पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
103ನೇ ಅಧ್ಯಾಯ
1 : ಭಜಿಸು ನನ್ನ ಮನವೇ, ಭಜಿಸು ಪ್ರಭುವನು I ನನ್ನ ಅಂತರಂಗವೇ, ಭಜಿಸು ಆತನನು I ನೆನೆ ಆತನ ಪರಮಪಾವನ ನಾಮವನು II
2 : ಭಜಿಸು ನನ್ನ ಮನವೇ, ಭಜಿಸು ಪ್ರಭುವನು I ಮರೆಯದಿರು ಆತನ ಉಪಕಾರಗಳೊಂದನು II
3 : ಮನ್ನಿಸುವನಾತ ನನ್ನ ದೋಷಗಳನು I ವಾಸಿಮಾಡುವನು ನನ್ನ ರೋಗಗಳನು II
4 : ಉಳಿಸುವನು ಪಾತಾಳದ ಕೂಪದಿಂದ ನನ್ನನು I ಮುಡಿಸುವನೆನಗೆ ದಯದಾಕ್ಷಿಣ್ಯದ ಮುಕುಟವನು II
5 : ಒಳ್ಳೆಯವುಗಳಿಂದ ತುಂಬಿಸುವನು ನನ್ನ ಜೀವಮಾನವನು I ಪುನರುಜ್ಜೀವನಗೊಳಿಸುವನು ಗರುಡನಂತೆ ನನ್ನ ಯೌವನವನು II
6 : ಸಾಧಿಸುವನು ಪ್ರಭು ನ್ಯಾಯನೀತಿಯನು I ದೊರಕಿಸುವನು ಶೋಷಿತರಿಗೆ ನ್ಯಾಯವನು II
7 : ತೋರಿಸಿದಾತ ತನ್ನ ಮಾರ್ಗವನು ಮೋಶೆಗೆ I ತನ್ನ ಮಹತ್ಕಾರ್ಯಗಳನು ಇಸ್ರಯೇಲರಿಗೆ II
8 : ಪ್ರಭು ದಯಾಳು, ಕೃಪಾಪೂರ್ಣನು I ಸಹನಶೀಲನು, ಪ್ರೀತಿಮಯನು II
9 : ಆತನು ಸದಾ ತಪ್ಪು ಹುಡುಕುವವನಲ್ಲ I ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ II
10 : ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ I ನಮ್ಮ ಅಪರಾಧಗಳಿಗೆ ತಕ್ಕಹಾಗೆ ದಂಡಿಸಲಿಲ್ಲ II
11 : ಆಕಾಶಮಂಡಲವು ಭೂಮಿಯಿಂದೆಷ್ಟೋ ಉನ್ನತ I ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ ಸನ್ನುತ II
12 : ಪಡುವಣದಿಂದ ಮೂಡಣವೆಷ್ಟೋ ದೂರ I ದೂಡಿದನಾತ ನಮ್ಮ ಪಾಪಗಳನು ಅಷ್ಟು ದೂರ II
13 : ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ I ಕನಿಕರಿಸುವನಾತ ತನಗೆ ಅಂಜುವವರಿಗೆ II
14 : ಏಕೆನೆ, ನಮ್ಮ ಸ್ವಭಾವವನು ಆತನು ಬಲ್ಲ I ನಾವು ಹುಡಿಮಣ್ಣೆಂದವನಿಗೆ ತಿಳಿದಿದೆಯಲ್ಲಾ II
15 : ಮಾನವನ ಆಯುಷ್ಕಾಲ ಹುಲ್ಲಿಗೆ ಸಮಾನ I ಹೊಲದ ಹೂವಿನಂತೆ ಅವನ ಬೆಡಗು ಬಿನ್ನಾಣ II
16 : ಬಿದ್ದುಹೋಗುವುದಾ ಹೂವು ಗಾಳಿಯ ಬಡಿತಕ್ಕೆ I ಅದರ ಗುರುತೂ ಇರದಲ್ಲಿ ಮರಳಿ ನೋಡಲಿಕ್ಕೆ II
17 : ಭಯಭಕ್ತರಿಗೆ ಪ್ರಭುವಿನ ಪ್ರೀತಿಯಾದರೋ ಯುಗಯುಗಾಂತರಕು I ಅವರ ಮಕ್ಕಳ ಮಕ್ಕಳಿಗೆ ಆತನ ನೀತಿಯು ತಲತಲಾಂತರಕು II
18 : ಅಂತೆಯೇ ಆತನ ನಿಬಂಧನೆಗಳನು ಕೈಗೊಳ್ಳುವವರಿಗೆ I ಆತನ ವಿಧಿನಿಯಮಗಳು ನೆನಪಿನಲ್ಲಿಟ್ಟು ನಡೆವವರಿಗೆ II
19 : ಸ್ಥಾಪಿಸಿಹನು ಪ್ರಭು ಸ್ವರ್ಗದೊಳು ಸಿಂಹಾಸನವನು I ಎಲ್ಲದರ ಮೇಲೆ ನಡೆಸುತಿಹನು ರಾಜ್ಯಾಡಳಿತವನು II
20 : ಭಜಿಸಿರಿ ಪ್ರಭುವನು ದೇವದೂತರುಗಳೇ I ಆತನ ಆಣತಿ ಪಾಲಿಪ ಪರಾಕ್ರಮಿಗಳೇ I ಆತನ ನುಡಿಯಂತೆಯೇ ನಡೆಯುವ ಜನಾಂಗಗಳೇ II
21 : ಪ್ರಭುವನು ಭಜಿಸಿರಿ ಆತನ ಸೇನೆಗಳೇ I ಭಜಿಸಿ ಪ್ರಭುವನು, ಓ ಎನ್ನಮನವೇ II
22 : ಭಜಿಸಿರಿ ಪ್ರಭುವನು ಆತನ ಸೃಷ್ಟಿಗಳೇ I ಆತನ ಅಧಿಕಾರದಲ್ಲಿಹ ಸಕಲ ವಸ್ತುಗಳೇ I ಭಜಿಸು ಪ್ರಭುವನು, ಓ ಎನ್ನಮನವೇ II