पवित्र बाइबिल
ಹೊಸ ಒಡಂಬಡಿಕೆ
ಹಿಬ್ರಿಯರಿಗೆ
2ನೇ ಅಧ್ಯಾಯ
1 : ಆದ್ದರಿಂದಲೇ ಹುಚ್ಚುಹೊಳೆಯಲ್ಲಿ ಕೊಚ್ಚಿಹೋಗದ ಹಾಗೆ ನಾವು ಕೇಳಿರುವ ಸತ್ಯಗಳಿಗೆ ಬಿಗಿಯಾಗಿ ಕಚ್ಚಿಕೊಳ್ಳಬೇಕು.
2 : ಏಕೆಂದರೆ, ದೇವದೂತರ ಮುಖಾಂತರ ನಮ್ಮ ಪೂರ್ವಜರಿಗೆ ಕೊಡಲಾದ ಸಂದೇಶವು ಅಕ್ಷಯವಾಗಿದ್ದು ಅದನ್ನು ಮೀರಿ ಮಾಡಿದ ಪ್ರತಿಯೊಂದು ತಪ್ಪು ಮತ್ತು ಅವಿಧೇಯತೆಯು ಶಿಕ್ಷಾರ್ಹವಾಗಿದ್ದರೆ,
3 : ಇಂಥ ಉತ್ಕೃಷ್ಟ ಜೀವೋದ್ಧಾರವನ್ನು ಪಡೆದಿರುವ ನಾವು ಅದನ್ನು ಅಲಕ್ಷ್ಯಮಾಡಿದಲ್ಲಿ ಶಿಕ್ಷೆಯಿಂದ ಹೇಗೆತಾನೆ ತಪ್ಪಿಸಿಕೊಳ್ಳಬಲ್ಲೆವು? ಈ ಜೀವೋದ್ಧಾರವನ್ನು ಮೊತ್ತಮೊದಲು ಸಾರಿದವರು ಪ್ರಭುವೇ. ಅವರನ್ನು ಆಗ ಆಲಿಸಿದವರು ಅದನ್ನು ನಮಗೆ ಪ್ರಮಾಣೀಕರಿಸಿದ್ದಾರೆ.
4 : ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಹಲವಾರು ಮಹತ್ಕಾರ್ಯಗಳಿಂದಲೂ ಮತ್ತು ತಮ್ಮ ಚಿತ್ತಾನುಸಾರ ಅನುಗ್ರಹಿಸಿದ ಪವಿತ್ರಾತ್ಮ ಅವರ ವರದಾನಗಳಿಂದಲೂ ದೇವರು ಆ ಪ್ರಮಾಣವನ್ನು ಪುಷ್ಟೀಕರಿಸಿದ್ದಾರೆ.
5 : ನಾವು ಪ್ರಸ್ತಾಪಿಸುತ್ತಿರುವ ನೂತನ ಸಾಮ್ರಾಜ್ಯವನ್ನು ದೇವರು ತಮ್ಮ ದೂತರಿಗೆ ಅಧೀನಪಡಿಸಲಿಲ್ಲ.
6 : ಅದಕ್ಕೆ ಬದಲಾಗಿ, ಪವಿತ್ರಗ್ರಂಥದಲ್ಲಿ ಒಂದೆಡೆ ಹೀಗೆಂದು ಸ್ಪಷ್ಟವಾಗಿ ಹೇಳಲಾಗಿದೆ: “ಓ ದೇವಾ, ಹುಲುಮಾನವನೆಷ್ಟರವನು ನೀನವನ ಗಮನಿಸಲು?
7 : ನರಪುತ್ರನು ಎನಿತರವನು ನೀನವನ ಅರಸಿಬರಲು? ದೇವದೂತರಿಗಿಂತಲೂ ಆತನನು ತುಸುವೇ ತಗ್ಗಿಸಿದೆ ಘನಗೌರವವನು, ಸಿರಿಮಹಿಮೆಯನು ಮುಕುಟವಾಗಿ ಮುಡಿಸಿದೆ;
8 : ಆತನಿಗೆ ನೀನೆಲ್ಲವನು ಅಧೀನವಾಗಿಸಿದೆ.” ಹೀಗೆ ದೇವರು ಎಲ್ಲವನ್ನು ಆತನಿಗೆ ಅಧೀನಪಡಿಸಿರುವುದರಿಂದ ಆತನಿಗೆ ಅಧೀನವಲ್ಲದ್ದು ಏನೂ ಇಲ್ಲವೆಂದಾಯಿತು. ಆದರೂ ಸದ್ಯಕ್ಕೆ ಎಲ್ಲವೂ ಆತನಿಗೆ ಅಧೀನವಾಗಿರುವುದನ್ನು ನಾವು ಕಾಣುತ್ತಿಲ್ಲ.
9 : ದೇವದೂತರಿಗಿಂತ ಕೊಂಚಕಾಲವೇ ತುಸು ತಗ್ಗಿಸಲಾದ ಒಬ್ಬರನ್ನು, ಅಂದರೆ ಯೇಸುವನ್ನು ಮಾತ್ರ ನಾವು ಕಾಣುತ್ತೇವೆ. ಇವರು ಯಾತನಾ ಮರಣವನ್ನು ಅನುಭವಿಸಿದ್ದರಿಂದ ‘ಘನಗೌರವವನ್ನೂ ಸಿರಿಮಹಿಮೆಯನ್ನೂ ಮುಕುಟವಾಗಿ’ ಪಡೆದುದನ್ನು ನಾವು ಕಾಣುತ್ತೇವೆ. ದೈವಾನುಗ್ರಹದಿಂದ ಎಲ್ಲಾ ಮಾನವರ ಕಲ್ಯಾಣಕ್ಕಾಗಿ ಅವರು ಸಾವನ್ನು ಅನುಭವಿಸಬೇಕಾಗಿತ್ತು.
10 : ಸಮಸ್ತವನ್ನೂ ಸೃಷ್ಟಿಸಿ ಪರಿಪಾಲಿಸಿಕೊಂಡುಬರುವ ದೇವರು ತಮ್ಮ ಮಹಿಮೆಯಲ್ಲಿ ಪಾಲುಗೊಳ್ಳಲು ಮಕ್ಕಳನೇಕರನ್ನು ಕರೆತರುವಂತೆ ಉದ್ಧಾರ ಪ್ರವರ್ತಕರಾದ ಯೇಸುವನ್ನು ಹಿಂಸೆಬಾಧೆಗಳ ಮೂಲಕ ಪರಿಪೂರ್ಣವಾಗಿಸಿದ್ದು ಯುಕ್ತವೇ ಸರಿ.
11 : ಪವಿತ್ರಗೊಳಿಸುವವನಿಗೂ ಪವಿತ್ರರಾಗುವವರಿಗೂ ಒಬ್ಬನೇ ತಂದೆ. ಈ ಕಾರಣ, ಪವಿತ್ರಗೊಳಿಸುವ ಯೇಸು, ಪವಿತ್ರರಾಗುವವರನ್ನು ‘ಸಹೋದರರು’ ಎಂದು ಕರೆಯಲು ನಾಚಿಕೆಪಡಲಿಲ್ಲ.
12 : “ಸಾರುವೆನು ನನ್ನ ಸೋದರರಿಗೆ ನಿನ್ನ ಮಹಿಮೆಯನು ಮಾಡುವೆನು ಸಭಾಮಧ್ಯೆ ನಿನ್ನ ಗುಣಗಾನವನು,” ಎಂದೂ
13 : “ದೇವರಲ್ಲಿ ಭರವಸೆಯಿಡುವೆನು ನಾನು,” ಎಂದೂ “ಇಗೋ, ಇರುವೆವು ನಾನು ಮತ್ತು ದೇವರೆನಗಿತ್ತ ಕುವರರು,” ಎಂದು ಹೇಳಿದ್ದಾರೆ.
14 : ಇದಲ್ಲದೆ, ಮಕ್ಕಳು ರಕ್ತಮಾಂಸಧಾರಿಗಳಾಗಿರುವುದರಿಂದ ಯೇಸುವು ಅವರಂತೆ ರಕ್ತಮಾಂಸಧಾರಿಯಾದರು. ಹೀಗೆ ಮರಣಾಧಿಕಾರಿಯಾಗಿದ್ದ ಸೈತಾನನನ್ನು ತಮ್ಮ ಮರಣದಿಂದಲೇ ಸೋಲಿಸಲು ಮತ್ತು ಮರಣಭಯದ ನಿಮಿತ್ತ ತಮ್ಮ ಜೀವನದುದ್ದಕ್ಕೂ ದಾಸ್ಯದಲ್ಲಿದ್ದವರನ್ನು ಬಿಡುಗಡೆಮಾಡಲು ಅವರು ಮನುಷ್ಯರಾದರು.
15 : ಇದಲ್ಲದೆ, ಮಕ್ಕಳು ರಕ್ತಮಾಂಸಧಾರಿಗಳಾಗಿರುವುದರಿಂದ ಯೇಸುವು ಅವರಂತೆ ರಕ್ತಮಾಂಸಧಾರಿಯಾದರು. ಹೀಗೆ ಮರಣಾಧಿಕಾರಿಯಾಗಿದ್ದ ಸೈತಾನನನ್ನು ತಮ್ಮ ಮರಣದಿಂದಲೇ ಸೋಲಿಸಲು ಮತ್ತು ಮರಣಭಯದ ನಿಮಿತ್ತ ತಮ್ಮ ಜೀವನದುದ್ದಕ್ಕೂ ದಾಸ್ಯದಲ್ಲಿದ್ದವರನ್ನು ಬಿಡುಗಡೆಮಾಡಲು ಅವರು ಮನುಷ್ಯರಾದರು.
16 : ಅವರು ಉದ್ಧಾರ ಮಾಡಬಂದುದು ಖಂಡಿತವಾಗಿ ದೇವದೂತರನ್ನಲ್ಲ, ಅಬ್ರಹಾಮನ ಸಂತತಿಯನ್ನು.
17 : ಆದಕಾರಣ, ಎಲ್ಲದರಲ್ಲೂ ತಮ್ಮ ಸಹೋದರರಿಗೆ ಸಮಾನರಾಗಬೇಕಾಗಿತ್ತು; ಜನರ ಪಾಪನಿವಾರಣೆಗಾಗಿ ದೇವರ ಕಾರ್ಯಗಳನ್ನು ನಿರ್ವಹಿಸುವ ದಯಾಮಯನೂ ನಂಬಿಕಸ್ಥನೂ ಆದ ಪ್ರಧಾನ ಯಾಜಕನಾಗಬೇಕಾಗಿತ್ತು.
18 : ಸ್ವತಃ ತಾವೇ ಶೋಧನೆಗೊಳಗಾಗಿ ಯಾತನೆಯನ್ನು ಅನುಭವಿಸಿದ್ದರಿಂದ ಶೋಧನೆಗೊಳಗಾಗುವವರಿಗೆ ನೆರವಾಗಲು ಯೇಸು ಸಮರ್ಥರಾದರು.