ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಆಮೋಸ
2ನೇ ಅಧ್ಯಾಯ
- Verse 1: ಸರ್ವೇಶ್ವರ ಇಂತೆನ್ನುತ್ತಾರೆ: “ಮೋವಾಬಿನ ಜನರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ಎದೋಮಿನ ಅರಸನ ಎಲುಬುಗಳನ್ನು ಸುಟ್ಟು ಸುಣ್ಣಮಾಡಿದ್ದಾರೆ.
- Verse 2: ಆದಕಾರಣ ಮೋವಾಬಿನ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಕೆರಿಯೋತಿನ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು. ಸೈನಿಕರ ಆರ್ಭಟ, ರಣಕಹಳೆಗಳ ಗರ್ಜನೆ, ಯುದ್ಧದ ಕೋಲಾಹಲ - ಇವುಗಳ ಮಧ್ಯೆ ಮೋವಾಬಿನ ಜನರು ಮಡಿಯುವರು.
- Verse 3: ನಾನು ಅವರ ಅಧಿಪತಿಯನ್ನು ಕೊಂದು, ರಾಜ್ಯಾಧಿಕಾರಿಗಳನ್ನು ಸಂಹರಿಸುವೆನು.” ಇದು ಸರ್ವೇಶ್ವರ ಸ್ವಾಮಿಯ ನುಡಿ.
- Verse 4: ಸರ್ವೇಶ್ವರ ಇಂತೆನ್ನುತ್ತಾರೆ: “ಜುದೇಯದ ಜನರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಏಕೆಂದರೆ ಅವರು ನನ್ನ ಧರ್ಮಶಾಸ್ತ್ರವನ್ನು ತೃಣೀಕರಿಸಿದ್ದಾರೆ. ನನ್ನ ವಿಧಿನಿಯಮಗಳನ್ನು ಮೀರಿದ್ದಾರೆ. ಅವರ ಪೂರ್ವಜರು ಆರಾಧಿಸಿದ ಸುಳ್ಳುದೇವತೆಗಳನ್ನು ಪೂಜಿಸುತ್ತಾ ದಾರಿತಪ್ಪಿದ್ದಾರೆ.
- Verse 5: ಆದಕಾರಣ ನಾನು ಜುದೇಯದ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಜೆರುಸಲೇಮಿನ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು.”
- Verse 6: ಸರ್ವೇಶ್ವರ ಇಂತೆನ್ನುತ್ತಾರೆ: “ಇಸ್ರಯೇಲಿನ ಜನರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ಬೆಳ್ಳಿಬಂಗಾರಕ್ಕಾಗಿ ಸಜ್ಜನರನ್ನು ಮಾರಿಬಿಡುತ್ತಾರೆ. ಒಂದು ಜೊತೆ ಜೋಡುಗಳ ಸಾಲವನ್ನು ಸಹ ತೀರಿಸಲಾಗದ ಬಡಬಗ್ಗರನ್ನೂ ವಿಕ್ರಯಿಸುತ್ತಾರೆ.
- Verse 7: ದಿಕ್ಕಿಲ್ಲದವರ ತಲೆಗಳನ್ನು ಬೀದಿಯ ಧೂಳಿನಂತೆ ತುಳಿದುಬಿಡುತ್ತಾರೆ. ದೀನದಲಿತರಿಗೆ ನ್ಯಾಯ ದೊರಕದಂತೆ ಮಾಡುತ್ತಾರೆ. ತಂದೆಯೂ ಮಗನೂ ಒಬ್ಬ ಮಹಿಳೆಯನ್ನು ಇಟ್ಟುಕೊಂಡು ನನ್ನ ಪವಿತ್ರನಾಮಕ್ಕೆ ಅಪಕೀರ್ತಿ ತರುತ್ತಾರೆ.
- Verse 8: ಪ್ರತಿಯೊಂದು ಪ್ರಾರ್ಥನಾಲಯದಲ್ಲಿಯೂ ಮಲಗುತ್ತಾರೆ. ಬಡವರಿಂದ ಅಡವಾಗಿ ಇಟ್ಟುಕೊಂಡ ಬಟ್ಟೆಗಳ ಮೇಲೆಯೇ ಬಿದ್ದಿರುತ್ತಾರೆ. ವಿಧಿ ಇಲ್ಲದೆ ದಂಡತೆರಬೇಕಾದವರಿಂದ ಹೆಂಡವನ್ನು ತಂದು ದೇವರ ಮಂದಿರದಲ್ಲೇ ಕುಡಿಯುತ್ತಾರೆ.
- Verse 9: “ಆದರೂ ನನ್ನ ಜನರೇ, ನಿಮಗೆ ಎದುರಾಗಿ ನಿಂತ ಅಮೋರ್ಯದವರನ್ನು ಧ್ವಂಸಮಾಡಿದೆನು. ದೇವದಾರು ಮರದಂತೆ ಎತ್ತರವಾಗಿ, ಅಲ್ಲೋನ್ ಮರದಂತೆ ಬಲಿಷ್ಠರಾಗಿ ಇದ್ದ ನಿಮ್ಮ ಶತ್ರು ಅಮೋರ್ಯದವರನ್ನು ನಾಶಪಡಿಸಿದೆನು. ಮರದ ಮುಡಿಯಿಂದ ಫಲವನ್ನೂ ಅಡಿಯಿಂದ ಬೇರನ್ನೂ ಕಿತ್ತುಹಾಕುವಂತೆ ಅವರನ್ನು ನಿರ್ಮೂಲಮಾಡುವೆನು.
- Verse 10: ಈಜಿಪ್ಟಿನಿಂದ ನಿಮ್ಮನ್ನು ಹೊರತಂದವನು ನಾನೇ. ನಲವತ್ತು ವರ್ಷಗಳ ಕಾಲ ಅರಣ್ಯದ ಮಾರ್ಗವಾಗಿ ನಿಮ್ಮನ್ನು ನಡೆಸಿ ಕರೆತಂದು, ಅಮೋರ್ಯದವರ ನಾಡನ್ನು ನಿಮಗೆ ದೊರಕಿಸಿಕೊಟ್ಟವನು ನಾನೇ.
- Verse 11: ನಿಮ್ಮ ಪುತ್ರರಲ್ಲಿ ಕೆಲವರನ್ನು ಪ್ರವಾದಿಗಳನ್ನಾಗಿ, ನಿಮ್ಮ ಯುವಜನರಲ್ಲಿ ಕೆಲವರನ್ನು ನಾಜೀರರನ್ನಾಗಿ ಸಿದ್ಧಪಡಿಸಿದವನು ನಾನೇ. ಇಸ್ರಯೇಲಿನ ಜನರೇ, ಇದು ನಿಜವಲ್ಲವೇ? ನೀವೇ ಹೇಳಿ.
- Verse 12: “ನೀವಾದರೋ, ನಾಜೀರರು ವ್ರತಮುರಿದು ಮದ್ಯಪಾನ ಸೇವಿಸುವಂತೆ ಮಾಡಿದಿರಿ. ಪ್ರವಾದಿಗಳು ಪ್ರವಾದನೆ ಹೇಳದಂತೆ ಆಜ್ಞೆಮಾಡಿದಿರಿ.
- Verse 13: ಆದ್ದರಿಂದ ಧಾನ್ಯ ತುಂಬಿದ ಬಂಡೆ ನಸುಕುವಂತೆ ನಿಮ್ಮನ್ನು ಇದ್ದಲ್ಲಿಯೇ ನಸುಕಿಬಿಡುವೆನು.
- Verse 14: ನಿಮ್ಮಲ್ಲಿ ದೌಡೋಡುವವನು ಕೂಡ ತಲೆತಪ್ಪಿಸಿಕೊಳ್ಳಲಾರನು. ಬಲಿಷ್ಠನೂ ಬಲಹೀನನಾಗುವನು. ಪರಾಕ್ರಮಿಯೂ ಪ್ರಾಣ ಉಳಿಸಿಕೊಳ್ಳಲಾರನು.
- Verse 15: ಬಿಲ್ಲು ಹಿಡಿದವನೂ ನಿಲ್ಲಲಾರನು. ಓಟಗಾರನೂ ಸಿಕ್ಕಿಬೀಳುವನು. ರಾಹುತನು ರಕ್ಷಣೆ ಪಡೆಯಲಾರನು.
- Verse 16: ಪ್ರಬಲವಾಗಿದ್ದವರಲ್ಲಿ ಧೀರನಾದವನು ಸಹ ನಗ್ನನಾಗಿ ಪಲಾಯನ ಮಾಡುವನು.” ಇದು ಸರ್ವೇಶ್ವರಸ್ವಾಮಿಯ ನುಡಿ.