P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
94ನೇ ಅಧ್ಯಾಯ
1 : ಹೇ ಪ್ರಭು, ಮುಯ್ಯಿತೀರಿಸುವ ದೇವಾ I ಮುಯ್ಯಿತೀರಿಸಲು ಎದ್ದುಬಾರಯ್ಯಾ II
2 : ಪ್ರಭೂ, ಲೋಕದ ನ್ಯಾಯಾಧಿಪತಿ I ಏಳು, ಗರ್ವಿಗಳಿಗೆ ಮಾಡು ತಕ್ಕಶಾಸ್ತಿ II
3 : ಎಲ್ಲಿಯವರೆಗೆ ಪ್ರಭು, ಎಲ್ಲಿಯವರೆಗೆ? I ದುರುಳರು ಹಿಗ್ಗುತ್ತಲೆ ಇರಬೇಕು ಹೀಗೆ? II
4 : ಉಬ್ಬಿಹೋಗಿಹರು ಕೆಡುಕರೆಲ್ಲರು I ಜಂಬ ಕೊಚ್ಚಿಕೊಳ್ಳುತ್ತಿಹರು ಅವರು II
5 : ನಸುಕಿ ಹಾಕುತಿಹರು ನಿನ್ನ ಪ್ರಜೆಯನು I ಹಿಂಸಿಸುತಿಹರು ನಿನ್ನ ಸ್ವಕೀಯರನು II
6 : ವಧಿಸುತಿಹರು ವಿಧವೆಯರನು, ಪರದೇಶಿಯರನು I ಹತ್ಯಮಾಡುತಿಹರು ಗತಿಯಿಲ್ಲದ ಅನಾಥರನು II
7 : ಅವರಾಡಿಕೊಳ್ಳುತಿಹರು ಪ್ರಭು ನೋಡನೆಂದು I ಯಕೋಬ್ಯರ ಸ್ವಾಮಿದೇವ ವಿಚಾರಿಸನೆಂದು II
8 : ಮೂರ್ಖರೇ, ನಿಮಗೆ ಜ್ಞಾನೋದಯವಾಗುವುದಾವಾಗ? I ಪಶುಪ್ರಾಯರಾದ ಪ್ರಜೆಗಳು ಗಮನಿಸುವುದಾವಾಗ? II
9 : ಕಿವಿಮಾಡಿದವನು ಕೇಳದಿರುವನೋ? I ಕಣ್ಣುಕೊಟ್ಟವನು ನೋಡದಿರುವನೋ? II
10 : ರಾಷ್ಟ್ರಗಳನು ಖಂಡಿಸುವವನು ದಂಡಿಸದಿರುವನೋ? I ಮನುಜರಿಗೆ ಬುದ್ಧಿಕಲಿಸುವವನು ಬುದ್ಧಿಹೀನನೋ? II
11 : ಮನುಜರಾಲೋಚನೆಗಳು ತಿಳಿದೇ ಇವೆ ಪ್ರಭುವಿಗೆ I ಉಸಿರಿನಷ್ಟೇ ವ್ಯರ್ಥವೆಂದು ಗೊತ್ತಿದೆ ಆತನಿಗೆ II
12 : ಪ್ರಭು, ನಿನ್ನಿಂದ ಶಿಕ್ಷಿತನಾದ ಮಾನವ ಧನ್ಯ I ನಿನ್ನಿಂದ ಧರ್ಮೋಪದೇಶ ಪಡೆದವನು ಧನ್ಯ II
13 : ನೆಮ್ಮದಿ ನೀಡುವೆ ಅವನು ಸಂಕಟದಲಿರುವಾಗ I ದುರುಳರಿಗೆ ನೀನು ಗುಂಡಿಯನು ತೋಡುವಾಗ II
14 : ತಳ್ಳಿಬಿಡಲು ಪ್ರಭು ತನ್ನ ಜನರನು I ಕೈಬಿಡನವನು ತನ್ನ ಸ್ವಕೀಯರನು II
15 : ನ್ಯಾಯತೀರ್ಪು ಮರಳಿ ತಿರುಗುವುದು ನೀತಿಯತ್ತ I ನೇರಮನಸ್ಕರೆಲ್ಲ ಮಾಡುವರು ಅದನು ಸಮರ್ಥ II
16 : ದುರುಳರಿಗೆದುರಾಗಿ ನನ್ನ ಪಕ್ಷ ವಹಿಸುವರಾರು? I ಕೆಡುಕರಿಗೆ ವಿರುದ್ಧ ನನ್ನ ಪರ ನಿಲ್ಲುವವರಾರು? II
17 : ನನಗಿಲ್ಲದಿದ್ದರೆ ಪ್ರಭುವಿನ ಮರುಕ I ಮನೆಯಾಗುತ್ತಿತ್ತೆನಗೆ ಅಧೋಲೋಕ II
18 : ನನ್ನ ಕಾಲು ಜಾರಿಹೋಯಿತು ಎನ್ನುವುದರೊಳಗೆ I ನಿನ್ನ ಅಚಲ ಪ್ರೀತಿ, ಪ್ರಭು ನೆರವಾಯಿತೆನಗೆ II
19 : ನನ್ನ ಅಂತರಂಗದಲಿ ಏಳಲು ಆಂದೋಲನ I ತಂದಿತೆನ್ನ ಮನಕೆ ಆನಂದ ನಿನ್ನ ಸಾಂತ್ವನ II
20 : ಅನ್ಯಾಯಸ್ಥಾಪಕರಿಗೂ ನಿನಗೂ ಸಂಬಂಧವೆಲ್ಲಿ I ಕೇಡನು ಕಲ್ಪಿಸುತ್ತಾರವರು ಶಾಸನದ ಹೆಸರಿನಲ್ಲಿ II
21 : ಹೊಂಚುಹಾಕುವರವರು ನೀತಿವಂತರ ಪ್ರಾಣಕೆ I ಮರಣಶಿಕ್ಷೆ ವಿಧಿಸುವರವರು ನಿರಪರಾಧಿಗಳಿಗೆ II
22 : ನನಗೋ ಪ್ರಭುವೇ ಕಲ್ಲು ಕೋಟೆ I ನನಗಾಶ್ರಯ ನೀಡುವ ಪೊರೆಬಂಡೆ II
23 : ದಂಡಿಸುವನಾ ಕೆಡುಕರನು ಅವರ ಕೆಟ್ಟತನಕ್ಕಾಗಿ I ನಿರ್ಮೂಲ ಮಾಡುವನಾ ಜನರ ದುಷ್ಟತನಕ್ಕಾಗಿ I ನಮ್ಮೊಡೆಯ ದೇವನು ಸಂಹರಿಸಿಬಿಡುವನು ಈ ಕಾರಣಕ್ಕಾಗಿ II