पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
104ನೇ ಅಧ್ಯಾಯ
1 : ಭಜಿಸು ನನ್ನ ಮನವೇ, ಭಜಿಸು, ಪ್ರಭುವನು I ಪ್ರಭು, ನನ್ನ ದೇವಾ, ನೀ ಸರ್ವೋತ್ತಮನು I ಮಹಿಮೆ ಪ್ರತಾಪಗಳಿಂದ ಭೂಷಿತನು II
2 : ತೊಟ್ಟುಕೊಂಡಿರುವೆ ಬೆಳಕನೇ ಬಟ್ಟೆಯಂತೆ I ಹರಡಿಸಿರುವೆ ಆಗಸವನು ಗುಡಾರದಂತೆ II
3 : ನಿರ್ಮಿಸಿರುವೆ ನಿನ್ನ ಭವನವನು ಜಲದ ಮೇಲೆ I ಮಾಡುವೆ ಸಂಚಾರ ಮಾರುತನ ರೆಕ್ಕೆಗಳ ಮೇಲೆ I ನಿನಗೆ ರಥವಾಹನಗಳು ಆ ಮುಗಿಲು ಮೋಡಗಳೇ II
4 : ಗಾಳಿಗಳೇ ನಿನಗೆ ದೂತರುಗಳು I ಅಗ್ನಿಜ್ಞಾಲೆಗಳೇ ಆಳುಗಳು II
5 : ಬುವಿಯನು ತಳಹದಿಯ ಮೇಲೆ ಸ್ಥಾಪಿಸಿರುವೆ I ಅದೆಂದಿಗೂ ಕದಲದಂತೆ ಮಾಡಿರುವೆ II
6 : ಅದಕ್ಕೆ ಹೊದಿಸಿರುವೆ ಸಾಗರವೆಂಬ ವಸ್ತ್ರವನು I ಆ ಜಲರಾಶಿಗಳು ಮುಳುಗಿಸಿವೆ ಬೆಟ್ಟಗಳನು II
7 : ತಲೆದೋರಿತು ಜಲ ನಿನ್ನ ಗದರಿಕೆಗೆ I ಹೆದರಿ ಹಿಂಜರಿಯಿತು ನಿನ್ನ ಗರ್ಜನೆಗೆ II
8 : ತಲೆದೋರಿದವು ಬೆಟ್ಟಗುಡ್ಡಗಳು I ತುಂಬಿಕೊಂಡವು ಹಳ್ಳಕೊಳ್ಳಗಳು I ಅವೇ ನೀ ನೇಮಿಸಿದ ಸ್ಥಳಗಳು II
9 : ಗೊತ್ತುಮಾಡಿರುವೆ ಆ ಜಲರಾಶಿಗೆ ಮೇರೆಯನು I ಅವು ಮತ್ತೆ ಮುಚ್ಚದಂತೆ ಮಾಡಿರುವೆ ಭೂಮಿಯನು II
10 : ಬುಗ್ಗೆಗಳು ಚಿಮ್ಮಿ ಓಡಮಾಡುವೆ ತಗ್ಗುಗಳಲಿ I ನದಿಗಳ ಹರಿಯಮಾಡುವೆ ಗುಡ್ಡಗಳ ನಡುವೆಯಲಿ II
11 : ನೀರ ನೀಡುವವು ಕುಡಿಯಲಿಕ್ಕೆ ಕಾಡುಮೃಗಗಳಿಗೆ I ದಾಹ ನೀಗಿಸಿಕೊಳ್ಳಲು ಆ ಕಾಡುಕತ್ತೆಗಳಿಗೆ II
12 : ಅವುಗಳ ಅರುಗಲ್ಲೇ ಇವೆ ಹಕ್ಕಿಗಳ ಗೂಡುಗಳು I ಕೇಳುತಿವೆ ಕೊಂಬೆಗಳಿಂದಾ ಪಕ್ಷಿಗಳ ಕಲರವಗಳು II
13 : ಮಲೆಗಳ ಮೇಲೆ ಮಳೆಗರೆಯುವೆ ಗಗನದಿಂದ I ತೃಪ್ತಿಗೊಂಡಿದೆ ಪೃಥ್ವಿಯು ನಿನ್ನ ಕೃಪೆಗಳಿಂದ II
14 : ಮೊಳೆಸುವೆ ಹುಲ್ಲನ್ನು ದನಕರುಗಳಿಗೋಸ್ಕರ I ಬೆಳೆಸುವೆ ಪೈರನು ನರಮಾನವರಿಗೋಸ್ಕರ II
15 : ಒದಗಿಸುವೆ ಬೇಸಾಯದ ಆಹಾರವನು I ಹೃದಯವನು ಮುದಗೊಳಿಸುವ ದ್ರಾಕ್ಷಾರಸವನು I ಮುಖಕೆ ಮೆರಗನ್ನೀಯುವ ತಿಳಿತೈಲಗಳನು I ದೇಹವನು ಗಟ್ಟಿಮುಟ್ಟಾಗಿಸುವ ರೊಟ್ಟಿಯನು II
16 : ಜಲವಿದೆ ಲೆಬನೋನಿನ ದೇವದಾರು ವೃಕ್ಷಗಳಿಗೆ I ನೀರು ಬೇಕಾದಷ್ಟಿದೆ ಪ್ರಭು ನೆಟ್ಟ ಮರಗಳಿಗೆ II
17 : ಗೂಡುಕಟ್ಟಿಕೊಳ್ಳುವುವು ಹಕ್ಕಿಗಳಾ ಮರಗಳಲಿ I ವಾಸಮಾಡುವುವು ಕೊಕ್ಕರೆಗಳು ತುರಾಯಿಮರಗಳಲಿ II
18 : ಬೆಟ್ಟಗುಡ್ಡಗಳಿವೆ ಕಾಡುಕುರಿಗಳಿಗೆ I ಬಂಡೆಬಿರುಕುಗಳಿವೆ ಬೆಟ್ಟದ ಮೊಲಗಳಿಗೆ II
19 : ಋತು ಸೂಚನೆಗಾಗಿ ನೀ ನಿರ್ಮಿಸಿದೆ ಚಂದ್ರನನು I ಸೂರ್ಯ ಬಲ್ಲನು ತನ್ನಸ್ತಮಾನದ ವೇಳೆಯನು II
20 : ರಾತ್ರಿಯಾಗುತ್ತದೆ ನೀ ಕತ್ತಲನು ಬರಮಾಡಲು I ತಿರುಗಾಡುತ್ತವೆ ಆಗ ಕಾಡಿನ ಜೀವಜಂತುಗಳು II
21 : ಗರ್ಜಿಸುತ್ತವೆ ಪ್ರಾಯಸಿಂಹಗಳು ಬೇಟೆಗಾಗಿ I ದೇವರನ್ನು ಎದುರು ನೋಡುತ್ತವೆ ಆಹಾರಕ್ಕಾಗಿ II
22 : ಮರಳುತ್ತವೆ ಸೂರ್ಯೋದಯವಾಗಲು I ತಂತಮ್ಮ ಗವಿಗುಹೆಗಳಲಿ ಮಲಗಲು II
23 : ಹೊರಡುತ್ತಾನಾಗ ಮಾನವ ಕೆಲಸಕೆ I ದುಡಿಯುತ್ತಾನೆ ಸಾಯಂಕಾಲದವರೆಗೆ II
24 : ಸೃಜಿಸಿರುವೆ ಎಲ್ಲವನು ಸುಜ್ಞಾನದಿಂದ I ಜಗವೆಲ್ಲ ತುಂಬಿದೆ ನಿನ್ನ ಸೃಷ್ಟಿಯಿಂದ II
25 : ಸಮುದ್ರವಿದೊ ಎಷ್ಟು ಅಪಾರ, ಅದೆಷ್ಟು ವಿಶಾಲ I ಅದರಲ್ಲಿರುವ ಸಣ್ಣ-ದೊಡ್ಡ ಜೀವಿಗಳಿಗೆ ಲೆಕ್ಕವಿಲ್ಲ II
26 : ಓಡಾಡುತ್ತವದರೊಳು ಹಡಗುಗಳು I ನೀನುಂಟುಮಾಡಿದ ತಿಮಿಂಗಿಲಗಳು II
27 : ಸಕಾಲದಲೊದಗಿಸುವೆ ಆಹಾರವನು I ನಂಬಿಕೊಂಡಿವೆ ಆ ಜೀವಿಗಳು ನಿನ್ನನು II
28 : ನೀ ನೀಡಲು ಕೂಡಿಸಿಟ್ಟುಕೊಳ್ಳುವುವು I ನೀ ಕೈತೆರೆಯಲು ಸಂತೃಪ್ತಿಪಡುವುವು II
29 : ತಲ್ಲಣಗೊಳ್ಳುವುವು ನೀ ಮುಖ ಮರೆಮಾಡಿಕೊಳ್ಳಲು I ಮಣ್ಣುಪಾಲಾಗುವುವು ನೀನವುಗಳ ಉಸಿರನಡಗಿಸಲು II
30 : ನೀ ಉಸಿರನ್ನೂದಲು ಹೊಸದಾಗುವುವು I ಪುನಶ್ಚೇತನಗೊಳ್ಳುವುದು ಜಗವೆಲ್ಲವು II
31 : ಸ್ವಾಮಿದೇವನ ಮಹಿಮೆಯಿರಲಿ ಶಾಶ್ವತವಾಗಿ I ಆತ ಸಂತೋಷಿಸಲಿ ತನ್ನ ಸುಕೃತ್ಯಗಳಿಗಾಗಿ II
32 : ನಡುಗುತ್ತದೆ ಭೂಮಂಡಲ ಆತನ ಕೃತ್ಯಕೆ I ಹೊಗೆಕಾರುತ್ತದೆ ಪರ್ವತ ಆತನ ಸ್ಪರ್ಶಕೆ II
33 : ಪ್ರಭುವನು ನಾ ಹೊಗಳಿ ಹಾಡುವೆನು ಬಾಳಿನೊಳೆಲ್ಲ I ನನ್ನ ದೇವನನು ಭಜಿಸುವೆನು ನಾ ಜೀವಮಾನವೆಲ್ಲ II
34 : ಆತನಿಗೊಲಿಯಲಿ ನನ್ನ ಧ್ಯಾನ I ಆತನಲೇ ಹರ್ಷಿಸಲಿ ನನ್ನ ಮನ II
35 : ದಹಿಸಿಹೋಗಲಿ ಧರೆಯಿಂದ ದುಷ್ಟರು I ನಿರ್ಮೂಲವಾಗಲಿ ಸಕಲ ದುರುಳರು I ಪ್ರಭುವನು ನನ್ನ ಮನ ಸ್ತುತಿಸಲಿ I ಪ್ರಭುವಿಗೆ ಸ್ತುತಿಸ್ತೋತ್ರವಾಗಲಿ II