ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
65ನೇ ಅಧ್ಯಾಯ
1 : ಸಿಯೋನಿನಲ್ಲಿ ಸಲ್ಲತಕ್ಕವು ನಿನಗೆ ಸ್ತುತಿಸ್ತೋತ್ರಗಳು I ಪೂರೈಸತಕ್ಕವು ದೇವಾ, ಜನರು ನಿನಗೆ ಹೊತ್ತ ಹರಕೆಗಳು II
2 : ದೇವಾ, ನೀ ನಮ್ಮೆಲ್ಲರ ಪ್ರಾರ್ಥನೆಗೆ ಕಿವಿಗೊಡುವಾತ I ನರರೆಲ್ಲರು ಬರುವರು ನಿನ್ನ ಬಳಿಗೆ ಪಾಪದ ಪ್ರಯುಕ್ತ II
3 : ಪಾಪದ ಹೊರೆ ಹೊತ್ತವರು ನಾವಯ್ಯಾ I ಅವುಗಳ ಪರಿಹಾರಕನು ನೀನಯ್ಯಾ II
4 : ನಿನ್ನ ಆಸ್ಥಾನದಲಿ ನೆಲೆಸಲು ನೀನಾಯ್ದು ತಂದ ದೈವಭಕ್ತ ಧನ್ಯ I ನಮಗೆ ತರಲಿ ತೃಪ್ತಿ ನೀ ವಾಸಿಸುವ ಪವಿತ್ರಾಲಯದ ಸೌಭಾಗ್ಯ II
5 : ದೇವಾ, ನೀನೆ ನಮ್ಮೆಲ್ಲರ ಜೀವೋದ್ಧಾರ I ದೂರದ ಸಾಗರ ಸೀಮೆಗಳಿಗೂ ಆಶಾಧಾರ I ಗಂಭೀರ ಕಾರ್ಯವೆಸಗಿ ನೀಡುವೆ ವಿಜಯದುತ್ತರ II
6 : ಬಿಗಿದುಕೊಂಡಿರುವೆ ಶಕ್ತಿಶೌರ್ಯದ ನಡುಗಟ್ಟನು I ಬಿಗಿಯಾಗಿ ನಿಲ್ಲಿಸಿರುವೆ ನೀ ಗುಡ್ಡಬೆಟ್ಟಗಳನು II
7 : ಭೋರ್ಗರೆವ ಸಮುದ್ರಗಳನು, ಗರ್ಜಿಸುವ ತರಂಗಗಳನು I ದೊಂಬಿಯೇಳುವ ಜನಾಂಗಗಳನು ಶಮನಗೊಳಿಸುವವನು ನೀನು II
8 : ಅಚ್ಚರಿಗೊಳ್ಳುವುವು ನಿನ್ನ ಮಹತ್ಕಾರ್ಯಗಳ ಕಂಡು ಎಲ್ಲೆ ಎಲ್ಲೆಗಳು I ಹರ್ಷಾನಂದಗೊಳ್ಳುವರು ಅದಕಂಡಾ ಪೂರ್ವಪಶ್ಚಿಮ ಪ್ರವಾಸಿಗಳು II
9 : ಇಳೆಯನು ಸಂಧಿಸಿ, ಮಳೆಯನು ಸುರಿಸಿ, ನೆಲವನು ನೀ ಸಿರಿಗೊಳಿಸುವಾತ I ನಾಲೆ ತುಂಬ ನೀರಹರಿಸಿ, ಹೊಲ ತುಂಬ ನೀ ಧಾನ್ಯನೀಡುವಾತ II
10 : ನೇಗಿಲ ಗೆರೆಯನು ತೋಯಿಸಿ ಮಣ್ಣಿನ ಹೆಂಟೆಯನು ಕರಗಿಸುತಿ I ಪೊಡವಿಯ ಹೊಲವ ಮಾಚಿಸಿ, ಹುಲುಸಾಗಿ ಪೈರನು ಬೆಳೆಸುತಿ II
11 : ಋತು ಶಿಶಿರಕೆ ಸುಗ್ಗಿಯ ಸೊಬಗಿನ ಮುಕುಟವ ಮುಡಿಸಿದ್ದೀ I ನೀ ನಡೆವ ಹಾದಿಯಲ್ಲೆಲ್ಲಾ ತುಳುಕುತಿದೆ ಸಮೃದ್ಧಿ II
12 : ಮೇವುಗಾಡುಗಳು ಕಂಗೊಳಿಸುತಿವೆ ಪಚ್ಚೆಪಸಿರಿನಿಂದ I ಗುಡ್ಡಗಾಡುಗಳು ಶೋಭಿಸುತಿವೆ ಹರ್ಷಾಡಂಬರದಿಂದ II
13 : ಹುಲ್ಲುಗಾವಲುಗಳು ತುಂಬಿತುಳುಕುತಿವೆ ಕುರಿಹಿಂಡುಗಳಿಂದ I ಕಣಿವೆ ಕಂದರಗಳಿದೊ ಕಂಗೊಳಿಸುತ್ತಿವೆ ತೆನೆಕಾಳುಗಳಿಂದ I ಇಳೆ ಮೊಳಗುತಿದೆ ಆನಂದಘೋಷ, ಸಂತಸ ಗೀತೆಗಳಿಂದ II