पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
58ನೇ ಅಧ್ಯಾಯ
1 : ಜನನಾಯಕರೇ, ನ್ಯಾಯಬದ್ಧವೊ ನಿಮ್ಮ ತೀರ್ಪುಗಳು I ವ್ಯಾಜ್ಯಗಳನು ಬಗೆಹರಿಸುತ್ತವೆಯೆ ನಿಮ್ಮ ನಿರ್ಣಯಗಳು? II
2 : ಬದಲಿಗೆ ಕಲ್ಪಿಸುತ್ತೀರಿ ಅಕ್ರಮವನು ಮನದಲಿ I ಧರೆಗೀಯುತ್ತೀರಿ ಹಿಂಸಾಚಾರವನು ತೂಕದಲಿ II
3 : ದುರುಳರು ದಾರಿತಪ್ಪಿದವರು ಉದರದಿಂದಲೆ I ಸಟೆಯಾಡುವ ಅಕ್ರಮಿಗಳವರು ಹುಟ್ಟಿನಿಂದಲೆ II
4 : ಸರ್ಪಗಳಂತಾ ಜನ ವಿಷಭರಿತ I ನಾಗರದಂತೆ ಅವರ ಕಿವಿ ಮಂದ II
5 : ಒಲಿಯದವರ ಕಿವಿ ಪುಂಗಿಯ ನಾದಕೆ I ಮಣಿಯವು ಹಾವಾಡಿಗನ ಮಾಟಕೆ II
6 : ಮುರಿದುಬಿಡು ಹೇ ದೇವಾ, ಆ ದುರುಳರ ಹಲ್ಲುಗಳನು I ಕಿತ್ತುಬಿಡು ಪ್ರಭು, ಆ ಪ್ರಾಯಸಿಂಹಗಳ ಕೋರೆಗಳನು II
7 : ಅವರಾಗಲಿ ಬೇಗನೆ ಕಾಣದೆ ಹೋಗುವ ತೊರೆಯಂತೆ I ನಸುಕಿ ನಾಶವಾಗಲಿ ಪಾದದಡಿ ಸಿಲುಕಿದ ಗರಿಕೆಕಣದಂತೆ II
8 : ನುಸುಳಿ ನುಸುಳಿ ನಶಿಸಿಹೋಗಲಿ ಬಸವನ ಹುಳದಂತೆ I ರವಿಯ ಬೆಳಕನು ಕಾಣದಿರಲಿ ಗರ್ಭವಿಳಿದ ಪಿಂಡದಂತೆ II
9 : ಹಸುರಿರಲಿ ಒಣಗಿರಲಿ, ಒಲೆ ಪಾಲಾಗಲಿ ಮುಳ್ಳಿನಂತೆ I ನಿಶ್ಯೇಷವಾಗಲಿ ದೇವಕೋಪಾಗ್ನಿಗೆ ಸಿಲುಕಿದಂತೆ II
10 : ನಲಿವರು ಸಜ್ಜನರು ಈ ಪ್ರತೀಕಾರ ನೋಟದಲಿ I ಕಾಲುತೊಳೆಯುವರವರು ಆ ದುರ್ಜನರ ನೆತ್ತರಲಿ II
11 : “ನ್ಯಾಯ ನಿರ್ಣಯಿಸುವಂಥ ದೇವನಿಹನು ಜಗದಲಿ I ಸಜ್ಜನರಿಗೆ ಸತ್ಫಲ ಕಟ್ಟಿಟ್ಟ ಬುತ್ತಿ,” ಇದು ನಾಣ್ನುಡಿ II