ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
24ನೇ ಅಧ್ಯಾಯ
- Verse 1: ಸರ್ವಶಕ್ತಸ್ವಾಮಿ ಕಾಲರಾಶಿಯನ್ನೇಕೆ ನೇಮಿಸಿಟ್ಟುಕೊಂಡಿಲ್ಲ? ಆತನನ್ನು ಅರಿತವರಿಗೆ ಆತನ ದಿನಗಳೇಕೆ ಗೋಚರವಾಗುವುದಿಲ್ಲ?
- Verse 2: ಎಲ್ಲೆ ಮೇರೆಗಳನ್ನು ಸರಿಸಿಕೊಳ್ಳುವವರುಂಟು ಅಪಹರಿಸಿಕೊಂಡ ದನಕುರಿಗಳನ್ನು ಸಾಕಿಕೊಳ್ಳುವವರುಂಟು.
- Verse 3: ಅನಾಥರ ಕತ್ತೆಗಳನು ಹೊಡೆದುಕೊಂಡು ಹೋಗುತ್ತಾರೆ ವಿಧವೆಯರ ಎತ್ತುಗಳನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.
- Verse 4: ದಿಕ್ಕಿಲ್ಲದವರನು ದಾರಿತಪ್ಪಿಸುತ್ತಾರೆ ನಾಡಿನ ಬಡವರನು ಅಡಗಿಸಿಬಿಡುತ್ತಾರೆ.
- Verse 5: ಆ ಬಡವರ ಪಾಡು ಅಡವಿಯ ಕಾಡುಕತ್ತೆಗಳಿಗೆ ಸಮಾನ ಹೊಟ್ಟೆಪಾಡಿಗಾಗಿ ಕೂಳನ್ನು ಹುಡುಕುತ್ತಾರೆ ಬೆಳಗಿನಿಂದ ಅವರ ಮಕ್ಕಳಿಗೆ ಆಹಾರ ಒದಗಿಸುತ್ತದೆ ಅರಣ್ಯ.
- Verse 6: ಹೊಟ್ಟೆಗಾಗಿ ಸೊಪ್ಪುಸದೆ ಕೊಯ್ದುಕೊಳ್ಳುತ್ತಾರೆ ಬಯಲಿನಲಿ ಹಕ್ಕಲನ್ನು ಆಯ್ದುಕೊಳ್ಳುತ್ತಾರೆ ದುಷ್ಟನ ದ್ರಾಕ್ಷಿತೋಟದಲಿ.
- Verse 7: ಬೆತ್ತಲೆಯಾಗಿ ಮಲಗುತ್ತಾರೆ ಬಟ್ಟೆಯಿಲ್ಲದೆ ಚಳಿಗಾಲವನ್ನು ಕಳೆಯುತ್ತಾರೆ ಹೊದಿಕೆಯಿಲ್ಲದೆ.
- Verse 8: ಮಲೆನಾಡಿನ ಭಾರಿಮಳೆಯಿಂದ ನೆನೆದುಹೋಗುತ್ತಾರೆ ಮರೆಯಿಲ್ಲದೆ ಕಲ್ಲುಬಂಡೆಗಳನು ಆಶ್ರಯಿಸುತ್ತಾರೆ.
- Verse 9: ತಂದೆಯಿಲ್ಲದ ಮಗುವನು ಕಿತ್ತುಕೊಳ್ಳುತ್ತಾರೆ ತಾಯಮೊಲೆಯಿಂದ ಮಕ್ಕಳನು ಅಡವಾಗಿ ಪಡೆಯುತ್ತಾರೆ ಬಡವರಿಂದ.
- Verse 10: ಬಡವರೋ ಬಟ್ಟೆಯಿಲ್ಲದೆ ಅಲೆಯುತ್ತಾರೆ ಬೆತ್ತಲೆಯಾಗಿ ಸಿವುಡುಗಳನ್ನು ಹೊರುತ್ತಾರೆ ಹಸಿದವರಾಗಿ.
- Verse 11: ದಾಹಗೊಂಡೇ ದ್ರಾಕ್ಷಿಯನ್ನು ತುಳಿಯುತ್ತಾರೆ ತೊಟ್ಟಿಗಳಲ್ಲಿ ಎಣ್ಣೆಗಾಣವನ್ನು ಆಡಿಸುತ್ತಾರೆ ಕೋಟೆಗಳಲ್ಲಿ.
- Verse 12: ನಗರಗಳಲ್ಲಿ ನರಳುವವರಿದ್ದಾರೆ ಗಾಯಗೊಂಡವರು ಮೊರೆಯಿಡುತ್ತಾರೆ ಆದರೆ ದೇವರು ಕಿವಿಗೊಡದಿದ್ದಾನೆ.
- Verse 13: ಬೆಳಕನ್ನು ಪ್ರತಿಭಟಿಸುವವರಿದ್ದಾರೆ ಅದರ ಮಾರ್ಗವನ್ನು ತಿಳಿಯದೆ ಅದರ ಹಾದಿಯನ್ನು ಕೈಗೊಳ್ಳದೆ.
- Verse 14: ಕೊಲೆಪಾತಕ ಏಳುತ್ತಾನೆ ಮುಂಜಾನೆಯೇ ದೀನದಲಿತರನ್ನು ಕೊಂದುಹಾಕುತ್ತಾನೆ ರಾತ್ರಿಯಲ್ಲಿ ವರ್ತಿಸುತ್ತಾನೆ ಕಳ್ಳನಂತೆ.
- Verse 15: ವ್ಯಭಿಚಾರಿ ಸಂಜೆಯನೇ ಎದುರು ನೋಡುತ್ತಿರುತ್ತಾನೆ ಯಾರೂ ತನ್ನನ್ನು ಕಾಣದಂತೆ ಮುಖಕ್ಕೆ ಮುಸುಕು ಹಾಕಿಕೊಳ್ಳುತ್ತಾನೆ.
- Verse 16: ಕಳ್ಳರು ಕತ್ತಲಲ್ಲಿ ಮನೆಗೆ ನುಗ್ಗುತ್ತಾರೆ ಕನ್ನ ಕೊರೆದು ಬೆಳಕು ಕಾಣದೆ ಇರುತ್ತಾರೆ ಹಗಲಲ್ಲಿ ಅವಿತುಕೊಂಡು.
- Verse 17: ಅಂಥವರಿಗೆ ಕಾರ್ಗತ್ತಲೇ ಬೆಳಗಿನ ಜಾವ ಕಾರ್ಗತ್ತಲಿನ ಅಪಾಯಗಳೇ ಅವರಿಗೆ ಪರಿಚಯ.
- Verse 18: “ದುರುಳನನು ಕೊಚ್ಚಿಕೊಂಡುಹೋಗುವುದು ಪ್ರವಾಹ ಪೊಡವಿಯಲ್ಲಿನ ಅವನ ಆಸ್ತಿ ಶಾಪಗ್ರಸ್ತ ಅವನು ದ್ರಾಕ್ಷಿತೋಟಗಳ ಕಡೆಗೂ ಸುಳಿಯಲಾರ.
- Verse 19: ಬರಗಾಲ-ಬೇಸಿಗೆ ಹಿಮವನು ಹೀರಿಕೊಳ್ಳುವಂತೆ ಪಾತಾಳದ ಕೂಪ ಪಾಪಿಯನು ಸೆಳೆದುಕೊಳ್ಳುತ್ತದೆ.
- Verse 20: ಹೆತ್ತಕರುಳೇ ಅವನನು ಮರೆತುಬಿಡುವುದು ಹುಳು ಅವನ ಹೆಣವನು ಆಸೆಯಿಂದ ಕಬಳಿಸುವುದು. ಇನ್ನು ಅವನ ನೆನಪು ಯಾರಿಗೂ ಇರದು ಅಕ್ರಮವು ಮುರಿದುಬಿದ್ದ ಮರದಂತಾಗುವುದು.
- Verse 21: ಮಕ್ಕಳಿಲ್ಲದ ಬಂಜೆಯನ್ನು ಅವನು ಬಾಧಿಸಿದ ವಿಧವೆಯರನು ಉದ್ಧರಿಸದೇ ಹೋದ.
- Verse 22: ದೇವರಂತು ತನ್ನ ಶಕ್ತಿಯಿಂದ ಬಲಿಷ್ಠರನ್ನು ಉಳಿಸುತ್ತಾನೆ ತಮ್ಮ ಜೀವ ಇನ್ನುಳಿಯದು ಎಂದಿದ್ದರೂ ಅವರು ಉದ್ಧಾರವಾಗುತ್ತಾರೆ.
- Verse 23: ಅವರು ಆಧರಿಸಿ ನಿಂತಿರುವುದು ದೇವರಿತ್ತ ಅಭಯದ ನಿಮಿತ್ತ ಆತನ ಕಟಾಕ್ಷ ಅವರ ಮಾರ್ಗದತ್ತ.
- Verse 24: ಅವರು ಮೇಲೇರಿ ಮಾಯವಾಗುತ್ತಾರೆ ಕೊಂಚಕಾಲದ ಮೇಲೆ ಕೊಯ್ಯಲ್ಪಡುತ್ತಾರೆ ಸುಗ್ಗಿಯ ತೆನೆಗಳಂತೆ ಕೂಡಿಸಲ್ಪಡುತ್ತಾರೆ ಕೆಳಗೆ ಬಿದ್ದ ಕಾಳಿನಂತೆ.
- Verse 25: ಈ ಮಾತು ಅಬದ್ಧವೆಂದು ಯಾರು ಸ್ಥಾಪಿಸಬಲ್ಲರು? ನಾನು ಸುಳ್ಳುಗಾರನೆಂದು ನಿಮ್ಮಲ್ಲಿ ಯಾರು ತೋರಿಸಬಲ್ಲನು?”