ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
6ನೇ ಅಧ್ಯಾಯ
1 : ಖಂಡಿಸಬೇಡೆನ್ನ ಪ್ರಭು, ರೋಷದಿಂದ I ದಂಡಿಸಬೇಡೆನ್ನನು ಕಡುಕೋಪದಿಂದ II
2 : ಕನಿಕರಿಸು ಹೇ ಪ್ರಭು, ನಾನು ಬಲಹೀನನು I ಗುಣಪಡಿಸು ಸಡಿಲವಾದ ಎನ್ನೆಲುಬುಗಳನು II
3 : ಜೀವಾತ್ಮ ನಾ ಬಳಲಿ ತತ್ತರಿಸುತ್ತಿರುವೆ I ಎಲ್ಲಿಯತನಕ ಪ್ರಭು ನೀ ಕೈಬಿಟ್ಟಿರುವೇ II
4 : ನನ್ನ ಕಡೆ ತಿರುಗಿ ಪ್ರಭು, ನನ್ನನುದ್ಧರಿಸು I ನಿನ್ನಚಲ ಪ್ರೀತಿಯಿಂದ ನನ್ನ ರಕ್ಷಿಸು II
5 : ಸತ್ತವರಲಿ ನಿನ್ನ ಸ್ಮರಿಸುವವರಾರು? I ಪಾತಾಳದಲಿ ನಿನ್ನ ಸ್ತುತಿಸುವವರಾರು?II
6 : ದಣಿದಿರುವೆ ನಾ ದುಃಖದಿಂದ ನರಳಿ ನರಳಿ I ತೊಯ್ದಿದೆ ಹಾಸಿಗೆ ಇರುಳಿರುಳ ಕಂಬನಿಯಲಿ I ತೇಲಿದೆ ಮಂಚ ಈ ಕಣ್ಣೀರ ಪ್ರವಾಹದಲಿ II
7 : ಮಂಕಾದವು ಕಣ್ಣುಗಳು ರೋದನದಿಂದ I ಮಬ್ಬಾದವವು ವೈರಿಗಳ ಬಾಧೆಯಿಂದ II
8 : ದುರ್ಜನರೇ ತೊಲಗಿರಿ ನನ್ನಿಂದ ದೂರ I ಪ್ರಭುವಿನ ಕಿವಿಮುಟ್ಟಿದೆ ನನ್ನಾರ್ತ ಸ್ವರ II
9 : ಆಲಿಸಿಹನು ಪ್ರಭು ಎನ್ನ ಪ್ರಾರ್ಥನೆಯನು I ಅಂಗೀಕರಿಸಿಹನು ಎನ್ನಯ ವಿಜ್ಞಾಪನೆಯನು II
10 : ತತ್ತರಿಸುವರು ಶತ್ರುಗಳೆಲ್ಲ ನಿರಾಶೆಯಿಂದ I ತಟ್ಟನೆ ಹಿಂಜರಿಯುವರವರೆಲ್ಲ ಅತಿ ಲಜ್ಜೆಯಿಂದ II