೆ II
17 : ದೇವನಿಗೆನ್ನ ಮನ ಸ್ವರವೆತ್ತಿ ಮೊರೆಯಿಟ್ಟಿತು I ಆತನ ಸ್ತುತಿ ನನ್ನ ಬಾಯಲಿ ತುಳುಕುತ್ತಿತ್ತು II
18 : ಕೆಟ್ಟತನವನು ನಾ ಮನದಲ್ಲಿಟ್ಟಿದ್ದರೆ I ಮುಟ್ಟುವಂತಿರಲಿಲ್ಲ ಆತನಿಗೆ ಎನ್ನ ಮೊರೆ II
19 : ಆದರೆನ್ನ ಮೊರೆಯು ದೇವನನು ಮುಟ್ಟಿರುವುದು ನಿಜ I ಎನ್ನ ಪ್ರಾರ್ಥನೆಗಾತ ಕಿವಿಗೊಟ್ಟಿರುವುದು ಸಹಜ II
20 : ಎನ್ನ ಪ್ರಾರ್ಥನೆಯನು ತಿರಸ್ಕರಿಸದ ದೇವನಿಗೆ ಸ್ತುತಿ I ತನ್ನ ಪ್ರೀತಿಯನೆನಗೆ ನಿರಾಕರಿಸದಾತನಿಗೆ ಸನ್ನುತಿ II