పరిశుద్ధ గ్రంథము
ಹಳೆಯ ಒಡಂಬಡಿಕೆ
ಯೆಶಾಯ
32ನೇ ಅಧ್ಯಾಯ
1 : ಇಗೋ, ರಾಜನೊಬ್ಬನು ನೀತಿಗನುಸಾರ ರಾಜ್ಯವಾಳುವನು. ದೇಶಾಧಿಪತಿಗಳು ನ್ಯಾಯದಿಂದ ದೊರೆತನಮಾಡುವರು.
2 : ಪ್ರತಿಯೊಬ್ಬನೂ ಬಿರುಗಾಳಿಗೆ ತಡೆಯಂತೆ, ಬಿರುಮಳೆಗೆ ಬಿಡಾರದಂತೆ, ಮರುಭೂಮಿಯಲ್ಲಿ ಜಲಧಾರೆಯಂತೆ, ಬೆಂಗಾಡಿನಲ್ಲಿ ಭಾರಿಬಂಡೆಯ ನೆರಳಿನಂತೆ ಇರುವನು.
3 : ಆಗ ನೋಡುವವರ ಕಣ್ಣು ಮಬ್ಬಾಗದು, ಕೇಳುವವರ ಕಿವಿ ಮಂದವಾಗದು.
4 : ಆತುರಗಾರರ ಬುದ್ಧಿ ಸಾವಧಾನದಿಂದ ಗ್ರಹಿಸುವುದು. ತೊದಲುಮಾತಿನವರ ನಾಲಿಗೆ ಸ್ವಚ್ಛವಾಗಿಯೂ ತ್ವರಿತವಾಗಿಯೂ ನುಡಿಯುವುದು.
5 : ಇನ್ನು ಮೇಲೆ ಮೂರ್ಖನು ಮಹಾತ್ಮನೆನಿಸಿಕೊಳ್ಳನು. ಕಳ್ಳನು ಒಳ್ಳೆಯವನೆನಿಸಿಕೊಳ್ಳನು.
6 : ಮೂರ್ಖನು ಆಡುವುದು ಕೆಡುಕನ್ನೇ, ಅವನು ಮಾಡುವುದು ಅಧರ್ಮವನ್ನೇ, ನುಡಿಯುವುದು ಸರ್ವೇಶ್ವರ ಸ್ವಾಮಿಗೆ ವಿರುದ್ಧವಾದ ಅಸತ್ಯವನ್ನೇ. ಆತ ಹಸಿದವರಿಗೆ ಆಹಾರವನ್ನು ಕೊಡುವುದಿಲ್ಲ. ಬಾಯಾರಿದವರಿಗೆ ನೀರನ್ನು ಕೊಡಿಸುವುದಿಲ್ಲ.
7 : ಕಳ್ಳನ ಸಾಧನಗಳು ಕೆಟ್ಟವುಗಳೇ. ಅವನ ಯೋಜನೆಗಳು ಅಬದ್ಧವಾದುವೇ. ದೀನದಲಿತರ ಕೋರಿಕೆಗಳು ನ್ಯಾಯಬದ್ಧವಾಗಿದ್ದರೂ ಸುಳ್ಳುಮಾತುಗಳಿಂದ ಅವರನ್ನು ಹಾಳುಮಾಡುತ್ತಾನೆ.
8 : ಆದರೆ ಧರ್ಮವಂತನು ಮಹತ್ಕಾರ್ಯಗಳಲ್ಲಿಯೇ ನಿರತನಾಗಿರುತ್ತಾನೆ.
9 : ಸುಖಜೀವಿಗಳಾದ ಮಹಿಳೆಯರೇ, ಏಳಿ ನನ್ನ ಮಾತನ್ನು ಕೇಳಿ. ನಿಶ್ಚಿಂತೆಯಿಂದಿರುವ ಯುವತಿಯರೇ, ನನ್ನ ಧ್ವನಿಗೆ ಕಿವಿಗೊಡಿ.
10 : ಈಗ ಸುಖವಾಗಿ ಕುಳಿತಿದ್ದೀರಿ, ನಿಶ್ಚಿಂತೆಯಿಂದಿದ್ದೀರಿ. ಇನ್ನು ಒಂದು ವರ್ಷದ ಮೇಲೆ ಕೆಲವು ದಿನಗಳಲ್ಲಿ ಕಳವಳಗೊಳ್ಳುವಿರಿ. ಏಕೆಂದರೆ, ಆಗ ದ್ರಾಕ್ಷೆಯ ಕೊಯಿಲು ನಿಂತುಹೋಗುವುದು. ಯಾವ ಬೆಳೆಯೂ ನಿಮಗೆ ದಕ್ಕದು.
11 : ಸುಖವಾಗಿರುವವರೇ, ಗಡಗಡನೆ ನಡುಗಿರಿ. ನಿಶ್ಚಿಂತರಾಗಿರುವವರೇ, ಕಳವಳಗೊಳ್ಳಿರಿ. ನಿಮ್ಮ ಬಟ್ಟೆಗಳನ್ನು ಕಿತ್ತುಹಾಕಿ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ.
12 : ಎದೆ ಬಡಿದುಕೊಂಡು ಗೋಳಾಡಿರಿ. ಏಕೆಂದರೆ ಹುಲುಸಾದ ಹೊಲಗಳು ಫಲವತ್ತಾದ ದ್ರಾಕ್ಷಾತೋಟಗಳು ನಾಶವಾಗಿವೆ.
13 : ನನ್ನ ಜನರ ಹೊಲಗದ್ದೆಗಳಲ್ಲಿ ಮುಳ್ಳುಪೊದರುಗಳು ಹುಟ್ಟಿಕೊಂಡಿವೆ. ಉಲ್ಲಾಸದಿಂದ ಕೂಡಿದ್ದ ಮನೆಗಳೂ ಲವಲವಿಕೆಯಿಂದ ತುಂಬಿದ್ದ ನಗರಗಳೂ ಶೂನ್ಯವಾಗಿವೆ, ಅರಮನೆ ಪಾಳುಬಿದ್ದಿದೆ.
14 : ಗಿಜಿಗುಟ್ಟುವ ಪಟ್ಟಣವು ನಿರ್ಜನವಾಗುವುದು; ಓಫೆಲ್ ಗುಡ್ಡವು, ಕೀಸ್ ಕೋವರವು ಶಾಶ್ವತವಾಗಿ ಗುಹೆಗಳಾಗುವುವು. ಕಾಡುಕತ್ತೆಗಳಿಗೆ ಬಯಲಾಗಿಯೂ ದನಕರುಗಳಿಗೆ ಹುಲ್ಲುಗಾವಲುಗಳಾಗಿಯೂ ಇರುವುವು.
15 : ಆದರೆ ದೇವರು ಉನ್ನತಲೋಕದಿಂದ ತಮ್ಮ ಪವಿತ್ರಾತ್ಮ ಧಾರೆಯನ್ನು ನಮ್ಮ ಮೇಲೆ ಸುರಿಯುವರು; ಆಗ ಪಾಳುಭೂಮಿ ಫಲಭರಿತ ಭೂಮಿಯಾಗುವುದು; ಫಲಭರಿತ ಭೂಮಿ ಸಮೃದ್ಧ ಅರಣ್ಯವಾಗಿ ಮಾರ್ಪಡುವುದು.
16 : ಸತ್ಯಸಂಧತೆ ಕಾಡುಮೇಡೆನ್ನದೆ ಎಲ್ಲೆಡೆ ನೆಲೆಗೊಳ್ಳುವುದು. ಸರ್ವರೂ ಸತ್ಯಸಂಧರಾಗಿರುವುದರಿಂದ ಸಮಾಧಾನ ನೆಲೆಗೊಳ್ಳುವುದು.
17 : ಆ ಸತ್ಯಸಂಧತೆಯಿಂದ ಚಿರಶಾಂತಿ ಮತ್ತು ಸುಭದ್ರತೆ ಪರಿಣಮಿಸುವುದು.
18 : ನನ್ನ ಜನರು ಶಾಂತಿಸದನಗಳಲ್ಲಿಯೂ ನಿರ್ಭಯವಾದ ನಿಲಯಗಳಲ್ಲಿಯೂ ನೆಮ್ಮದಿಯಾಗಿರುವ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.
19 : ಕಲ್ಮಳೆ ಸುರಿದು ಕಾಡು ಹಾಳಾದರೂ ಶತ್ರುಗಳ ಪಟ್ಟಣವು ನೆಲಸಮವಾದರೂ ನೀವು ಸಂತೋಷದಿಂದ ಬಾಳುವಿರಿ.
20 : ನೀರಿರುವ ಕಡೆಗಳಲ್ಲೆಲ್ಲಾ ಬಿತ್ತನೆಮಾಡುವಿರಿ. ದನಕತ್ತೆಗಳನ್ನು ಇಷ್ಟಬಂದ ಹಾಗೆ ಮೇಯಲು ಬಿಡುವಿರಿ.