ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
1 ಥೆಸಲೋನಿಯರಿಗೆ
3ನೇ ಅಧ್ಯಾಯ
- Verse 1: ನಿಮ್ಮ ಅಗಲಿಕೆಯನ್ನು ಸಹಿಸಲಾಗದೆ ನಮ್ಮ ಸಹೋದರ ತಿಮೊಥೇಯನನ್ನು ನಿಮ್ಮ ಬಳಿಗೆ ಕಳುಹಿಸಿದೆವು. ನಾವು ಮಾತ್ರ ಅಥೆನ್ಸಿಯಲ್ಲಿ ಉಳಿಯುವುದೇ ಉಚಿತವೆಂದು ನಿರ್ಧರಿಸಿದೆವು.
- Verse 2: ತಿಮೊಥೇಯನು ಯೇಸುಕ್ರಿಸ್ತರ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ನಮ್ಮ ಸಹೋದರ ಹಾಗೂ ದೇವರ ದಾಸ; ನೀವು ವಿಶ್ವಾಸದಲ್ಲಿ ಅಚಲರಾಗಿ ನೆಲೆನಿಲ್ಲುವಂತೆ ಆತನು ನಿಮ್ಮನ್ನು ಉತ್ತೇಜಿಸುವನು.
- Verse 3: ನಿಮಗೆ ಬಂದೊದಗಿರುವ ವಿಪತ್ತುಗಳಿಂದ ನೀವು ಯಾರೂ ಚಂಚಲರಾಗದಂತೆ ದೃಢಪಡಿಸುವನು. ಇಂಥ ವಿಪತ್ತುಗಳು ನಮ್ಮ ಪಾಲಿಗೆ ಕಟ್ಟಿಟ್ಟಬುತ್ತಿಯೆಂದು ನೀವು ಬಲ್ಲಿರಿ.
- Verse 4: ನಾವು ನಿಮ್ಮೊಂದಿಗಿದ್ದಾಗ, ಇಂಥ ವಿಪತ್ತುಗಳು ಖಂಡಿತವಾಗಿ ತಲೆದೋರುವುವೆಂದು ನಿಮಗೆ ಮೊದಲೇ ತಿಳಿಸಿದ್ದೆವು. ಈಗ ಹಾಗೆಯೇ ಸಂಭವಿಸಿದೆ; ನಿಮ್ಮ ಅನುಭವಕ್ಕೂ ಬಂದಿದೆ.
- Verse 5: ಆದುದರಿಂದ ನನಗೆ ಸಹಿಸಲು ಅಸಾಧ್ಯವಾಗಿ, ತಿಮೊಥೇಯನನ್ನು ನಿಮ್ಮ ಬಳಿಗೆ ಕಳುಹಿಸಬೇಕಾಯಿತು. ಏಕೆಂದರೆ, ನಿಮ್ಮ ವಿಶ್ವಾಸದ ಬಗ್ಗೆ ನನಗೆ ತಿಳಿಯಬೇಕಾಗಿತ್ತು; ಪ್ರಲೋಭಕನು ಒಡ್ಡುವ ಬಲೆಗೆ ನೀವು ಸಿಲುಕಿ ನಮ್ಮ ಶ್ರಮವೆಲ್ಲ ನಿಷ್ಪ್ರಯೋಜಕವಾಯಿತೋ ಏನೋ ಎಂಬ ದಿಗಿಲು ನನಗಿತ್ತು.
- Verse 6: ನಿಮ್ಮನ್ನು ಸಂದರ್ಶಿಸಿದ ನಂತರ ತಿಮೊಥೇಯನು ಹಿಂದಿರುಗಿದ್ದಾನೆ. ನಿಮ್ಮ ವಿಶ್ವಾಸ ಮತ್ತು ಪ್ರೀತಿಯ ಬಗ್ಗೆ ಶುಭವರ್ತಮಾನವನ್ನು ತಂದಿದ್ದಾನೆ. ನಾವು ನಿಮ್ಮನ್ನು ಕಾಣಲು ಬಯಸುವಂತೆ, ನೀವೂ ನಮ್ಮನ್ನು ನೋಡಲು ಹಾತೊರೆಯುತ್ತಿರುವಿರೆಂದು ಮತ್ತು ನಮ್ಮನ್ನು ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತಿರುವಿರೆಂದು ತಿಳಿಸಿದ್ದಾನೆ.
- Verse 7: ಸಹೋದರರೇ, ನಾವು ಕಷ್ಟಸಂಕಟಗಳನ್ನು ಅನುಭವಿಸುತ್ತಿದ್ದರೂ ನಿಮ್ಮ ವಿಶ್ವಾಸವನ್ನು ಕುರಿತು ಕೇಳಿ ನಮಗೆ ಸಮಾಧಾನವಾಯಿತು.
- Verse 8: ನೀವು ಪ್ರಭುವಿನಲ್ಲಿ ಅಚಲರಾಗಿರುವುದನ್ನು ಕೇಳಿ ಪುನಶ್ಚೇತನಗೊಂಡಿದ್ದೇವೆ.
- Verse 9: ನಿಮ್ಮ ನಿಮಿತ್ತ ನಮಗೆ ಲಭಿಸಿರುವ ಆನಂದಕ್ಕಾಗಿ ದೇವರಿಗೆ ಎಷ್ಟು ಕೃತಜ್ಞತೆಯನ್ನು ಸಲ್ಲಿಸಿದರೂ ಸಾಲದು.
- Verse 10: ನಿಮ್ಮನ್ನು ಕಣ್ಣಾರೆ ಕಂಡು ನಿಮ್ಮ ವಿಶ್ವಾಸದಲ್ಲಿರುವ ಕುಂದುಕೊರತೆಗಳನ್ನು ನಿವಾರಿಸಬೇಕೆಂದು ನಾವು ದೇವರಲ್ಲಿ ಹಗಲಿರುಳು ಪ್ರಾರ್ಥಿಸುತ್ತಿದ್ದೇವೆ.
- Verse 11: ಪಿತನಾದ ದೇವರೂ ಪ್ರಭುವಾದ ಯೇಸುವೂ ನಾವು ನಿಮ್ಮಲ್ಲಿಗೆ ಬರುವಂತೆ ನಮ್ಮ ಮಾರ್ಗವನ್ನು ಸುಗಮಗೊಳಿಸಲಿ.
- Verse 12: ನಿಮ್ಮ ಮೇಲೆ ನಮಗಿರುವ ಪ್ರೀತಿ ವೃದ್ಧಿಯಾಗುತ್ತಿರುವಂತೆಯೇ, ನಿಮ್ಮ ಪರಸ್ಪರ ಪ್ರೀತಿಯೂ ಸರ್ವಜನಪ್ರೇಮವೂ ಬೆಳೆದು ಸಮೃದ್ಧಿಯಾಗಲೆಂದು ಪ್ರಭುವಿನಲ್ಲಿ ಪ್ರಾರ್ಥಿಸುತ್ತೇವೆ.
- Verse 13: ನಮ್ಮ ಪ್ರಭು ಯೇಸು ನಿಮ್ಮನ್ನು ದೃಢಪಡಿಸಲಿ; ತಮ್ಮ ಪರಿಶುದ್ಧ ಪರಿವಾರದ ಸಮೇತ ಯೇಸು ಪುನರಾಗಮಿಸುವಾಗ, ನಮ್ಮ ಪಿತನಾದ ದೇವರ ಸನ್ನಿಧಾನದಲ್ಲಿ ನೀವೂ ಸಹ ಪರಿಶುದ್ಧರೂ ನಿಷ್ಕಳಂಕರೂ ಆಗಿ ಕಾಣಿಸಿಕೊಳ್ಳುವಂತೆ ಮಾಡಲಿ.