P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
105ನೇ ಅಧ್ಯಾಯ
1 : ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು I ಮಾಡಿರಿ ಆತನ ನಾಮಸ್ಮರಣೆಯನು I ಸಾರಿರಿ ಜಗಕೆ ಆತನ ಸತ್ಕಾರ್ಯಗಳನು II
2 : ಹಾಡಿ ಪಾಡಿ ಹೊಗಳಿರಿ ಪ್ರಭುವನು I ಧ್ಯಾನಿಸಿ ನೀವು ಆತನ ಪವಾಡಗಳನು II
3 : ಹೆಮ್ಮೆಪಡಿ, ನೆನೆದಾತನ ಶ್ರೀನಾಮ I ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ II
4 : ಅರಸಿರಿ ಪ್ರಭುವನೂ ಆತನ ಶಕ್ತಿಯನೂ I ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು II
5 : ಆತನ ದಾಸ ಅಬ್ರಹಾಮನ ಸಂತತಿಯವರೇ I ಆತನಾರಿಸಿಕೊಂಡ ಯಕೋಬನ ವಂಶದವರೇ II
6 : ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು I ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು II
7 : ಪ್ರಭು ನಮ್ಮ ದೇವನೆಂಬುದು ಶ್ರುತ I ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ II
8 : ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು I ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು II
9 : ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು I ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು II
10 : ಯಕೋಬನಿಗೆ ರಾಜಶಾಸನವಾಗಿ ಕೊಟ್ಟುದನು I ಇಸ್ರಯೇಲಿಗೆ ಶಾಶ್ವತವಾಗಿತ್ತ ಈ ಮಾತನು II
11 : “ನಾ ಕೊಡುವೆನು ಕಾನಾನ್ ನಾಡನು ನಿಮಗೆ I ಸ್ವಾಸ್ತ್ಯವಾಗುವುದು ಅದು ನಿಮ್ಮ ಸಂತತಿಗೆ” II
12 : ಅಲ್ಪಸಂಖ್ಯಾತರೂ ಆಗಂತುಕರೂ ಅವರಾಗಿರಲು I ನಾಡಿಂದ ನಾಡಿಗೆ ರಾಜ್ಯದಿಂದ ರಾಜ್ಯಕೆ ಅಲೆಯುತ್ತಿರಲು II
13 : ಅಲ್ಪಸಂಖ್ಯಾತರೂ ಆಗಂತುಕರೂ ಅವರಾಗಿರಲು I ನಾಡಿಂದ ನಾಡಿಗೆ ರಾಜ್ಯದಿಂದ ರಾಜ್ಯಕೆ ಅಲೆಯುತ್ತಿರಲು II
14 : ಅವರಿಗಾರಿಂದಲೂ ಅನ್ಯಾಯವಾಗಗೊಡಿಸಲಿಲ್ಲ I ಅವರಿಗಾಗಿ ಅರಸರನೂ ಗದರಿಸದೆ ಬಿಡಲಿಲ್ಲ : II
15 : “ನಾನಭಿಷೇಕಿಸಿದವರನಿದೋ ಮುಟ್ಟಬೇಡಿ I ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿ” II
16 : ತದನಂತರ ಬರಮಾಡಿದನಾ ನಾಡಿನಲಿ ಕ್ಷಾಮವನು I ಮುರಿದುಬಿಟ್ಟನು ಆಹಾರವೆಂಬಾ ಊರುಗೋಲನು II
17 : ಕಳಿಸಿದ ಅವರಿಗೆ ಮುಂದಾಗಿ ಒಬ್ಬಾತನನು I ದಾಸತ್ವಕೆ ಮಾರಲಾದ ಆ ಜೋಸೆಫನನು II
18 : ಅವನ ಕಾಲು ನೊಂದವು ಸಂಕೋಲೆಗಳಿಂದ I ಕುತ್ತಿಗೆ ಕೊರೆಯಿತು ಕಬ್ಬಿಣದ ಕೋಳಗಳಿಂದ II
19 : ಕ್ರಮೇಣ ಕೈಗೂಡಿತು ಜೋಸೆಫನು ನುಡಿದದ್ದು I ಪ್ರಭುವಿನ ವಾಣಿ ಕಂಡುಬಂದಿತು ಸತ್ಯವೆಂದು II
20 : ಬಿಡಿಸಲವನನು ಅರಸ ಕಳಿಸಿದ ಆಳನು I ಬಿಡುಗಡೆಮಾಡಿದ ಜನಾಧಿಪತಿ ಅವನನು II
21 : ನೇಮಿಸಿದವನನು ತನ್ನ ಮನೆಗೆ ಯಜಮಾನನ್ನಾಗಿ I ಮಾಡಿದ ತನ್ನಾಸ್ತಿಗೆಲ್ಲಾ ಅಧಿಕಾರಿಯನ್ನಾಗಿ II
22 : ಪದಾಧಿಕಾರಿಗಳಿಗೆ ಶಿಕ್ಷಕನನ್ನಾಗಿಸಿದ I ಮಂತ್ರಿಗಳಿಗೆಲ್ಲ ಉಪದೇಶಕನನ್ನಾಗಿಸಿದ II
23 : ಬಂದನು ಆಗ ಇಸ್ರಯೇಲನು ಈಜಿಪ್ಟಿಗೆ I ಪ್ರವಾಸಿಯಾದ ಯಕೋಬನು ಹಾಮ ನಾಡಿಗೆ II
24 : ತನ್ನ ಜನರ ಸಂತಾನವನು ಪ್ರಭು ಅಭಿವೃದ್ಧಿಗೊಳಿಸಿದ I ಶತ್ರುಗಳಿಗಿಂತಲೂ ಅವರನು ಬಲಿಷ್ಠರನ್ನಾಗಿಸಿದ II
25 : ಮಾರ್ಪಡಿಸಿದ ಈಜಿಪ್ಟರನು ತನ್ನ ಜನರನು ದ್ವೇಷಿಸುವಂತೆ I ತನ್ನ ದಾಸರೊಡನವರು ಕುಯುಕ್ತಿಯಿಂದ ನಡೆದುಕೊಳ್ಳುವಂತೆ II
26 : ಕಳಿಸಿದ ತನ್ನ ದಾಸ ಮೋಶೆಯನು I ತಾನು ಆರಿಸಿಕೊಂಡ ಆರೋನನನು II
27 : ನೋಡಿದರಿವರು ಆತನ ಸೂಚಕಕಾರ್ಯಗಳನು I ಹಾಮ ನಾಡಿನಲಿ ನಾನಾ ಅದ್ಭುತಕಾರ್ಯಗಳನು II
28 : ಕಾಳ ರಾತ್ರಿಯಾಯಿತು ಪ್ರಭು ಕಳಿಸಲು ಕತ್ತಲನು I ಈಜಿಪ್ಟರಾದರೊ ಇದಿರಿಸಿದರು ಆತನ ಮಾತನು II
29 : ರಕ್ತವಾಗಿಸಿದನಾತ ಅವರ ನದಿಗಳನು I ಸಾಯಿಸಿದನು ಅವುಗಳಲಿದ್ದ ಮೀನುಗಳನು II
30 : ತುಂಬಿಕೊಂಡವು ಕಪ್ಪೆಗಳು ನಾಡಿನೊಳೆಲ್ಲ I ಹರಡಿಕೊಂಡವು ಅರಸನ ಕೊಠಡಿಗಳಲೆಲ್ಲ II
31 : ಕಾಣಿಸಿಕೊಂಡವು ಆತನಾಜ್ಞಾಪಿಸಲು I ಹುಳುಹುಪ್ಪಟೆಗಳು ಪ್ರಾಂತ್ಯದೆಲ್ಲೆಡೆಯೊಳು II
32 : ಮಳೆಗೆ ಬದಲು ಕಳಿಸಿದ ಕಲ್ಮಳೆಯನು I ನಾಡಿನೆಲ್ಲೆಡೆಯೊಳು ಸಿಡಿಲುಮಿಂಚನು II
33 : ನಾಶಮಾಡಿದ ನಾಡಿನ ಎಲ್ಲಾ ಮರವೃಕ್ಷಗಳನು I ದ್ರಾಕ್ಷಾಲತೆಗಳನ್ನು ಮೇಣ್ ಅಂಜೂರಗಿಡಗಳನು II
34 : ಆತ ನುಡಿದದ್ದೇ, ಬಂದವು ಮಿಡತೆಗಳು I ಅಗಣಿತವಾದ ಸಂಖ್ಯೆಯಲಿ ಚಿಟ್ಟೆಹುಳುಗಳು II
35 : ತಿಂದುಬಿಟ್ಟವವು ನಾಡಿನ ಬೆಳೆಯನು I ಹೊಲಗದ್ದೆಗಳು ಇತ್ತ ಫಲವೆಲ್ಲವನು II
36 : ಕೊಂದನು ನಾಡಿನ ಜ್ಯೇಷ್ಠರೆಲ್ಲರನು I ಗಂಡಸುತನದಾ ಪ್ರಥಮ ಫಲಗಳನು II
37 : ಹೊರತಂದನು ಇಸ್ರಯೇಲರನು ಬೆಳ್ಳಿಬಂಗಾರ ಸಹಿತ I ಅವರಾ ಗೋತ್ರದೊಳಿರಲಿಲ್ಲ ಯಾರೊಬ್ಬನೂ ನಿಶ್ಯಕ್ತ II
38 : ಭೀತಿಯಿತ್ತಾ ಈಜಿಪ್ಟರಿಗೆ ಇಸ್ರಯೇಲರ ಬಗ್ಗೆ I ಈ ಕಾರಣ ಆನಂದಿಸಿದರು ಅವರು ಹೋದುದಕ್ಕೆ II
39 : ಹಗಲೊಳು ಮೋಡವಿತ್ತನವರಿಗೆ ನೆರಳಿಗೋಸ್ಕರ I ಇರುಳೊಳು ಬೆಂಕಿಯಿತ್ತನವರಿಗೆ ಬೆಳಕಿಗೋಸ್ಕರ II
40 : ಕೂಳನು ಕೇಳಿದಾಗ ಬರಮಾಡಿದನು ಲಾವಕ್ಕಿಗಳನು I ತೃಪ್ತಿಪಡಿಸಿದನು ಆಗಸದ ಆಹಾರಗಳಿಂದವರನು II
41 : ಬಂಡೆಯನಾತ ಸೀಳಲು ನೀರು ಹರಿದು ಬಂದಿತು I ನಿರ್ಜಲ ಪ್ರದೇಶದಲದು ನದಿಯಾಗಿ ಹರಿಯಿತು II
42 : ಸ್ಮರಿಸಿಕೊಂಡನು ಪ್ರಭು ತನ್ನ ವಾಗ್ದಾನವನು I ತನ್ನ ದಾಸ ಅಬ್ರಹಾಮನಿಗೆ ಕೊಟ್ಟಾ ಮಾತನು II
43 : ಹೊರತಂದನು ತನ್ನ ಪ್ರಜೆಯನು ಉಲ್ಲಾಸದಿಂದ I ತಾನಾರಿಸಿಕೊಂಡವರನು ಹರ್ಷೋದ್ಗಾರದಿಂದ II
44 : ಕೊಟ್ಟನವರಿಗೆ ಅನ್ಯರಾಷ್ಟ್ರಗಳ ನಾಡುಬೀಡನು I ಅವರ ಕೈವಶಮಾಡಿದನು ಅನ್ಯರ ಕಷ್ಟಾರ್ಜಿತವನು II
45 : ತನ್ನ ವಿಧಿಗಳಂತೆ ನಡೆಯಲೆಂದೇ I ತನ್ನ ಶಾಸ್ತ್ರವನು ಅನುಸರಿಸಲೆಂದೇ I ಈ ಪರಿ ಮಾಡಿದಾ ಸ್ವಾಮಿಗೆ ವಂದನೆ II