P. O. C ബൈബിള്
ಹಳೆಯ ಒಡಂಬಡಿಕೆ
2 ಅರಸುಗಳು
25ನೇ ಅಧ್ಯಾಯ
1 : ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ವಿರುದ್ಧ ದಂಗೆ ಎದ್ದನು. ಇವನು ಚಿದ್ಕೀಯನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನ ಸರ್ವಸೈನ್ಯ ಸಮೇತ ಜೆರುಸಲೇಮಿಗೆ ಬಂದನು. ಅಲ್ಲಿ ಪಾಳೆಯ ಮಾಡಿಕೊಂಡು ಅದರ ಸುತ್ತಲು ಮಣ್ಣಿನ ದಿಬ್ಬವನ್ನು ಎಬ್ಬಿಸಿದನು.
2 : ಚಿದ್ಕೀಯನ ಆಳ್ವಿಕೆಯ ಹನ್ನೊಂದನೆಯ ವರ್ಷದಲ್ಲಿ ಅದಕ್ಕೆ ಮುತ್ತಿಗೆ ಹಾಕಿದನು.
3 : ಘೋರಕ್ಷಾಮದ ಕಾರಣ ನಗರದವರಿಗೆ ಆಹಾರ ಸಿಕ್ಕದೆ ಹೋಯಿತು. ನಗರಕ್ಕೆ ಮುತ್ತಿಗೆಹಾಕಿದ್ದ ಬಾಬಿಲೋನಿಯರು ಹನ್ನೊಂದನೆಯ ತಿಂಗಳಿನ ಒಂಬತ್ತನೆಯ ದಿವಸ ಪೌಳಿಗೋಡೆಯಲ್ಲಿ ಒಂದು ದ್ವಾರವನ್ನು ಮಾಡಿದರು.
4 : ಒಳಗಿದ್ದ ಅರಸನೂ ಅವನ ಎಲ್ಲ ಸೈನಿಕರೂ ಅದೇ ರಾತ್ರಿ, ಅರಸನ ತೋಟದ ಬಳಿಯಿದ್ದ ಬಾಗಿಲಿನ ಮೂಲಕ, ನಗರದಿಂದ ಓಡಿಹೋದರು. ಆ ಬಾಗಿಲು ಎರಡು ಗೋಡೆಗಳ ಮಧ್ಯೆಯಿತ್ತು. ಅರಸನು ಅರಾಬಾ ಎಂಬ ಕಣಿವೆ ಪ್ರದೇಶದ ಮಾರ್ಗವಾಗಿ ಓಡಿಹೋದನು.
5 : ಬಾಬಿಲೋನಿಯದ ಸೈನಿಕರು ಅವನನ್ನು ಹಿಂದಟ್ಟಿ ಜೆರಿಕೋವಿನ ಬಯಲಿನಲ್ಲಿ ಹಿಡಿದರು. ಅಷ್ಟರಲ್ಲಿ ಅವನ ಸೈನಿಕರೆಲ್ಲರು ಅವನನ್ನು ಬಿಟ್ಟು ಚದರಿಹೋಗಿದ್ದರು.
6 : ಅನಂತರ ಬಾಬಿಲೋನಿಯರು ಅವನನ್ನು ರಿಬ್ಲದಲ್ಲಿದ್ದ ತಮ್ಮ ಅರಸನ ಬಳಿಗೆ ಎಳೆದು ತಂದು ಅವನಿಗೆ ಶಿಕ್ಷೆಯನ್ನು ವಿಧಿಸಿದರು.
7 : ಇವನ ಇಬ್ಬರು ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿ, ಅವನಿಗೆ ಬೇಡಿಹಾಕಿ ಎರಡು ಕಣ್ಣುಗಳನ್ನೂ ಕಿತ್ತು ಬಾಬಿಲೋನಿಗೆ ತೆಗೆದುಕೊಂಡು ಹೋದರು.
8 : ಐದನೆಯ ತಿಂಗಳಿನ ಏಳನೆಯ ದಿನ, ಅಂದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದಲ್ಲಿ, ಬಾಬಿಲೋನಿನ ಅರಸನ ಸೇವಕನೂ ರಕ್ಷಾದಳದ ಅಧಿಪತಿಯೂ ಆಗಿದ್ದ ನೆಬೂಜರದಾನ್ ಎಂಬವನು ಜೆರುಸಲೇಮಿಗೆ ಬಂದನು.
9 : ಸರ್ವೇಶ್ವರನ ಆಲಯವನ್ನೂ ಅರಮನೆಯನ್ನೂ ಜೆರುಸಲೇಮಿನ ಎಲ್ಲ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು.
10 : ಅವನ ಜೊತೆಯಲ್ಲಿ ಬಂದಿದ್ದ ಬಾಬಿಲೋನಿಯದ ಸೈನ್ಯದವರು ಜೆರುಸಲೇಮಿನ ಸುತ್ತುಗೋಡೆಗಳನ್ನೆಲ್ಲ ಕೆಡವಿದರು.
11 : ರಕ್ಷಾದಳದ ಅಧಿಪತಿಯಾದ ನೆಬೂಜರದಾನನು ನಗರದಲ್ಲಿ ಉಳಿದವರನ್ನು, ಮೊದಲೇ ಬಾಬಿಲೋನಿನ ಅರಸನಿಗೆ ಮರೆಹೊಕ್ಕವರನ್ನು ಹಾಗು ಬೇರೆ ಜನರೆಲ್ಲರನ್ನು ಸೆರೆಗೆ ಒಯ್ದನು.
12 : ಹೊಲಗಳನ್ನು ಮತ್ತು ದ್ರಾಕ್ಷೀತೋಟಗಳನ್ನು ಮಾಡುವುದಕ್ಕಾಗಿ ನಾಡಿನ ಜನರಲ್ಲಿ ಕೇವಲ ದರಿದ್ರರನ್ನು ಮಾತ್ರ ಬಿಟ್ಟುಹೋದನು.
13 : ಬಾಬಿಲೋನಿಯದವರು ಸರ್ವೇಶ್ವರನ ಆಲಯದಲ್ಲಿದ್ದ ಕಂಚಿನ ಕಂಬಗಳನ್ನೂ ಚಕ್ರದ ಬಂಡಿಗಳನ್ನೂ, ಕಡಲಿನ ಆಕಾರದ ಕಂಚಿನ ಪಾತ್ರೆಯನ್ನೂ ಒಡೆದು ಅವುಗಳ ಕಂಚನ್ನೆಲ್ಲ ಕೊಂಡೊಯ್ದರು.
14 : ಅದು ಮಾತ್ರವಲ್ಲ, ದೇವಾಲಯದ ಸೇವೆಗಾಗಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಸಾಂಬ್ರಾಣಿಕಳಸ ಮುಂತಾದ ಕಂಚಿನ ಸಾಮಾನುಗಳನ್ನೂ ಬಾಬಿಲೋನಿಗೆ ತೆಗೆದುಕೊಂಡು ಹೋದರು.
15 : ರಕ್ಷಾದಳದ ನಾಯಕನು ಬೆಳ್ಳಿ ಬಂಗಾರದ ಅಗ್ಗಿಷ್ಟಿಕೆ, ಬಟ್ಟಲು, ಮೊದಲಾದುವುಗಳನ್ನು ದೋಚಿಕೊಂಡನು.
16 : ಸೊಲೊಮೋನನು ಸರ್ವೇಶ್ವರನ ಆಲಯಕ್ಕಾಗಿ ಮಾಡಿಸಿದ್ದ ಎರಡು ಕಂಬಗಳು, ಕಡಲಿನ ಆಕಾರದ ಪಾತ್ರೆ, ಚಕ್ರದ ಬಂಡಿಗಳು ಇವುಗಳನ್ನು ಮಾಡುವುದಕ್ಕೆ ಎಷ್ಟೋ ಕಂಚು ಹಿಡಿದಿತ್ತು.
17 : ಪ್ರತಿಯೊಂದು ಕಂಬ ಹದಿನೆಂಟು ಮೊಳ ಎತ್ತರವಿತ್ತು. ಪ್ರತಿಯೊಂದರ ಮೇಲೆ ಮೂರು ಮೊಳ ಎತ್ತರವಾದ ಒಂದು ಕಂಚಿನ ಕುಂಭವಿತ್ತು. ಆ ಕುಂಭಗಳ ಮೇಲೆ ಸುತ್ತಲೂ ಕಂಚಿನ ಜಾಲರಿ ಹಾಗು ದಾಳಿಂಬೆ ಹಣ್ಣುಗಳು ಇದ್ದವು.
18 : ರಕ್ಷಾದಳದ ನಾಯಕ ನೆಬೂಜರದಾನನು ಹಿಡಿದುಕೊಂಡು ಹೋದ ಜನರಲ್ಲಿ ಪ್ರಧಾನ ಯಾಜಕ ಸೆರಾಯನು, ಮುಖ್ಯ ಯಾಜಕ ಚೆಫನ್ಯನು, ಮೂರು ಮಂದಿ ದ್ವಾರಪಾಲಕರು ಸೇರಿದ್ದರು.
19 : ಸೈನ್ಯ ಸಂಬಂಧವಾದ ಎಲ್ಲ ವ್ಯವಸ್ಥೆಯನ್ನು, ನಗರದಲ್ಲಿ ಉಳಿದಿದ್ದ ಹಾಗು ಅರಸನಿಗೆ ಆಪ್ತರಾಗಿದ್ದ ಐದು ಮಂದಿ ಮಂತ್ರಿಗಳನ್ನು, ಯುದ್ಧಕ್ಕೆ ಹೋಗತಕ್ಕವರನ್ನು ಪಟ್ಟಿಮಾಡುವ ಸೇನಾಪತಿಯ ಲೇಖಕನನ್ನು ಹಾಗು ನಗರದಲ್ಲಿದ್ದ ಅರವತ್ತು ಮಂದಿ ರೈತರನ್ನು ಹಿಡಿದುಕೊಂಡು ಹೋದನು.
20 : ನೆಬೂಜರದಾನನು ಇವರನ್ನೆಲ್ಲ ತೆಗೆದುಕೊಂಡು ಹೋಗಿ ಹಮಾತ್ ಪ್ರದೇಶದ ರಿಬ್ಲದಲ್ಲಿದ್ದ ಬಾಬಿಲೋನಿನ ಅರಸನಿಗೆ ಒಪ್ಪಿಸಿದನು.
21 : ಅವನು ಅವರನ್ನು ಅಲ್ಲಿಯೇ ಕೊಲ್ಲಿಸಿದನು. ಹೀಗೆ ಯೆಹೂದ್ಯರು ಸೆರೆಯಾಳುಗಳಾಗಿ ತಮ್ಮ ನಾಡನ್ನೇ ಬಿಟ್ಟು ಹೋಗಬೇಕಾಯಿತು.
22 : ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ತಾನು ಜುದೇಯ ದೇಶದಲ್ಲಿ ಉಳಿಸಿದ ಜನರ ಮೇಲೆ, ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯ ಎಂಬವನನ್ನು ರಾಜ್ಯಪಾಲನನ್ನಾಗಿ ನೇಮಿಸಿದನು.
23 : ಅಳಿದು ಉಳಿದಿದ್ದ ಯೆಹೂದ ಸೇನಾಪತಿಗಳು, ಗೆದಲ್ಯನು ಬಾಬಿಲೋನಿನ ಅರಸನಿಂದ ರಾಜ್ಯಪಾಲನಾಗಿ ನೇಮಕವಾಗಿದ್ದಾನೆಂಬ ಸಮಾಚಾರವನ್ನು ಕೇಳಿ, ತಮ್ಮ ಜನರೊಡನೆ ಮಿಚ್ಪದಲ್ಲಿ ವಾಸವಾಗಿದ್ದ ಅವನ ಬಳಿಗೆ ಬಂದರು. ಅವರ ಹೆಸರುಗಳು ಇವು: ನೆತನ್ಯನ ಮಗ ಇಷ್ಮಾಯೇಲನು, ಕಾರೇಹನ ಮಗ ಯೋಹಾನಾನ್, ನೆಟೋಫದವನೂ ತನ್ಹುಮೆತನ ಮಗನೂ ಆದ ಸೆರಾಯನು, ಮಾಕಾ ಊರಿನವನಾದ ಯಾಜನ್ಯನು.
24 : ಗೆದಲ್ಯನು ಇವರಿಗೂ ಇವರ ಜನರಿಗೂ, “ಬಾಬಿಲೋನಿಯಾದ ಸೈನ್ಯದವರಿಗೆ ಹೆದರಬೇಡಿ; ಬಾಬಿಲೋನಿನ ಅರಸನಿಗೆ ಅಧೀನರಾಗಿದ್ದು ಇಲ್ಲಿಯೇ ವಾಸಿಸಿರಿ; ಆಗ ನಿಮಗೆ ಶುಭವಾಗುವುದು,” ಎಂದು ಆಣೆಯಿಟ್ಟು ಹೇಳಿದನು.
25 : ಆದರೆ ಏಳನೆಯ ತಿಂಗಳಿನಲ್ಲಿ ರಾಜವಂಶದವನೂ ಎಲೀಷಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇಲನು ಹತ್ತುಮಂದಿ ಆಳುಗಳೊಡನೆ ಬಂದು ಗೆದಲ್ಯನನ್ನು, ಅವನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರನ್ನು ಹಾಗು ಬಾಬಿಲೋನಿಯಾದವರನ್ನು ಸಂಹರಿಸಿದನು.
26 : ಆಗ ಚಿಕ್ಕವರು, ದೊಡ್ಡವರು, ಸೇನಾಪತಿಗಳು, ಎಲ್ಲರು ಬಾಬಿಲೋನಿಯಾದವರಿಗೆ ಹೆದರಿ ಈಜಿಪ್ಟಿಗೆ ಓಡಿಹೋದರು.
27 : ಎವೀಲ್ಮೆರೋದಕನು ತಾನು ಪಟ್ಟಕ್ಕೆ ಬಂದ ಮೊದಲನೆಯ ವರ್ಷದಲ್ಲಿ ಅಂದರೆ, ಜುದೇಯದ ಅರಸ ಯೆಹೋಯಾಖೀನನು ಸೆರೆಗೆ ಸಿಕ್ಕಿದ ಮೂವತ್ತೇಳನೆಯ ವರ್ಷದ ಹನ್ನೆರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ, ಯೆಹೋಯಾಖೀನನನ್ನು ಸೆರೆಯಿಂದ ಬಿಡಿಸಿ ಉದ್ಧಾರ ಮಾಡಿದನು.
28 : ಅದು ಮಾತ್ರವಲ್ಲ, ಅವನೊಡನೆ ಪ್ರೀತಿಯಿಂದ ಮಾತಾಡಿ, ತನ್ನ ಸಂಗಡ ಬಾಬಿಲೋನಿನಲ್ಲಿದ್ದ ಎಲ್ಲ ಅರಸುಗಳಲ್ಲಿ ಅವನಿಗೇ ಉನ್ನತ ಸ್ಥಾನವನ್ನು ಕೊಟ್ಟನು.
29 : ಯೆಹೋಯಾಖೀನನು ಸೆರೆಯ ಬಟ್ಟೆಗಳನ್ನು ತೆಗೆದುಹಾಕಿ, ಜೀವದಿಂದ ಇರುವವರೆಗೂ, ಅರಸನ ಪಂಕ್ತಿಯಲ್ಲೇ ಊಟಮಾಡುತ್ತಿದ್ದನು.
30 : ಅವನ ಜೀವಿತಕಾಲವೆಲ್ಲ, ಅವನಿಗೆ ಬೇಕಾಗಿ ಇದ್ದ ಎಲ್ಲ ಪದಾರ್ಥಗಳು ಅರಸನಿಂದಲೇ ಪ್ರತಿನಿತ್ಯವೂ ದೊರಕುತ್ತಿದ್ದವು.