ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
63ನೇ ಅಧ್ಯಾಯ
- Verse 1: ದೇವಾ, ನೀಯೆನ್ನ ದೇವ, ನಿನಗಾಗಿ ನಾ ಕಾದಿರುವೆ I ನಿರ್ಜಲ ಮರುಭೂಮಿಯಲಿ ನೀರಿಗಾಗಿ ಹಾತೊರೆವಂತೆ I ನಿನಗೋಸ್ಕರ ಎನ್ನ ತನು ಸೊರಗಿದೆ, ಮನ ಬಾಯಾರಿದೆ II
- Verse 2: ನಿನ್ನ ಮಂದಿರದಲಿ ನನಗಾದ ದರ್ಶನದಲಿ I ನಿನ್ನ ಶಕ್ತಿ ಪ್ರತಿಭೆಯನು ಕಂಡಿರುವೆನಲ್ಲಿ II
- Verse 3: ಪ್ರಾಣಕ್ಕಿಂತ ಮಿಗಿಲಾದುದು ನಿನ್ನಚಲ ಪ್ರೀತಿ I ಎಡೆಬಿಡದೆ ಮಾಳ್ಪುದು ನನ್ನೀ ತುಟಿ ನಿನ್ನ ಸ್ತುತಿ II
- Verse 4: ನಿನ್ನ ಸ್ತುತಿಸುವೆ ಜೀವಮಾನ ಪರಿಯಂತ I ಕೈ ಮುಗಿವೆ ನಿನ್ನ ನಾಮದ ಸ್ಮರಣಾರ್ಥ II
- Verse 5: ಮೃಷ್ಟಾನ್ನ ತಿಂದಂತೆ ಎನ್ನ ಮನ ಸಂತೃಪ್ತ I ಸಂಭ್ರಮದಿಂದ ನಿನ್ನ ಹೊಗಳುವುದು ಬಾಯ್ತುಂಬ II
- Verse 6: ನಿದ್ರಿಸುವಾಗಲು ಮಾಡುವೆ ನಿನ್ನ ಸ್ಮರಣೆ I ರಾತ್ರಿಯೆಲ್ಲ ನಿನ್ನ ಧ್ಯಾನವೆ ನನಗೆ ಜಾಗರಣೆ II
- Verse 7: ನನಗೆ ನೀನು ನಿರಂತರದ ಸಹಾಯಕ I ನಿನ್ನ ರೆಕ್ಕೆಗಳಡಿ ನಾ ಸುಖಿ ಗಾಯಕ II
- Verse 8: ನನ್ನಾತ್ಮ ನಿನಗಾತುಕೊಂಡಿದೆ I ನಿನ್ನ ಬಲಗೈ ನನಗಿಂಬಾಗಿದೆ II
- Verse 9: ಕೇಡು ಬಗೆಯುವವರು ನನ್ನ ಪ್ರಾಣಕೆ I ಇಳಿದು ಹೋಗುವರು ಅಧೋಲೋಕಕೆ II
- Verse 10: ಕತ್ತಿಗವರು ತುತ್ತಾಗುವರು I ನರಿತೋಳಗಳ ಪಾಲಾಗುವರು II
- Verse 11: ಹರ್ಷಿಸುವನು ರಾಜಾಧಿರಾಜನು ದೇವನಲಿ I ಸಂತೋಷಿಸುವರು ಆಣೆಯಿಟ್ಟವರು ಆತನಲಿ I ಸದ್ದಿಲ್ಲದಂತಾಗ್ವುದು ಸುಳ್ಳಾಡಿದ ಬಾಯಿ ಅಲ್ಲಿ II