ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
73ನೇ ಅಧ್ಯಾಯ
1 : ದೇವನು ಎನಿತೋ ಒಳ್ಳೆಯವನು ಇಸ್ರಯೇಲಿಗೆ I ದಯಾಪರನಾತನು ಶುದ್ಧಹೃದಯಿಗಳಿಗೆ II
2 : ದುರ್ಜನರು ಧನಿಕರಾಗುವುದ ಕಂಡಾಗ I ಗರ್ವಿಗಳ ನೋಡಿ ನಾನಸೂಯೆಗೊಂಡಾಗ II
3 : ತಡವರಿಸಿದವು ನನ್ನ ಕಾಲುಗಳು I ಜಾರಿ ಬೀಳಲಿದ್ದವು ಹೆಜ್ಜೆಗಳು II
4 : ಆ ಜನರಿಗೆ ನೋವುಕಾವೆಂಬುದಿಲ್ಲ I ಅವರ ದೇಹ ಸಬಲವಾಗಿದೆಯಲ್ಲ! II
5 : ಇತರರಂತೆ ಅವರಿಗೆ ಸಂಕಟವಿಲ್ಲವಲ್ಲಾ! I ರೋಗರುಜೆ ಅವರಿಗಂಟುವುದಿಲ್ಲವಲ್ಲಾ! II
6 : ಈ ಕಾರಣ ಗರ್ವವೇ ಅವರಿಗೆ ಕಂಠಮಾಲೆ I ಹಿಂಸಾಚಾರವೇ ಅವರಿಗೆ ಬಟ್ಟೆಬರೆ II
7 : ದೋಷ ಹೊರಸೂಸುತ್ತಿದೆ ಕೊಬ್ಬಿನಾ ಕಣ್ಗಳಿಂದ I ದುಷ್ಕಲ್ಪನೆಗಳು ತುಳುಕುತಿವೆ ಹೃನ್ಮನಗಳಿಂದ II
8 : ಕೇಡು ಮಾತು, ಕೆಣಕು ಮಾತು ಅವರದು I ಜೊತೆಗೆ ಬಲಾತ್ಕಾರದ ಸೊಕ್ಕು ಮಾತು II
9 : ನಾಕವನೆ ತಾಕುತಿದೆ ಅವರ ಗರ್ವದ ನುಡಿ I ಜಗದಲಿ ಹರಡುತಿದೆ ಅವರ ದರ್ಪದ ನುಡಿ II
10 : ಎಂತಲೆ ಜನರವರ ಕಡೆ ತಿರುಗಿಕೊಳ್ಳುವರು I ನೀರಂತೆ ಅವರ ಮಾತನು ಹೀರಿಕೊಳ್ಳುವರು II
11 : “ಆ ದೇವನೆಂತು ಕಂಡುಹಿಡಿದಾನು?” ಎಂಬರು I “ಪರಾತ್ಪರನು ಪರಿಜ್ಞನೆ?” ಎಂದುಕೊಳ್ವರು II
12 : ದುರ್ಜನರಿದೊ ನಿಶ್ಚಿಂತರಾಗಿಹರು I ಸಿರಿಮೇಲೆ ಸಿರಿಯ ಶೇಖರಿಸುತಿಹರು II
13 : ನಾ ನಿರ್ಮಲಚಿತ್ತನಾಗಿ ಬಾಳಿದ್ದು ವ್ಯರ್ಥವೋ? I ಶುದ್ಧಹಸ್ತನಾಗಿ ನಡೆದುಕೊಂಡುದು ನಿರರ್ಥಕವೋ? II
14 : ಏಕೆನೆ, ದಿನವಿಡಿ ನಾ ಬಾಧೆಪಡುತ್ತಿರುವೆ I ದಿನದಿನವು ದಂಡನೆಗೆ ಗುರಿಯಾಗುತ್ತಿರುವೆ II
15 : ನಾ ಬಾಯ್ದೆರೆದು ನುಡಿದಿದ್ದೆನಾದರೆ ಈ ಪರಿ I ನಿನ್ನ ಭಕ್ತಕುಲಕೆ ನಾ ದ್ರೋಹಿಯೇ ಸರಿ II
16 : ಇದರ ಮರ್ಮವನು ನಾ ಬಗೆಹರಿಸಲು ಯತ್ನಿಸೆ I ತೋಚಿತೆನಗಿದು ಬಿಡಿಸಲಾಗದಂಥ ಸಮಸ್ಯೆ II
17 : ಆದರೆ ದೇವಾಲಯವನು ಹೊಕ್ಕು ನಿಂತಾಗ I ಆ ಜನರ ಅಂತಿಮ ಗತಿಯನಾಲೋಚಿಸಿದಾಗ I ಋಜುವಾದ ಜ್ಞಾನೋದಯ ಆಯಿತೆನಗಾಗ II
18 : ಜಾರು ನೆಲದಲಿ ಆ ಜನರನು ನೀ ನಿಲ್ಲಿಸಿರುವೆ I ನಿಶ್ಚಯವಾಗಿ ನೀ ಬೀಳಿಸಿ ಅವರನು ನಾಶಮಾಡುವೆ II
19 : ಕ್ಷಣ ಮಾತ್ರದಲಿ ಅಳಿದು ಹಾಳಾಗುವರು I ಭೀಕರವಾಗಿ ನಿರ್ಮೂಲವಾಗುವರು II
20 : ನಿದ್ರೆಯಿಂದೆದ್ದವನು ಕನಸನ್ನು ತೃಣೀಕರಿಸುವಂತೆ I ಪ್ರಭು ನೀನೆದ್ದು ಕಡೆಗಣಿಸುವೆ ಅವರನು ಮಾಯೆಯಂತೆ II
21 : ಹೃದಯ ನೊಂದು ಬೆಂದಿರಲು I ಮನದಲಿ ಅಲಗು ನಾಟಿರಲು II
22 : ನಾ ಮಂದಮತಿಯಾಗಿದ್ದೆ ಅರಿವಿಲ್ಲದೆ I ನಾ ವನ್ಯಮೃಗನಂತಿದ್ದೆ ನಿನ್ನ ಮುಂದೆ II
23 : ಆದರೂ ನಾನಿರುವೆ ನಿನ್ನ ಸನ್ನಿಧಿಯಲಿ I ನೀ ಹಿಡಿದಿರುವೆ ನನ್ನ ಬಲಗೈಯನು ಭದ್ರವಾಗಿ II
24 : ಸೂಕ್ತ ಸಲಹೆಯನಿತ್ತು ಮುಂದಕೆನ್ನ ನಡೆಸು I ಅಂತ್ಯದಲಿ ನಿನ್ನ ಮಹಿಮೆಗೆನ್ನ ಸೇರ್ಪಡಿಸು II
25 : ನನಗೆ ನೀನಲ್ಲದೆ ಇನ್ನಾರಿಹರು ಪರದಲಿ I ನಿನ್ನ ಹೊರತು ನನಗೇನು ಬೇಕಿಲ್ಲ ಇಹದಲಿ II
26 : ನನ್ನ ತನುಮನಗಳೆಲ್ಲವೂ ಸೊರಗಿಹೋದರೂ I ನನ್ನಾತ್ಮದ ಶಕ್ತಿ, ಶಾಶ್ವತ ಸೊತ್ತು ದೇವರು II
27 : ವಿನಾಶವಾಗುವರು ನಿನ್ನಿಂದ ದೂರ ಸರಿವವರು I ಧ್ವಂಸವಾಗುವರು ನಿನಗೆ ದ್ರೋಹವೆಸಗಿದವರು II
28 : ನಿನ್ನ ಸಾನ್ನಿಧ್ಯ ಸ್ವಾಮಿದೇವಾ, ನನಗೆಂಥ ಸೌಭಾಗ್ಯ I ನಿನ್ನ ಸತ್ಕಾರ್ಯಗಳ ಸಾರಲೆಂದೆ ನಿನ್ನನಾಶ್ರಯಿಸಿಕೊಂಡೆನಯ್ಯಾ II