ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
75ನೇ ಅಧ್ಯಾಯ
1 : ವಂದನೆ ಹೇ ದೇವಾ, ಕೃತಜ್ಞತಾ ವಂದನೆ I ನೀ ಸಾಧಿಸಿದ ಸತ್ಕಾರ್ಯಗಳ ವಿವರಣೆ I ತಂದಿದೆ ನಮಗೆ ನಿನ್ನ ನಾಮದ ಸ್ಮರಣೆ II
2 : ಈ ಪರಿ ನುಡಿದಿರುವನಾ ದೇವನು : I “ಕ್ಲುಪ್ತಕಾಲದಲಿ ನಾ ನೀಡುವೆನು I ತೀರ್ಪನು, ನ್ಯಾಯವಾದ ತೀರ್ಪನು II
3 : ಇಳೆಯು ಭೂನಿವಾಸಿಗಳ ಸಮೇತ ತಳಮಳಗೊಳ್ಳಲು I ಅದರ ತಳಹದಿಯ ಬಿಗಿಹಿಡಿದಿರುವವನು ನಾನಿಲ್ಲದಿನ್ನಾರು? II
4 : ಗರ್ವಿಗಳೇ, ಸಾಕುಮಾಡಿ ನಿಮ್ಮ ಸೊಕ್ಕುಮಾತುಗಳನು I ದುರ್ಜನರೇ, ತೋರಬೇಡಿ ನಿಮ್ಮ ಕೋರೆಕೊಂಬುಗಳನು II
5 : ಕಾಣಿಸಿಕೊಳ್ಳದಿರಲಿ ನಿಮ್ಮ ಕೋರೆಕೊಂಬುಗಳು I ಮಾತೆತ್ತದಿರಲಿ ನಿಮ್ಮಗಳ ಕೊಬ್ಬಿದಾ ಕಂಠಗಳು” II
6 : ಪೂರ್ವಪಶ್ಚಿಮದಿಂದ ಬರುವುದಿಲ್ಲ ಉದ್ಧಾರ I ಅರಣ್ಯದಿಂದ ದೊರಕುವುದಿಲ್ಲ ಜೀವೋದ್ಧಾರ II
7 : ನ್ಯಾಯತೀರ್ಪು ಬರುವುದು ದೇವನಿಂದಲೇ I ಉನ್ನತಿಯು ಅವನತಿಯು ಆತನಿಂದಲೇ II
8 : ಪ್ರಭುವಿನ ಕರಗಳಲ್ಲಿದೆ ಕೋಪಕೊಡ ಒಂದು I ತುಂಬಿದೆ ಅಮಲುಮಿಶ್ರ ರೌದ್ರರಸದಿಂದದು II ಅದನವನು ಸುರಿಯಲು ಕುಡಿವರು ಜಗದ ದುರುಳರು I ಮಡ್ಡಿಯನು ಕೂಡ ಬಿಡದೆ ಕುಡಿವರೆಲ್ಲರು II
9 : ನಾನಾದರೊ ಕೀರ್ತಿಸುವೆನು ಯಕೋಬ ದೇವರನು I ಮಾಡುವೆನು ಅನವರತ ಆತನ ಗುಣಗಾನವನು II
10 : ಕತ್ತರಿಸುವನು ಕೆಡುಕರ ಕೋರೆಕೋಡುಗಳನು I ಎತ್ತರಿಸುವನು ಸಜ್ಜನರ ಕೋರೆಕೊಂಬುಗಳನು II