P. O. C ബൈബിള്
ಹಳೆಯ ಒಡಂಬಡಿಕೆ
ಯೆಶಾಯ
28ನೇ ಅಧ್ಯಾಯ
1 : ಕುಡುಕರಿಂದ ಕೂಡಿದ ಎಫ್ರಯಿಮಿನ ಕಿರೀಟದಂತಿರುವ ನಗರಕ್ಕೆ ಧಿಕ್ಕಾರ ! ಒಮ್ಮೆ ಕುಡಿತಕ್ಕೆ ಸೋತು ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು ಈಗ ಬಾಡಿಹೋಗುತ್ತಿರುವ ಆ ಹೂವಿಗೆ ಧಿಕ್ಕಾರ !
2 : ಇದೋ, ಸರ್ವೇಶ್ವರ ಸ್ವಾಮಿ ಬಳಿ ಮಹಾ ಬಲಿಷ್ಠನೊಬ್ಬನು ಇದ್ದಾನೆ. ಆತನು ರಭಸವಾಗಿರುವ ಕಲ್ಮಳೆಯಂತೆ, ವಿನಾಶಕರವಾದ ಬಿರುಗಾಳಿಯಂತೆ, ಕೊಚ್ಚಿ ಹರಿಯುವ ತುಂಬು ಪ್ರವಾಹದಂತೆ ಬರುವನು. ಆ ನಗರ ನೆಲಕ್ಕೆ ಕುಸಿದುಬಿದ್ದು ನೆಲಸಮವಾಗುವಂತೆ ಮಾಡುವನು.
3 : ಎಫ್ರಯಿಮಿನ ಕುಡುಕರ ಮಹಾಮುಕುಟದಂತಿರುವ ಆ ನಗರ ಕಾಲಿನ ತುಳಿತಕ್ಕೆ ಈಡಾಗುವುದು.
4 : ಫಲವತ್ತಾದ ಕಣಿವೆಗೆ ಶ್ರೇಷ್ಠಶಿರೋಭೂಷಣವಾಗಿದ್ದು, ಈಗ ಬಾಡುತ್ತಿರುವ ಆ ನಗರ, ಹೂ ಕಾಲಕ್ಕೆ ಮುಂಚೆ ಮಾಗಿದ ಅಂಜೂರಕ್ಕೆ ಸಮಾನವಾಗುವುದು. ಆ ಹಣ್ಣನ್ನು ಕಂಡವರು ಕಿತ್ತ ಕೂಡಲೆ ತಿಂದುಬಿಡುವರು.
5 : ಆ ದಿನದಂದು ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯೇ ಅಳಿದುಳಿದ ತಮ್ಮ ಜನರಿಗೆ ಅಂದದ ಕಿರೀಟ, ಸುಂದರ ಮುಕುಟವಾಗುವರು.
6 : ಅವರು ನ್ಯಾಯಾಸನದಲ್ಲಿ ಕುಳಿತವನಿಗೆ ನ್ಯಾಯವಿವೇಚನೆಯನ್ನೂ ಊರಬಾಗಿಲ ಬಳಿ ಶತ್ರುಗಳನ್ನು ತಡೆಗಟ್ಟುವವರಿಗೆ ಶೌರ್ಯವನ್ನೂ ನೀಡುವರು.
7 : ಯಾಜಕರು, ಪ್ರವಾದಿಗಳು ಮದ್ಯಪಾನದಿಂದ ಮತ್ತರಾಗಿದ್ದಾರೆ; ದ್ರಾಕ್ಷಾರಸದಿಂದ ಓಲಾಡುತ್ತಿದ್ದಾರೆ; ಕುಡಿತದಿಂದ ತೂರಾಡುತ್ತಿದ್ದಾರೆ. ದ್ರಾಕ್ಷಾರಸವೇ ಅವರನ್ನು ಮುಳುಗಿಸಿಬಿಟ್ಟಿದೆ. ಹೌದು, ಅವರು ಮದ್ಯದಲ್ಲಿ ತೇಲಾಡುತ್ತಿದ್ದಾರೆ. ದೈವದರ್ಶನವಾಗುತ್ತಿರುವಾಗಲೂ ಅವರು ಓಲಾಡುತ್ತಾರೆ.
8 : ಅವರು ಕುಳಿತುಕೊಳ್ಳುವ ಮೇಜುಗಳ ಮೇಲೆಲ್ಲಾ ಹೊಲಸು ವಾಂತಿ ! ಸ್ವಚ್ಛವಾದ ಸ್ಥಳವಂತೂ ಕೊಂಚವೂ ಇಲ್ಲ.
9 : ಇವರು ನನ್ನನ್ನು ಕುರಿತು : “ಇವನ ಜ್ಞಾನೋಪದೇಶ ಯಾರಿಗೆ? ಇವನು ಸಾರುವ ಸಂದೇಶ ಯಾರಿಗೆ? ಮೊಲೆಬಿಟ್ಟ ಕೂಸುಗಳಿಗೋ? ಎದೆಬಿಟ್ಟ ಮಕ್ಕಳಿಗೋ?
10 : ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ; ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ” ಎಂದು ಹರಟೆ ಕೊಚ್ಚಿಕೊಳ್ಳುತ್ತಾರೆ.
11 : ನೀವು ನನಗೆ ಕಿವಿಗೊಡದೆಹೋದರೆ, ಸರ್ವೇಶ್ವರ ಅಪರಿಚಿತವಾದ ಅನ್ಯಭಾಷೆಯನ್ನು ಆಡುವ ಜನರ ಮುಖಾಂತರ ನಿಮಗೆ ಪಾಠಕಲಿಸುವರು.
12 : “ಇದೇ ನಿಮಗೆ ಅವಶ್ಯಕವಾದ ವಿಶ್ರಾಂತಿ : ಬಳಲಿದವರನ್ನು ವಿಶ್ರಮಗೊಳಿಸಿರಿ; ಇದೇ ನಿಮಗೆ ಅನುಕೂಲವಾದ ಉಪಶಮನ” ಎಂದು ದೇವರು ನಿಮಗೆ ಹೇಳಿದಾಗ, ನೀವು ಕೇಳದೆಹೋದಿರಿ.
13 : ಆದುದರಿಂದಲೇ ಸರ್ವೇಶ್ವರ ನಿಮಗೆ ;ಆಜ್ಞೆಯ ಮೇಲೆ ಅಜ್ಞೆ, ಸೂತ್ರದ ಮೇಲೆ ಸೂತ್ರ, ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ’ ಎಂದು ಹೇಳಿ ಪಾಠಕಲಿಸುವರು. ಆಗ ನೀವು ನಡೆ ನಡೆದೂ ಎಡವಿ ಬೀಳುವಿರಿ, ಗಾಯಗೊಳ್ಳುವಿರಿ. ಉರುಲಿಗೆ ಸಿಕ್ಕಿಬೀಳುವಿರಿ, ಬಂಧನಕ್ಕೊಳಗಾಗುವಿರಿ.
14 : ಆದಕಾರಣ, ಜೆರುಸಲೇಮಿನ ಜನರನ್ನಾಳುವ ಧರ್ಮನಿಂದಕರೇ, ಸರ್ವೇಶ್ವರ ಸ್ವಾಮಿಯ ಮಾತನ್ನು ಕೇಳಿರಿ.
15 : ನೀವು ನಿಮ್ಮನಿಮ್ಮೊಳಗೆ : “ಮೃತ್ಯುವಿನೊಂದಿಗೆ ಮುಚ್ಚಳಿಕೆ, ಪಾತಾಳದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಮಹಾವಿಪತ್ತು ನಾಡನ್ನು ಹಾದುಹೋಗುವಾಗ, ಅದು ನಮ್ಮನ್ನು ಮುಟ್ಟದು. ನಾವು ಅಸತ್ಯವನ್ನು ಆಶ್ರಯಿಸಿಕೊಂಡಿದ್ದೇವೆ. ಮೋಸವನ್ನು ಮರೆಹೊಕ್ಕಿದ್ದೇವೆ” ಎಂದು ಕೊಚ್ಚಿಕೊಳ್ಳುತ್ತಿದ್ದೀರಿ.
16 : ಎಂದೇ, ಒಡೆಯರಾದ ಸರ್ವೇಶ್ವರ ಹೀಗೆನ್ನುತ್ತಾರೆ : ‘ಇಗೋ, ನಾನು ಸಿಯೋನಿನಲ್ಲಿ ಅಸ್ತಿವಾರದ ಕಲ್ಲೊಂದನ್ನು ಇಡುತ್ತೇನೆ. ಅದು ಸ್ಥಿರವಾದ, ಪರೀಕ್ಷಿತವಾದ, ಮೌಲ್ಯವಾದ ಮೂಲೆಗಲ್ಲು. ಇದರಲ್ಲಿ ವಿಶ್ವಾಸವಿಡುವವನು ತಾಳ್ಮೆಯಿಂದ ಬಾಳುವನು.
17 : ನ್ಯಾಯನೀತಿಯನ್ನು ಅದರ ಅಳತೆಗೋಲನ್ನಾಗಿಯೂ ಸತ್ಯಸಂಧತೆಯನ್ನು ಅದರ ಮಟ್ಟಗೋಲನ್ನಾಗಿಯೂ ಮಾಡುತ್ತೇನೆ. ನಿಮ್ಮ ಅಸತ್ಯದಆಶ್ರಯವನ್ನು ಕಲ್ಮಳೆ ಕೊಚ್ಚಿಕೊಂಡು ಹೋಗುವುದು. ಜಲಪ್ರವಾಹವು ನಿಮ್ಮ ಮೋಸದ ಆಸರೆಯನ್ನು ಮುಳುಗಿಸುವುದು.
18 : ಮೃತ್ಯುವಿನೊಂದಿಗೆ ನೀವು ಮಾಡಿಕೊಂಡ ಒಪ್ಪಂದ ಬಿದ್ದುಹೋಗುವುದು. ಆ ಮಹಾವಿಪತ್ತು ನಾಡನ್ನು ಹಾದುಹೋಗುವಾಗ ನಿಮ್ಮನ್ನು ತುಳಿದುಹಾಕುವುದು.
19 : ಅದು ಹಾದುಹೋಗುವಾಗಲೆಲ್ಲಾ ನಿಮ್ಮನ್ನು ಹಿಡಿದುಬಿಡುವುದು. ಪ್ರತಿದಿನವೂ ಹಗಲೂ ರಾತ್ರಿ ಅದು ಹಾದುಹೋಗುವುದು. ಸರ್ವೇಶ್ವರ ಸ್ವಾಮಿಯ ಈ ಸಂದೇಶವನ್ನು ಅರ್ಥಮಾಡಿಕೊಳ್ಳುವವರಿಗೆ ಭಯಭ್ರಾಂತಿ ಉಂಟಾಗುವುದು.
20 : ನೀವಾದರೋ ಕಾಲು ಚಾಚಲು ಚಾಪೆ ಸಾಲದವನಂತೆ, ಹೊದ್ದುಕೊಳ್ಳಲು ಕಂಬಳಿ ಸಾಲದವನಂತೆ ಇರುವಿರಿ.
21 : ಒಮ್ಮೆ ಸರ್ವೇಶ್ವರ ಪೆರಾಚೀಮ್ ಬೆಟ್ಟದ ಮೇಲೆ ಎದ್ದಂತೆ ಏಳುವರು; ಗೊಬ್ಯೋನ್ ಕಣಿವೆಯಲ್ಲಿ ರೋಷಗೊಂಡಂತೆ ರೋಷಗೊಳ್ಳುವರು. ಆಗ ಅಸಾಧಾರಣ ಕಾರ್ಯವೊಂದನ್ನು ನಡೆಸುವರು; ಅಪೂರ್ವವಾದ ತಮ್ಮ ಕೆಲಸವನ್ನು ನೆರವೇರಿಸುವರು;
22 : ಆದಕಾರಣ, ನಿಮ್ಮ ಬಂಧನಗಳು ಇನ್ನೂ ಬಿಗಿಯಾಗದಂತೆ ಧರ್ಮನಿಂದೆಯನ್ನು ಬಿಟ್ಟುಬಿಡಿ. ‘ಇಡೀ ನಾಡೇ ನಾಶವಾಗಲಿ’ ಎಂಬ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ತೀರ್ಪನ್ನು ನಾನು ಕೇಳಿದ್ದೇನೆ.
23 : ನನ್ನ ಮಾತಿಗೆ ಕಿವಿಗೊಡಿ, ನಾನು ಹೇಳುವುದನ್ನು ಗಮನವಿಟ್ಟು ಆಲಿಸಿ.
24 : ಬಿತ್ತನೆಗಾಗಿ ಉಳುವವನು ಸದಾ ಉತ್ತುಕೊಂಡೇ ಇರುವನೋ? ಪ್ರತಿನಿತ್ಯವೂ ಮಣ್ಣನ್ನು ಕೆಳಮೇಲು ಮಾಡುತ್ತಾ ಕುಂಟೆಹೊಡೆದುಕೊಂಡೇ ಇರುವನೋ?
25 : ಒಮ್ಮೆ ಭೂಮಿಯನ್ನು ಹಸನುಮಾಡಿದ ಮೇಲೆ ಜೀರಿಗೆಯನ್ನು ಚೆಲ್ಲಿ, ಸದಾಪನ್ನು ಬಿತ್ತುವವನಲ್ಲವೆ? ಗೋದಿಯನ್ನು ಸಾಲುಸಾಲಾಗಿಯೂ ಬಾರ್ಲಿಯನ್ನು ತಕ್ಕ ಸ್ಥಳದಲ್ಲಿ ಬಿತ್ತಿ, ಕಡಲೆಯನ್ನು ಅಂಚಿನಲ್ಲಿ ಹಾಕುವವನಲ್ಲವೆ?
26 : ಅವನ ದೇವರು ಇದನ್ನೆಲ್ಲಾ ಸರಿಯಾಗಿ ತಿಳಿಸಿ ಕಲಿಸಿಕೊಡುತ್ತಾರೆ.
27 : ಸದಾಪನ್ನು ಒಕ್ಕುವುದು ಕಣದ ಗುಂಡಿನಿಂದಲ್ಲ, ದೊಣ್ಣೆಯಿಂದಲೇ.
28 : ಗೋದಿಯನ್ನು ಒಕ್ಕುವಾಗ ಕುದುರೆಗಳನ್ನು ಹೊಡೆದು ಗುಂಡನ್ನು ಉರುಳಿಸಿ ಕಾಳನ್ನು ಪುಡಿಪುಡಿಮಾಡುವನೋ? ಇಲ್ಲ.
29 : ಈ ವಿವೇಕವು ಕೂಡ ಸೇನಾಧೀಶ್ವರ ಸರ್ವೇಶ್ವರನಿಂದಲೇ ಬರುತ್ತದೆ. ಅವರ ಆಲೋಚನೆ ಅತಿಶಯವಾದುದು. ಅವರ ಜ್ಞಾನ ಸರ್ವಶ್ರೇಷ್ಠವಾದುದು.