P. O. C ബൈബിള്
ಹಳೆಯ ಒಡಂಬಡಿಕೆ
ವಿಮೋಚನಕಾಂಡ
36ನೇ ಅಧ್ಯಾಯ
- Verse 1: “ಬೆಚಲೇಲನು ಮತ್ತು ಒಹೋಲೀಯಾಬನು ಎಲ್ಲವನ್ನು ಸರ್ವೇಶ್ವರ ಸ್ವಾಮಿ ಆಜ್ಞಾಪಿಸಿದ ಪ್ರಕಾರವೇ ಮಾಡುವರು. ಬೇರೆ ಕಲೆಗಾರರು, ಅಂದರೆ ಸರ್ವೇಶ್ವರನಿಂದ ಜ್ಞಾನವಿವೇಕಗಳನ್ನು ಹೊಂದಿ, ದೇವಮಂದಿರವನ್ನು ನಿರ್ಮಿಸುವ ಕೆಲಸಕ್ಕೆ ಬೇಕಾದ ಸಕಲವಿಧ ವಸ್ತುಗಳನ್ನು ಮಾಡುವ ಕ್ರಮ ತಿಳಿದಿರುವವರು, ಅವರೊಂದಿಗೆ ಕೆಲಸ ಮಾಡುವರು,” ಎಂದನು.
- Verse 2: ಬೆಚಲೇಲನನ್ನು ಒಹೋಲೀಯಾಬನನ್ನು ಮತ್ತು ಸರ್ವೇಶ್ವರನಿಂದ ಜ್ಞಾನಪಡೆದು ಕೆಲಸ ಕೈಗೊಳ್ಳಲು ಉತ್ಸುಕರಾಗಿದ್ದ ಕಲೆಗಾರರೆಲ್ಲರನ್ನು ಮೋಶೆ ತನ್ನ ಬಳಿಗೆ ಕರೆಸಿದನು.
- Verse 3: ಅವರು ದೇವಮಂದಿರದ ನಿರ್ಮಾಣಕ್ಕಾಗಿ ಜನರು ಕೊಟ್ಟಿದ್ದ ಕಾಣಿಕೆಗಳನ್ನು ಮೋಶೆಯ ಕೈಯಿಂದ ತೆಗೆದುಕೊಂಡರು. ಇಸ್ರಯೇಲರು ಪ್ರತಿದಿನ ಬೆಳಿಗ್ಗೆ ಮೋಶೆಯ ಬಳಿಗೆ ಬಂದು ಹೆಚ್ಚೆಚ್ಚು ಕಾಣಿಕೆಗಳನ್ನು ಮನಃಪೂರ್ವಕವಾಗಿ ಕೊಡುತ್ತಿದ್ದರು.
- Verse 4: ದೇವಮಂದಿರದ ನಿರ್ಮಾಣದಲ್ಲಿ ಮಗ್ನರಾಗಿದ್ದ ಆ ಶಿಲ್ಪಿಗಳೆಲ್ಲರು ತಮ್ಮ ತಮ್ಮ ಕೆಲಸವನ್ನು ಬಿಟ್ಟು ಮೋಶೆಯ ಬಳಿಗೆ ಬಂದು,
- Verse 5: “ಸರ್ವೇಶ್ವರ ಆಜ್ಞಾಪಿಸಿದ ಕೆಲಸಕ್ಕೆ ಬೇಕಾದುದಕ್ಕಿಂತಲೂ ಬಹಳ ಹೆಚ್ಚಾಗಿ ಜನರು ಕಾಣಿಕೆಗಳನ್ನು ತರುತ್ತಿದ್ದಾರೆ,” ಎಂದು ಹೇಳಿದರು.
- Verse 6: ಆಗ ಮೋಶೆ, “ದೇವಮಂದಿರದ ನಿರ್ಮಾಣಕ್ಕಾಗಿ ಯಾವ ಸ್ತ್ರೀಪುರುಷನು ಇನ್ನು ಮುಂದೆ ಏನನ್ನೂ ತರಬಾರದೆಂದು ಅಪ್ಪಣೆಮಾಡಿ, ಪಾಳೆಯದಲ್ಲಿ ಪ್ರಕಟಿಸಿ, ಜನರ ಕಾಣಿಕೆಗಳನ್ನು ನಿಲ್ಲಿಸಿಬಿಟ್ಟನು.
- Verse 7: ನಿರ್ಮಾಣ ಕೆಲಸ ಮುಗಿಸುವುದಕ್ಕೆ ಬೇಕಾಗುವುದಕ್ಕಿಂತಲೂ ಹೆಚ್ಚಾಗಿ ಸರಕುಸಾಮಗ್ರಿಗಳನ್ನು ಶೇಖರಿಸಲಾಗಿತ್ತು.
- Verse 8: ನಿಪುಣ ಶಿಲ್ಪಗಾರರೆಲ್ಲರು ಸೇರಿ ಹತ್ತು ತಾನು ನಯವಾದ ನಾರುಬಟ್ಟೆಯಿಂದ ಗುಡಾರವನ್ನು ನಿರ್ಮಿಸಿದರು. ಆ ಬಟ್ಟೆಯಲ್ಲಿ ನೀಲಿ, ಊದ ಹಾಗು ಕಡುಗೆಂಪು ವರ್ಣಗಳ ದಾರದಿಂದ ಕೆರೂಬಿಗಳ ಚಿತ್ರವನ್ನು ಚಮತ್ಕಾರವಾಗಿ ಕಸೂತಿಹಾಕಿ ಮಾಡಿದರು.
- Verse 9: ಪ್ರತಿಯೊಂದು ಬಟ್ಟೆ ಇಪ್ಪತ್ತೆಂಟು ಮೊಳ ಉದ್ದ ಹಾಗು ನಾಲ್ಕು ಮೊಳ ಅಗಲವಾಗಿತ್ತು. ಎಲ್ಲ ಬಟ್ಟೆಗಳು ಒಂದೇ ಅಳತೆಯಾಗಿದ್ದವು.
- Verse 10: ಐದೈದು ಬಟ್ಟೆಗಳನ್ನು ಒಂದೊಂದಾಗಿ ಜೋಡಿಸಿದರು.
- Verse 11: ಈ ಎರಡು ಜೋಡನೆಗಳಲ್ಲಿ ಒಂದೊಂದರ ಕೊನೇ ಬಟ್ಟೆಯ ಅಂಚಿನಲ್ಲಿ ನೀಲಿ ದಾರದಿಂದ ಕುಣಿಕೆಗಳನ್ನು ಮಾಡಿದರು.
- Verse 12: ಆ ಕುಣಿಕೆಗಳನ್ನು ಐವತ್ತೈವತ್ತರ ಮೇರೆಗೆ ಒಂದಕ್ಕೊಂದು ಎದುರಾಗಿ ಇರಿಸಿದರು.
- Verse 13: ಅದಲ್ಲದೆ ಐವತ್ತು ಚಿನ್ನದ ಕೊಂಡಿಗಳನ್ನು ಮಾಡಿ ಆ ಬಟ್ಟೆಗಳನ್ನು ಒಂದಕ್ಕೊಂದು ಕೂಡಿಸಿದರು. ಹೀಗೆ ಒಂದೇ ಗುಡಾರ ಆಯಿತು.
- Verse 14: ಈ ಗುಡಾರದ ಮೇಲೆ ಹೊದಿಸುವುದಕ್ಕಾಗಿ ಆಡುಕೂದಲಿನ ಹನ್ನೊಂದು ತಾನು ಬಟ್ಟೆಗಳಿಂದ ಆ ಗುಡಾರಕ್ಕೆ ಮೇಲಣ ಡೇರೆಯನ್ನು ಮಾಡಿದರು.
- Verse 15: ಒಂದೊಂದು ಬಟ್ಟೆಯೂ ಮೂವತ್ತು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇತ್ತು; ಎಲ್ಲಾ ಬಟ್ಟೆಗಳೂ ಒಂದೇ ಅಳತೆಯಾಗಿದ್ದವು.
- Verse 16: ಐದು ಬಟ್ಟೆಗಳನ್ನು ಒಂದಾಗಿ ಜೋಡಿಸಿ ಮಿಕ್ಕ ಆರು ಬಟ್ಟೆಗಳನ್ನು ಒಂದಾಗಿ ಜೋಡಿಸಿದರು.
- Verse 17: ಒಂದೊಂದರ ಕೊನೇ ಬಟ್ಟೆಯ ಅಂಚಿನಲ್ಲಿ ಐವತ್ತೈವತ್ತು ಕುಣಿಕೆಗಳನ್ನು ಮಾಡಿಸಿದರು.
- Verse 18: ಒಂದೇ ಡೇರೆಯಾಗುವಂತೆ ಸಮಸ್ತವನ್ನು ಕೂಡಿಸುವುದಕ್ಕಾಗಿ ತಾಮ್ರದ ಐವತ್ತು ಕೊಂಡಿಗಳನ್ನು ಮಾಡಿದರು.
- Verse 19: ಅದಲ್ಲದೆ ಹದಮಾಡಿರುವ ಕುರಿದೊಗಲುಗಳಿಂದ ಒಂದು ಮೇಲ್ಹೊದಿಕೆಯನ್ನೂ ಕಡಲುಹಂದಿಯ ತೊಗಲುಗಳಿಂದ ಮತ್ತೊಂದು ಮೇಲ್ಹೊದಿಕೆಯನ್ನೂ ಮಾಡಿದರು.
- Verse 20: ಗುಡಾರಕ್ಕೆ ಚೌಕಟ್ಟುಗಳನ್ನು ಜಾಲೀಮರದಿಂದ ಮಾಡಿದರು.
- Verse 21: ಪ್ರತಿಯೊಂದು ಚೌಕಟ್ಟು ಹತ್ತು ಮೊಳ ಉದ್ದವಾಗಿಯೂ ಒಂದುವರೆ ಮೊಳ ಅಗಲವಾಗಿಯೂ ಇತ್ತು;
- Verse 22: ಪ್ರತಿಯೊಂದು ಚೌಕಟ್ಟೂ ಅಡ್ಡಪಟ್ಟಿಗಳಿಂದ ಜೋಡಿಸಲ್ಪಟ್ಟ ಎರಡು ನಿಲುವುಪಟ್ಟಿಗಳುಳ್ಳದ್ದಾಗಿತ್ತು; ಗುಡಾರದ ಎಲ್ಲಾ ಚೌಕಟ್ಟುಗಳನ್ನೂ ಹಾಗೆ ಮಾಡಿದರು.
- Verse 23: ಗುಡಾರದ ದಕ್ಷಿಣ ದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು.
- Verse 24: ನಾಲ್ವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಿ ಆ ಇಪ್ಪತ್ತು ಚೌಕಟ್ಟುಗಳ ಕೆಳಗೆ ಇಟ್ಟರು; ಒಂದೊಂದು ಚೌಕಟ್ಟಿನಲ್ಲಿರುವ ಎರಡು ನಿಲುವುಪಟ್ಟಿಗಳ ಕೆಳಗೆ ಒಂದೊಂದು ಗದ್ದಿಗೇಕಲ್ಲನ್ನು ಇಟ್ಟರು.
- Verse 25: ಹಾಗೆಯೇ ಗುಡಾರದ ಉತ್ತರದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮತ್ತು
- Verse 26: ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಗದ್ದಿಗೇಕಲ್ಲುಗಳ ಮೇರೆಗೆ ನಾಲ್ವತ್ತು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಮಾಡಿದರು.
- Verse 27: ಗುಡಾರದ ಹಿಂಭಾಗಕ್ಕೆ, ಅಂದರೆ ಪಶ್ಚಿಮದಿಕ್ಕಿನಲ್ಲಿ ಆರು ಚೌಕಟ್ಟುಗಳನ್ನು ಮಾಡಿದರು.
- Verse 28: ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಿದರು;
- Verse 29: ಅವು ಬುಡದಿಂದ ತುದಿಯವರೆಗೂ ಅಂದರೆ ಮೊದಲನೆಯ ಬಳೆಯ ತನಕ ಜೋಡಿಸಿದ್ದವು; ಹಾಗೆ ಎರಡು ಮೂಲೆಗಳಿಗೂ ಮಾಡಿದರು.
- Verse 30: ಹೀಗೆ ಎಂಟು ಚೌಕಟ್ಟುಗಳೂ ಮತ್ತು ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಬೆಳ್ಳಿಯ ಗದ್ದಿಗೇಕಲ್ಲುಗಳೂ, ಅಂತೂ ಹದಿನಾರು ಗದ್ದಿಗೇಕಲ್ಲುಗಳೂ ಇದ್ದವು.
- Verse 31: ಜಾಲೀಮರದಿಂದ ಅಗುಳಿಗಳನ್ನು ಮಾಡಿದರು.
- Verse 32: ಹಿಂದುಗಡೆಯ ಅಂದರೆ ಪಶ್ಚಿಮಕಡೆಯ ಚೌಕಟ್ಟುಗಳಿಗೂ ಐದೈದು ಅಗುಳಿಗಳನ್ನು ಮಾಡಿದರು.
- Verse 33: ಚೌಕಟ್ಟುಗಳ ನಟ್ಟನಡುವೆಯಲ್ಲಿರುವ ಅಗುಳಿಯು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೂ ಮುಟ್ಟುವಂತೆ ಮಾಡಿದರು.
- Verse 34: ಆ ಚೌಕಟ್ಟುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ ಅವುಗಳಲ್ಲಿ ಆ ಅಗುಳಿಗಳಿಗಾಗಿ ಚಿನ್ನದ ಬಳೆಗಳನ್ನು ಮಾಡಿದರು. ಆ ಅಗುಳಿಗಳನ್ನೂ ಚಿನ್ನದ ತಗಡುಗಳಿಂದ ಹೊದಿಸಿದರು.
- Verse 35: ಹುರಿನಾರಿನ ಬಟ್ಟೆಯಲ್ಲಿ ನೀಲಿ, ಊದ ಹಾಗು ಕಡುಗೆಂಪುವರ್ಣಗಳುಳ್ಳ ದಾರದಿಂದ ಕೆರೂಬಿಗಳ ಚಿತ್ರವನ್ನು ಚಮತ್ಕಾರವಾಗಿ ಕಸೂತಿ ಹಾಕಿ ಒಂದು ತೆರೆಯನ್ನು ಮಾಡಿದರು.
- Verse 36: ಅದಕ್ಕೆ ಜಾಲೀಮರದಿಂದ ನಾಲ್ಕು ಕಂಬಗಳನ್ನು ಮಾಡಿ ಚಿನ್ನದ ತಗಡುಗಳನ್ನು ಹೊದಿಸಿದರು; ಅವುಗಳಿಗೆ ಚಿನ್ನದ ಕೊಂಡಿಗಳನ್ನು ಮಾಡಿ, ನಾಲ್ಕು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಎರಕಹೊಯಿಸಿದರು.
- Verse 37: ಡೇರೆಯ ಬಾಗಿಲಿಗೆ ಹುರಿನಾರಿನ ಬಟ್ಟೆಯಲ್ಲಿ ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದ ವಿಚಿತ್ರವಾಗಿ ಕಸೂತಿಹಾಕಿ ಪರದೆಯನ್ನು ಮಾಡಿದರು.
- Verse 38: ಆ ಪರದೆ ತೂಗಿಸುವುದಕ್ಕಾಗಿ ಐದು ಕಂಬಗಳನ್ನೂ ಅವುಗಳ ಕೊಂಡಿಗಳನ್ನೂ ಮಾಡಿ, ಅವುಗಳ ಬೋದಿಗೆಗಳಿಗೂ ಕಟ್ಟುಗಳಿಗೂ ಚಿನ್ನದ ತಗಡುಗಳನ್ನು ಹೊದಿಸಿದರು. ಅವುಗಳ ಐದು ಗದ್ದಿಗೇಕಲ್ಲುಗಳನ್ನು ತಾಮ್ರದಿಂದ ಮಾಡಿದರು.