P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
95ನೇ ಅಧ್ಯಾಯ
1 : ಬನ್ನಿ, ಸ್ತುತಿಗೀತೆ ಹಾಡೋಣ ಬನ್ನಿ, ಪ್ರಭುವಿಗೆ I ಜಯಘೋಷ ಮಾಡೋಣ ನಮ್ಮ ರಕ್ಷಕ ದೇವನಿಗೆ II
2 : ಆತನ ಸನ್ನಿಧಿ ಸೇರೋಣ ಕೃತಜ್ಞತಾಸ್ತುತಿಯೊಂದಿಗೆ I ಜಯಜಯಕಾರ ಮಾಡೋಣ ಕೀರ್ತನೆಗಳಿಂದಾತನಿಗೆ II
3 : ಏಕೆಂದರೆ ಪ್ರಭು ದೇವಾಧಿದೇವನು I ದೇವರುಗಳಲೆಲ್ಲ ರಾಜಾಧಿರಾಜನು II
4 : ಆತನ ಕೈಯಲ್ಲಿವೆ ಬುವಿಯಂತರಾಳಗಳು I ಆತನವೇ ಪರ್ವತಗಳಾ ತುತ್ತತುದಿಗಳು II
5 : ಸಮುದ್ರವು ಆತನದೆ-ಅದ ನಿರ್ಮಿಸಿದವ ಆತನೆ I ಒಣನೆಲವು ಆತನದೆ-ಅದ ರೂಪಿಸಿದವ ಆತನೆ II
6 : ಬನ್ನಿ ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ I ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ II
7 : ಆತನೆಮ್ಮ ದೇವರು, ನಾವು ಆತನ ಕೈಮಂದೆ I ಆತನಿಂದಲೇ ಪಾಲನೆಪೋಷಣೆ ಪಡೆದ ಜನತೆ II
8 : ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ I ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ I ಮೆರಿಬಾದಲಿ, ಮಸ್ಸಾ ಮರುಭೂಮಿಯಲಿ ಅವರು ಮಾಡಿದಂತೆ II
9 : ನೋಡಿದರಾದರೂ ನನ್ನ ಮಹತ್ಕಾರ್ಯಗಳನು I ಅಲ್ಲವರು ಕೆಣಕಿದರು, ಪರಿಶೋಧಿಸಿದರು ನನ್ನನು II
10 : ನಲವತ್ತು ವರುಷ ಆ ಪೀಳಿಗೆಯ ಬಗ್ಗೆ ನಾ ಬೇಸರಗೊಂಡೆ I ‘ತಪ್ಪುಮನಸ್ಕರು ಇವರು, ನನ್ನ ಮಾರ್ಗವನು ಮೆಚ್ಚರಿವರು’ ಎಂದುಕೊಂಡೆ II
11 : ಎಂತಲೆ ಸೇರರಿವರು ನನ್ನ ವಿಶ್ರಾಂತಿ ನೆಲೆ I ಎಂದು ಸಿಟ್ಟಿನಿಂದ ಕೆರಳಿ ನಾ ಶಪಥಮಾಡಿದೆ II