पवित्र बाइबिल
ಹಳೆಯ ಒಡಂಬಡಿಕೆ
2 ಅರಸುಗಳು
19ನೇ ಅಧ್ಯಾಯ
- Verse 1: ಈ ವರದಿಯನ್ನು ಕೇಳಿದ ಹಿಜ್ಕೀಯನು ಕೋಪದಿಂದ ತನ್ನ ಬಟ್ಟೆಯನ್ನು ಹರಿದುಕೊಂಡು, ಗೋಣಿತಟ್ಟನ್ನು ಕಟ್ಟಿಕೊಂಡು ಸರ್ವೇಶ್ವರನ ಆಲಯಕ್ಕೆ ಹೋದನು.
- Verse 2: ಇದಲ್ಲದೆ, ಅವನು ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಕಾರ್ಯದರ್ಶಿ ಶೆಬ್ನ, ಹಿರಿಯ ಯಾಜಕರು, ಇವರನ್ನು ಕರೆಯಿಸಿ, “ನೀವು ಗೋಣಿತಟ್ಟನ್ನು ಕಟ್ಟಿಕೊಂಡು, ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನ ಬಳಿಗೆ ಹೋಗಿ,
- Verse 3: ಅವನಿಗೆ ಹೀಗೆಂದು ಹೇಳಿ: ‘ಈ ದಿನ ನಮಗೆ ಮಹಾಸಂಕಟದ ದಿನ, ದಂಡನೆಯ ದಿನ, ನಿಂದೆ ಅವಮಾನದ ದಿನ; ಹೆರಿಗೆಯ ಕಾಲ ಬಂದಿದೆ. ಆದರೆ ಹೆರುವುದಕ್ಕೆ ಶಕ್ತಿಸಾಲದು.
- Verse 4: ಜೀವಸ್ವರೂಪರಾದ ದೇವರನ್ನು ದೂಷಿಸುವುದಕ್ಕಾಗಿ ತನ್ನ ಯಜಮಾನ ಅಸ್ಸೀರಿಯದ ರಾಜನಿಂದ ಕಳುಹಿಸಲಾಗಿದ್ದ ರಬ್ಷಾಕೆಯ ನಿಂದಾವಾಕ್ಯಗಳನ್ನು ನಿಮ್ಮ ದೇವರಾದ ಸರ್ವೇಶ್ವರ ಕೇಳಿದ್ದಾರೆ. ನಿಮ್ಮ ದೇವರಾದ ಸರ್ವೇಶ್ವರ ತಾವು ಕೇಳಿದ ಆ ವಾಕ್ಯಗಳ ನಿಮಿತ್ತ ಮುಯ್ಯಿತೀರಿಸಾರು; ಹೀಗಿರಲು ಉಳಿದಿರುವ ಸ್ವಲ್ಪ ಜನರಿಗಾಗಿ ದೇವರನ್ನು ನೀವು ಪ್ರಾರ್ಥನೆ ಮಾಡಿ’ ಎಂದು ಹಿಜ್ಕೀಯ ಕೇಳಿಕೊಂಡಿದ್ದಾರೆ ಎಂದು ತಿಳಿಸಿ,” ಎಂದನು.
- Verse 5: ಅರಸ ಹಿಜ್ಕೀಯನ ಸೇವಕರು ತನ್ನ ಬಳಿಗೆ ಬಂದು ವರದಿಮಾಡಿದ ಮೇಲೆ ಯೆಶಾಯನು,
- Verse 6: “ನೀವು ಹಿಂದಿರುಗಿ ಹೋಗಿ ನಿಮ್ಮ ರಾಜನಿಗೆ, ‘ಅಸ್ಸೀರಿಯದ ಅರಸನ ಸೇವಕರು ನನ್ನನ್ನು ದೂಷಿಸಿ ಆಡಿದ ಮಾತುಗಳನ್ನು ಕೇಳಿದ್ದೇನೆ. ಅವುಗಳಿಗಾಗಿ ನೀನು ಹೆದರಬೇಕಾಗಿಲ್ಲ.
- Verse 7: ಅವನ ಮೇಲೆ ಭಯಾತ್ಮನನ್ನು ಬರಮಾಡುವೆನು. ಅವನು ಒಂದು ಸುದ್ದಿಯನ್ನು ಕೇಳಿ ಸ್ವದೇಶಕ್ಕೆ ಹಿಂದಿರುಗಿ ಅಲ್ಲೇ ಕತ್ತಿಗೆ ತುತ್ತಾಗುವಂತೆ ಮಾಡುವೆನು, ಇದು ಸರ್ವೇಶ್ವರನ ನುಡಿ, ಎಂದು ತಿಳಿಸಿರಿ,” ಎಂದು ಉತ್ತರಕೊಟ್ಟನು.
- Verse 8: ರಬ್ಷಾಕೆಯು ಹಿಂದಿರುಗಿ ಹೋಗುವಾಗ ದಾರಿಯಲ್ಲಿ, ಅಸ್ಸೀರಿಯದ ಅರಸನು ಲಾಕೀಷನನ್ನು ಬಿಟ್ಟು ಲಿಬ್ನಕ್ಕೆ ಹೋಗಿ ಆ ರಾಜ್ಯದ ವಿರುದ್ಧ ಯುದ್ಧಮಾಡುತ್ತಿರುವುದಾಗಿ ಸಮಾಚಾರ ಪಡೆದನು. ಆದುದರಿಂದ ಅವನು ಅಲ್ಲಿಗೆ ತೆರಳಿದನು.
- Verse 9: ಅಷ್ಟರಲ್ಲಿ ಸುಡಾನಿನ ರಾಜ ತಿರ್ಹಾಕನು ತನಗೆ ವಿರುದ್ಧವಾಗಿ ಹೊರಟಿದ್ದಾನೆ ಎಂಬ ಸುದ್ದಿ ಅಸ್ಸೀರಿಯದ ಅರಸನಿಗೆ ಮುಟ್ಟಿತು. ಆಗ ಅವನು ಜುದೇಯದ ಅರಸನಾದ ಹಿಜ್ಕೀಯನಿಗೆ,
- Verse 10: “ಜೆರುಸಲೇಮ್ ನನ್ನ ವಶವಾಗುವುದಿಲ್ಲವೆಂದು ನೀನು ನಂಬುವ ದೇವರು ನಿನಗೆ ಹೇಳಿ ನಿನ್ನನ್ನು ಮೋಸಗೊಳಿಸಬಹುದು.
- Verse 11: ಅಸ್ಸೀರಿಯದ ಅರಸನು ಎಲ್ಲಾ ರಾಜ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾನೆಂಬ ಸಮಾಚಾರ ನಿನಗೆ ಮುಟ್ಟಿರಬೇಕು, ಹೀಗಿರುವಲ್ಲಿ ನೀನು ಮಾತ್ರ ತಪ್ಪಿಸಿಕೊಳ್ಳುವಿಯೋ?
- Verse 12: ನನ್ನ ತಂದೆತಾತಂದಿರು ಗೋಜಾನ್, ಖಾರನ್, ರೆಚೆಫ್ ಎಂಬ ನಗರಗಳ ಜನರನ್ನು ಮತ್ತು ತೆಲಸ್ಸಾರ್ ಪ್ರಾಂತ್ಯದಲ್ಲಿರುವ ಎದೆನಿನ ಜನರನ್ನು ನಾಶಮಾಡಿದರು. ಆಗ ಅವರ ದೇವರುಗಳು ಅವರನ್ನು ರಕ್ಷಿಸಲಾಗಲಿಲ್ಲ.
- Verse 13: ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ್ ಮತ್ತು ಇವ್ವಾ ಎಂಬ ನಗರಗಳ ಅರಸರ ಗತಿ ಏನಾಯಿತು?” ಎಂದು ಪತ್ರ ಬರೆದು ದೂತರ ಸಮೇತ ಕಳುಹಿಸಿದನು.
- Verse 14: ಹಿಜ್ಕೀಯನು, ಆ ದೂತರು ತಂದ ಪತ್ರವನ್ನು ತೆಗೆದುಕೊಂಡು ಓದಿದ ನಂತರ, ದೇವಾಲಯಕ್ಕೆ ಹೋಗಿ ಅದನ್ನು ಸರ್ವೇಶ್ವರ ಸ್ವಾಮಿಯ ಮುಂದೆ ತೆರೆದಿಟ್ಟು, ಹೀಗೆಂದು ಪ್ರಾರ್ಥನೆ ಮಾಡಿದನು:
- Verse 15: “ಇಸ್ರಯೇಲಿನ ದೇವರೇ, ಸರ್ವೇಶ್ವರಾ, ಕೆರೂಬಿಗಳ ಮೇಲೆ ಆಸೀನಾರೂಢರಾಗಿರುವವರೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀವೊಬ್ಬರೇ; ಪರಲೋಕ ಭೂಲೋಕಗಳನ್ನುಂಟುಮಾಡಿದವರು ನೀವೇ.
- Verse 16: ಸರ್ವೇಶ್ವರಾ, ಕಿವಿಗೊಟ್ಟು ಕೇಳಿ; ಸರ್ವೇಶ್ವರಾ, ಕಣ್ಣಿಟ್ಟು ನೋಡಿ: ಸನ್ಹೇರೀಬನು ಜೀವಸ್ವರೂಪ ದೇವರಾದ ನಿಮ್ಮನ್ನು ನಿಂದಿಸುವುದಕ್ಕಾಗಿ ಹೇಳಿಕಳುಹಿಸಿದ ಈ ಮಾತುಗಳನ್ನೆಲ್ಲಾ ಮನಸ್ಸಿಗೆ ತಂದುಕೊಳ್ಳಿ.
- Verse 17: ಸರ್ವೇಶ್ವರಾ, ಅಸ್ಸೀರಿಯದ ರಾಜರು ಸಕಲ ರಾಷ್ಟ್ರಗಳನ್ನೂ ಹಾಗೂ ಅವರ ನಾಡುಗಳನ್ನೂ ಹಾಳುಮಾಡಿದ್ದಾರೆ.
- Verse 18: ಅವರ ದೇವರುಗಳನ್ನೂ ಬೆಂಕಿಗೆ ಹಾಕಿದ್ದು ನಿಜ. ಅವು ದೇವರುಗಳಲ್ಲ, ಕೇವಲ ಮನುಷ್ಯರು ಕೆತ್ತಿದ ಕಲ್ಲುಮರಗಳ ಬೊಂಬೆಗಳಷ್ಟೆ. ಆದುದರಿಂದಲೇ ಅವು ಅವರಿಂದ ಹಾಳಾದವು.
- Verse 19: ನಮ್ಮ ದೇವರಾದ ಸರ್ವೇಶ್ವರಾ, ನೀವೇ ಏಕೈಕ ದೇವರು ಎಂಬುದನ್ನು ಭೂಮಿಯ ರಾಷ್ಟ್ರಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಈ ಅಸ್ಸೀರಿಯನ ಕೈಯಿಂದ ಬಿಡಿಸಿರಿ.”
- Verse 20: ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿಕಳುಹಿಸಿದ್ದೇನೆಂದರೆ: ” ಇಸ್ರಯೇಲಿನ ದೇವರಾದ ಸರ್ವೇಶ್ವರಸ್ವಾಮಿಯ ಈ ಮಾತುಗಳನ್ನು ಕೇಳು: ನೀನು ಅಸ್ಸೀರಿಯದ ರಾಜನಾದ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹಗಳು ಸರ್ವೇಶ್ವರಸ್ವಾಮಿಗೆ ಮುಟ್ಟಿವೆ. ಅವರು ಅವನನ್ನು ಕುರಿತು ಹೀಗೆಂದಿದ್ದಾರೆ:
- Verse 21: ‘ನಿನ್ನನ್ನು ಪರಿಹಾಸ್ಯಮಾಡಿ ತಿರಸ್ಕರಿಸುತಿಹಳು ಕನ್ಯೆಯಾದ ಸಿಯೋನಿನ ಕುವರಿಯು; ನಿನ್ನ ಹಿಂದೆ ತಲೆಯಾಡಿಸಿ ಮೂದಲಿಸುತಿಹಳು ಜೆರುಸಲೇಮಿನ ಆ ಕುವರಿಯು.
- Verse 22: ನೀನು ನಿಂದಿಸಿ ದೂಷಿಸುತ್ತಿರುವುದು ಯಾರನ್ನು? ಕಿರಿಚಿ ಹೀಯಾಳಿಸುತ್ತಿರುವುದು ಯಾರನ್ನು? ಗರ್ವದಿಂದ ದುರುಗುಟ್ಟಿ ನೋಡಿದುದು ಯಾರನ್ನು? ಇಸ್ರಯೇಲರ ಸದಮಲಸ್ವಾಮಿಯನ್ನು ಅಲ್ಲವೇನು?
- Verse 23: ನೀನು ನಿನ್ನ ದೂತರ ಮೂಲಕ ಸರ್ವೇಶ್ವರನನ್ನು ನಿಂದಿಸಿರುವೆ, ಅಲ್ಲದೆ ಈ ಮಾತುಗಳನ್ನಾಡಿ ಜಂಬಕೊಚ್ಚಿಕೊಂಡಿರುವೆ: ‘ಹತ್ತಿದ್ದೇನೆ ಗಿರಿಶಿಖರಗಳನ್ನು ರಥಸಮೂಹದೊಡನೆ ಸೇರಿದ್ದೇನೆ ಲೆಬನೋನಿನ ದುರ್ಗಮ ಸ್ಥಳಗಳನ್ನೇ! ಕಡಿದಿದ್ದೇನೆ ಅದರ ಎತ್ತರವಾದ ದೇವದಾರು ವೃಕ್ಷಗಳನ್ನೇ ಕತ್ತರಿಸಿದ್ದೇನೆ ಅದರ ಶ್ರೇಷ್ಠವಾದ ತುರಾಯಿ ಮರಗಳನ್ನೇ ಒಳಹೊಕ್ಕಿದ್ದೇನೆ ಅಲ್ಲಿನ ದೂರದ ನಿವಾಸಸ್ಥಳಗಳನ್ನೇ, ಶಿಖರವನ್ನೇ, ಪ್ರವೇಶಿಸಿದ್ದೇನೆ ದಟ್ಟವಾದ ಆ ಕಾಡು ಮೇಡುಗಳನ್ನೇ!
- Verse 24: ಪರನಾಡುಗಳಲ್ಲಿ ಬಾವಿ ತೋಡಿ ನೀರು ಕುಡಿದಿದ್ದೇನೆ, ನನ್ನ ಅಂಗಾಲಿನಿಂದಲೇ ಈಜಿಪ್ಟಿನ ನದಿಗಳನ್ನೆಲ್ಲಾ ಬತ್ತಿಸಿದ್ದೇನೆ!’
- Verse 25: “ಕೇಳು, ಇದನ್ನೆಲ್ಲಾ ಬಹುಕಾಲದ ಹಿಂದೆ ಗೊತ್ತುಮಾಡಿದವನು ನಾನೇ, ಪೂರ್ವಕಾಲದಲ್ಲಿ ನಿರ್ಣಯಿಸಿದುದನ್ನು ಈಗ ನೆರವೇರಿಸಿದ್ದೇನೆ. ಕೋಟೆ ನಗರಗಳನ್ನು ನೀನು ಹಾಳುದಿಬ್ಬಗಳನ್ನಾಗಿಸಿದೆ. ಆದರೆ ಸಾಧ್ಯವಾಯಿತಿದು ನನ್ನಿಂದಲೇ; ನಿನಗಿದು ತಿಳಿಯದೆ ಹೋಯಿತೆ?
- Verse 26: ಬಲವಿಲ್ಲದವರಾದರು ಆ ನಗರವಾಸಿಗಳು ನನ್ನ ನಿಮಿತ್ತವೆ, ಸಮಾನರಾದರು ಹೊಲದ ಸಸಿಗೆ, ಎಳೆಗರಿಕೆಗೆ, ಮಾಳಿಗೆ ಮೇಲಿನ ಹುಲ್ಲಿಗೆ; ಬೆಳೆಯುವುದಕ್ಕೆ ಮೊದಲೆ ತುತ್ತಾದರು ಬಿರುಗಾಳಿಯ ಹೊಡೆತಕ್ಕೆ!
- Verse 27: ನನಗೆ ಗೊತ್ತಿದೆ ನೀ ಕೂರುವುದು, ನೀ ಹೋಗಿಬರುವುದು ನನಗೆ ತಿಳಿದಿದೆ ನೀ ನನ್ನ ಮೇಲೆ ರೌದ್ರಾವೇಶಗೊಂಡಿರುವುದು.
- Verse 28: ನನ್ನ ವಿರುದ್ಧ ನಿನಗಿರುವ ಕ್ರೋಧ, ಗರ್ವ ತಿಳಿದಿದೆ ನನಗೆ ಎಂದೇ ಹಾಕುವೆ ದಾರ ಕಡಿವಾಣ ಮೂಗಿಗೆ, ಬಾಯಿಗೆ; ನೀ ಬಂದ ದಾರಿಯಿಂದಲೇ ಅಟ್ಟುವೆ ನಿನ್ನನ್ನು ಹಿಂದಕ್ಕೆ.”
- Verse 29: ಬಳಿಕ ಯೆಶಾಯನು ರಾಜ ಹಿಜ್ಕೀಯನಿಗೆ ಹೀಗೆಂದನು: “ಈ ಮಾತುಗಳು ನೆರವೇರುತ್ತವೆಂಬುದಕ್ಕೆ ಸೂಚನೆ ಇದು: ಈ ವರ್ಷದಲ್ಲಿ ನೀವು ಕೂಳೆಬೆಳೆಯನ್ನು, ಮುಂದಿನ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಅದು ಬೆಳೆದುದನ್ನು, ಆದರೆ ಮೂರನೆಯ ವರ್ಷ ಹೊಲಗಳಲ್ಲಿ ಬಿತ್ತಿ ಕೊಯ್ದುದನ್ನು, ದ್ರಾಕ್ಷಿತೋಟದಲ್ಲಿ ವ್ಯವಸಾಯ ಮಾಡಿ ಶೇಖರಿಸಿದ್ದನ್ನು ಅನುಭವಿಸಿರಿ.
- Verse 30: ಅಳಿದು ಉಳಿದ ಯೆಹೂದ್ಯರು ನಾಡಿನಲ್ಲಿ ಬೇರೂರಿ ನೆಲೆಗೊಳ್ಳುವರು; ಬೆಳೆದು ಅಭಿವೃದ್ಧಿಯಾಗುವರು.
- Verse 31: ಅಳಿದುಳಿದವರು ಜೆರುಸಲೇಮಿನಲ್ಲೇ ಹರಡಿಕೊಳ್ಳುವರು; ಸಿಯೋನ್ ಪರ್ವತದಲ್ಲಿ ಅಭಿವೃದ್ಧಿಯಾಗುವರು. ಸರ್ವೇಶ್ವರಸ್ವಾಮಿಯ ಆಗ್ರಹವೇ ಇದನ್ನು ಸಾಧಿಸುವುದು.
- Verse 32: “ಅಸ್ಸೀರಿಯದ ಅರಸನನ್ನು ಕುರಿತು ಸರ್ವೇಶ್ವರ ಹೇಳಿರುವ ಮಾತಿದು: ‘ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದರತ್ತ ಬಾಣವನ್ನೆಸೆಯುವುದಿಲ್ಲ, ಕವಚಧಾರಿಗಳನ್ನು ಕಳುಹಿಸುವುದಿಲ್ಲ. ಅದರ ಆಕ್ರಮಣಕ್ಕಾಗಿ ಮಣ್ಣುದಿಬ್ಬಗಳನ್ನು ಎಬ್ಬಿಸುವುದಿಲ್ಲ.
- Verse 33: ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು; ಈ ಪಟ್ಟಣಕ್ಕೆ ಕಾಲಿಡನು.
- Verse 34: ನನಗಾಗಿಯೂ ನನ್ನ ದಾಸ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು,’ ಎಂದಿದ್ದಾರೆ".
- Verse 35: ಅದೇ ರೀತಿಯಲ್ಲಿ ಸರ್ವೇಶ್ವರಸ್ವಾಮಿಯ ದೂತನು ಹೊರಟುಬಂದು ಅಸ್ಸೀರಿಯರ ಪಾಳೆಯದಲ್ಲಿ 185,000 ಮಂದಿ ಸೈನಿಕರನ್ನು ಮರಣಕ್ಕೆ ಈಡುಮಾಡಿದನು; ಅಸ್ಸೀರಿಯರು ಬೆಳಿಗ್ಗೆ ಎದ್ದು ನೋಡುವಾಗ ಪಾಳೆಯ ತುಂಬ ಹೆಣಗಳು ಇದ್ದವು.
- Verse 36: ಆದ್ದರಿಂದ ಅಸ್ಸೀರಿಯರ ಅರಸನಾದ ಸನ್ಹೇರೀಬನು ಹಿಂದಿರುಗಿದನು. ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲೆ ವಾಸಿಸಿದನು.
- Verse 37: ಒಂದು ದಿನ ಗುಡಿಗೆ ಹೋಗಿ ತನ್ನ ದೇವರಾದ ನಿಸ್ರೋಕನನ್ನು ಆರಾಧನೆ ಮಾಡುತ್ತಿರುವಾಗ, ಅದ್ರಮ್ಮೆಲೆಕ್ ಮತ್ತು ಸರೆಚೆರ್ ಎಂಬವರು ಅವನನ್ನು ಕತ್ತಿಯಿಂದ ಕೊಂದು ಅರರಾಟ್ ದೇಶಕ್ಕೆ ಪಲಾಯನ ಗೈದರು. ಅವನ ಸ್ಥಾನದಲ್ಲಿ ಅವನ ಮಗ ಏಸರ್ ಹದ್ದೋನನು ಅರಸನಾದನು.