வேதாகமம்
ಹಳೆಯ ಒಡಂಬಡಿಕೆ
ಎಸ್ತೇರಳು
3ನೇ ಅಧ್ಯಾಯ
1 : ಇದಾದನಂತರ ಅರಸ ಅಹಷ್ವೇರೋಷನು ಆಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನನ್ನು ಉನ್ನತ ಪದವಿಗೇರಿಸಿ ಅವನನ್ನು ಹಿರಿಯ ಅಧಿಕಾರಿಯನ್ನಾಗಿ ಮಾಡಿ ತನ್ನ ಎಲ್ಲಾ ಪದಾಧಿಕಾರಿಗಳಲ್ಲಿ ಅವನಿಗೆ ಪ್ರಥಮಸ್ಥಾನವನ್ನು ಅನುಗ್ರಹಿಸಿದನು.
2 : ಅರಸನ ಆಜ್ಞಾನುಸಾರ ಅರಮನೆಯಲ್ಲಿದ್ದ ಪರಿಚಾರಕರೆಲ್ಲರೂ ಅವನಿಗೆ ನಮಸ್ಕರಿಸುತ್ತಿದ್ದರು. ಆದರೆ ಮೊರ್ದೆಕೈ ಮಾತ್ರ ಹಾಗೆ ಮಾಡುತ್ತಿರಲಿಲ್ಲ.
3 : ಇದನ್ನು ಗಮನಿಸಿದ ಅರಮನೆಯ ದ್ವಾರಪಾಲಕರು, “ನೀನು ಅರಸನ ಆಜ್ಞೆಯನ್ನು ಮೀರುವುದೇಕೆ?” ಎಂದು ಮೊರ್ದೆಕೈಯನ್ನು ಕೇಳಿದರು.
4 : ಹೀಗೆ ಅವರು ಪ್ರತಿದಿನ ಅವನಿಗೆ ಹೇಳಿದರೂ ಅವನು ಅವರ ಮಾತಿಗೆ ಕಿವಿಗೊಡಲಿಲ್ಲ. ತಾನು ಯೆಹೂದ್ಯನೆಂದು ಹೇಳಿಕೊಳ್ಳುತ್ತಿದ್ದ ಮೊರ್ದೆಕೈಯ ಹಟವು ಎಲ್ಲಿಯವರೆಗೆ ಸಾಗುವುದೊ ನೋಡಿಯೇ ಬಿಡಬೇಕೆಂದು ಅವನ ಈ ವರ್ತನೆಯ ಬಗ್ಗೆ ಹಾಮಾನನಿಗೆ ದೂರು ಹೇಳಿದರು.
5 : ಮೊರ್ದೆಕೈಯು ತನಗೆ ಬಾಗಿ ನಮಸ್ಕಾರ ಮಾಡದಿದ್ದುದನ್ನು ಕಂಡು ಹಾಮಾನನು ಅವನ ಮೇಲೆ ಕಡುಗೋಪಗೊಂಡನು.
6 : ಅವನು ಮೊರ್ದೆಕೈ ಒಬ್ಬನ ಮೇಲೆ ಕೈಮಾಡುವುದು ಸಾಲದೆಂದೆಣಿಸಿ ಇವನು ಯೆಹೂದ್ಯ ಜನಾಂಗದವನೆಂದು ಕೇಳಿದ ಮೇಲೆ ಅಹಷ್ವೇರೋಷನ ರಾಜ್ಯದಲ್ಲಿದ್ದ ಇವನ ಬಂಧುಬಳಗದವರನ್ನೆಲ್ಲಾ, ಅಂದರೆ ಎಲ್ಲಾ ಯೆಹೂದ್ಯರನ್ನು ಸಂಹರಿಸಲು ತೀರ್ಮಾನಿಸಿದನು.
7 : ಅರಸ ಅಹಷ್ವೇರೋಷನ ಆಳ್ವಿಕೆಯ ಹನ್ನೆರಡನೆಯ ವರ್ಷದ ಮೊದಲನೆಯ ತಿಂಗಳು ಆದ ಚೈತ್ರಮಾಸದಲ್ಲಿ ಹಾಮಾನನ ಮುಂದೆ ಶುಭಮಾಸವೂ ಶುಭದಿನವೂ ಯಾವುದು ಎಂದು ತಿಳಿದುಕೊಳ್ಳಲು ‘ಪೂರ’ನ್ನು ಅಂದರೆ ಚೀಟನ್ನು ಹಾಕಲು ಚೀಟು ಹನ್ನೆರಡನೆ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನಕ್ಕೆ ಬಿತ್ತು.
8 : ಹಾಮಾನನು ಅರಸ ಅಹಷ್ವೇರೋಷನಿಗೆ ಹೀಗೆಂದನು: “ನಿಮ್ಮ ರಾಜ್ಯದ ಎಲ್ಲಾ ಸಂಸ್ಥಾನಗಳಲ್ಲಿ ವಾಸಿಸುವ ಒಂದು ಜನಾಂಗವಿದೆ. ಅದು ಇತರ ಜನಾಂಗಗಳ ಮಧ್ಯೆ ಹರಡಿಕೊಂಡಿದ್ದರೂ ತನ್ನ ರೀತಿನೀತಿಗಳಲ್ಲಿ ಅವರಿಂದ ಪ್ರತ್ಯೇಕವಾಗಿಯೇ ಉಳಿಯುತ್ತದೆ. ಅರಸರ ನಿಯಮಗಳನ್ನಂತೂ ಈ ಜನಾಂಗದವರು ಅನುಸರಿಸುವುದೇ ಇಲ್ಲ. ಹೀಗಿರುವಲ್ಲಿ ಇಂಥವರನ್ನು ಅರಸರು ಸುಮ್ಮನೆ ಬಿಡುವುದು ಸರಿಯಲ್ಲ.
9 : ಅರಸರಿಗೆ ಸಮ್ಮತಿ ಆದರೆ ಅವರನ್ನು ನಿರ್ಮೂಲಮಾಡುವಂತೆ ಆಜ್ಞೆ ಒಂದನ್ನು ಹೊರಡಿಸಬೇಕು. ಹಾಗೆ ಮಾಡಿದ್ದಲ್ಲಿ, ನಾನು ರಾಜಭಂಡಾರಕ್ಕಾಗಿ 340,000 ಕಿಲೋಗ್ರಾಂ ಬೆಳ್ಳಿಯನ್ನು ಖಜಾಂಚಿಯರ ಕೈಗೊಪ್ಪಿಸುವೆನು,” ಎಂದು ಹೇಳಿದನು.
10 : ಇದನ್ನು ಕೇಳಿದ ಅರಸನು ತನ್ನ ಕೈಬೆರಳಿನಲ್ಲಿದ್ದ ಮುದ್ರೆ ಉಂಗುರವನ್ನು ತೆಗೆದು ಆಗಾಗನ ವಂಶಸ್ಥನೂ ಹೆಮ್ಮೆದಾತನ ಮಗನೂ ಯೆಹೂದ್ಯರ ಕಡುವೈರಿಯೂ ಆದ ಹಾಮಾನನಿಗೆ ಕೊಟ್ಟು,
11 : “ಆ ಬೆಳ್ಳಿ ನಿನ್ನಲ್ಲೇ ಇರಲಿ: ಆ ಜನರಿಗಾದರೋ ನಿನಗೆ ಉಚಿತವೆಂದು ಕಂಡುಬಂದ ರೀತಿಯಲ್ಲಿ ನೀನು ಮಾಡಬಹುದು,” ಎಂದು ಹೇಳಿದನು.
12 : ಮೊದಲನೇ ತಿಂಗಳ ಹದಿಮೂರನೆಯ ದಿನ ರಾಜಲೇಖಕರನ್ನು ಕರೆಸಲಾಯಿತು. ಇವರು ಹಾಮಾನನ ಆಜ್ಞಾನುಸಾರ ಉಪರಾಜರಿಗೂ ಆಯಾ ಸಂಸ್ಥಾನಾಧಿಕಾರಿಗಳಿಗೂ ಆಯಾ ಜನಾಂಗಗಳ ಅಧಿಪತಿಗಳಿಗೂ ಪತ್ರಗಳನ್ನು ಅವರವರ ಸ್ವದೇಶಿ ಲಿಪಿಗಳಲ್ಲೂ ಭಾಷೆಗಳಲ್ಲೂ ಬರೆದರು. ಅರಸ ಅಹಷ್ವೇರೋಷನ ಹೆಸರಿನಲ್ಲೇ ಲಿಖಿತವಾದ ಈ ಪತ್ರಗಳು ಅಧಿಕೃತ ರಾಜಮುದ್ರೆಯನ್ನು ಹೊಂದಿದ್ದವು.
13 : ಪತ್ರಗಳನ್ನು ಅಂಚೆಯವರ ಮುಖಾಂತರ ಎಲ್ಲಾ ರಾಜಸಂಸ್ಥಾನಗಳಿಗೆ ಕಳಿಸಲಾಯಿತು. ಅವುಗಳಲ್ಲಿ ಈ ರೀತಿ ಬರೆದಿತ್ತು: “ಒಂದೇ ದಿನದಲ್ಲಿ, ಅಂದರೆ, ಹನ್ನೆರಡನೆ ತಿಂಗಳಾದ ಫಾಲ್ಗುಣ ಮಾಸದ ಹದಿಮೂರನೆಯ ದಿನದಲ್ಲಿ ಹಿರಿಯರು, ಕಿರಿಯರು, ಮಕ್ಕಳು, ಮಹಿಳೆಯರೆನ್ನದೆ ನಿಮ್ಮ ಮಧ್ಯೆ ವಾಸಿಸುವ ಎಲ್ಲಾ ಯೆಹೂದ್ಯರನ್ನು ಕೊಂದುಹಾಕಿ, ನಿರ್ಮೂಲಮಾಡಿ, ನಿರ್ನಾಮಗೊಳಿಸಿ.
14 : ಅವರ ಆಸ್ತಿಯನ್ನು ಕೊಳ್ಳೆಹೊಡೆಯಿರಿ. ಎಲ್ಲರೂ ಆ ದಿನಕ್ಕೆ ಸಿದ್ಧರಾಗಿರುವಂತೆ ಈ ಪತ್ರದ ಪ್ರತಿಯು ಪ್ರತಿಯೊಂದು ಸಂಸ್ಥಾನದಲ್ಲೂ ರಾಜಾಜ್ಞೆಯಂತೆ ಪ್ರಕಟವಾಗಲಿ.”
15 : ಈ ನಿರ್ಣಯವು ಶೂಷನ್ ಅರಮನೆಯಲ್ಲಿ ಪ್ರಕಟವಾದ ಕೂಡಲೆ ಅಂಚೆಯವರು ರಾಜಾಜ್ಞೆಯ ಮೇರೆಗೆ ತ್ವರಿತವಾಗಿ ಹೊರಟರು. ಅರಸನಾದರೋ ಹಾಮಾನನೊಡನೆ ಮದ್ಯಪಾನ ಮಾಡಲು ಕುಳಿತುಕೊಂಡನು. ಅತ್ತ ಶೂಷನ್ ನಗರದಲ್ಲಿ ಎಲ್ಲೆಲ್ಲೂ ತಳಮಳ ಉಂಟಾಯಿತು.