పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
64ನೇ ಅಧ್ಯಾಯ
1 : ಕಿವಿಗೊಡು ದೇವಾ, ನನ್ನಾತ್ಮದ ಮೊರೆಗೆ I ಕಾಪಾಡು, ಶತ್ರುಗಳ ಭಯವಿದೆ ನನಗೆ II
2 : ತಪ್ಪಿಸೆನ್ನ ಕೆಡುಕರ ಕುತಂತ್ರದಿಂದ I ಕಾದಿರಿಸೆನ್ನ ದುರುಳರ ದೊಂಬಿಯಿಂದ II
3 : ನಾಲಗೆಯೆಂಬ ಅಲಗನವರು ಮಸೆದಿಹರು I ನಂಜುಮಾತೆಂಬ ಅಂಬನು ಹೂಡಿಹರು II
4 : ಗುಟ್ಟಾದೆಡೆಯಿಂದ ಗುರಿಯಿಟ್ಟಿಹರು ನಿರಪರಾಧಿಗಳನೆ I ಅಂಜದೇ ಅಳುಕದೆ ಎಸೆವರು ಬಾಣಗಳನು ತಟ್ಟನೆ II
5 : ಕೆಟ್ಟದನು ಮಾಡಲು ಮನದಟ್ಟುಮಾಡಿಕೊಂಡಿಹರು I “ಗುಟ್ಟಾಗಿಡೋಣ ಉರುಲು, ಕಾಂಬರಾರು?” ಎನ್ನುತಿಹರು? II
6 : ಅವರು ಹೂಡಿರುವುದು ಕುತಂತ್ರವನು I ಕೊಚ್ಚಿಕೊಳ್ವುದು ಚತುರೋಪಾಯವನು I ಅಶೋಧ್ಯ ಮಾನವನ ಹೃನ್ಮನಗಳು! II
7 : ಆದರೆ ಎಸೆವನು ಬಾಣವನು ದೇವನೆ I ಪಡೆವರು ಅಪಘಾತವನು ಫಕ್ಕನೆ II
8 : ನಾಲಿಗೆ ನಿಮಿತ್ತ ಅವರು ಅವನತಿಗೀಡಾಗುವರು I ನೋಡುವವರೆಲ್ಲರು ತಲೆಯಾಡಿಸಿ ಅಣಕಿಸುವರು II
9 : ಜನರೆಲ್ಲರಾಗ ತಲ್ಲಣಗೊಳ್ಳುವರು I ದೇವಕಾರ್ಯವಿದು ಎಂದು ಧ್ಯಾನಿಪರು I ಆತನ ಸತ್ಕಾರ್ಯಗಳನು ಸಾರುವರು II
10 : ಹರ್ಷಿಸಲಿ ಸಜ್ಜನರು ಪ್ರಭುವಿನಲಿ I ಆಶ್ರಯ ಪಡೆಯಲೀಗಲೆ ಆತನಲಿ I ನೇರ ಹೃದಯಿಗಳೆಲ್ಲರು ಹಿಗ್ಗಲಿ II