पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
42ನೇ ಅಧ್ಯಾಯ
1 : ಬಾಯಾರಿದ ಜಿಂಕೆ ಹಾತೊರೆಯುವಂತೆ ತೊರೆಗಾಗಿ I ದಣಿದೆನ್ನ ಮನ ದೇವಾ, ಹಂಬಲಿಸುತಿದೆ ನಿನಗಾಗಿ II
2 : ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ I ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ? II
3 : “ಎಲ್ಲಿ? ನಿನ್ನ ದೇವನೆಲ್ಲಿ?” ಎಂದು ಜನ ಜರೆಯುತಿರಲು I ಕಂಬನಿಯೆ ನನಗನ್ನಪಾನವಾಗಿಹುದು ಹಗಲಿರುಳು II
4 : ಜನಸಮೂಹದೊಡನೆ ನಾ ಜಯಜಯಕಾರ ಮಾಡುತ I ಸ್ತುತಿಗೀತೆಗಳ ಹಾಡುತ, ತೀರ್ಥಯಾತ್ರೆ ಗೈಯುತ I ದೇಗುಲಕೆ ತೆರಳಿದಾ ಸವಿನೆನಪು ಮನಕರಗಿಪುದು ನಿರುತ II
5 : ಎನ್ನ ಮನವೆ, ಚಿಂತಿಸುವೆಯೇಕೆ? I ವ್ಯಥೆಪಡುವುದೇಕೆ? ದೇವನಲ್ಲಿಡು ನಂಬಿಕೆ I ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ, ಪರಮಾತ್ಮ ಆತನೆನಗೆ II
6 : ನನಗಾಗುತ್ತದೆ ನಿನ್ನ ಸ್ಮರಣೆ ಮನ ಕುಗ್ಗಿದಾಗ I ಜೋರ್ದನ್, ಹೆರ್ಮನ್ ನಾಡಿಂದ, ಮೀಸಾರ್ ಗುಡ್ಡೆಯಿಂದ II
7 : ನಿನ್ನ ಜಲಪಾತಗಳ ಘನನಿನಾದ, ಮಡುವು ಮಡುವನು ಕರೆದಂತಿದೆ I ನಿನ್ನಲೆಗಳು, ಎಲ್ಲ ತರಂಗಗಳು ತಲೆಯ ಮೇಲೆ ಹಾದು ಹೋದಂತಿವೆ II
8 : ಹಗಲಲಿ ಪ್ರೀತಿಯನುಗ್ರಹಿಸಲಿ ದೇವನೆನಗೆ I ಇರುಳಲಿ ಎನ್ನಯ ಬಾಯಲ್ಲಿರಲಿ ಆತನ ಗೀತೆ I ಪ್ರಾರ್ಥನೆ ಸಲ್ಲಲಿ ಎನ್ನ ಜೀವಾಧಾರ ದೇವಗೆ II
9 : ಶರಣ ದೇವನಿಗೆ “ದೇವಾ, ನನ್ನನೇಕೆ ಮರೆತೆ? I ನಾನಲೆಯಬೇಕೆ ಶತ್ರುಬಾಧೆಪೀಡಿತನಾಗಿ ಭಿಕಾರಿಯಂತೆ?” II
10 : “ನಿನ್ನ ದೇವನೆಲ್ಲಿ?” ಎಂದು ವಿರೋಧಿಗಳು ಸತತ ಹಂಗಿಸುವಾಗ I ನನ್ನೆಲುಬುಗಳು ಮುರಿದಂತಾಗುತ್ತದೆ ಆ ಜರೆಯ ಕೇಳಿದಾಗ II
11 : ಎನ್ನ ಮನವೆ, ಚಿಂತಿಸುವೆಯೇಕೆ? ವ್ಯಥೆಪಡುವುದೇಕೆ? ದೇವನಲ್ಲಿಡು ನಂಬಿಕೆ I ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ, ಪರಮಾತ್ಮ ಆತನೆನಗೆ II