P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
26ನೇ ಅಧ್ಯಾಯ
- Verse 1: ಸಾಚವಾದುದೆನ್ನ ನಡತೆ, ಅಚಲವಾದುದೆನ್ನ ನಂಬುಗೆ I ನೀಚ ನಾನಲ್ಲವೆಂದು ಪ್ರಭು, ನ್ಯಾಯ ತೀರಿಸೆನಗೆ II
- Verse 2: ಪರೀಕ್ಷಿಸು ಪ್ರಭು, ಎನ್ನನು ಪರಿಶೀಲಿಸು I ಹೃನ್ಮನಗಳೆಲ್ಲವನು ನೀ ಪರಿಶೋಧಿಸು II
- Verse 3: ಕೈಬಿಡದ ನಿನ್ನೊಲವು ನನ್ನ ಕಣ್ಮುಂದಿದೆ I ನೀ ತೋರಿದ ಸತ್ಯಪಥದಲಿ, ನಾ ನಡೆದೆ II
- Verse 4: ದುಷ್ಟರ ಕೂಟದಲಿ ನಾ ಕೂರುವವನಲ್ಲ I ಕಪಟಿಗಳ ಸಂಘವನು ನಾ ಸೇರುವವನಲ್ಲ II
- Verse 5: ದುರ್ಜನರ ಸಹವಾಸವದು ನನಗಸಹ್ಯ I ದುರುಳರೊಡನಾಟ ನನಗೆ ಬೇಡವಯ್ಯಾ II
- Verse 6: ನಿರ್ದೋಷಿ ನಾನೆಂದು ನೀರಿನಲ್ಲಿ ಕೈತೊಳೆವೆನಯ್ಯಾ I ಪ್ರಭು, ನಿನ್ನ ಬಲಿಪೀಠದ ಪ್ರದಕ್ಷಿಣೆ ಮಾಡುವೆನಯ್ಯಾ II
- Verse 7: ದನಿಯೆತ್ತಿ ನಿನಗೆ ಧನ್ಯಗೀತೆ ಹಾಡುವೆನಯ್ಯಾ I ನಿನ್ನದ್ಭುತ ಕಾರ್ಯಗಳೆಲ್ಲವನು ಘೋಷಿಸುವೆನಯ್ಯಾ II
- Verse 8: ಪ್ರಿಯವಾದುದೆನಗೆ ನಿನ್ನ ನಿವಾಸದ ಮಂದಿರ I ಸುಪ್ರೀತವಾದುದು ನಿನ್ನ ಮಹಿಮೆಯ ಆಗರ II
- Verse 9: ಪಾಪಿಗಳ ಸಮೇತ ಎನ್ನ ಪ್ರಾಣವನಳಿಸಬೇಡಯ್ಯಾ I ಕೊಲೆಪಾತಕರ ಸಮೇತ ಎನ್ನ ಜೀವ ತೆಗೆಯಬೇಡಯ್ಯಾ II
- Verse 10: ಇದೆ ಆ ಜನರ ಕೈಗಳಲಿ ಕೆಡುಕನ I ಬಲಗೈ ತುಂಬ ಲಂಚಕೋರತನ II
- Verse 11: ನೀತಿಯ ಪಥದೊಳು ನಾ ನಡೆವೆನಯ್ಯಾ I ಕರುಣೆ ತೋರುತ ಪ್ರಭು, ರಕ್ಷಿಸಯ್ಯಾ II
- Verse 12: ಸಮತಳದಲಿ ನಿಂತಿವೆ ನನ್ನ ಪಾದಗಳು I ಸ್ತುತಿಸುವೆ ನಾ ಪ್ರಭುವನು ಭಕ್ತರ ಸಭೆಯೊಳು II