P. O. C ബൈബിള്
ಹಳೆಯ ಒಡಂಬಡಿಕೆ
ಆದಿಕಾಂಡ
9ನೇ ಅಧ್ಯಾಯ
- Verse 1: ದೇವರು ನೋಹನನ್ನೂ ಅವನ ಮಕ್ಕಳನ್ನೂ ಆಶೀರ್ವದಿಸಿ ಹೀಗೆಂದರು - “ನೀವು ಅಭಿವೃದ್ಧಿಯಾಗಿ ಹೆಚ್ಚು ಮಕ್ಕಳನ್ನು ಪಡೆಯಿರಿ’; ಭೂಲೋಕದಲ್ಲೆಲ್ಲ ಹರಡಿಕೊಳ್ಳಿ.
- Verse 2: ಭೂಮಿಯ ಮೇಲಿರುವ ಎಲ್ಲ ಪ್ರಾಣಿಗಳೂ ಆಕಾಶದ ಎಲ್ಲ ಪಕ್ಷಿಗಳೂ ನೆಲದ ಮೇಲೆ ಹರಿದಾಡುವ ಎಲ್ಲ ಕ್ರಿಮಿಕೀಟಗಳೂ ಸಮುದ್ರದ ಎಲ್ಲ ಮೀನುಗಳೂ ನಿಮಗೆ ಹೆದರಿ ಬೆದರುವುವು. ಅವುಗಳನ್ನೆಲ್ಲ ನಿಮ್ಮ ಸ್ವಾಧೀನಕ್ಕೆ ಕೊಟ್ಟಿದ್ದೇನೆ.
- Verse 3: ಭೂಮಿಯ ಮೇಲೆ ಪೈರುಪಚ್ಚೆಯನ್ನು ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ.
- Verse 4: ಆದರೆ ಮಾಂಸವನ್ನು ಅದರ ಜೀವಸತ್ವವಾದ ರಕ್ತಸಮೇತ ತಿನ್ನಬಾರದು.
- Verse 5: ನಿಮ್ಮ ರಕ್ತಸುರಿಸಿ ಪ್ರಾಣತೆಗೆಯುವವರೆಗೆ ಮುಯ್ಯಿತೀರಿಸುವೆನು - ಮೃಗವಾಗಿದ್ದರೆ ಅದಕ್ಕೂ, ಮನುಷ್ಯನಾಗಿದ್ದರೆ, ಹತನಾದವನು ಅವನ ಸಹೋದರನಾದುದರಿಂದ ಅವನಿಗೂ ಮುಯ್ಯಿತೀರಿಸುವೆನು.
- Verse 6: "ನಿರ್ಮಿಸಿಹರು ದೇವರು ತಮ್ಮ ಸ್ವರೂಪದಲ್ಲಿ ನರನನ್ನು ಎಂತಲೆ ನರನನ್ನು ಕೊಲ್ಲುವವನು ನರನಿಂದಲೇ ಹತನಾಗುವನು.
- Verse 7: ನೀವು ಹೆಚ್ಚಿ ಅಭಿವೃದ್ಧಿಯಾಗಿರಿ, ನಿಮ್ಮ ಸಂಖ್ಯೆ ಬೆಳೆಯಲಿ ಭೂಮಿಯಲ್ಲಿ."
- Verse 8: ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ ಇಂತೆಂದು ಹೇಳಿದರು:
- Verse 9: “ಕೇಳಿ, ನಾನು ನಿಮ್ಮನ್ನೂ ನಿಮ್ಮ ಸಂತತಿಯವರನ್ನೂ
- Verse 10: ನಿಮ್ಮ ಕೂಡ ನಾವೆಯಿಂದ ಹೊರಟುಬಂದ ಪ್ರಾಣಿ-ಪಕ್ಷಿ-ಮೃಗಾದಿ ಸಕಲ ಭೂಜಂತುಗಳನ್ನೂ ಕುರಿತು ಒಂದು ಸ್ಥಿರ ಪ್ರತಿಜ್ಞೆಯನ್ನು ಮಾಡುತ್ತೇನೆ.
- Verse 11: ಆ ಪ್ರತಿಜ್ಞೆ ಏನೆಂದರೆ - ಇನ್ನು ಮೇಲೆ ನಾನು ಪ್ರಾಣಿಗಳನ್ನೆಲ್ಲಾ ಜಲಪ್ರಳಯದಿಂದ ನಾಶಮಾಡುವುದಿಲ್ಲ; ಇನ್ನು ಮುಂದೆ ಭೂಮಿಯನ್ನು ಹಾಳುಮಾಡುವ ಪ್ರಳಯವು ಬರುವುದೇ ಇಲ್ಲ.”
- Verse 12: ದೇವರು ಮತ್ತೆ ಹೇಳಿದ್ದೇನೆಂದರೆ - “ನಾನು ನಿಮ್ಮನ್ನೂ ನಿಮ್ಮ ಸಂಗಡವಿರುವ ಸಮಸ್ತ ಜೀವರಾಶಿಗಳನ್ನೂ ಕುರಿತು ತಲತಲಾಂತರಗಳಿಗೆ ಮಾಡುವ ಈ ಪ್ರತಿಜ್ಞೆಗೆ
- Verse 13: ಮೇಘಗಳಲ್ಲಿ ನಾನಿಟ್ಟಿರುವ ಮಳೆಬಿಲ್ಲೇ ಗುರುತು. ನನಗೂ ಭೂಪ್ರಾಣಿಗಳಿಗೂ ಆದ ಒಡಂಬಡಿಕೆಗೆ ಇದೇ ಕುರುಹು.
- Verse 14: ನಾನು ಜಗದ ಮೇಲೆ ಮೇಘಗಳನ್ನು ಕವಿಸುವಾಗ ಆ ಬಿಲ್ಲು ಮೇಘಗಳಲ್ಲಿ ಕಂಡುಬರುವುದು.
- Verse 15: ಆಗ ನಿಮ್ಮನ್ನೂ ಎಲ್ಲ ಜೀವರಾಶಿಗಳನ್ನೂ ಕುರಿತು ನಾನು ಮಾಡಿದ ಪ್ರತಿಜ್ಞೆಯನ್ನು ನೆನೆಸಿಕೊಳ್ಳುತ್ತೇನೆ. ಇನ್ನು ಮುಂದೆ ಜಲ ಹೆಚ್ಚಿ ಭೂಪ್ರಾಣಿಗಳನ್ನೆಲ್ಲಾ ಹಾಳುಮಾಡುವ ಪ್ರಳಯ ಬರುವುದಿಲ್ಲ.
- Verse 16: ಆ ಬಿಲ್ಲು ಮೇಘಗಳಲ್ಲಿ ಕಾಣಿಸುವಾಗ ನಾನು ಅದನ್ನು ನೋಡಿ ದೇವರಾದ ನನಗೂ ಭೂಮಿಯ ಮೇಲಿರುವ ಎಲ್ಲ ಜೀವಜಂತುಗಳಿಗೂ ಆದ ಶಾಶ್ವತ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುತ್ತೇನೆ,”
- Verse 17: ಇದು ಅಲ್ಲದೆ ದೇವರು ನೋಹನಿಗೆ, “ನನಗೂ ಸಮಸ್ತ ಭೂಜೀವಿಗಳಿಗೂ ಆದ ಒಡಂಬಡಿಕೆಗೆ ಇದೇ ಗುರುತು,” ಎಂದು ಹೇಳಿದರು.
- Verse 18: ನಾವೆಯಿಂದ ಹೊರಟುಬಂದ ನೋಹನ ಮಕ್ಕಳು ಶೇಮ್, ಹಾಮ್, ಯೆಫೆತ್ ಎಂಬುವರು. (ಹಾಮನು ಕಾನಾನನ ತಂದೆ).
- Verse 19: ಜಗದಲ್ಲೆಲ್ಲ ಹರಡಿಕೊಂಡಿರುವ ಜನರು ನೋಹನ ಈ ಮೂರು ಮಕ್ಕಳಿಂದಲೇ ಉತ್ಪತ್ತಿಯಾದುದು.
- Verse 20: ನೋಹನು ವ್ಯವಸಾಯಗಾರ. ದ್ರಾಕ್ಷಿತೋಟ ಮಾಡುವುದನ್ನು ಪ್ರಾರಂಭಿಸಿದವನು ಅವನೇ.
- Verse 21: ಒಮ್ಮೆ ಅವನು ಕುಡಿದು ಅಮಲೇರಿ ಗುಡಾರದಲ್ಲಿ ಬೆತ್ತಲೆಯಾಗಿ ಬಿದ್ದಿದ್ದನು.
- Verse 22: ತನ್ನ ತಂದೆ ಬೆತ್ತಲೆಯಾಗಿರುವುದನ್ನು ಕಂಡ ಕಾನಾನನ ತಂದೆ ಹಾಮನು ಹೊರಗಿದ್ದ ಶೇಮ್, ಯೆಫೆತ್ ಸೋದರರಿಗೆ ತಿಳಿಸಿದನು.
- Verse 23: ಅವರಿಬ್ಬರು ಬಂದು ಹೊದಿಕೆಯನ್ನು ತೆಗೆದುಕೊಂಡು, ಬೆನ್ನಿನ ಹಿಂದೆ ಹಾಕಿಕೊಂಡು, ಹಿಂದುಹಿಂದಕ್ಕೆ ನಡೆದುಬಂದು ತಂದೆಗೆ ಅದನ್ನು ಹೊದಿಸಿ ಅವನ ಮಾನವನ್ನು ಕಾಪಾಡಿದರು. ಅವರಿಬ್ಬರು ಹಿಮ್ಮುಖರಾಗಿ ಇದ್ದುದರಿಂದ ತಂದೆ ಬೆತ್ತಲೆಯಾಗಿದ್ದುದನ್ನು ನೋಡಲಿಲ್ಲ.
- Verse 24: ನೋಹನಿಗೆ ಅಮಲು ಇಳಿದ ಮೇಲೆ ತನ್ನ ಕಿರಿಯ ಮಗ ಮಾಡಿದ್ದು ತಿಳಿಯಿತು. ಆಗ ಅವನು ಹೀಗೆಂದನು:
- Verse 25: “ಶಾಪ ತಟ್ಟಲಿ ಕಾನಾನಿಗೆ ದಾಸಾನುದಾಸನಾಗಲಿ ಅವನು ತನ್ನ ಸೋದರರಿಗೆ”
- Verse 26: "ಸ್ತೋತ್ರ, ಶೇಮನ ದೇವರಾದ ಸರ್ವೇಶ್ವರನಿಗೆ ದಾಸನಾಗಲಿ ಕಾನಾನನು ಶೇಮನಿಗೆ"
- Verse 27: "ಅಭಿವೃದ್ಧಿಯನು ನೀಡಲಿ ದೇವರು ಯೆಫೆತನಿಗೆ ವಾಸವಾಗಿರಲಿವನು ಶೇಮನ ಗುಡಾರದೊಳಗೆ, ದಾಸನಾಗಿರಲಿ ಕಾನಾನನು ಯೆಫೆತನಿಗೆ”
- Verse 28: ಜಲಪ್ರಳಯ ಮುಗಿದ ಮೇಲೆ ನೋಹನು 350 ವರ್ಷ ಬದುಕಿದ್ದನು.
- Verse 29: ಸತ್ತಾಗ ಅವನಿಗೆ ಒಟ್ಟು 950 ವರ್ಷಗಳಾಗಿದ್ದವು.