ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ವಿಮೋಚನಕಾಂಡ
19ನೇ ಅಧ್ಯಾಯ
- Verse 1: ಇಸ್ರಯೇಲರು ಈಜಿಪ್ಟ್ ದೇಶದಿಂದ ಹೊರಟ ಮೂರನೆಯ ತಿಂಗಳಿನ ಅದೇ ದಿವಸದಲ್ಲಿ ಸೀನಾಯಿ ಮರುಭೂಮಿಗೆ ಬಂದರು.
- Verse 2: ಅವರು ರೆಫೀದೀಮನ್ನು ಬಿಟ್ಟು ಆ ಮರುಭೂಮಿಗೆ ಬಂದು ಅಲ್ಲಿನ ಬೆಟ್ಟಕ್ಕೆ ಎದುರಾಗಿ ಇಳಿದುಕೊಂಡರು.
- Verse 3: ಮೋಶೆ ಬೆಟ್ಟವನ್ನೇರಿ ದೇವರ ಸನ್ನಿಧಿಗೆ ಬಂದನು. ಸರ್ವೇಶ್ವರ ಸ್ವಾಮಿ ಬೆಟ್ಟದ ಮೇಲಿಂದ ಕೂಗಿ ಅವನಿಗೆ, “ನೀನು ಯಕೋಬನ ಮನೆತನದವರಾದ ಇಸ್ರಯೇಲರಿಗೆ ಈ ಮಾತುಗಳನ್ನು ಹೇಳು:
- Verse 4: 'ನಾನು ಈಜಿಪ್ಟಿನವರಿಗೆ ಏನು ಮಾಡಿದೆನೆಂದು ನೀವು ನೋಡಿದ್ದೀರಿ. ಹದ್ದು ತನ್ನ ಮರಿಗಳನ್ನು ರೆಕ್ಕೆಗಳ ಮೇಲೆ ಹೊತ್ತುಕೊಳ್ಳುವಂತೆ ನಾನು ನಿಮ್ಮನ್ನು ಹೊತ್ತು ಈ ನನ್ನ ಸ್ಥಳಕ್ಕೆ ಸೇರಿಸಿದ್ದೇನೆ. ಇದೆಲ್ಲಾ ನಿಮಗೆ ಗೊತ್ತಿದೆ.
- Verse 5: ಹೀಗಿರಲು, ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ನೀಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ, ಸಮಸ್ತ ಭೂಮಿ ನನ್ನದಾಗಿದ್ದರೂ ನೀವು ಎಲ್ಲ ಜನಾಂಗಗಳಲ್ಲಿ ನನಗೆ ಸ್ವಕೀಯ ಜನರಾಗುವಿರಿ.
- Verse 6: ಅಲ್ಲದೆ ನೀವು ನನಗೆ ಯಾಜಕ ರಾಜವಂಶ ಹಾಗು ಪರಿಶುದ್ಧ ಜನಾಂಗ ಆಗುವಿರಿ,’ ಇಸ್ರಯೇಲರಿಗೆ ನೀನು ತಿಳಿಸಬೇಕಾದ ವಿಷಯವಿದು,” ಎಂದರು.
- Verse 7: ಮೋಶೆ ಇಳಿದುಬಂದು ಜನರ ಹಿರಿಯರನ್ನು ಕೂಡಿಸಿ, ಸರ್ವೇಶ್ವರ ಆಜ್ಞಾಪಿಸಿದ್ದ ಆ ಮಾತುಗಳನ್ನೆಲ್ಲಾ ಅವರಿಗೆ ತಿಳಿಸಿದನು.
- Verse 8: ಜನರೆಲ್ಲರು, “ಸರ್ವೇಶ್ವರ ಸ್ವಾಮಿ ಹೇಳಿದಂತೆಯೇ ನಾವು ಮಾಡುತ್ತೇವೆ,” ಎಂದು ಒಕ್ಕೊರಲಿನಿಂದ ಉತ್ತರಕೊಟ್ಟರು. ಮೋಶೆ ಸರ್ವೇಶ್ವರನ ಬಳಿಗೆ ಹೋಗಿ ಜನರ ಆ ಉತ್ತರವನ್ನು ಅರಿಕೆ ಮಾಡಿದನು.
- Verse 9: ಸರ್ವೇಶ್ವರ ಮೋಶೆಗೆ, “ಇಗೋ, ನಾನು ನಿನ್ನ ಸಂಗಡ ಮಾತಾಡುವುದನ್ನು ಜನರು ಕೇಳುವಂತೆಯೂ ಎಂದಿಗೂ ನಿನ್ನನ್ನು ನಂಬುವಂತೆಯೂ ನಾನು ಕಾರ್ಮುಗಿಲಲ್ಲಿ ನಿನ್ನ ಬಳಿಗೆ ಬರುತ್ತೇನೆ,” ಎಂದು ಹೇಳಿದರು.
- Verse 10: ಮೋಶೆ ಜನರ ಮಾತುಗಳನ್ನು ಸರ್ವೇಶ್ವರನಿಗೆ ಅರಿಕೆಮಾಡಲು ಸರ್ವೇಶ್ವರ ಹೀಗೆಂದರು: “ನೀನು ಜನರ ಬಳಿಗೆ ಹೋಗಿ ಇಂದು ಮತ್ತು ನಾಳೆ ಅವರನ್ನು ಪರಿಶುದ್ಧಗೊಳಿಸು. ಅವರು ತಮ್ಮ ಬಟ್ಟೆಗಳನ್ನು ಮಡಿಮಾಡಿಕೊಳ್ಳಲಿ.
- Verse 11: ಮೂರನೆಯ ದಿನ ಸಿದ್ಧರಾಗಿರಲಿ. ಏಕೆಂದರೆ ಆ ಮೂರನೆಯ ದಿನ ಸರ್ವೇಶ್ವರನಾದ ನಾನು ಸಮಸ್ತ ಜನರಿಗೂ ಪ್ರತ್ಯಕ್ಷನಾಗಲು ಸೀನಾಯಿ ಬೆಟ್ಟದ ಮೇಲೆ ಇಳಿದು ಬರುವೆನು.
- Verse 12: ಜನರು ಹತ್ತಿರಕ್ಕೆ ಬಾರದಂತೆ ನೀನು ಬೆಟ್ಟದ ಸುತ್ತಲೂ ಒಂದು ಮೇರೆಯನ್ನು ಏರ್ಪಡಿಸು. ಮತ್ತು ಜನರಿಗೆ ‘ಎಚ್ಚರಿಕೆ, ನೀವು ಈ ಬೆಟ್ಟವನ್ನು ಏರಕೂಡದು; ಅದರ ಅಂಚನ್ನೂ ಮುಟ್ಟಕೂಡದು. ಮುಟ್ಟಿದವನಿಗೆ ಮರಣ ಶಿಕ್ಷೆಯಾಗುವುದು ನಿಶ್ಚಯ.
- Verse 13: ಅಂಥವನನ್ನು ಯಾರೂ ಕೈಯಿಂದ ಮುಟ್ಟದೆ ಕಲ್ಲೆಸೆದು ಅಥವಾ ಬಾಣಬಿಟ್ಟು ಕೊಲ್ಲಬೇಕು. ಬೆಟ್ಟವನ್ನು ಮುಟ್ಟಿದವರು ಮನುಷ್ಯನಾಗಿರಲಿ, ಪಶುಪ್ರಾಣಿಯಾಗಲಿ ಉಳಿಯಬಾರದು.’ ಕೊಂಬಿನ ಧ್ವನಿ ಕೇಳಿಸಿದಾಗ ಬೆಟ್ಟವನ್ನೇರಿ ಬರಬೇಕೆಂದು ಹೇಳು.”
- Verse 14: ಅಂತೆಯೇ ಮೋಶೆ ಬೆಟ್ಟದಿಂದ ಇಳಿದು ಬಂದು ಜನರನ್ನು ಪರಿಶುದ್ಧಗೊಳಿಸಿದನು. ಅವರು ತಮ್ಮ ಬಟ್ಟೆಗಳನ್ನು ಮಡಿಮಾಡಿಕೊಂಡರು.
- Verse 15: ಆಗ ಮೋಶೆ ಜನರಿಗೆ, “ಮೂರನೆಯ ದಿನಕ್ಕಾಗಿ ಸಿದ್ಧರಾಗಿರಿ; ಯಾವ ಪುರುಷನು ಸ್ತ್ರೀಸಂಗ ಮಾಡಬಾರದು,” ಎಂದು ಹೇಳಿದನು.
- Verse 16: ಮೂರನೆಯ ದಿನ ಸೂರ್ಯೋದಯ ಆಗುವಾಗ ಆ ಬೆಟ್ಟದ ಮೇಲೆ ಗುಡುಗು, ಮಿಂಚು, ಕಾರ್ಮುಗಿಲು ಹಾಗು ತುತೂರಿಯ ಮಹಾಧ್ವನಿ ಉಂಟಾಯಿತು. ಪಾಳೆಯದಲ್ಲಿದ್ದ ಜನರೆಲ್ಲರು ನಡುಗಿದರು.
- Verse 17: ದೇವದರ್ಶನಕ್ಕಾಗಿ ಮೋಶೆ ಜನರನ್ನು ಪಾಳೆಯದ ಹೊರಕ್ಕೆ ಬರಮಾಡಿದನು. ಅವರು ಬಂದು ಬೆಟ್ಟದ ಬುಡದಲ್ಲಿ ನಿಂತರು.
- Verse 18: ಸೀನಾಯಿ ಬೆಟ್ಟವೆಲ್ಲಾ ಹೊಗೆಯಿಂದ ಆವರಿಸಿಕೊಂಡಿತ್ತು. ಏಕೆಂದರೆ ಸರ್ವೇಶ್ವರ ಸ್ವಾಮಿ ಬೆಂಕಿಯ ರೂಪದಲ್ಲಿ ಆ ಬೆಟ್ಟದ ಮೇಲೆ ಇಳಿದುಬಂದಿದ್ದರು. ಆ ಹೊಗೆ ಆವಿಗೆಯ ಹೊಗೆಯಂತೆ ಏರಿತು. ಅದೂ ಅಲ್ಲದೆ ಬೆಟ್ಟವೆಲ್ಲ ಬಹಳವಾಗಿ ಕಂಪಿಸಿತು.
- Verse 19: ತುತೂರಿಯ ಧ್ವನಿ ಹೆಚ್ಚು ಹೆಚ್ಚಾಗುತ್ತಾ ಬಂದಿತು. ಮೋಶೆ ಮಾತಾಡಿದಾಗ ದೇವರು ಮೇಘಗರ್ಜನೆಯಿಂದ ಉತ್ತರಕೊಟ್ಟರು.
- Verse 20: ಸರ್ವೇಶ್ವರ ಸೀನಾಯಿ ಬೆಟ್ಟದ ಶಿಖರಕ್ಕೆ ಇಳಿದು ಬಂದರು. ಅವರು, “ಬೆಟ್ಟದ ತುದಿಗೆ ಬಾ,” ಎಂದು ಮೋಶೆಯನ್ನು ಕರೆಯಲು ಅವನು ಬೆಟ್ಟವನ್ನೇರಿದನು.
- Verse 21: ಆಗ ಸರ್ವೇಶ್ವರ ಮೋಶೆಗೆ, “ನೀನಿಳಿದು ಹೋಗಿ ಜನರನ್ನು ಎಚ್ಚರಿಸಬೇಕು. ಅವರು ನೋಡಬೇಕೆಂಬ ಆಶೆಯಿಂದ ಸರ್ವೇಶ್ವರನಾದ ನನ್ನ ಹತ್ತಿರಕ್ಕೆ ಮೇರೆಯನ್ನು ದಾಟಿ ಬಂದಾರು; ಹಾಗೆ ಬಂದರೆ ಬಹುಜನ ನಾಶವಾಗುವರು.
- Verse 22: ನನ್ನ ಸನ್ನಿಧಿಗೆ ಬರುವ ಯಾಜಕರು ಕೂಡ ತಮ್ಮನ್ನೇ ಶುದ್ಧಪಡಿಸಿಕೊಳ್ಳಬೇಕು. ಇಲ್ಲವಾದರೆ ಅವರನ್ನೂ ನಾನು ತಟ್ಟನೆ ನಾಶಮಾಡುವೆನು,” ಎಂದು ಹೇಳಿದರು.
- Verse 23: ಅದಕ್ಕೆ ಮೋಶೆ, “ಸೀನಾಯಿ ಬೆಟ್ಟವನ್ನೇರುವುದಕ್ಕೆ ಜನರಿಂದಾಗದು. ನೀವು ಆಜ್ಞಾಪಿಸಿದಂತೆ ನಿಮಗಾಗಿ ಪ್ರತ್ಯೇಕಿಸಿಡಲು ಬೆಟ್ಟದ ಸುತ್ತಲೂ ಮೇರೆಯನ್ನು ಹಾಕಿಸಿದ್ದೇನೆ,” ಎಂದನು.
- Verse 24: ಸರ್ವೇಶ್ವರ ಅವನಿಗೆ, “ನೀನು ಇಳಿದು ಹೋಗಿ ಆರೋನನನ್ನು ಕರೆದುಕೊಂಡು ಮೇಲಕ್ಕೆ ಬಾ; ಆದರೆ ಯಾಜಕರು ಹಾಗು ಜನರು ಆ ಮೇರೆಯನ್ನು ದಾಟಿ ನನ್ನ ಹತ್ತಿರ ಬರಕೂಡದು; ದಾಟಿ ಬಂದರೆ ಅವರನ್ನು ತಟ್ಟನೆ ನಾಶಮಾಡಬಹುದು ಎಂದು ಹೇಳು,” ಎಂದರು.
- Verse 25: ಮೋಶೆ ಇಳಿದು ಹೋಗಿ ಹಾಗೆಯೇ ಜನರಿಗೆ ತಿಳಿಸಿದನು.