పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
21ನೇ ಅಧ್ಯಾಯ
1 : ಅರಸಗೆ ಹರ್ಷವಾಯಿತು ಪ್ರಭು, ನೀ ತೋರಿದ ಪರಾಕ್ರಮಕ್ಕಾಗಿ I ಪರಮಾನಂದಗೊಂಡನವನು, ನೀನಿತ್ತ ವಿಜಯೋತ್ಸವಕ್ಕಾಗಿ II
2 : ಆತನ ಮನದಾಸೆಯನು ನೀ ಪೂರೈಸಿದೆ I ಆತನಧರ ಬಯಕೆಯನು ಅನುಗ್ರಹಿಸಿದೆ II
3 : ನೀನಾತನನು ಸ್ವಾಗತಿಸಿದೆ ಶುಭಾಶಯದೊಂದಿಗೆ I ಚಿನ್ನದ ಕಿರೀಟವನು ಮುಡಿಸಿದೆ ಆತನ ಶಿರಸ್ಸಿಗೆ II
4 : ಕೋರಿದನಾತನು ಜೀವಮಾನಕಾಲವನು I ನೀನಿತ್ತೆ ಯುಗಯುಗಾಂತರದಾಯುಷ್ಯವನು II
5 : ನಿನ್ನ ನೆರವಿಂದೇರಿತು ಆತನ ಘನತೆ I ಶೋಭೆ, ಪ್ರಭಾವಗಳ ನೀನವನಿಗಿತ್ತೆ II
6 : ಅಮರ ಭಾಗ್ಯಗಳನು ನೀನನುಗ್ರಹಿಸಿದೆ I ಶ್ರೀಸನ್ನಿಧಿಯಲಾತನನು ತೋಷಗೊಳಿಸಿದೆ II
7 : ಅರಸನಿಗಿದೆ ಭರವಸೆ ಪ್ರಭುವಿನಲಿ I ಅವನಚಲನು, ಪರಾತ್ಪರನ ಕೃಪೆಯಲಿ II
8 : ಶತ್ರುಗಳೆಲ್ಲರು ಸಿಕ್ಕಿಹೋಗುವರು ನಿನ್ನ ಕೈಗೆ I ಹಗೆಗಳೆಲ್ಲ ಸಿಕ್ಕಿಬೀಳುವರು ನಿನ್ನ ಬಲಗೈಗೆ II
9 : ಅಗ್ನಿಕುಂಡವಾಗುವರವರು ನೀ ಪ್ರತ್ಯಕ್ಷನಾದಾಗ I ಕಬಳಿಸುವುದು ಕೋಪಾಗ್ನಿ, ಭಸ್ಮವಾಗ್ವರು ಪ್ರಭು ಬಂದಾಗ II
10 : ನಿರ್ಮೂಲಮಾಡುವೆ ನೀನವರ ಸಂತಾನವನು ಧರೆಯಿಂದ I ಕುಡಿಯಿಲ್ಲದಾಗಿಸುವೆ ಅವರನು ಮಾನವರ ಮಧ್ಯದಿಂದ II
11 : ತಂತ್ರೋಪಾಯಗಳ ಕಲ್ಪಿಸಿದರೂ ನಡೆಯದು I ಕೇಡನು ನಿನಗೆ ಬಗೆದರೂ ಅದು ಕೈಗೂಡದು II
12 : ಬಾಣ ಹೂಡಿ ಅವರ ಹಣೆಗೆ ನೀ ಬಿಡುವೆ I ಬೆನ್ನುಮಾಡಿ ಅವರೋಡುವಂತೆ ಮಾಡುವೆ II
13 : ಹೇ ಪ್ರಭು, ಪರಾಕ್ರಮ ತೋರಿ, ಪರಮಪದಗಳಿಸಿಕೊ I ಕೀರ್ತಿಸುತ ನಿನ್ನ ಸಾಮರ್ಥ್ಯವನು, ಪೊಗಳುವೆನಿದೊ II