ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಫಿಲಿಪ್ಪಿಯರಿಗೆ
1ನೇ ಅಧ್ಯಾಯ
- Verse 1: ಕ್ರಿಸ್ತಯೇಸುವಿನಲ್ಲಿ ಜೀವಿಸುವ ಫಿಲಿಪ್ಪಿಯ ದೇವಜನರಿಗೆ, ಧರ್ಮಾಧಿಕಾರಿಗಳಿಗೆ ಹಾಗೂ ಧರ್ಮಸೇವಕರಿಗೆ - ಕ್ರಿಸ್ತಯೇಸುವಿನ ದಾಸರಾದ ಪೌಲ ಮತ್ತು ತಿಮೊಥೇಯರು ಜೊತೆಗೂಡಿ ಬರೆಯುವ ಪತ್ರ.
- Verse 2: ನಮ್ಮೆಲ್ಲರ ಪಿತನಾದ ದೇವರ ಮತ್ತು ಪ್ರಭುವಾದ ಯೇಸುಕ್ರಿಸ್ತರ ಆಶೀರ್ವಾದವೂ ಶಾಂತಿಸಮಾಧಾನವೂ ನಿಮಗೆ ಲಭಿಸಲಿ!
- Verse 3: ನಿಮ್ಮನ್ನು ಜ್ಞಾಪಿಸಿಕೊಳ್ಳುವಾಗಲೆಲ್ಲ ನಾನು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
- Verse 4: ನಿಮಗೋಸ್ಕರ ಯಾವಾಗಲೂ ತುಂಬುಹೃದಯದಿಂದ ಪ್ರಾರ್ಥಿಸುತ್ತೇನೆ.
- Verse 5: ಏಕೆಂದರೆ, ನಾನು ನಿಮ್ಮನ್ನು ಸಂಧಿಸಿದ ಮೊದಲ ದಿನದಿಂದ ಇಂದಿನವರೆಗೂ ನೀವು ನನ್ನೊಡನೆ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ಸಹಕರಿಸುತ್ತಿರುವಿರಿ.
- Verse 6: ಈ ಸತ್ಕಾರ್ಯವನ್ನು ನಿಮ್ಮಲ್ಲಿ ಪ್ರಾರಂಭಿಸಿದ ದೇವರು ಅದನ್ನು ಮುಂದುವರೆಸುತ್ತಾ, ಯೇಸುಕ್ರಿಸ್ತರು ಪುನರಾಗಮಿಸುವಷ್ಟರಲ್ಲಿ ಪೂರೈಸುವರು ಎಂಬುದೇ ನನ್ನ ದೃಢ ನಂಬಿಕೆ.
- Verse 7: ನೀವು ನನಗೆ ಆತ್ಮೀಯರು. ಆದಕಾರಣ, ನಿಮ್ಮೆಲ್ಲರನ್ನು ಕುರಿತು ನನಗೆ ಹೀಗನ್ನಿಸುವುದು ಸೂಕ್ತವೇ ಸರಿ. ನಾನು ಸೆರೆಯಲ್ಲಿರುವಾಗಲೂ ಶುಭಸಂದೇಶಕ್ಕಾಗಿ ಹೋರಾಡಿ ಆದನ್ನು ಸ್ಥಿರಗೊಳಿಸುವಾಗಲೂ ದೇವರ ಅನುಗ್ರಹದಲ್ಲಿ ನೀವು ನನ್ನೊಂದಿಗೆ ಸಹಭಾಗಿಗಳಾಗಿದ್ದಿರಿ.
- Verse 8: ಕ್ರಿಸ್ತಯೇಸುವಿನಲ್ಲಿರುವ ಉತ್ಕಟ ಪ್ರೀತಿಯಿಂದಲೇ ನಾನು ನಿಮ್ಮೆಲ್ಲರಿಗಾಗಿ ಹಂಬಲಿಸುತ್ತಿದ್ದೇನೆ; ಇದಕ್ಕೆ ದೇವರೇ ಸಾಕ್ಷಿ.
- Verse 9: ನೀವು ಪ್ರೀತಿಯಲ್ಲಿ ಪ್ರವರ್ಧಿಸುತ್ತಾ, ಪೂರ್ಣ ಜ್ಞಾನ ಹಾಗೂ ವಿವೇಕದಿಂದ ಕೂಡಿದವರಾಗಬೇಕೆಂಬುದೇ ನನ್ನ ಪ್ರಾರ್ಥನೆ.
- Verse 10: ಹೀಗೆ ನೀವು ಉತ್ತಮೋತ್ತಮವಾದುವುಗಳನ್ನೇ ಆರಿಸಿಕೊಂಡು, ಪ್ರಭು ಕ್ರಿಸ್ತರ ದಿನದಂದು ನಿರ್ದೋಷಿಗಳೂ ನಿಷ್ಕಳಂಕರೂ ಆಗಿ ಕಾಣಿಸಿಕೊಳ್ಳುವಿರಿ.
- Verse 11: ಯೇಸುಕ್ರಿಸ್ತರ ಮುಖಾಂತರ ಲಭಿಸುವ ಸತ್ಸಂಬಂಧದ ಫಲಗಳಿಂದ ತುಂಬಿದವರಾಗಿ ದೇವರಿಗೆ ಸ್ತುತಿಸಲ್ಲಿಸಿ, ಅವರ ಮಹಿಮೆ ಬೆಳಗುವಂತೆ ಮಾಡುವಿರಿ.
- Verse 12: ಸಹೋದರರೇ, ನನಗೆ ಬಂದೊದಗಿರುವುದೆಲ್ಲವೂ ಶುಭಸಂದೇಶದ ಬೆಳವಣಿಗೆಗೆ ಹಿತಕರವಾಗಿ ಪರಿಣಮಿಸಿದೆ. ಇದು ನಿಮಗೆ ತಿಳಿದಿರಬೇಕೆಂಬುದೇ ನನ್ನ ಆಶಯ.
- Verse 13: ಯೇಸುಕ್ರಿಸ್ತರ ಸಲುವಾಗಿಯೇ ನಾನು ಸೆರೆಯಲ್ಲಿರುವುದೆಂದು ಇಲ್ಲಿಯ ಅರಮನೆಯ ಕಾವಲಾಳುಗಳಿಗೂ ಇತರರೆಲ್ಲರಿಗೂ ಚೆನ್ನಾಗಿ ತಿಳಿದಿದೆ.
- Verse 14: ನನ್ನ ಬಂಧನದಿಂದಾಗಿ ನಮ್ಮ ಸಹೋದರರಲ್ಲಿ ಅನೇಕರು ದೇವರಲ್ಲಿ ಭರವಸೆಯಿಟ್ಟಿರುವರು. ಅಳುಕಿಲ್ಲದೆ, ಅಂಜಿಕೆಯಿಲ್ಲದೆ ದಿಟ್ಟತನದಿಂದ ಶುಭಸಂದೇಶವನ್ನು ಅವರು ಸಾರುತ್ತಿರುವರು.
- Verse 15: ಕೆಲವರೇನೋ ಅಸೂಯೆಯಿಂದಲೂ ವೈಮನಸ್ಸಿನಿಂದಲೂ ಕ್ರಿಸ್ತಯೇಸುವನ್ನು ಸಾರುತ್ತಿರುವುದು ನಿಜ; ಆದರೆ ಮಿಕ್ಕವರು ಸದುದ್ದೇಶದಿಂದ ಸಾರುತ್ತಿದ್ದಾರೆ;
- Verse 16: ಒಲವಿನ ಒತ್ತಾಯದಿಂದ ಸಾರುತ್ತಿದ್ದಾರೆ; ಶುಭಸಂದೇಶದ ಸತ್ಯವನ್ನು ಸಮರ್ಥಿಸುವುದಕ್ಕಾಗಿ ನಾನು ಬಂಧಿತನೆಂದು ಇವರು ಬಲ್ಲರು.
- Verse 17: ಆ ಕೆಲವರಾದರೋ ಸ್ವಾರ್ಥಸಾಧನೆಗಾಗಿಯೇ ಹೊರತು ಪ್ರಾಮಾಣಿಕರಾಗಿ ಕ್ರಿಸ್ತಯೇಸುವನ್ನು ಸಾರುತ್ತಿಲ್ಲ. ಸೆರೆಯಲ್ಲಿರುವ ನನ್ನನ್ನು ಇನ್ನೂ ಹೆಚ್ಚಿನ ಕಷ್ಟಕ್ಕೆ ಗುರಿಮಾಡಬೇಕೆಂಬುದೇ ಅವರ ಉದ್ದೇಶ.
- Verse 18: ಅವರ ಉದ್ದೇಶ ಏನೇ ಆಗಿರಲಿ, ನನಗದು ಮುಖ್ಯವಲ್ಲ. ಕ್ರಿಸ್ತಯೇಸುವನ್ನು ಅವರು ಸಾರುತ್ತಿರುವುದೇ ನನಗೆ ಸಂತೋಷ.
- Verse 19: ಹೌದು, ನನಗದು ತುಂಬಾ ಸಂತೋಷದ ವಿಷಯ. ನಿಮ್ಮ ಪ್ರಾರ್ಥನಾ ಫಲದಿಂದಲೂ ಯೇಸುಕ್ರಿಸ್ತರು ಕೊಡುವ ಆತ್ಮದ ನೆರವಿನಿಂದಲೂ ನನಗೆ ಬಿಡುಗಡೆ ಖಚಿತವೆಂದು ಬಲ್ಲೆ.
- Verse 20: ನನ್ನ ಕರ್ತವ್ಯಪಾಲನೆಯಲ್ಲಿ ನಾಚುವಂಥ ಸಂದರ್ಭವು ನನಗೆಂದಿಗೂ ಬರದೆಂದು ಬಲ್ಲೆ; ನಾನು ಬದುಕಿದರೂ ಸರಿ, ಸತ್ತರೂ ಸರಿ; ನನ್ನ ದೇಹದ ಮೂಲಕ ಕ್ರಿಸ್ತಯೇಸುವಿಗೆ ಎಂದಿನಂತೆ ಈಗಲೂ ಮಹಿಮೆ ಉಂಟಾಗಬೇಕೆಂಬುದೇ ನನ್ನ ಉತ್ಕಟ ಆಕಾಂಕ್ಷೆ ಹಾಗೂ ನಿರೀಕ್ಷೆ.
- Verse 21: ನನಗಂತೂ ಬದುಕುವುದೆಂದರೆ ಕ್ರಿಸ್ತಯೇಸುವೇ; ಸಾಯುವುದು ಲಾಭವೇ.
- Verse 22: ದೈಹಿಕವಾಗಿ ಬದುಕುವುದು ಫಲಪ್ರದವಾಗಿದ್ದರೆ, ನಾನು ಬದುಕುವುದು ಉತ್ತಮವೋ ಅಥವಾ ಸಾಯುವುದು ಸೂಕ್ತವೋ ನನಗೆ ತಿಳಿಯದು.
- Verse 23: ಉಭಯ ಸಂಕಟಕ್ಕೆ ಸಿಲುಕಿದ್ದೇನೆ. ಒಂದು ಕಡೆ, ಈ ಬದುಕನ್ನು ತೊರೆದು ಕ್ರಿಸ್ತಯೇಸುವಿನೊಡನೆ ಒಂದಾಗಿರಬೇಕೆಂಬುದೇ ನನ್ನ ಬಯಕೆ. ಇದು ಎಷ್ಟೋ ಮೇಲಾದುದು.
- Verse 24: ಮತ್ತೊಂದು ಕಡೆ, ನಿಮಗೋಸ್ಕರ ಇಹದಲ್ಲಿದ್ದು ಜೀವಿಸುವುದು ಅತ್ಯವಶ್ಯಕವಾಗಿದೆ.
- Verse 25: ಇದರಲ್ಲಿ ನನಗೆ ಎಳ್ಳಷ್ಟೂ ಸಂದೇಹವಿಲ್ಲ. ಈ ಕಾರಣ, ನಾನು ಇಹದಲ್ಲಿ ಉಳಿಯುವೆನೆಂದು ಬಲ್ಲೆ. ನಿಮ್ಮೆಲ್ಲರೊಡನಿದ್ದು, ಕ್ರೈಸ್ತವಿಶ್ವಾಸದಲ್ಲಿ ನೀವು ವೃದ್ಧಿಯಾಗಿ ಆನಂದಿಸುವಂತೆ ನಿಮಗೆ ನೆರವಾಗುತ್ತೇನೆ.
- Verse 26: ನಿಮ್ಮಲ್ಲಿಗೆ ನಾನು ಮರಳಿಬಂದಾಗ ಕ್ರಿಸ್ತಯೇಸುವಿನಲ್ಲಿ ನೀವು ಹಿರಿಹಿಗ್ಗುವುದಕ್ಕೆ ಮಹದವಕಾಶ ದೊರಕುವುದು.
- Verse 27: ಅದೇನೇ ಇರಲಿ, ನೀವು ಮಾತ್ರ ಕ್ರಿಸ್ತಯೇಸುವಿನ ಶುಭಸಂದೇಶಕ್ಕೆ ಯೋಗ್ಯರಾಗಿ ನಡೆದುಕೊಳ್ಳಿರಿ. ನಾನು ನಿಮ್ಮಲ್ಲಿಗೆ ಬಂದರೂ ಸರಿ, ಬಾರದಿದ್ದರೂ ಸರಿ, ಇದು ಮುಖ್ಯವಲ್ಲ. ಶುಭಸಂದೇಶವು ನೀಡುವ ವಿಶ್ವಾಸಕ್ಕಾಗಿ ನೀವು ಒಮ್ಮನಸ್ಸಿನಿಂದ, ಕೆಚ್ಚಿನಿಂದ ಹೋರಾಡುವುದೇ ಮುಖ್ಯ. ಇದು ನನಗೆ ತಿಳಿದುಬಂದರೆ ಅಷ್ಟೇ ಸಾಕು.
- Verse 28: ನಿಮ್ಮ ವಿರೋಧಿಗಳಿಗೆ ಯಾವ ವಿಷಯದಲ್ಲೂ ಅಂಜದೆ, ಅಳುಕದೆ ಧೈರ್ಯದಿಂದಿರಿ. ಇದೇ ಅವರಿಗೆ ಅವರ ವಿನಾಶದ ಸ್ಪಷ್ಟ ಮುನ್ಸೂಚನೆ! ನಿಮಗೆ ದೇವರಿಂದ ಬರುವ ಸಂರಕ್ಷಣೆಯ ಮುನ್ಸೂಚನೆ.
- Verse 29: ಕ್ರಿಸ್ತಯೇಸುವನ್ನು ನೀವು ವಿಶ್ವಾಸಿಸುವುದು ಮಾತ್ರವಲ್ಲ, ಅವರಿಗೋಸ್ಕರ ಸಂಕಷ್ಟಗಳನ್ನು ಅನುಭವಿಸುವ ಸೌಭಾಗ್ಯವೂ ನಿಮ್ಮದಾಗಿದೆ.
- Verse 30: ನಿಮ್ಮ ಹೋರಾಟವೂ ನಮ್ಮ ಹೋರಾಟವೂ ಒಂದೇ ಆಗಿದೆ. ನಾನು ಕ್ರಿಸ್ತಯೇಸುವಿಗಾಗಿ ಪಟ್ಟ ಕಷ್ಟವನ್ನು ನೀವು ಕಂಡಿದ್ದೀರಿ. ಈಗಲೂ ಅನುಭವಿಸುತ್ತಿದ್ದೇನೆಂದು ಅರಿತಿದ್ದೀರಿ.