வேதாகமம்
ಹಳೆಯ ಒಡಂಬಡಿಕೆ
ಎಜ್ರನು
1ನೇ ಅಧ್ಯಾಯ
1 : ಸೈರಸನು ಪರ್ಷಿಯ ದೇಶದ ಅರಸ. ಆತನ ಆಳ್ವಿಕೆಯ ಮೊದಲನೆಯ ವರ್ಷದಲ್ಲೆ ಸರ್ವೇಶ್ವರಸ್ವಾಮಿ ತಾವು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ನೆರವೇರಿಸಿದರು. ಅದಕ್ಕಾಗಿಯೆ ಅರಸ ಸೈರಸನನ್ನು ಪ್ರೇರೇಪಿಸಿ ಅವನ ರಾಜ್ಯದಲ್ಲೆಲ್ಲಾ ಡಂಗುರ ಹಾಗು ಪತ್ರಗಳ ಮೂಲಕ ಹೀಗೆ ಪ್ರಕಟಿಸುವಂತೆ ಮಾಡಿದರು:
2 : ಪರ್ಷಿಯ ರಾಜನಾದ ಸೈರಸೆಂಬ ನನ್ನ ಮಾತನ್ನು ಕೇಳಿರಿ; ಪರಲೋಕ ದೇವರಾದ ಸರ್ವೇಶ್ವರಸ್ವಾಮಿ ಭೂಲೋಕದ ಎಲ್ಲ ರಾಜ್ಯಗಳನ್ನು ನನಗೆ ಕೊಟ್ಟಿದ್ದಾರೆ; ‘ನನಗಾಗಿ ಜುದೇಯ ನಾಡಿನ ಜೆರುಸಲೇಮಿನಲ್ಲಿ ಒಂದು ಆಲಯವನ್ನು ಕಟ್ಟಿಸಬೇಕು’ ಎಂದು ಅವರು ಆಜ್ಞಾಪಿಸಿದ್ದಾರೆ.
3 : ನಿಮ್ಮಲ್ಲಿ ಯಾರು ಅವರ ಪ್ರಜೆಗಳಾಗಿರುತ್ತಾರೋ ಅಂಥವರು ಜುದೇಯ ನಾಡಿನ ಜೆರುಸಲೇಮಿಗೆ ಹೋಗಿ ಅಲ್ಲಿ ವಾಸಿಸುತ್ತಿರುವ ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ, ಒಂದು ದೇವಾಲಯವನ್ನು ಕಟ್ಟಲಿ; ಅವರ ಸಂಗಡ ಅವರ ದೇವರಿರಲಿ!
4 : ಸೆರೆಯಾಳುಗಳಾಗಿ ಅಳಿದುಳಿದವರು ಯಾವ ಯಾವ ಊರುಗಳಲ್ಲಿ ಪ್ರವಾಸಿಗಳಾಗಿರುತ್ತಾರೋ ಆ ಊರಿನ ಜನರು ಜೆರುಸಲೇಮಿನ ದೇವಾಲಯಕ್ಕಾಗಿ ಕಾಣಿಕೆಗಳನ್ನಲ್ಲದೆ ಬೆಳ್ಳಿಬಂಗಾರ, ಸರಕುಸಾಮಗ್ರಿ, ಪ್ರಾಣಿಪಶು, ಇವುಗಳನ್ನು ಕೊಟ್ಟು ಅವರಿಗೆ ಸಹಾಯ ಮಾಡಲಿ,” ಎಂದು ಪ್ರಚುರಪಡಿಸಿದನು.
5 : ಈ ಪ್ರಕಟನೆಯನ್ನು ಕೇಳಿ, ಯೆಹೂದ ಮತ್ತು ಬೆನ್ಯಾಮೀನ್ ಗೋತ್ರಕ್ಕೆ ಸೇರಿದ ಮುಖ್ಯಸ್ಥರು, ಯಾಜಕರು, ಲೇವಿಯರು ಹಾಗು ದೈವಪ್ರೇರಿತರಾದ ಎಲ್ಲರು ಜೆರುಸಲೇಮಿನಲ್ಲಿ ಸರ್ವೇಶ್ವರನಿಗೆ ಪುನಃ ಆಲಯಕಟ್ಟುವುದಕ್ಕಾಗಿ ಹೊರಟರು.
6 : ಅವರ ನೆರೆಯವರೆಲ್ಲರು ಕೊಡುಗೆಗಳನ್ನು ಕೊಟ್ಟರು; ಬೆಳ್ಳಿ ಸಾಮಾನುಗಳು, ಬಂಗಾರದ ಆಭರಣಗಳು, ಪಶುಪ್ರಾಣಿಗಳು, ಶ್ರೇಷ್ಠವಸ್ತುಗಳು, ಇತ್ಯಾದಿಗಳನ್ನು ನೀಡಿ ಸಹಕರಿಸಿದರು.
7 : ಜೆರುಸಲೇಮಿನಿಂದ ಕೊಳ್ಳೆಹೊಡೆದು ತಂದಿದ್ದ ಸಾಮಾನುಗಳನ್ನು ನೆಬೂಕದ್ನೆಚ್ಚರನು ತನ್ನ ದೇವರ ಗುಡಿಯಲ್ಲಿ ಇಟ್ಟಿದ್ದನು.
8 : ಪರ್ಷಿಯಾದ ರಾಜ ಸೈರಸನು, ಸರ್ವೇಶ್ವರನ ಆಲಯಕ್ಕೆ ಸೇರಿದ್ದ ಸಾಮಾನುಗಳನ್ನು ಅಲ್ಲಿಂದ ತೆಗೆಸಿ ಖಜಾಂಚಿಯಾಗಿದ್ದ ಮಿತ್ರದಾತನಿಗೆ ಒಪ್ಪಿಸಿದನು . ಮಿತ್ರದಾತನು ಅವುಗಳನ್ನು ಜುದೇಯದ ರಾಜ್ಯ ಪಾಲನಾದ ಶೆಷ್ಬಚ್ಚರನಿಗೆ ಲೆಕ್ಕ ಮಾಡಿಕೊಟ್ಟನು.
9 : ಆ ಸಾಮಾನುಗಳ ಪಟ್ಟಿ ಹೀಗಿದೆ :- ಬಂಗಾರದ ಬೋಗುಣಿಗಳು 30 ಬೆಳ್ಳಿಯ ಬೋಗುಣಿಗಳು 1000 ಇತರ ಬೋಗುಣಿಗಳು 29 ಚಿನ್ನದ ಬಟ್ಟಲುಗಳು 30 ಕಡಿಮೆ ಮಟ್ಟದ ಬೆಳ್ಳಿಯ ಬಟ್ಟಲುಗಳು 410 ಇತರ ಪಾತ್ರೆಗಳು 1000
10 : ಆ ಸಾಮಾನುಗಳ ಪಟ್ಟಿ ಹೀಗಿದೆ :- ಬಂಗಾರದ ಬೋಗುಣಿಗಳು 30 ಬೆಳ್ಳಿಯ ಬೋಗುಣಿಗಳು 1000 ಇತರ ಬೋಗುಣಿಗಳು 29 ಚಿನ್ನದ ಬಟ್ಟಲುಗಳು 30 ಕಡಿಮೆ ಮಟ್ಟದ ಬೆಳ್ಳಿಯ ಬಟ್ಟಲುಗಳು 410 ಇತರ ಪಾತ್ರೆಗಳು 1000
11 : ಬೆಳ್ಳಿಬಂಗಾರದ ನಾನಾ ಸಾಮಾನುಗಳ ಒಟ್ಟು ಸಂಖ್ಯೆ - 5400: ಶೆಷ್ಬಚ್ಚರನು ಸೆರೆಯಲ್ಲಿದ್ದವರನ್ನು ಬಾಬಿಲೋನಿನಿಂದ ಜೆರುಸಲೇಮಿಗೆ ಕರೆದುಕೊಂಡು ಬಂದಾಗ ಈ ಎಲ್ಲ ಸಾಮಾನುಗಳನ್ನು ತೆಗೆದುಕೊಂಡು ಬಂದನು.